ಸಂಸ್ಕಾರ.
ಕಾದಂಬರಿ ಕುರಿತು ಒಂದು ವಿಮರ್ಶೆ.
– ಜಿ ಎಲ್ ನಾಗೇಶ್.ಬೀದರ
ಕುಂದಾಪುರದ ಹತ್ತಿರದಲ್ಲಿರುವ ಬೇವರ್ಸೀಪುರ ಎಂಬ ಗ್ರಾಮದ ಅಗ್ರಹಾರದಲ್ಲಿ… ವೈದಿಕರ ಓಣಿಯಲ್ಲಿ, ಬ್ರಾಹ್ಮಣರ ಏರಿಯಾದಲ್ಲಿ , ಹಾರುವರ ಮನೆಯೊಂದರಲ್ಲಿ ಹೆಣ ಒಂದು ಬಿದ್ದಿದೆ.
ಆ ಹೆಣ ಯಾರದು ಅಂತ ಗೊತ್ತಾ…?
ಅದು…ಬೆವರ್ಸಿ ಬ್ರಾಹ್ಮಣನ ಹೆಣ!
ಕುಡುಕ ಬ್ರಾಹ್ಮಣನ ಹೆಣ!
ವ್ಯಭಿಚಾರಿ ಬ್ರಾಹ್ಮಣನ ಹೆಣ!
ಧರ್ಮಭ್ರಷ್ಟ… ಜಾತಿಭ್ರಷ್ಟ ನೀಚ ಬ್ರಾಹ್ಮಣನ ಹೆಣ ಅದು!
ಆ ಹೆಣವನ್ನು ಯಾರೂ ಸಹ ಅಂತ್ಯಸಂಸ್ಕಾರ ಮಾಡಲು ತಯ್ಯಾರಿಲ್ಲ.
ಬ್ರಾಹ್ಮಣ್ಯವನ್ನು ತ್ಯಜಿಸಿ ಜಾತಿಭ್ರಷ್ಟನಾದ ಬ್ರಾಹ್ಮಣನ ಅಂತ್ಯ ಸಂಸ್ಕಾರ ಅಗ್ರಹಾರದ ಬ್ರಾಹ್ಮಣರು ಯಾರೂ ಸಹ ಮಾಡಲು ತಯ್ಯಾರಿಲ್ಲ.
ಬ್ರಾಹ್ಮಣ ಧರ್ಮಶಾಸ್ತ್ರದ ಪ್ರಕಾರ ಜಾತಿ ಭ್ರಷ್ಟ ಬ್ರಾಹ್ಮಣನ ಅಂತ್ಯ ಸಂಸ್ಕಾರ ಬ್ರಾಹ್ಮಣರು ಯಾರೂ ಸಹ ಮಾಡಲು ಸಾಧ್ಯವಿಲ್ಲ.
ಜಾತಿಭ್ರಷ್ಟ ಬ್ರಾಹ್ಮಣನ ಅಂತ್ಯಸಂಸ್ಕಾರ ಬ್ರಾಹ್ಮಣರು ಮಾಡಿ ಮುಗಿಸಿದರೆ ಪರಮ ಪಾಪವಾಗಿ ಧರ್ಮ ಭ್ರಷ್ಟವಾಗುತ್ತದೆ.
ಬ್ರಾಹ್ಮಣರು ಯಾರೂ ಸಹ ಧರ್ಮಭ್ರಷ್ಟರಾಗಲು ತಯ್ಯಾರಿಲ್ಲ.
ಯುವ ಬ್ರಾಹ್ಮಣರು… ಮುದಿ ಬ್ರಾಹ್ಮಣರು ಎಲ್ಲರೂ ಒಂದು ಕಡೆ ಸೇರಿದರು.
ಸಭೆಯಲ್ಲಿ ಚರ್ಚೆ ಮಾಡಿದರು.
