ಸಾಂಸ್ಕೃತಿಕ ಸಂಘರ್ಷಗಳ ಕುಲುಮೆಯ ‘ರಕ್ತ ವಿಲಾಪ . (ರಂಗ ವಿಮರ್ಶೆ)
– ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್.
ಭುವಿಯ ಮೇಲಿನ ಪ್ರತಿಯೊಂದು ಜೀವಿಯು ಹೋರಾಡುತ್ತಲೇ ತನ್ನ ಅಸ್ತಿತ್ವಕ್ಕಾಗಿ ಹಾತೊರೆಯುತ್ತಲಿರುತ್ತದೆ. ಭೂಮಿಯ ಮೇಲಿನ ಸಂಘರ್ಷ ಇಂದು ನಿನ್ನೆಯದಲ್ಲ .
ಭೂಮಿ ತನ್ನನ್ನು ರೂಪಿಸಿಕೊಳ್ಳಲು ಪ್ರಕೃತಿಯೊಂದಿಗೆ ಹೋರಾಟ ನಡೆಸಿತ್ತು. ಆದರೆ ಇಂದು ಭೂಮಿಗೆ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅದೇ ರೀತಿ ಮಾನವನ ಮನಸ್ಸಿನ ವಿಚಾರಗಳು ಅಸ್ತಿತ್ವಕ್ಕಾಗಿ ಹೋರಾಡುತ್ತಲೇ ಇವೆ . ಅದು ಧನಾತ್ಮಕವಾಗಿ ಋಣಾತ್ಮಕವಾಗಿಯೂ ಚಲಿಸುತ್ತಲೇ ಇರುವುದು . ಒಳಿತು ಕೆಡುಕುಗಳ ಸಾಮಾಜಿಕ ವ್ಯವಸ್ಥೆಯ ತಾಕಲಾಟಗಳ ಮೂರ್ತ ಸ್ವರೂಪವೇ ಈ ‘ರಕ್ತ ವಿಲಾಪ‘ ನಾಟಕ.
ರಕ್ತವಿಲ್ಲದಿದ್ದರೆ ದೇಹ ಬದುಕಲಾರದು,ಹಾಗೆ ವಿಚಾರವಿಲ್ಲದಿದ್ದರೆ ಮನಸ್ಸು ಕೂಡ ಜೀವಿಸಲಾರದು. ಇವೆರಡರ ಸಂಗಮ ರೂಪವೇ ಸೃಜನಶೀಲತೆ.
ಈ ಸೃಜನಶೀಲತೆಯ ಬದುಕಿನ ಹುಡುಕಾಟದಲ್ಲಿ ಅರಿವಿನ ಆಗಸಕ್ಕೆ ಅಣಿ ಯಾಗುವ ಸಂಶೋಧಕನ ಹೆಜ್ಜೆ ಗುರುತುಗಳ ಏರಿಳಿತಗಳನ್ನು ತೋರ್ಪಡಿಸುವುದು ನಾಟಕದ ವೈಶಿಷ್ಟ್ಯ.
ಈ ನಾಟಕ ಮಾತಿನ ಮೇಲೆ ಅಂದರೆ ವಿಚಾರಗಳ ಮೇಲೆ ರೂಪಗೊಂಡಿರುವುದು. ಸಂಶೋಧಕ ಎಂ.ಎಂ. ಕಲಬುರ್ಗಿಯವರ ದಾರುಣಹತ್ಯೆಯ ಕರಾಳ ಮುಖವನ್ನು ಪ್ರಸ್ತುತಪಡಿಸುತ್ತದೆ.
ಕವಿ,ವಿಮರ್ಶಕ ವಿಕ್ರಂ ವಿಸಾಜಿ ಈ ನಾಟಕವನ್ನು ರಚಿಸಿದ್ದಾರೆ. ಅದನ್ನು ರಂಗಕ್ಕೆ ಅಳವಡಿಸಿದವರು ಶಂಕ್ರಯ್ಯ ಆರ್ ಘಂಟಿ.
ಇದು ಘಂಟಿಯವರ ನಿರ್ದೇಶನದ 50ನೇ ನಾಟಕ ಎಂಬುದು ಮತ್ತೊಂದು ಹೆಗ್ಗಳಿಕೆ.
