ಶಕ್ತಿ ದೇವತೆ ..ಗೌರಿ ಹುಣ್ಣಿಮೆಯ ಕಥೆ.
ಸಾವಿರಾರು ವರ್ಷಗಳ ಹಿಂದೆ ತ್ರಿಪುರಾಸುರನೆಂಬ ಅಸುರನಿದ್ದನು. ಆತನಿಗೆ ವಿದ್ಯುನ್ಮಾನ, ಕಮಲಾಕ್ಷ ಮತ್ತು ತಾರಕಾಸುರ ಎಂಬ ಹೆಸರಿನ ಮೂರು ಜನ ಮಕ್ಕಳು. ಆತನ ಮತ್ತು ಆತನ ಮಕ್ಕಳ ಉಪಟಳವನ್ನು ತಡೆಯಲಾರದೆ ದೇವೇಂದ್ರನು ತ್ರಿಪುರಾಸುರನನ್ನು ಸಂಹರಿಸಿದನು. ತಮ್ಮ ತಂದೆಯ ಸಂಹಾರದಿಂದ ಕುಪಿತರಾದ ಆತನ ಮೂರು ಮಕ್ಕಳು ಸೃಷ್ಟಿಕರ್ತ ಬ್ರಹ್ಮನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾರೆ. ಅವರ ಉಗ್ರ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನು ಪ್ರತ್ಯಕ್ಷನಾಗಿ ವರವನ್ನು ಕೋರಿಕೊಳ್ಳಲು ಹೇಳಿದಾಗ ತಮಗೆ ಈ ಮೂರು ಲೋಕಗಳನ್ನು ಕೊಟ್ಟು ಬಿಡಲು ಮತ್ತು ಯಾರು ಈ ಮೂರು ಲೋಕಗಳನ್ನು ಒಂದೇ ಬಾಣದಲ್ಲಿ ನಾಶ ಮಾಡಿದಾಗ ಮಾತ್ರ ತಮಗೆ ಮರಣವನ್ನು ಕೊಡು ಎಂದು ಬೇಡಿಕೊಂಡರು.
ವರವನ್ನಿತ್ತ ಬ್ರಹ್ಮನು ಅಂತರ್ಧಾನನಾಗುತ್ತಲೇ ಈ ಸೋದರತ್ರಯರು ಮೂರು ಲೋಕಗಳ ಜನರನ್ನು, ಪಶು ಪ್ರಾಣಿಗಳನ್ನು ಹಿಂಸಿಸ ತೊಡಗಿದರು. ಇದರಿಂದ ತೊಂದರೆಗೊಳಗಾದ ಇಂದ್ರಾದಿ ದೇವತೆಗಳು ಶಿವನನ್ನು ಕಷ್ಟ ನಿವಾರಿಸಲು ಕೇಳಿಕೊಂಡಾಗ ಶಿವನು ಭೂಮಿಯನ್ನೇ ಒಂದು ರಥವನ್ನಾಗಿಸಿ ಬ್ರಹ್ಮನನ್ನು ಬಿಲ್ಲಾಗಿಸಿ ವಿಷ್ಣುವನ್ನು ಬಾಣವನ್ನಾಗಿಸಿ ಯುದ್ಧಕ್ಕೆ ಹೊರಡುವಾಗ ತನ್ನ ಪತ್ನಿಯ ಹೊರತು ರಾಕ್ಷಸ ಸಂಹಾರ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಆಕೆಯನ್ನು ಗೌರಿ ದೇವಿಯ ರೂಪದಲ್ಲಿ ಕರೆದೊಯ್ಯುತ್ತಾನೆ. ಗೌರಿಶಂಕರರು ಒಂದೇ ಬಾಣದಿಂದ ಮೂರು ಲೋಕಗಳನ್ನು ನಾಶ ಮಾಡುತ್ತಾರೆ. ಹೀಗೆ ವೃಷಭ ವಾಹನನಾಗಿ ಶಿವನು ಪತ್ನಿಯೊಂದಿಗೆ ತ್ರಿಪುರಾಸುರನ ಮೂರು ಮಕ್ಕಳನ್ನು ಸಂಹಾರ ಮಾಡಿದ ದಿನವೇ ಕಾರ್ತಿಕ ಪೂರ್ಣಿಮೆ. ಆದ್ದರಿಂದ ನಮ್ಮ ಗ್ರಾಮೀಣ ಜನರು ಈ ದಿನವನ್ನು ಗೌರಿ ಹುಣ್ಣಿಮೆ ಎಂದು ಆಚರಿಸುತ್ತಾರೆ. ಸೀಗಿ ಹುಣ್ಣಿಮೆಯಂದು ಭೂಮಿತಾಯಿಯನ್ನು ಪೂಜಿಸಿ ಆರಾಧಿಸಿದರೆ, ಗೌರಿ ಹುಣ್ಣಿಮೆಯಂದು ಶಕ್ತಿರೂಪಿಣಿ ತಾಯಿ ಗೌರಿಯನ್ನು ಆ ಪೂಜಿಸುತ್ತಾರೆ.