ತುಂಬ ಸಮಯದವರೆಗೂ ಚರ್ಚಿಸಿದರೂ ಸಹ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಕೊನೆಗೆ ಒಬ್ಬ ಯುವ ಬ್ರಾಹ್ಮಣ ಪಂಡಿತ ಈ ರೀತಿ ಹೇಳಿದನು –
“ಧರ್ಮ ಭ್ರಷ್ಟ ಬ್ರಾಹ್ಮಣನಿಗೆ ಬಹಿಷ್ಕಾರ ಹಾಕದೆ ಸಂಸ್ಕಾರ ಮಾಡುವಂತಿಲ್ಲ. ಒಂದು ವೇಳೆ ಇದಕ್ಕೆ ನಮ್ಮ ಧರ್ಮಶಾಸ್ತ್ರ ಗಳಲ್ಲಿ ಪರಿಹಾರ ಅಂತ ಇದ್ದರೆ ಪರಿಹಾರಕ್ಕಾಗಿ ತುಂಬ ದುಡ್ಡು ಖರ್ಚಾಗುತ್ತದೆ. ಅದರ ಖರ್ಚು ವೆಚ್ಚ ಯಾರು ಭರಿಸುತ್ತಾರೆ? ಸತ್ತವನು ಕುಡಿದು ತಿಂದು ಹಾದರ ಮಾಡಿ ಹಾಳು ಮಾಡಿಕೊಂಡು ಸತ್ತಿದ್ದಾನೆ. ಅದು ಏನಾಗುತ್ತದೆ ಅಂತ ನೋಡೋಣ. ನನಗೆ ಸ್ವಲ್ಪ ಸಮಯ ಕೊಡಿ. ನಮ್ಮ ಶಾಸ್ತ್ರಿಗಳಲ್ಲಿ ಎಲ್ಲಾದರೂ ಇದಕ್ಕೆ ಏನಾದರೂ ಪರಿಹಾರ ಇದೆ ಏನು ಅಂತ ನಾನು ನೋಡಿ ಹೇಳುತ್ತೇನೆ ” ಎಂದಾಗ ವಯಸ್ಸಾದ ಮುದುಕ ಬ್ರಾಹ್ಮಣನೊಬ್ಬ –
“ನೋಡಿ ಆಚಾರ್ಯರೇ, ನೋಡಿ.. ಆದಷ್ಟು ಬೇಗ ಇದುಕ್ಕೊಂದು ಪರಿಹಾರ ಕಂಡುಕೊಂಡು ಅಂತ್ಯಸಂಸ್ಕಾರ ಮಾಡಿ ಮುಗಿಸಿದರೆ ಸಾಕಾಗಿದೆ. ಅಂತ್ಯಸಂಸ್ಕಾರ ಮಾಡಿ ಮುಗಿಸದೆ ಬ್ರಾಹ್ಮಣರು ಯಾರೂ ಸಹ ಊಟ ಮಾಡುವಂತಿಲ್ಲ. ನನ್ನ ಆರೋಗ್ಯ ಸರಿ ಇಲ್ಲ. ಊಟ ಮಾಡದೆ ತುಂಬ ಸಮಯದವರೆಗೂ ಇರೋಕಾಗಲ್ಲ…” ಎಂದು ತನ್ನ ಅಳಲನ್ನು ತೋಡಿಕೊಂಡನು.
ಇದೆಲ್ಲವನ್ನು ಕೇಳಿಸಿಕೊಂಡ ಅವಳು… ಅವಳು ಅಂದರೆ ಸತ್ತು ಹೆಣವಾಗಿ ಬಿದ್ದಿರುವ ಅವನ ಅಕ್ರಮ ಪ್ರಿಯಾಸಿ, ವೇಶ್ಯಾ ಸ್ತ್ರಿ ಅವಳು!
ಅವಳು ತನ್ನಲ್ಲಿರುವ ಬೆಲೆಬಾಳುವ ಒಡವೆ ವಸ್ತ್ರಗಳನ್ನು ಆ ಬ್ರಾಹ್ಮಣರ ಮುಂದೆ ತಂದಿಟ್ಟಳು.
ಸಾವಿರಾರು ರೂಪಾಯಿಗಳಿಗೆ ಬೆಲೆಬಾಳುವ ಆ ಒಡವೆಗಳನ್ನು ಕಂಡು ಬ್ರಾಹ್ಮಣರ ಹೆಣ್ಣು ಮಕ್ಕಳು ಬಾಯ್ ಬಾಯಿ ಬಿಟ್ಟರು.
