ಸಾಸಿರ ನಾಡಿನ, ಒಲವಿನ ಕವಿಯೆಂದೆ ಕರೆಯಲ್ಪಡುವ ಧರ್ಮಣ್ಣ ಎಚ್ ಧನ್ನಿ ಅವರು ಬಹುಮುಖ ಪ್ರಭೆಯ ಹಿರಿಯ ಕವಿ. ವೃತ್ತಿಯಲ್ಲಿ ಶಿಕ್ಷಕರಾಗಿ ಪೃವೃತ್ತಿಯಲ್ಲಿ ಸಾಹಿತಿಯಾಗಿ, ಪತ್ರಕರ್ತರಾಗಿ ನುಡಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದವರು. ತಂದೆ ಹುಸನಪ್ಪಾ, ತಾಯಿ ತಾನಾಬಾಯಿ ಉದರದಲ್ಲಿ 1ಜುಲೈ 1967 ರಂದು ಜನನ. ತಂದೆ ತಾಯಿಗಳಿಬ್ಬರು ಜನಪದ ಕಲಾವಿದರು. ಇಂಥ ಸಾಂಸ್ಕೃತಿಕ ಪರಿಸರದ ಮನೆಯಲ್ಲಿ ಜೋಗುಳ ಪದ ಕೇಳುತ್ತಾ ಬೆಳೆದು ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದವರು.
ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ವಿದ್ಯಾ ವರ್ಧಕ ಸಂಘ ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡಿದವರು. ಈ ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗಲೇ ಕವನ ರಚನೆಯ ಗೀಳು ಹಚ್ಚಿಕೊಂಡರು. ಖ್ಯಾತ ಜನಪದ ವಿದ್ವಾಂಸ ವಿಜಯಪೂರದ ಸಿಂಪಿ ಲಿಂಗಣ್ಣ ಅವರು 1982ರಲ್ಲಿ ಈ ಪ್ರೌಢ ಶಾಲೆಗೆ ಬಂದಾಗ ತಾವು ಬರೆದ ಕವನವೊಂದು ತೋರಿಸಿದರು. ಅವರು ಮೆಚ್ಚುಗೆ ಸೂಚಿಸಿ ಧನ್ನಿ ಅವರನ್ನು ಬೆನ್ನು ತಟ್ಟಿ ಶುಭ ಹಾರೈಸಿದ್ದರು. ಅಂದಿನಿಂದ ಇವರು ನಿರಂತರವಾಗಿ ಕಾವ್ಯ, ಗದ್ಯ, ಭಾಷಣ, ನಾಟಕ ಮತ್ತು ರೂಪಕಗಳನ್ನು ಬರೆಯುವ ಹವ್ಯಾಸ ಕರಗತ ಮಾಡಿಕೊಂಡರು.
ಧರ್ಮಣ್ಣ ಧನ್ನಿ ಅವರು ಬರೆದ ಅನೇಕ ಭಾಷಣ, ಕಾವ್ಯ ವಾಚನ, ರೂಪಕಗಳು, ಚಿಂತನಗಳು ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾಗಿವೆ. ಈ ಎಲ್ಲಾ ಸಾಹಿತ್ಯದ ಪ್ರಕಾರಗಳ ರಚನೆಗೆ ಮನೆಯ ಪರಿಸರವೇ ಪ್ರಭಾವ. ಮೌನ ಮಾತಾಡಿದಾಗ, ಒಡಲ ಬ್ಯಾನಿ, ನೆನಪಿನ ಅಂಗಳದಲ್ಲಿ ಹಾಗೂ ಚುಟುಕು ಕವನ ಸಂಕಲನಗಳು ಸೇರಿ ನಾಲ್ಕು ಸಂಪಾದಿತ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಗಳನ್ನು ಪ್ರೀತಿಸುವ ಕವಿ ಹೃದಯ ಧನ್ನಿ ಅವರದು. ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ರೂಪಿಸಿ ನೆರವೇರಿಸಿದ್ದಾರೆ. ಸಾಕ್ಷರತಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ತರುವಲ್ಲಿ ಅವರ ಪಾತ್ರ ತುಂಬಾ ಹಿರಿದು. ಸಾಕ್ಷರತಾ ಕವಿಕಾ ಕೇಂದ್ರಗಳನ್ನು ವ್ಯವಸ್ಥಿತವಾಗಿ ನಡೆಸಿ ರಾಜ್ಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಧನ್ನಿ ಅವರಿಗೆ ಸಲ್ಲುತ್ತದೆ.
ಸಧ್ಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಷತ್ತಿನ ‘ಸಂಕಥನ’ಮತ್ತು ‘ಕನ್ನಡ ಸಾರಥಿ’ ಕೃತಿಗಳೆರಡು ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ. ಆಳಂದ ನ ಜೀವ ನದಿ ಅಮರ್ಜಾ ನದಿಯ ಹೆಸರಲ್ಲಿ 2020 ರಲ್ಲಿ ಅಮರ್ಜಾ ಪ್ರಕಾಶನ ಸ್ಥಾಪಿಸಿ ಕಲಬುರಗಿ ಭಾಗದ ಅನೇಕ ಉದಯೋನ್ಮುಖ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ಬಹುಮುಖ ಪ್ರತಿಭೆಯ ಕವಿ ಧರ್ಮಣ್ಣ ಎಲ್ಲರ ಪ್ರೀತಿಯ ಅಣ್ಣ ಕೂಡ. ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳು ಪಡೆದು ಕೊಂಡಿದ್ದಾರೆ. ಕವಿ ಮನಸಿನ ಧರ್ಮಣ್ಣ ಎಚ್ ಧನ್ನಿ ಅವರು ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಬರಹಗಾರರು. ಅವರ ಕಾವ್ಯ ಪ್ರೀತಿಗೆ ಭಾವ ಬೇಸುಗೆ ಒಲವ ಪ್ರೀತಿ ಝರಿಯಾಗಿ ಹರಿಯುತ್ತಿದ್ದಾರೆ.
ಕೃತಿಗಳು
ಮೌನ ಮಾತಾಡಿದಾಗ(ಕವನ ಸಂಕಲನ)
ಒಡಲ ಬ್ಯಾನಿ (ಕವನ ಸಂಕಲನ)
ನೆನಪಿನ ಅಲೆಯಲ್ಲಿ(ಹೈಕು)
ಊರಾಚೆ (ಕಥಾ ಸಂಕಲನ
ಚುಟುಕು(ಸಂಕಲನ)
ಸಂಪಾದಿತ ಕೃತಿಗಳು
1) ಅಮರ್ಜಾ
2)ಸಂಕಥನ
3)ಕನ್ನಡ ಸಾರಥಿ
3)ಕಹಳೆ
4)ವಿಜಯೀಭವ
ಗಡಿ ಭಾಗ ಹಿರೋಳಿ ಗ್ರಾಮದಲ್ಲಿ 13 ಜನವರಿ 2025 ರಂದು ನಡೆದ ಅಳಂದ ತಾಲೂಕಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ನಾಡಿನ ವಿವಿಧ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳು, ಗೌರವ ಪುರಸ್ಕಾರಗಳು ಧರ್ಮಣ್ಣ ಧನ್ನಿ ಅವರಿಗೆ ಸಂದಿವೆ. ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಹಿತಿ, ಶಿಕ್ಷಕರಾಗಿ ಜನಪ್ರಿಯರಾಗಿದ್ದಾರೆ.
– ಸುರೇಖಾ ಕೆ ಬಮನಳ್ಳಿ.
ಕಡಗಂಚಿ