Oplus_131072

ಸಾರ್ಥಕ ಜೀವನಕ್ಕೆ ಕೆಲ ಗುರಿಗಳು.

 

– ವೀಣಾ ಹೇಮಂತಗೌಡ ಪಾಟೀಲ್ .

 

ಸುಂದರವಾದ ನವಿಲೊಂದು ಗರಿ ಬಿಚ್ಚಿ ನರ್ತಿಸಿದಾಗ ನೋಡಲು ಕಣ್ಣಿಗೆ ಹಬ್ಬ, ಮನಕ್ಕೆ ಮುದ,ತೀರದ ಆನಂದ ಅಲ್ಲವೇ?

ಅಂತೆಯೇ ಜೀವನದಲ್ಲಿ ಸಂತಸವೆಂಬ ನವಿಲು ಗರಿ ಬಿಚ್ಚಿ ಕುಣಿದಾಡಲು ಗುರಿ ಎಂಬ ಗರಿಗಳನ್ನು ಒಪ್ಪವಾಗಿಸಿಕೊಳ್ಳಬೇಕಲ್ಲವೇ!
ಜೀವನದಲ್ಲಿ ಸಂತಸವೇ ಎಲ್ಲಕ್ಕಿಂತಲೂ ಮಿಗಿಲು ಎನ್ನುವುದಾದರೆ ಅಂತಹ ಸಂತಸದ ಜೀವನವನ್ನು ಸಾಗಿಸಲು ನಾವು ಕೆಲ ಗುರಿಗಳೆಂಬ ಗರಿಗಳನ್ನು ಬದುಕಿನ ರೆಕ್ಕೆಯಲ್ಲಿ ಅಳವಡಿಸಿಕೊಳ್ಳಬೇಕು.
ಹಾಗಾದರೆ ಆ ಗುರಿಗಳು ಯಾವುವು?

ವೃತ್ತಿಯ ಗುರಿ ( ಕರಿಯರ್ ಗೋಲ್ )…
ನಮ್ಮ ಬದುಕನ್ನು ನಡೆಸಲು ನಾವು ಕೈಗೊಳ್ಳಬಹುದಾದ ವೃತ್ತಿಯ ಕುರಿತಾದ ಒಂದು ಗುರಿ. ನಮಗೆ ಒಳ್ಳೆಯ ಉದ್ಯೋಗವನ್ನು ದೊರಕಿಸಿ ಕೊಡುವ ವಿದ್ಯೆಯನ್ನು ಕಲಿಯಲು ಅತ್ಯವಶ್ಯಕವಾದ ಜಾಣ್ಮೆಯನ್ನು ರೂಢಿಸಿಕೊಳ್ಳುವ ಮತ್ತು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಯಶಸ್ಸನ್ನು ಪಡೆಯುವ ಗುರಿ ನಮ್ಮದಾಗಿರಬೇಕು.

ಆರ್ಥಿಕ ಸ್ಥಿರತೆಯ ಗುರಿ… ಹಣ ಕೊಡುವಷ್ಟು ಆತ್ಮವಿಶ್ವಾಸವನ್ನು, ಧೈರ್ಯವನ್ನು ಮತ್ತಾವುದೂ ಕೊಡುವುದಿಲ್ಲ.ಜೀವನದಲ್ಲಿ ಹಣವೇ ಮುಖ್ಯವಲ್ಲ ಎಂದು ಭಾವಿಸುವ ಪ್ರತಿಯೊಬ್ಬರೂ ಕೂಡ ಹಣವನ್ನು ಗಳಿಸಿದ ಮೇಲೆ ಈ ರೀತಿ ಯೋಚಿಸುತ್ತಾರೆಯೇ ಹೊರತು ಮೊದಲಲ್ಲ. ಹಣವೇ ಎಲ್ಲವೂ ಅಲ್ಲ ನಿಜ, ಆದರೆ ಹಣವಿಲ್ಲದೆ ಬದುಕು ನಡೆಯುವುದಿಲ್ಲ ಎಂಬುದು ಕೂಡ ಅಷ್ಟೇ ದಿಟವಲ್ಲವೇ?