ಆರು ಜನರನ್ನು ಮೂಲವಾಗಿಟ್ಟುಕೊಂಡು, ಹೊಸಬರಿಗೆ ನಟನೆಯ ತರಬೇತಿಯನ್ನು ನೀಡಿ ರಂಗ ಪ್ರದರ್ಶನವನ್ನು ಕೈಗೊಳ್ಳುವುದು ಸುಲಭವಾದ ಮಾತಲ್ಲ, ಅವರ ಬತ್ತದ ಉತ್ಸಾಹ, ರಂಗ ಪ್ರೀತಿಯೇ ನಾಟಕ ಪ್ರದರ್ಶನಗೊಳ್ಳಲು ಕಾರಣವಾಯಿತು.
ಈ ಪೂರ್ವದಲ್ಲಿ ರಾಯಚೂರು ಸಮುದಾಯದ ಪ್ರಕಾಶ್ ರೆಡ್ಡಿ ಗುಂಜಳ್ಳಿ ಅವರು ಈ ನಾಟಕ ನಿರ್ದೇಶಿಸಿ ಕಲಬುರ್ಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಸಿನಿಮಾ ‘ಫ್ಲಾಶ್ ಬ್ಯಾಕ್ ‘ ರೀತಿಯಲ್ಲಿ ನಾಟಕ ಕಟ್ಟಿಕೊಟ್ಟಿದ್ದರು. ಗಂಟೀಯವರು ಸಂಶೋಧಕನ ಪಾತ್ರವನ್ನು ಹೊಸಬರಾದ ಯುವ ನಟನಿಗೆ ಕೊಟ್ಟು ಹಿರಿತನದ ಮಾಗುವಿಕೆಯನ್ನು ಕಲಿಸಿರುವುದು ಕಾಣುತ್ತದೆ.
ಗುಂಜಳ್ಳಿಯವರು ಬಸವಣ್ಣನ ಭಾವಚಿತ್ರವನ್ನು ಮಾತ್ರ ಬಳಸಿದರೆ, ಘಂಟಿಯವರು ಬುದ್ಧ, ಬಸವ ಅಂಬೇಡ್ಕರ್ ಭಾವಚಿತ್ರಗಳನ್ನು ಸಂಶೋಧಕನ ಮನೆಯಲ್ಲಿ ಕಾಣಿಸುತ್ತಾರೆ.
ಗುಂಜಳ್ಳಿಯವರು ದೇವತೆಗಳನ್ನು ಅಸ್ಥಿಪಂಜರದ ವೇಷದಲ್ಲಿ ಅಸ್ತಿತ್ವದ ಹುಡುಕಾಟಕ್ಕಾಗಿ ವ್ಯಂಗ್ಯ ನರ್ತನದ ದರ್ಶನ ಮಾಡಿಸಿದ್ದರೆ, ಗಂಟಿಯವರು ದೇವತೆಗಳನ್ನು ಬಿಳಿ ವಸ್ತ್ರಧಾರಿಯಾಗಿಸಿ ಕಿರೀಟ ಹಾಕಿಸಿ, ‘ಸೈಲೆಂಟ್ ಕಿಲ್ಲರ್’ ಗಳಂತೆ ಭಕ್ತನನ್ನು ಪ್ರಚೋದಿಸುತ್ತವೆ. ಇಲ್ಲಿ ಅಸ್ತಿಪಂಜರವು ಬಿಳಿ ಬಣ್ಣದಾಗಿದೆ, ವಸ್ತ್ರವು ಬಿಳಿಯಾಗಿರುವುದರ ಸಾಮ್ಯತೆ ಕಾಣಬಹುದು.ಬಿಳಿ ಶಾಂತಿಯ ಸಂಕೇತ ಎಂಬ ನಿಲುವು ನಮ್ಮದಾಗಬೇಕೆಂಬ ಆಲೋಚನೆ ಇರಬಹುದು ಅಥವಾ ನೋಟ ನಮ್ರವಾಗಿದ್ದರು ಮಾಟ ಅಂದರೆ ಕೆಲಸ ನಮ್ರವಾಗಿರಲುಸಾಧ್ಯವೇ ಅದು ಕ್ರೂರವವಾಗಿರುತ್ತದೆಂಬ ನಿಲುವನ್ನು ನಾಟಕ ರಚನಕಾರರು ಹಾಗೂ ನಿರ್ದೇಶಕರು ತಾಳಿರಬಹುದು.
