ಸರ್ಕಾರ ನೀಡುವ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ಖಾಸಗಿಯವರು ನೀಡಬಹುದೇ ?
– ಮಚ್ಚೇಂದ್ರ ಪಿ ಅಣಕಲ್.
ಕರ್ನಾಟಕ ಸರ್ಕಾರ ನೀಡುವ ‘ ಕರ್ನಾಟಕ ರಾಜ್ಯೋತ್ಸವ ‘ ಪ್ರಶಸ್ತಿಯು ಕೆಲವರು ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ‘ಕನ್ನಡ ರಾಜ್ಯೋತ್ಸವ ರತ್ನ, ಕರ್ನಾಟಕ ರಾಜ್ಯೋತ್ಸವ ರತ್ನ,” ಎಂಬ ಇತ್ಯಾದಿ ಹೆಸರಿನ ಪ್ರಶಸ್ತಿಗಳು ಕೊಡುತ್ತಿರುವುದರಿಂದ ಸರ್ಕಾರಿ ಪ್ರಶಸ್ತಿಗಳಿಗೆ ಬೆಲೆ ಇಲ್ಲದಂತಾಗಿದೆ. ಹೀಗೆ ಮಾಡಿದರೆ ಘನತೆವೆತ್ತ ಮುಖ್ಯ ಮಂತ್ರಿ , ರಾಜ್ಯಪಾಲರಿಗೂ ಹಾಗೂ ಸಂವಿಧಾನಕ್ಕೆ ಇದು ಅಗೌರವ ತೋರಿದಂತಾಗುವುದಿಲ್ಲವೇ ?
ನಮ್ಮ ಭಾರತ ದೇಶದ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಪ್ರತಿವರ್ಷ ಸಾರ್ವಜನಿಕವಾಗಿ ತಮ್ಮ ಜೀವಮಾನವಿಡಿ ಸಾಧನೆ ಮಾಡಿದ ಭಾರತದ ನಾಗರಿಕರಿಗಾಗಿ ಕೆಲ ಅತ್ಯುನ್ನತ ಪ್ರಶಸ್ತಿ ಪುರಸ್ಕಾರಗಳು ನೀಡುತ್ತಾ ಬರುತ್ತಿವೆ. ಅವುಗಳಲ್ಲಿ ಪದ್ಮಭೂಷಣ, ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಜ್ಞಾನ ಪೀಠ, ಭಾರತ ರತ್ನ ಇತ್ಯಾದಿ ಪ್ರಶಸ್ತಿಗಳನ್ನು ನೀಡಿದರೆ ಕರ್ನಾಟಕ ಸರ್ಕಾರವು ಕನ್ನಡ ನಾಡು ನುಡಿ,ಸಾಹಿತ್ಯ, ಸಂಗೀತ, ನೃತ್ಯ, ಜಾನಪದ, ನಾಟಕ, ಚಲನಚಿತ್ರ, ಮೊದಲಾದ ಕ್ಷೇತ್ರಗಳಲ್ಲಿ ಅತ್ಯಮೂಲ್ಯ ಸೇವೆ ಸಲ್ಲಿಸಿದ ಕರ್ನಾಟಕದ ನಾಗರಿಕರಿಗಾಗಿ ಪ್ರತಿವರ್ಷ ಹಲವಾರು ಸಾಧಕರಿಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸುತ್ತಾ ಬರುತ್ತಿದೆ.
ಅಂತಹ ಪ್ರಶಸ್ತಿಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಒಂದಾಗಿದೆ. ಈ ಪ್ರಶಸ್ತಿ ಪುರಸ್ಕಾರವು ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹೆಸರನ್ನು ರಾಜಪಾಲರು ಆಯ್ಕೆ ಮಾಡುತ್ತಾರೆ . ಮುಖ್ಯ ಮಂತ್ರಿಗಳು ಆ ಪ್ರಶಸ್ತಿ ಪುರಸ್ಕೃತರಿಗೆ ವಿಧಾನಸೌಧದ ಎದುರಿನಲ್ಲಿ ಸಾರ್ವಜನಿಕವಾಗಿ ಗೌರವಿಸಿ, 20 ಗ್ರಾಂ.ಚಿನ್ನ ಮತ್ತು 1.ಲಕ್ಷ ರೂಪಾಯಿ ಗೌರವ ಧನ ನೀಡಿ ಸತ್ಕರಿಸುತ್ತಾರೆ.