ಮನುಷ್ಯ ತಾನು ದುಡಿಯುವ ಹಣದಲ್ಲಿ ಕೌಟುಂಬಿಕ ಖರ್ಚು ವೆಚ್ಚಗಳಿಗೆ,ತಂದೆ-ತಾಯಿಯರ ಪಾಲನೆಗೆ, ಮುಂದಿನ ಭವಿಷ್ಯದ ಉಳಿತಾಯಕ್ಕೆ ಒಂದಷ್ಟು ಹಣವನ್ನು ಸದಾ ಕಣ್ಣಲ್ಲಿ ಇಟ್ಟುಕೊಳ್ಳಬೇಕಾದದ್ದು ಅತ್ಯವಶ್ಯಕ.ಇದರ ಜೊತೆ ಜೊತೆಗೆ ಅವಶ್ಯವಿದ್ದಲ್ಲಿ ಸಾಮಾಜಿಕ ಸೇವಾ ಕೆಲಸಗಳಲ್ಲಿ ತನ್ನ ದುಡಿಮೆಯ ಒಂದಷ್ಟು ಭಾಗವನ್ನು ಮೀಸಲಿಡಬೇಕು.

ಸಾಮಾಜಿಕ ಗುರಿ…. ಮನುಷ್ಯ ಸಮಾಜ ಜೀವಿ. ನಾವು ಹುಟ್ಟಿದ, ಬೆಳೆದ ಬದುಕುತ್ತಿರುವ ಈ ಸಮಾಜಕ್ಕೆ ನಾವು ನಮ್ಮದೇ ಆದ ಕಾಣಿಕೆಗಳನ್ನು
ಸಮಾಜಕ್ಕೆ ನೀಡುವುದು ನಮ್ಮ ಕರ್ತವ್ಯ. ನಮಗಿಂತ ಕೆಳಮಟ್ಟದಲ್ಲಿರುವ ಜನರ ಬದುಕನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಮ್ಮನ್ನು ನಾವು ರಚನಾತ್ಮಕವಾಗಿ ತೊಡಗಿಸಿಕೊಳ್ಳಬೇಕು.ವೈಯುಕ್ತಿಕ ಹಿತಾಸಕ್ತಿಯ
ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ನಾವು ಬದ್ಧತೆಯಿಂದ ಸ್ವೀಕರಿಸಿ ನಿರ್ವಹಿಸಬೇಕು.ಸಮಾಜ ಸೇವೆ ಸಾಮಾಜಿಕ ಜವಾಬ್ದಾರಿಯಾಗಿ ಪರಿವರ್ತಿತವಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂಬ ಅರಿವನ್ನು ಹೊಂದಿರಬೇಕು.
ಮೊದಲೆರಡು ಗುರಿಗಳನ್ನು ಸಾಧಿಸಿದಾಗ ಮಾತ್ರ ಮೂರನೇ ಗುರಿ ನಮಗೆ ಸುಲಭ ಸಾಧ್ಯವಾಗುತ್ತದೆ.