“ಸತ್ತಿರುವ ವ್ಯಕ್ತಿ ನನ್ನ ಹೆಂಡತಿಯ ತಂಗಿಯ ಮಗಳು. ನ್ಯಾಯವಾಗಿ ನೋಡಬೇಕು ಅಂದ್ರೆ ಈ ಒಡವೆಗಳೆಲ್ಲ ನಮಗೆ ಸೇರಬೇಕು”ಎಂದು ಮತ್ತೊಬ್ಬ ಬ್ರಾಹ್ಮಣ ದುರಾಸೆಯಿಂದ ಹೇಳಿದನು.
ಆಗ –
“ಏನ್ರೀ , ಸತ್ತವರ ಒಡವೆ ಮೇಲೆ ಆಸೆಪಡುತ್ತಿರಲ್ಲ! ಈ ಒಡವೆಗಳು ಯಾರಿಗೂ ಸೇರಬೇಕಾಗಿಲ್ಲ. ಈ ಒಡವೆಗಳು ಅಂತ್ಯಸಂಸ್ಕಾರಕ್ಕಾಗಿ ಖರ್ಚಾಗುತ್ತದೆ. ಶಾಸ್ತ್ರಗಳಲ್ಲಿ ಅದು ಏನಾದರೂ ಪರಿಹಾರ ಇದೆ ಏನೋ ಅಂತ ನಾನು ನೋಡ್ತೇನೆ”ಎಂದು ಹೇಳಿ ಆ ಒಡವೆಗಳನ್ನು ತೆಗೆದುಕೊಂಡು ಅಲ್ಲಿಂದ ತನ್ನ ಮನೆಯತ್ತ ಹೊರಟನು ಬ್ರಾಹ್ಮಣ ಪಂಡಿತ.
ರಾತ್ರಿಯಿಂದ ಬೆಳಗಾಗುವವರೆಗೂ ಬ್ರಾಹ್ಮಣ ಧರ್ಮ ಶಾಸ್ತ್ರಗಳ ಪುಟಗಳನ್ನು ತಿರುವಿ ತಿರುವಿ ನೋಡಿದರೂ ಸಹ ಯಾವುದೇ ಪರಿಹಾರ ಸಿಗಲಿಲ್ಲ ಎಂದು ತಿಳಿದಾಗ ಬ್ರಾಹ್ಮಣರೆಲ್ಲರೂ ಕಂಗಲಾಗಿ ಮತ್ತೊಮ್ಮೆ ಬೆಚ್ಚಿಬಿದ್ದರು.
ಏನು ಮಾಡಲಾಗದ ಅಸಹಾಯಕ ಸ್ಥಿತಿಗೆ ತಲುಪಿದರು…
ಹೆಣ ಕೊಳೆತು ಗಬ್ಬುನಾರ್ತಾ ಇದೆ!
ಕೊಳೆತ ನರ ಮಾಂಸಕ್ಕಾಗಿ ಹೊಂಚು ಹಾಕುತ್ತಿವೆ ಕಾಗೆ- ಹದ್ದುಗಳು.
ಕೆಟ್ಟ ಸ್ವರದಲ್ಲಿ ಕೆಕೆ ಹಾಕುತ್ತಾ ಹಾರಾಡುತ್ತಿವೆ ರಣಹದ್ದುಗಳು, ಕಾಗೆಗಳು.
***
“ನಮ್ಮ ಸ್ನೇಹಿತ ತುಂಬ ರಸಿಕನಾಗಿದ್ದ ಕಣ್ರೋ. ನಮ್ಮನ್ನು ದಿನಾಲು ಹೆಂಡ ಕೊಡಿಸ್ತಿದ್ದ. ಮಾಂಸದ ಊಟ ಮಾಡಿ ಉಣುಸ್ತಿದ್ದ. ಇವಾಗ ಏನ್ರೋ ಮಾಡೋದು?”
“ಹೌದು ಕಣೋ. ನಮ್ ಸ್ನೇಹಿತ ತುಂಬ ಒಳ್ಳೆಯವನಾಗಿದ್ದ. ಈ ರೀತಿ ಇಷ್ಟೊಂದು ಬೇಗ ಅವ್ನಿಗೆ ಸಾವು ಬರಬಾರದಿತ್ತು.”