ಅಷ್ಟೇಯಲ್ಲದೆ ಈ ಪ್ರಶಸ್ತಿಯು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ತಹಶಿಲ್ದಾರರು ವಿವಿಧ ಸ್ಥಳೀಯ ಸಾಧಕರಿಗೆ ನವೆಂಬರ್ 1 ರಂದು ರಾಜ್ಯೋತ್ಸವ ದಿನಾಚರಣೆಯ ನಿಮಿತ್ತವಾಗಿ ಕೊಡುತ್ತಾರೆ.
ಇದು ಕರ್ನಾಟಕ ಸರ್ಕಾರದ ನೀಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಇದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ‘ನಾಯಿ ಕೊಡೆಗಳಂತೆ’ ಕೆಲ ಕನ್ನಡ ಪರ ಮತ್ತು ಸಾಹಿತ್ಯ ಸಂಘ ಸಂಸ್ಥೆಯವರು ಈ ಪ್ರಶಸ್ತಿ ನೀಡುತ್ತಾ ಬರುತ್ತಿದ್ದಾರೆ.
ಕರ್ನಾಟಕ ಸರ್ಕಾರ ನೀಡುವ ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿವು ಕೆಲವರು ಅಲ್ಪ ಸ್ವಲ್ಪ ಪದಗಳಲ್ಲಿ ಬದಲಾವಣೆ ಮಾಡಿಕೊಂಡು ‘ಕನ್ನಡ ರಾಜ್ಯೋತ್ಸವ ರತ್ನ, ಕರ್ನಾಟಕ ರಾಜ್ಯೋತ್ಸವ ರತ್ನ,” ಎಂಬ ಇತ್ಯಾದಿ ಹೆಸರಿನ ಪ್ರಶಸ್ತಿಗಳು ಸಾರ್ವಜನಿಕವಾಗಿ ಗುರ್ತಿಸಿಕೊಂಡವರಿಗೆ ಮತ್ತು ಗುರ್ತಿಸಿಕೊಳ್ಳದೆ ಇರುವವರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸುತ್ತಿರುವುದರಿಂದ ಸರ್ಕಾರಿ ಪ್ರಶಸ್ತಿಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ. ಹೀಗೆ ಮಾಡುವುದರಿಂದ ಘನತೆವೆತ್ತ ಮುಖ್ಯ ಮಂತ್ರಿ ಮತ್ತು ರಾಜ್ಯಪಾಲರಿಗೆ ಹಾಗೂ ಸಂವಿಧಾನಕ್ಕೆ ಅಗೌರವ ಮಾಡಿದಂತಾಗುವುದಿಲ್ಲವೇ ?
ಹಾಗಾದರೆ ಖಾಸಗಿ ಸಂಘ ಸಂಸ್ಥೆಯವರು ಈ ರೀತಿ ಸರ್ಕಾರ ನೀಡುವ ಪ್ರಶಸ್ತಿಗಳು ನೀಡಬಹುದೇ ? ಹೌದು ! ಎಂದಾದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರತ್ನ ಮತ್ತು ಭಾರತ ರತ್ನ ಮೊದಲಾದ ಪ್ರಶಸ್ತಿಗಳು ಖಾಸಗಿ ಸಂಘ ಸಂಸ್ಥೆಯವರು ಮನಬಂದಂತೆ ತಮಗೆ ಬೇಕಾದವರಿಗೆ ಕೊಡಬಹುದು ತಾನೇ ? ಇದಕ್ಕೆ ಕಾನೂನಿನಲ್ಲಿ ಯಾವ ಕ್ರಮ ಕೈಗೊಳ್ಳಬಹುದು ?
ಕೆಲವು ಕಡೆ ಈ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ನೀಡಲಾಗುವುದೆಂದು ಹಣ ಪಡೆದು ಪ್ರಶಸ್ತಿ ಪತ್ರ ನೀಡುತ್ತಿರುವ ಕುರಿತು ತುಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ.
ಕನ್ನಡ ಓದಲು ಬರೆಯಲು ಬರದೇ ಇದ್ದವರಿಗೂ ಈ ಪ್ರಶಸ್ತಿ ಬಿಕರಿಯಾಗುತ್ತಿದೆ ಎಂದು ತಿಳಿದು ಬಂದಿದೆ. ಕೆಲವು ಕಡೆ ನಕಲಿ ಡಾಕ್ಟರೇಟ್ ಪದವಿ ಹಾವಳಿ ಕಂಡು ಬಂದರೆ ಈ ನವೆಂಬರ್ ತಿಂಗಳಿನಲ್ಲಿ ನಕಲಿ (ಕಾಫಿ) ರಾಜ್ಯೋತ್ಸವ ಹೆಸರಿನ ಪ್ರಶಸ್ತಿ ಜೋರಾಗಿದೆ.
‘ಕನ್ನಡ ಎಂದರೆ ಕಿವಿ ನಿಮಿರುವುದು’ ಎಂದು ಕವಿ ಕುವೆಂಪು ರವರು ಪದ್ಯ ಬರೆದು ಕನ್ನಡ ಸಾಹಿತ್ಯ ಮತ್ತು ಭಾಷಾಭೀಮಾನದ ಬಗ್ಗೆ ಎತ್ತಿ ತೋರಿಸಿದರೆ, ನಮ್ಮ ಇತ್ತೀಚಿನ ಕೆಲ ಸಾಹಿತಿ ಬರಹಗಾರರಲ್ಲಿ ಕೆಲವರು ಈಗ ಈ ‘ಪ್ರಶಸ್ತಿ‘ ಎಂದರೆ ಕಿವಿ ನಿಮಿರಿಸಿಕೊಂಡು ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬಿದ್ದು ಏನೋ ! ಬರೆಯುವುದು ಬಿಟ್ಟು ಇನ್ನೂ ಏನೇನೋ ! ಬರೆಯಲು ತೊಡಗಿ ಸಂದಿಗೊಂದಿಗಳಲ್ಲಿ ಕಸದ ತೊಟ್ಟಿಗೆ ಎಸೆಯುವ ಪದಾರ್ಥಗಳಂತಹ ಪ್ರಶಸ್ತಿ ಪತ್ರಗಳನ್ನು ಹುಡುಕುತ್ತಾ ಕಾಲಹರಣ ಮಾಡುತ್ತಿದ್ದಾರೆ. ಮತ್ತು ಆ ಪ್ರಶಸ್ತಿ ಪಡೆಯಲು ದುಂಬಾಲು ಬಿದ್ದು ಸ್ವೀಕರಿಸಿ ತಮ್ಮ ಘನತೆಗೆ ತಾವೆ ಕುಂದು ತಂದುಕೊಳ್ಳುತ್ತಿದ್ದಾರೆ.ಎಂದರೆ ತಪ್ಪಾಗಲಾರದು.