ಉತ್ತಮ ಸಂಬಂಧಗಳ ನಿರ್ವಹಣೆಯ ಗುರಿ.. ಮೂಲತಃ ಮನುಷ್ಯ ಭಾವನಾಜೀವಿ. ಭಾವನೆಗಳಲ್ಲಿಯೇ ಬದುಕುವ ಮನುಷ್ಯ ಎಷ್ಟೋ ಬಾರಿ ತನ್ನ ಸಂಬಂಧಗಳನ್ನು ನಿರ್ವಹಿಸುವಲ್ಲಿ ಎಡವುತ್ತಾನೆ. ಮಾನಸಿಕ ಮತ್ತು ಭಾವನಾತ್ಮಕ ಬದುಕಿನ ಸುಧಾರಣೆಗೆ ನಾವು ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಸೌಹಾರ್ದತೆಗಳನ್ನು ನಮ್ಮ ಸಂಬಂಧಗಳಲ್ಲಿ ಹೊಂದಿರಬೇಕು.ಎಲ್ಲ ರೀತಿಯ ಭೌತಿಕ ಸಂಪತ್ತುಗಳು ಇದ್ದರೂ ಮಾನಸಿಕವಾಗಿ ವ್ಯಕ್ತಿ ಕುಗ್ಗುವುದು ಭಾವನಾತ್ಮಕ ಸಂಬಂಧಗಳ ಕೊರತೆಯಿಂದ ಎಂಬುದರ ಅರಿವನ್ನು ಹೊಂದಿದ್ದು ಉತ್ತಮ ಕೌಟುಂಬಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಹೊಂದಿರಬೇಕು….. ಇದರ ಜೊತೆಗೆ ಬಾಂಧವ್ಯಗಳಲ್ಲಿನ ಇತಿಮಿತಿಗಳನ್ನು ಕೂಡ ಅರಿತಿದ್ದರೆ ಮತ್ತಷ್ಟು ಒಳ್ಳೆಯದು.

ಒಳ್ಳೆಯ ಆರೋಗ್ಯದ ಗುರಿ… ಉತ್ತಮ ಮಾನಸಿಕ ಮತ್ತು ದೈಹಿಕ ಸ್ಥಿತಿಯಲ್ಲಿಯೇ ನಮ್ಮ ಆರೋಗ್ಯ ಅಡಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ಒಳ್ಳೆಯ ಆಹಾರ ಕ್ರಮ, ವ್ಯಾಯಾಮ, ಯೋಗ ನಡಿಗೆ ಮುಂತಾದವುಗಳನ್ನು ಅಳವಡಿಸಿಕೊಳ್ಳಬೇಕು.
ದೈಹಿಕ ಆರೋಗ್ಯಕ್ಕೆ ಯೋಗ ಮತ್ತು ವ್ಯಾಯಾಮಗಳಾದರೆ ಮಾನಸಿಕ ಆರೋಗ್ಯಕ್ಕೆ ಧ್ಯಾನ, ಭಜನೆ, ಸತ್ಸಂಗಗಳು ಬೇಕು.
ಧ್ಯಾನ ಭಜನೆ ಮಾಡಲು ನಾವೇನು ಮುದುಕರೇ? ಎಂಬ ಭಾವ ಖಂಡಿತ ಬೇಡ.
ಪ್ರಸ್ತುತ ದಿನಮಾನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಧ್ಯಾನದ ಅವಶ್ಯಕತೆ ಯೌವನದಲ್ಲಿದ್ದಾಗ ಹೆಚ್ಚು. ಆಧುನಿಕ ಜೀವನ ತಂದೊಡ್ಡುವ ಹತ್ತು ಹಲವು ಸವಾಲುಗಳನ್ನು ಎದುರಿಸಲು ಮಾನಸಿಕ ಸ್ಥಿರತೆ ಮತ್ತು ಶಾಂತ ಮನಸ್ಥಿತಿಯನ್ನು ಪಡೆಯಲು ಧ್ಯಾನ, ಆಧ್ಯಾತ್ಮಿಕ ಚಿಂತನೆಗಳ ಅನಿವಾರ್ಯತೆ ಇಂದಿನ ಯುವ ಜನಾಂಗಕ್ಕೆ ಇದೆ.

ನೆಮ್ಮದಿಯ ಜೀವನದ ಗುರಿ…. ಮನುಷ್ಯನ ಜೀವನದಲ್ಲಿ ಆತನ ಪ್ರಥಮ ಮತ್ತು ಅಂತಿಮ ಉದ್ದೇಶ ಸಂತೋಷವಾಗಿರುವುದು. ಸಂತಸ ನಮ್ಮ ಗಮ್ಯ ಸ್ಥಾನವಲ್ಲ. ಅದೊಂದು ಪಯಣ… ಬದುಕಿನ ಹಾದಿಯಲ್ಲಿ ಬರುವ ಎಲ್ಲ ಏರಿಳಿತಗಳನ್ನು ಅನುಭವಿಸುತ್ತಾ ಇದ್ದುದರಲ್ಲಿಯೇ ನೆಮ್ಮದಿಯನ್ನು ಪಡೆಯುತ್ತಾ ಸಾಗುವ ಸುಧೀರ್ಘ ಪಯಣ ಜೀವನ. ನಮ್ಮವರೊಂದಿಗಿನ ಪ್ರೀತಿ ವಿಶ್ವಾಸದ ಮತ್ತು ಹೊಂದಾಣಿಕೆಯ ಬದುಕು, ಇರುವುದರಲ್ಲಿಯೇ ತೃಪ್ತಿಪಡುವ ಮನಸ್ಥಿತಿ,ಆಶೀರ್ವದಿಸುವ ಹಿರಿಯರು ಪ್ರೀತಿಸುವ ಸಂಗಾತಿ ಮತ್ತು ಗೌರವಿಸುವ ಮಕ್ಕಳು, ಉತ್ತಮ ನೆರೆಹೊರೆ ಒಳ್ಳೆಯ ಪರಿಸರ ಇಷ್ಟಿದ್ದರೆ ಸಾಕಲ್ಲವೇ ಬದುಕಿಗೆ ನೆಮ್ಮದಿಯನ್ನು ಕೊಡಲು?

ಬೇಕು ಎಂದು ಬಯಸುವ ವ್ಯಕ್ತಿಗೆ ಆತನ ಎತ್ತರಕ್ಕೆ ಸಂಪತ್ತನ್ನು ತಂದು ಸುರಿದರೂ ತೃಪ್ತಿ ಸಿಗದು, ತಟ್ಟೆ ತುಂಬಾ ಊಟ ಮಾಡಿದ ವ್ಯಕ್ತಿಗೆ ಮತ್ತೇನು ಬೇಡ ಹೇಳಲು ಕಾರಣ ಸಂತೃಪ್ತಿ.

ಕೋಟಿಗಟ್ಟಲೆ ಹಣವಿದ್ದರೂ ಮನುಷ್ಯ ತನ್ನ ಹೊಟ್ಟೆಗೆ ತಿನ್ನುವುದು ಅನ್ನವನ್ನೇ ಹೊರತು ಚಿನ್ನವನ್ನಲ್ಲ, ಕೋಟ್ಯಂತರ ಬೆಲೆ ಬಾಳುವ ಕಾರಿನಲ್ಲಿ ಕುಳಿತವನು ಕೂಡ ತನ್ನ ಬದುಕಿನ ಅಂತಿಮ ಯಾತ್ರೆಯಲ್ಲಿ ನಾಲ್ಕು ಜನರ ಹೆಗಲ ಮೇಲೆಯೇ ಹೋಗುವುದು.

ಆಶಾಶ್ವತವಾದ ಈ ಬದುಕಿನಲ್ಲಿ ಸ್ಥಿರವಾದ ನೆಮ್ಮದಿ ಪಡೆಯಲು ಉತ್ತಮ ಗುರಿಗಳನ್ನು ಹಾಕಿಕೊಂಡು ಯಶಸ್ಸು ಮತ್ತು ಸಂತೃಪ್ತತೆಯನ್ನು ಪಡೆಯಬೇಕು. ಸುತ್ತಲಿನ ನಮ್ಮ ನೆರೆಹೊರೆಯವರೊಂದಿಗೆ ಸೌಹಾರ್ದಯುತ ಜೀವನವನ್ನು ನಡೆಸುವುದು ನಮ್ಮ ಬದುಕಿನ ಧ್ಯೇಯವಾಗಲಿ ಎಂಬ ಆಶಯದೊಂದಿಗೆ

  – ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