“ಒಳ್ಳೆಯವರಿಗೆ ಆಯಸ್ಸು ತುಂಬ ಕಡಿಮೆ ಅಂತ ಕಾಣ್ಸುತ್ತೆ ಕಣ್ರೋ…”
“ನಮ್ಮ ಸ್ನೇಹಿತನ ಮೃತದೇಹ ಸಂಸ್ಕಾರ ಆಗದೆ ಕೊಳೆತು ಹೋಗುತ್ತಿದೆ ಕಣ್ರೋ. ಸಂಸ್ಕಾರ ಇಲ್ಲದ ಬ್ರಾಹ್ಮಣರು ನಮ್ಮ ಸ್ನೇಹಿತನ ಅಂತ್ಯ ಸಂಸ್ಕಾರ ಮಾಡುತ್ತಿಲ್ಲ ಪಾಪಿಗಳು! ನಾವಾದರೂ ನಮ್ಮ ಸ್ನೇಹಿತನ ಅಂತ್ಯ ಸಂಸ್ಕಾರ ಮಾಡಿ ಮುಗಿಸಿ ಅವನ ಋಣನ ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ಬಂನ್ರೋ. ”
“ಹೌದು… ನಡೀರಿ, ನಾವೇ ನಮ್ಮ ಸ್ನೇಹಿತನ ಅಂತ್ಯಸಂಸ್ಕಾರ ಮಾಡಿ ಮುಗಿಸೋಣ”ಎಂದು ನಿರ್ಧರಿಸಿ ಕುಡಿತದ ಮತ್ತಿನಲ್ಲಿ ತೂರಾಡುತ್ತಾ ಅಲ್ಲಿಗೆ ಬಂದರು.
ಆ ವಿಕೃತ ದೃಶ್ಯವನ್ನು ಕಂಡು-
“ಭೂತ ಭೂತ”ಎಂದು ಅರಚಾಡುತ್ತಾ ಭಯದಿಂದ ಹೆದರಿ ಬಿದ್ದೆನೋ ಕೆಟ್ಟೆನೋ ಎಂಬಂತೆ ಚಲ್ಲಾಪಿಲ್ಲಿಯಾಗಿ ಹೊರ ಓಡಿ ಹೋದರು.
***
ಎಷ್ಟು ದಿನ ಅಂತ ತಾಳುವುದು?
ತಾಳ್ಮೆಗೂ ಒಂದು ಮಿತಿ ಇದೆ.
ತಾಳ್ಮೆ ಮಿತಿಮೀರಿದಾಗ
ಹಸಿವು ತಾಳಲಾಗದೆ ಕೆಲ ಮುದಿ ಬ್ರಾಹ್ಮಣರು ಕದ್ದು ತಿಂದು ಹೊಟ್ಟೆ ತುಂಬಿಸಿಕೊಂಡರು.
ಪಕ್ಕದೂರಿನ ಮಠದ ಮಹಾಗುರುಗಳ ಬಳಿಗೆ ಪರಿಹಾರ ಕೇಳಲೆಂದು ಹೊರಟರು.
ಆದರೆ ಒಬ್ಬ ಬ್ರಾಹ್ಮಣ-
“ನನ್ನ ಹೆಂಡತಿಯ ಆರೋಗ್ಯ ಸರಿಯಿಲ್ಲ. ನಾನು ಅವಳನ್ನು ಬಿಟ್ಟು ಬರುವ ಸ್ಥಿತಿಯಲ್ಲಿಲ್ಲ. ತಾವು ಹೋಗಿ ಬನ್ನಿ” ಎಂದು ಹೇಳಿ ತಾನು ಅಲ್ಲೇ ಉಳಿದುಕೊಂಡನು.
ದೇವರ ಮೇಲೆ ಭಾರ ಹಾಕಿ ಕಲ್ಲು ದೇವರ ಮುಂದೆ ಕೈಜೋಡಿಸಿ ಕುಳಿತನು.
“ಮಾರುತಿ… ಇದಕ್ಕೆ ನೀನೇ ಒಂದು ಪರಿಹಾರ ಸೂಚಿಸಬೇಕು. ಎಡಕ್ಕೆ ಇರಿಸಿದ್ದ ಹೂವು ಬಿದ್ದರೆ ಅಪಶಕುನ ಅಂತ ತಿಳಿದುಕೊಳ್ಳುತ್ತೇನೆ. ಬಲಗಡೆ ಇರಿಸಿದ್ದ ಹೂವು ಬಿದ್ದರೆ ಶುಭ ಸಂಕೇತ ಅಂತ ತಿಳಿದುಕೊಳ್ಳುತ್ತೇನೆ. ಬೇಗ ಪರಿಹಾರ ತಿಳಿಸು ಮಾರುತಿ”ಎಂದು ಹೇಳುತ್ತಾ ಕಣ್ಣು ಮುಚ್ಕೊಂಡು ಕುಳಿತನು.