‘ಎನ್ನ ನಡೆಯೊಂದು ಪರಿ ನುಡಿವೊಂದು ಪರಿ ‘ ಎಂಬುದಕ್ಕೆ ಈ ಪಾತ್ರಗಳ ಬಣ್ಣದ ಮೂಲಕ ನಾವು ಚರ್ಚಿಸಬಹುದಾಗಿದೆ. ಸಂಶೋಧಕ ಮತ್ತು ಯುವಕನ ವಾಗ್ವಾದಗಳು ನಾಟಕದ ಗಡಿರೇಖೆಗಳಂತಿವೆ. ವಾಸ್ತವ ಸತ್ಯ ತಿಳಿಯಬೇಕೆಂಬ ಹಂಬಲ ಸಂಶೋಧಕನದು. ಸಮಾಜದಲ್ಲಿರುವ ಅಪನಂಬಿಕೆಗಳಿಗೆ ಮೂಲ ಯಾವುದೆಂಬ ಚಿಂತನೆ ಸಂಶೋಧಕನಿಗಿದ್ದರೆ, ಯುವಕನಿಗೆ ಸಮಾಜದ ಸ್ಥಾಪಿತ ಬೇರುಗಳು ಕಿತ್ತಾಕಬಾರದೆಂಬ ಹುಂಬತನ . ಸಂಶೋಧಕನ ಮಾತುಗಳಿಗೆ ತಲೆ ತೂಗುವ ಯುವಕ ಯಾವುದನ್ನು ನಂಬಬೇಕು ಯಾವುದೋ ನಂಬಬಾರದೆಂಬ ವಿಚಾರದ ಚಕ್ರವ್ಯೂಹದೊಳಗೆ ದಾರಿ ಕಾಣದೆ ಕಂಗಾಲಾಗಿರುತ್ತಾನೆ. ಸಂಶೋಧಕ ಯುವಕನ ವಾಕ್ ಸಮರವು ದೇವರು, ಧರ್ಮ, ದೇಶ, ಸತ್ಯ ಸುಳ್ಳುಗಳ ನಡುವೆ ವಾದ ವಿವಾದಗಳು ನಾ ಬಿಡೆ ನಾ ಕೊಡೆ, ಗೂಳಿ ಕಾಳಗದಂತೆ ನಡೆಯುತ್ತಿದ್ದವು. ರಕ್ತದಲ್ಲಿ ದೇಶಭಕ್ತಿ ಇರುವುದಿಲ್ಲ ಬೆವರಿನಲ್ಲಿ ದೇಶಭಕ್ತಿ ಇರುತ್ತದೆ ಎಂಬ ಮಾತು ಜನ ಜನಿತವಾಗುತ್ತಿತ್ತು.
ಸತ್ಯದ ಹುಡುಕಾಟದಲ್ಲಿ ಸಂಶೋಧಕನ ಹಲವು ಸಂದರ್ಭಗಳಲ್ಲಿ ಒಂಟಿಯಾಗಿರುತ್ತಾನೆ.
ಆತನ ವಾದ ಒಪ್ಪುವರು ಬೆರಳೆಣಿಕೆಯಷ್ಟು ಜನರು. ತಲೆಬುಡವಿಲ್ಲದ ಆಧಾರಗಳಿಲ್ಲದ ವಾದಕ್ಕೆ ಬಹುಪರಾಕ್ ಹೇಳುವ ಜನರೇ ಹೆಚ್ಚು ಎಂಬುದು ನಾಟಕ ಪ್ರೇಕ್ಷಕರನ್ನು ಮನನ ಮಾಡಿಸುತ್ತಿತ್ತು. ಸತ್ಯ ಎಲ್ಲರಿಗೂ ಕಹಿಯಾಗಿರುವುದು. ಆದರೆ ಅದರ ಸತ್ವ ಅರಿತವನು ಸಂಶೋಧನೆಗೆ ನಿಷ್ಠೆ ತೋರಿಸುತ್ತಾನೆ.ಅರಿಯದವನು ಶತ್ರುವಾಗುತ್ತಾನೆ. ಇದೇ ಪರಿಸ್ಥಿತಿ ಯುವಕನದ್ದು ಹಾಗೂ ಸಮಾಜದ್ದು ಎಂದು ಘಂಟಿಯವರು ಹಾಗೂ ವಿಸಾಜಿಯವರು ಘಂಟಾಗೋಷವಾಗಿ ಪಾತ್ರಗಳ ಮೂಲಕ ಮಾತಾಡಿಸುತ್ತಾರೆ. ಸಂಶೋಧಕನು ಕೋರ್ಟಿನ ಸನ್ನಿವೇಶದಲ್ಲಿ ನಿರರ್ಗಳವಾದ ಮಾತುಗಾರಿಕೆಗೆ, ಒಳ ಅರ್ಥಗಳನ್ನು ಕೋರ್ಟ್ ಅರ್ಥಮಾಡಿಕೊಳ್ಳದೆ ಮಾತಿದ್ದು ಮೂಕನಂತನಾಗುವುದು ಪ್ರಸ್ತುತ ನ್ಯಾಯಾಲಯದ ಸ್ಥಿತಿಗತಿಯನ್ನು ಮನಗಾಣಿಸುತ್ತಿತ್ತು. ನ್ಯಾಯಾಧೀಶರ ಹಿಂದೆ ಇರುವ ನ್ಯಾಯ ಸಮಾನತೆ ತೋರಿಸುವ ತಕ್ಕಡಿ ಸಮನಾಗಿರದೆ ಒಂದೇ ಕಡೆ ವಾಲಿದ್ದು, ಕಾಕಾತಾಳೀಯವಾಗಿ ಏರ್ಪಟ್ಟ ಘಟನೆಯಾದರೂ ನ್ಯಾಯ ಸಮವಾಗಿಲ್ಲವೆಂದು ಜನರಿಗೆ ತಿಳಿಸುತ್ತಿತ್ತು. ಸಮಾಜಘಾತಕರ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ನ,ರೇಂದ್ರ ದಾಬೊಲ್ಕರ್, ಎಂ ಎಂ ಕಲಬುರ್ಗಿಯವರ ಸಾವಿಗೆ ನ್ಯಾಯ ಸಿಕ್ಕಿಲ್ಲವೆಂಬ ವಿಷಾದದ ಸೂಚನೆ ಇದಾಗಿರಬಹುದು.
ಬ್ರಿಟಿಷರ ಅದೆಷ್ಟೋ ಗುಂಡೇಟುಗಳು ಸ್ವಾತಂತ್ರ್ಯ ವೀರರ ರಕ್ತ ಕುಡಿದವು. ಇಂದು ಆಧುನಿಕ ಬ್ರಿಟಿಷರ ಮುಂದುವರೆದ ಸಂತತಿಯಂತೆ, ವಿಚಾರವಾದಿಗಳಿಗೆ ಗುಂಡು ಹಾರಿಸುವ ಕೆಟ್ಟ ಹಾವಳಿ ಶುರುವಾಗಿದೆ. ಮಹಾತ್ಮಾ ಗಾಂಧೀಜಿಯಿಂದ ಎಂ. ಎಂ. ಕಲಬುರ್ಗಿಯವರೆಗಿನ ಗುಂಡೇಟುಗಳು ಸುಸ್ಥಿರ ಸಮಾಜವನ್ನು ಭಯಗ್ರಸ್ತವನ್ನಾಗಿ ಮಾಡಿದೆ. ಸಂಪ್ರದಾಯವನ್ನು ಮುರಿಯುವ ಕೆಲಸ ಸಂಶೋಧಕನದು. ಅದನ್ನು ಮುರಿಯಬಾರದೆಂಬ ಹಠ ಸಮಾಜಘಾತಕರದ್ದು.
ಹುಸಿ ವ್ಯಕ್ತಿತ್ವವನ್ನು ಯುವಕರಲ್ಲಿ ತುಂಬುವ ಪಡೆ ಸಮುದಾಯದಲ್ಲಿದೆ. ಅಂತವರನ್ನು ಟಾರ್ಗೆಟ್ ಮಾಡುವುದು ಅವರ ಕೆಲಸವೆಂದು ನಾಟಕಕಾರ ವಿಕ್ರಂ ವಿಸಾಜಿ ‘ರಕ್ತ ವಿಲಾಪ’ದ ಮೂಲಕ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ಮುಂದುವರೆದು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತಾಗಿ ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿಯನ್ನು ವ್ಯಂಗ್ಯಾತ್ಮಕವಾಗಿ ಚಿತ್ರಿಸಿದ್ದಾರೆ. ನ್ಯಾಯಕ್ಕಾಗಿ ಮಾಡೋದು ಹೋರಾಟ,ಸ್ವಾರ್ಥಕ್ಕಾಗಿ ಮಾಡೋದು ಕಾದಾಟ ಎಂಬಂತ ಮಾತುಗಳು ನಾಟಕದಲ್ಲಿವೆ. ಧರ್ಮ ಎಂದರೆ ವಿಚಾರಗಳನ್ನು ಅರಳಿಸುವುದು ಆದರೆ ಇಂದು ಅದು ಕೆರಳಿಸುವ ಕೆಲಸ ಮಾಡುತ್ತಿದೆ ಎಂಬ ಆತಂಕ ಸಂಶೋಧಕನದು. ಧರ್ಮ ಹೊರಗಿನ ಶತ್ರುಗಳಿಂದ ಸಾಯುವುದಿಲ್ಲ ಒಳಗಿನ ಶತ್ರುಗಳಿಂದ ಸಾಯುವುದು ಎಂಬ ಆತಂಕಗಳಿಗೆ ನಾಟಕ ಸಾಕ್ಷೀ ಆಯಿತು .