ಹಿಂದೊಂದು ಕಾಲವಿತ್ತು ಈ ಪ್ರಶಸ್ತಿ ಪುರಸ್ಕಾರಗಳು ರಾಜಾಶ್ರಯದಲ್ಲಿ ಕವಿಗಳ ಸಾಮರ್ಥ್ಯಕ್ಕೆ ತಕ್ಕಂತೆ ನೀಡುತ್ತಿದ್ದರು. ಆಗ ಆ ಪ್ರಶಸ್ತಿಗಳು ಪಡೆದವರಿಗೂ ತುಂಬ ಗೌರವ ಇರುತ್ತಿತ್ತು. ಕಾಳಿದಾಸನಿಗೆ ಕವಿರತ್ನ, ಅತ್ತಿಮಬ್ಬೆಗೆ ದಾನ ಚಿಂತಾಮಣಿ, ಕರ್ಣನಿಗೆ ದಾನಶೂರ, ಪಂಪ,ಪೊನ್ನ, ರನ್ನ ರಿಗೆ ‘ರತ್ನತ್ರಯರು’ ಎಂಬ ಪ್ರಶಸ್ತಿ, ಬಿರುದುಗಳು ಅಷ್ಟೇ ಅರ್ಥಪೂರ್ಣವಾಗಿದ್ದವು. ಅದರೆ ಇಂದು ಈ ತರಹದ ಪ್ರಶಸ್ತಿಗಳು ತಾಲೂಕು, ಜಿಲ್ಲೆಗೊಂದರಂತೆ ಕೆಲ ಕನ್ನಡ ಪರ ಸಂಘ ಸಂಸ್ಥೆಯವರೆ ಮನಬಂದಂತೆ ಸರ್ಕಾರಿ ಪ್ರಶಸ್ತಿಗಳು ಕೊಡುತ್ತಿರುವುದು ಎಷ್ಟು ಸರಿ ?
ಹೌದು ! ಎಂದಾದರೆ ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಕರ್ನಾಟಕ ರತ್ನ, ಭಾರತ ರತ್ನ, ಜ್ಞಾನ ಪೀಠ ಮೊದಲಾದ ಅತ್ಯುನ್ನತ ಪ್ರಶಸ್ತಿಗಳು ಈ ಖಾಸಗಿ ಸಂಸ್ಥೆಯವರು ಕೊಡಬಹುದಾದರೆ. ಇದರಿಂದ ನಮ್ಮ ಸರ್ಕಾರಕ್ಕೆ ರಾಷ್ಟ್ರಪತಿ, ರಾಜ್ಯ ಪಾಲರು, ಮುಖ್ಯ ಮಂತ್ರಿ ಮತ್ತು ಸಂವಿಧಾನಕ್ಕೆ ಅಗೌರವ, ಅವಮಾನ ಮಾಡಿದಂತಾಗುವುದಿಲ್ಲವೇ ? ಹಾಗಾಗಿ ಆಯಾ ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಕೊಡಲ್ಪಡುತ್ತಿರುವ ಸರ್ಕಾರಿ ಪ್ರಶಸ್ತಿಯ ಹೆಸರಿನ ಪ್ರಶಸ್ತಿಗಳು ನೀಡಿದರೆ ಈ ಖಾಸಗಿ ಸಂಘ ಸಂಸ್ಥೆಗಳ ವಿರುದ್ಧ ಯಾಕೆ ಕಾನೂನು ಕ್ರಮ ಕೈಗೊಳ್ಳಬಾರದು. ?
ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕರ್ನಾಟಕ ರಾಜ್ಯೋತ್ಸವ ದಂತಹ ಸರ್ಕಾರಿ ಪ್ರಶಸ್ತಿಗಳು ಖಾಸಗಿಯವರಿಂದ ಬಿಕರಿಯಾಗುವುದನ್ನು ತಡೆಯಬೇಕಾಗಿದೆ . ಹಾಗೆ ಮಾಡಿದರೆ ಮಾತ್ರ ಈ ಸರ್ಕಾರ ನೀಡುವ ಪ್ರಶಸ್ತಿ ಪುರಸ್ಕಾರಗಳಿಗೆ ತನ್ನದೆ ಆದ ಘನತೆ ಗೌರವ ಇರುತ್ತದೆ ಅಲ್ಲವೇ ?
– ಮಚ್ಚೇಂದ್ರ ಪಿ ಅಣಕಲ್.