ಸಮಯ ಉರುಳಲಾರಂಭಿಸಿತು.
ಕೆಲ ಗಂಟೆಗಳ ಕಾಲ ಸಮಯ ಕಳೆಯಿತು.
ನಂತರ ಆಗ ಅಲ್ಲಿ ಏನು ನಡೆಯಿತು?
ದೇವರು ಪ್ರತ್ಯಕ್ಷನಾಗಿ ಪರಿಹಾರ ಸೂಚಿಸಿದ್ನಾ?
ಇಲ್ಲ… ದೇವರು ಪ್ರತ್ಯಕ್ಷನಾಗಲಿಲ್ಲ!
ಅಲ್ಲಿ ಕಾಮ ದೇವತೆ ಪ್ರಕಟಗೊಂಡಿದ್ದಳು!!
ಅದ್ಭುತವಾದ ಸುಖ ನೀಡಿದಳು.
ಹೊಟ್ಟೆ ತುಂಬ ಊಟ ಮಾಡಿಸಿದಳು.
ತುಡುಗ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದು ಮುಗಿಸಿದಂತೆ ಬ್ರಾಹ್ಮಣ ಪಂಡಿತ ರಾತ್ರಿ ಇಡೀ ಎಲ್ಲವನ್ನು ಮಾಡಿ ಮುಗಿಸಿ ನಂಬಲಾಗದೆ ತನ್ನನ್ನು ತಾನೇ ಆಶ್ಚರ್ಯ ಪಡ್ಕೊಂಡಿದ್ದ…!
***
“ಸತ್ತಿರುವ ವ್ಯಕ್ತಿ ತುಂಬ ಒಳ್ಳೆಯವರಾಗಿದ್ದರು. ಅವರ ಮನಸ್ಸಲ್ಲಿ ಕಪಟ ಇರ್ಲಿಲ್ಲ. ಒಳಗೊಂದು ಹೊರಗೊಂದು ಇರಲಿಲ್ಲ ಅವರು. ನಿಜಕ್ಕೂ ಅವರು ತುಂಬ ಒಳ್ಳೆ ವ್ಯಕ್ತಿಯಾಗಿದ್ದರು. ಆದರೆ ಪಾಪ… ಅವರ ಅಂತ್ಯ ಸಂಸ್ಕಾರ ಯಾವೊಬ್ಬ ಬ್ರಾಹ್ಮನೂ ಸಹ ಮಾಡುತ್ತಿಲ್ಲ. ನಿಮಗೆ ಈ ಒಡವೆಗಳನ್ನು ಕೊಡುತ್ತೇನೆ. ಹಣ ಬೇಕಾದ್ರೂ ಕೊಡ್ತೇನೆ. ನಿಮಗೇನು ಬೇಕು ಅಂತ ಕೇಳಿ, ಕೊಡ್ತೇನೆ. ಮನೆಯಲ್ಲಿ ಕಟ್ಟಿಗೆ ಇದೆ. ಅದನ್ನು ಅಲ್ಲೇ ಸುಟ್ಟಬೇಡಿ”ಎಂದು ಹೇಳಿದಾಗ-
“ನಾನೊಬ್ಬ ಶೂದ್ರ, ಸತ್ತವನು ಬ್ರಾಹ್ಮಣ. ಬ್ರಾಹ್ಮಣನ ಹೆಣ ಮುಟ್ಟಿ ನಾನು ನರಕಕ್ಕೆ ಹೋಗಲಾರೆ. ನಿನ್ನ ದುಡ್ಡು – ಒಡವೆ ಬೇಡ, ಸತ್ತ ಬ್ರಾಹ್ಮಣನ ಅಂತ್ಯಸಂಸ್ಕಾರದ ಕೆಟ್ಟ ಸಾಹವಾಸನೂ ಬೇಡ ತಾಯಿ”ಎಂದು ಹೇಳಿ ಕೈ ಜೋಡಿಸಿದನು ಆತ.