ಈ ತರಹದ ಅಪನಂಬಿಕೆಗಳ ಬಂಧನದಿಂದ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಸಮಾಜ ಯೋಚಿಸಬೇಕು ಎಂಬ ದನಿ ನಿರ್ದೇಶಕರದು.
ಏಕೆಂದರೆ ಹೊಸ ಅನ್ವೇಷಣೆಗಳನ್ನು ಒಪ್ಪದ ಸಮಾಜ ರೋಗಿಷ್ಟವಾಗುವುದು, ಹಾಗೆ ಸಮಾಜದ ಆಯುಷ್ಯವು ಕಡಿಮೆಯಾಗುವುದೆಂಬ ಗಟ್ಟಿ ದನಿಯನ್ನು ನಿಜವಾಗಿಸಲು ಗಂಟಿಯವರು ಈ ನಾಟಕವನ್ನು ರಂಗ ಪ್ರಯೋಗಕ್ಕಿ ಳಿಸಿದ್ದಾರೆನಿಸುತ್ತದೆ .
ಮಹಾತ್ಮ ಗಾಂಧೀಜಿ ಅವರು ಹತ್ಯಗೊಂಡಾಗ ಗಂಗಾಧರ ಚಿತ್ತಾಲರು ರಚಿಸಿದ ‘ಮಹಾತ್ಮ’ ಕವಿತೆಯ ಸಾಲುಗಳು ನಾಟಕಕ್ಕೆ ಕನ್ನಡಿ ಹಿಡಿಯುತ್ತವೆ
“ನಿನ್ನ ನೆತ್ತರು ನೆಲಕ್ಕೆ ಚೆಲ್ಲಿದಂದು
ಮಣ್ಣು ನಡುಗಿತು ಹಗಲ ಹೂ ಬಾಡಿತು
ನರನು ಕೆರಳುವ ಹುಂಬ, ಬಾಳು ಯೂಪಸ್ಥಂಭ ಉತ್ತಮರ ಬಲಿ ಇಲ್ಲಿ ಬಾನಾಡಿತು“ ಎಂದು ವಿಷಾದಿಸುತ್ತ ಕವಿತೆಯ ಕೊನೆಯ ಸಾಲುಗಳಲ್ಲಿ,
‘ಇಂಥ ಬಲಿ ಇನ್ನೇಸೋ! ಬಾನ್ ಗುಡುಗಿತು’ ಎಂದು ಕವಿ ಷರಾ ಬರೆದಿದ್ದು ಈಗ ನಿಜವಾಗತೊಡಗಿದೆ.
ಎಂ ಎಂ ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆಯಾದಾಗ ಸಾಂಸ್ಕೃತಿಕ ಜಗತ್ತಿಗೆ ಭೂಕಂಪನದ ಅನುಭವವಾಯಿತು, ಮಾತೇ ನಿಂತು ಹೋದವು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿ ಬಂದನಕ್ಕೊಳಗಾಗಿ ಮರಣ ದಂಡನೆಗೆ ಗುರಿಯಾಯಿತು. ಬಹಳಷ್ಟು ಲೇಖಕರ ಮಾತು ಬರವಣಿಗೆಗೆ ‘ಬರ‘ ಬಂದಿತ್ತು. ಈ ನಿಟ್ಟಿನಲ್ಲಿ ನಾಟಕ ಮಾತಾಡ ತೊಡಗಿದ್ದು ಶ್ಲಾಘನೀಯ.
ಕಲಬುರ್ಗಿಯ ಜನರಂಗದಿಂದ ಪ್ರದರ್ಶನಗೊಂಡ ಈ ನಾಟಕದಲ್ಲಿ ಕಲ್ಬುರ್ಗಿಯ ಪಾತ್ರವಾಗಿ ಸಂಪತ್ ಯುವಕನ ಪಾತ್ರದಲ್ಲಿ ಅಕ್ಷ, ನ್ಯಾಯಾಧೀಶರಾಗಿ ಆಶಾ,
ವಕೀಲರಾಗಿ ಸಾಗರ್ ಗಾಳೆ ಯವರು ಉತ್ತಮ ಅಭಿನಯವನ್ನು ನೀಡಿದ್ದರು. ಆದರೂ ಕೂಡ ಘಂಟಿಯವರ ರಂಗ ತಾಲೀಮು ಇನ್ನೂ ಅವಶ್ಯಕತೆ ಇತ್ತನಿಸುತ್ತದೆ. ಹೊಸಬರನ್ನು ಹಾಕಿಕೊಂಡು ರಂಗಭೂಮಿಗೆ ಹೊಸ ಕಲಾವಿದರನ್ನು ಪರಿಚಯಿಸುತ್ತಿರುವ ಗಂಟಿ ಯವರಿಗೆ ಅಭಿನಂದನೆಗಳು.
ಸಂಗೀತ ಲಕ್ಷ್ಮಿಕಾಂತ್ ಪಾಟೀಲ್, ಕಲ್ಯಾಣ ಭಜಂತ್ರಿ, ರಂಗಸಜ್ಜಿಕೆ ಮಧು ಮೈಸೂರ್ ಅವರು ಒದಗಿಸಿದ್ದರು. ರಾಘವೇಂದ್ರಹಳ್ಳಿ ಪೇಟೆ ಪ್ರಸಾಧನ್ ನಿರ್ವಹಿಸಿದ್ದರು. ಇತ್ತೀಚಿಗೆ ಅಂದ ಕಲಬುರ್ಗಿಯ ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ನಾಟಕ ಪ್ರದರ್ಶನಗೊಂಡು ಜನರ ಮೆಚ್ಚುಗೆ ಪಡೆದುಕೊಂಡಿತು.ಗುಂಜಳ್ಳಿ ಹಾಗೂ ಗಂಟಿಯವರು ನಾಟಕದಲ್ಲಿ ಹಲವಾರು ಹಾಡುಗಳನ್ನು, ಕವಿತೆಗಳನ್ನು ಬಳಸಿಕೊಂಡಿದ್ದರೆ ನಾಟಕ ಇನ್ನಷ್ಟು ಮೆರಗು ಪಡೆದುಕೊಳ್ಳಬಹುದಿತ್ತು. ಮುಂದಿನ ಪ್ರದರ್ಶನ ಗಳಲ್ಲಿ ಕವಿತೆಗಳನ್ನು ಬಳಸಿಕೊಳ್ಳುವಂತಾಗಲಿ.
–ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್.
ಸಂಶೋಧಕರು, ಯಾದಗಿರಿ.
8310074262
‘ರಂಗ ವಿಮರ್ಶೆ’ ಲೇಖನ
ಪ್ರಕಟಿಸದಕ್ಕಾಗಿ ಧನ್ಯವಾದಗಳು.
ಕನ್ನಡ ಕುರಿತಾಗಿ ಅದ್ಭುತವಾದ ಕೆಲಸ ಮಾಡುತ್ತಿದ್ದೀರಿ
ಮುನ್ನಡೆಯಿರಿ ನಿಮ್ಮೊಂದಿಗೆ ನಾವು ಕೂಡ ಹೆಜ್ಜೆ
ಹಾಕುವೆವು.ಸಾಹಿತ್ಯ ಸಂಸ್ಕೃತಿಯ ತವರು ಕಲ್ಯಾಣ
ಕರ್ನಾಟಕ. ಈ ಭಾಗದ ಕಲೆ ಸಾಹಿತ್ಯವನ್ನು
ದಾಖಲಿಸಬೇಕಾದ ಅನಿವಾರ್ಯತೆ ನಮ್ಮ
ನಿಮ್ಮೆಲ್ಲರ ಮೇಲಿದೆ.
ಜೈ ಕಲ್ಯಾಣ ಸಿರಿಗನ್ನಡಂ…
ರಾಜೇಂದ್ರಕುಮಾರ್ ಮುದ್ನಾಳ್, ಯಾದಗಿರಿ