ಅವಳು ತನ್ನ ಪ್ರಿಯತಮನ ಅಂತ್ಯ ಸಂಸ್ಕಾರ ಮಾಡಿ ಮುಗಿಸಬೇಕು ಅಂತ ತುಂಬ ಪ್ರಯತ್ನ ಪಟ್ಟಿದ್ದಳು; ಸಾಧ್ಯವಾಗಿರಲಿಲ್ಲ ಪಾಪ ಅವಳಿಂದ.
***
ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಾಹ್ಮಣ ಪಂಡಿತನ ಹೆಂಡತಿ ಸತ್ತುಹೋಗಿದ್ದಾಳೆ.
ಅಗ್ರಹಾರದಲ್ಲಿ ಗಂಡಸರು ಯಾರು ಇಲ್ಲದ ಕಾರಣ ತನ್ನ ಹೆಂಡತಿಯ ಅಂತ್ಯ ಸಂಸ್ಕಾರ ತಾನೊಬ್ಬನೇ ಮಾಡಿ ಮುಗಿಸಿದ.
ತಲೆಮರೆಸಿಕೊಂಡು ಊರೂರು ಅಲೆದ.
ಜಾತ್ರೆ ಎಲ್ಲ ಸುತ್ತಾಡಿದ.
ಹೊಳೆಯಲ್ಲಿ ಸ್ನಾನ ಮಾಡುತ್ತಿರುವ ಪರ ಸ್ತ್ರೀಯ ಅರೆನಗ್ನ ದೇಹ ಸೌಂದರ್ಯ ಕಂಡು ಕಣ್ಣು ಬಿಟ್ಟುಕೊಂಡು ನೋಡಿದ. ಜೊಲ್ಲು ಸುರಿಸಿದ.
ವೇಶ್ಯೆ ಮನೆಗೂ ಹೋಗಿ ಬಂದ.
ಹೊಟ್ಟೆ ಹಸಿವು ತಾಳಲಾರದೆ ಧರ್ಮ ಕ್ಷೇತ್ರ ಒಂದರಲ್ಲಿ ಊಟ ಮಾಡಲು ಹೋಗಿ ಅಲ್ಲಿ ಇಕ್ಕಟ್ಟಿಗೆ ಸಿಲುಕಿದ.
ಅಲ್ಲಿಂದ ತಪ್ಪಿಸಿಕೊಂಡು ಓಡಿದ, ಓಡಿದ…
ಮನಸಾಕ್ಷಿ ಕ್ಯಾಕರ್ಸಿ ಉಗಿದಿದ್ದರಿಂದ ಕೊನೆಗೆ ಸತ್ಯವನ್ನು ಕಕ್ಕಿದ…!
“ನನ್ನೂರು ಕುಂದಾಪುರ ಅಲ್ಲ. ನಾನು ನಿಮಗೆ ಸುಳ್ಳು ಹೇಳಿದೆ. ನಮ್ಮೂರು ಕುಂದಾಪುರದ ಪಕ್ಕದಲ್ಲಿರುವ ಬೇವರ್ಸಿಪುರ. ಬೇವರ್ಸಿಪುರದ ಅಗ್ರಹಾರದಲ್ಲಿ ಸಂಸ್ಕಾರ ಆಗದೆ ಕೊಳೆಯುತ್ತ ಬಿದ್ದಿರುವ ಆ ಜಾತಿಭ್ರಷ್ಟ ಬ್ರಾಹ್ಮಣನಿಗೂ ಮತ್ತು ನನಗೂ ಇಷ್ಟೇ ವ್ಯತ್ಯಾಸ; ಅವನು ಬಹಿರಂಗವಾಗಿ ಹೆಂಡ ಕುಡಿಯುತ್ತಿದ್ದ, ಮಾಂಸ ತಿನ್ನುತ್ತಿದ್ದ, ವೇಶ್ಯೆಅನ್ನು ಇಟ್ಕೊಂಡಿದ್ದ. ನಾನು ಯಾರಿಗೂ ಗೊತ್ತಾಗದ ಹಾಗೆ ನನ್ನ ಹೆಂಡತಿ ಸತ್ತ ದಿನದಂದೇ ವೇಶ್ಯೆಯ ಸಂಗ ಮಾಡಿದೆ. ಒಡವೆಗಳಿಗೆ ಆಸೆ ಪಟ್ಟೆ. ಕದ್ದು ತಿಂದು ಹೊಟ್ಟೆ ತುಂಬಿಸಿಕೊಂಡೆ. ನನ್ನ ಬಗ್ಗೆ ಮತ್ತು ನನ್ನ ಬ್ರಾಹ್ಮಣ ಸಮಾಜದ ಬಗ್ಗೆ ತಿರಸ್ಕಾರ ಇದೆ ನನಗೆ. ನಾನು ಹೋಗಬೇಕು. ನಾನು ಊರಿಗೆ ಹೋಗ್ಬೇಕು”ಎಂದು ಹೇಳಿ ನೇರವಾಗಿ ಊರಿಗೆ ಬಂದು ಸತ್ತಿರುವ ಜಾತಿ ಭ್ರಷ್ಟ ಬ್ರಾಹ್ಮಣನ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ ಸಂಸ್ಕಾರ ಇಲ್ಲದ ಬ್ರಾಹ್ಮಣ…
‘ಆಚಾರ, ವಿಚಾರದಲ್ಲಿ… ಎಲ್ಲಾದರಲ್ಲಿ ತಾನೇ ಸರ್ವ ಶ್ರೇಷ್ಠ ಎಂದು, ತನ್ನನ್ನು ತಾನೇ ಬೊಗುಳಿಕೊಳ್ಳುತ್ತಿರುವ ಬ್ರಾಹ್ಮಣರು ಯಾರೂ ಸಹ ಶ್ರೇಷ್ಠರಲ್ಲ. ಎಲ್ಲರೂ ಭ್ರಷ್ಟರೇ ಆಗಿದ್ದಾರೆ. ಹೇಳುವುದು ಒಂದು, ಮಾಡುವುದು ಬೇರೊಂದು. ಹೇಳುವುದು ಆಚಾರ, ಮಾಡುವುದು ಅನಾಚಾರ!’ಎಂದು – ಯು ಆರ್ ಅನಂತಮೂರ್ತಿಯವರ ಸಂಸ್ಕಾರ ಎಂಬ ಕಾದಂಬರಿ ಹೇಳುತ್ತದೆ.
ಸಂಸ್ಕಾರ ಕಾದಂಬರಿಯಲ್ಲಿ ನಗ್ನ ಸತ್ಯ ಅನಾವರಣಗೊಂಡಿದೆ.ಮನುವಾದಿಗಳ, ಸಾಮಂತವಾದಿಗಳ, ಬ್ರಾಹ್ಮಣ ವಾದಿಗಳ ಗುಟ್ಟು ರಟ್ಟಾಗಿದೆ.
ಈ ದೇಶಕ್ಕೆ ಸ್ವಾತಂತ್ರ ಸಿಕ್ಕಿ 70 – 80 ವರ್ಷಗಳು ಉರುಳಿದರೂ ಸಹ,ಈ ಆಧುನಿಕ ಯುಗದಲ್ಲಿ,ಈ ವಿಜ್ಞಾನದ ಯುಗದಲ್ಲಿಯೂ ಸಹ ಜಾತಿವಾದ-ಬ್ರಾಹ್ಮಣವಾದ… ಎಂಬ ಅನಿಷ್ಟ ಇಡೀ ದೇಶದಾದ್ಯಂತ ತಾಂಡವಾಡುತ್ತಿದೆ. ಬ್ರಾಹ್ಮಣ ವಾದಿಗಳು ಇರುವರಿಗೂ ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿ ಪ್ರಸ್ತುತವೆನಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು ಬಂಧುಗಳೇ.
ಸಂಸ್ಕಾರ ಕಾದಂಬರಿ ಚೆನ್ನಾಗಿದೆ. ಓದಿಲ್ಲ ಅಂದರೆ ಒಂದ್ಸಲ ಓದಿ ಎಂದಷ್ಟೇ ಹೇಳಬಲ್ಲೆ ನಾನು… ನಮಸ್ಕಾರ.
– ಜಿ ಎಲ್ ನಾಗೇಶ್.ಬೀದರ