ಮಗಳು ಪಾರ್ವತಿಯು ಪತಿಯ ಜೊತೆಗೂಡಿ ಮಾಡಿದ ಸಾಹಸದ ಕೃತ್ಯದಿಂದ ಹೆಮ್ಮೆಪಟ್ಟ ತಂದೆ ಹಿಮವಂತನು ಮಗಳು ಗೌರಿಯನ್ನು ತವರು ಮನೆಗೆ ಕರೆ ತಂದು ಆಕೆಗೆ ಸೀರೆ,ಕುಪ್ಪಸ, ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯಗಳ ಜೊತೆಗೆ ಬಾಗಿನ ನೀಡಿ ಕೈಲಾಸಕ್ಕೆ ಕಳುಹಿಸಿಕೊಡುತ್ತಾನೆ. ನಮ್ಮ ಜನಪದರ ಪಾಲಿಗಂತು ಪಾರ್ವತಿ ದೇವಿ ಮನೆ ಮಗಳು ಮತ್ತು ಮುಕ್ಕಣ್ಣ ಶಿವ ಮನೆ ಅಳಿಯನಿದ್ದಂತೆ.
ಮಗಳು ಅಳಿಯನನ್ನು ಸನ್ಮಾನಿಸಿ ದೀಪದ ಬೆಳಕಿನಲ್ಲಿ ಕಳುಹಿಸಿಕೊಡುತ್ತಾರೆ. ಈ ದಿನದಂದು ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಸಣ್ಣ ಮಕ್ಕಳು ಹೀರೇಕಾಯಿ, ಪಡುವಲಕಾಯಿ, ಇಲ್ಲವೇ ಹಿಟ್ಟಿನ ಪುಟ್ಟ ದೊಂದಿ ದೀಪಗಳನ್ನು ಉರಿಸುತ್ತಾ ಗೌರಿ ಶಂಕರರನ್ನು ಪ್ರತಿಷ್ಠಾಪಿಸಿದ ಜಾಗಗಳಲ್ಲಿ ಸಕ್ಕರೆಯ ಪಾಕವನ್ನು ಕಟ್ಟಿಗೆಯ ಇಲ್ಲವೇ ಹಿತ್ತಾಳೆಯ ಅಚ್ಚುಗಳಲ್ಲಿ ಹಾಕಿ ತಯಾರಿಸಿದ ಸಕ್ಕರೆ ಆರತಿಗಳನ್ನು ತಟ್ಟೆಯಲ್ಲಿಟ್ಟುಕೊಂಡು ಹೊನ್ನಂಬರಿಕೆ ಹೂವು, ಅರಿಶಿಣ-ಕುಂಕುಮ, ತುಪ್ಪದ ಬತ್ತಿ, ಊದಿನ ಕಡ್ಡಿಯೊಂದಿಗೆ ಪೂಜಿಸಿ ಸಕ್ಕರೆ ಆರತಿಯನ್ನು ಬೆಳಗುತ್ತಾ ಕೆಳಗಿನ ಹಾಡುಗಳನ್ನು ಹಾಡುತ್ತಾರೆ.
ಗೌರಿ ಗೌರಿ ಗಾಣಗೌರಿ
ಕುಂಕುಮ ಗೌರಿ ಅರಿಶಿನಗೌರಿ
ಅಣ್ಣನಂತ ಅವರಿಕೋಲ್ ಅವರಿಕೋಲ್ ತಮ್ಮನಂತ ತವರಿಕೋಲ್ ತವರಿ ಕೋಲ್
ನಿಲ್ಲ ನಿಲ್ಲ ಗೌರಮ್ಮ ಗೌರಮ್ಮ
ನಿಲ್ಲಿಸಿಕೊಂಡು ಬಾರಮ್ಮ ಬಾರಮ್ಮ
ವರ್ಷಕ್ಕೊಮ್ಮೆ ಬರತೀದಿ ಬರತೀದಿ
ಅರಿಶಿಣ ಪತ್ಲಾ ತರ್ತೀನಿ ತರ್ತೀನಿ
ಕೋಲ ಗೌರಿ ಕೋಲ ಕಂಚಿನ ಗೌರಿ ಕೋಲ.
ಎಂದು ಪ್ರತಿವರ್ಷ ಗೌರಿ ಹುಣ್ಣಿಮೆಯಂದು ಹಾಡುತ್ತಾ ಸಾಗುತ್ತಾರೆ.
ಇನ್ನು ಗೌರಿ ಶಂಕರರನ್ನು ಹೊತ್ತ ಬಸವಣ್ಣನನ್ನು ಕುರಿತು
ಒಂದು ಸುತ್ತಿನ ಕ್ವಾಟಿ ಅದರೊಳಗೆ ಬಂದು ಕುಂತಾನ ಬಸವ, ಬಸವಗ ಬಸವನ್ನೀರಿ
ಬಸವನ ಪಾದಕ ಶರಣ ಎನ್ನೀರಿ..,
ಇದನ್ನೇ ಮುಂದುವರೆಸುತ್ತಾ ಎರಡು ಸುತ್ತು ಮೂರು ಸುತ್ತು ಕೊನೆಗೆ ನೂರು ಸುತ್ತಿನವರೆಗೂ ಹೋಗುವುದಿದೆ.
ಒಂದು ಸೇರೆಣ್ಣಿ ತಂದಾಳ ಗೌರಿ
ವಂದ ದೀವಿಗಿ ಹಚ್ಚ್ಯಾಳ ಗೌರಿ
ರಾಯರಾಡೋದು ಹಾದಿಬೀದ್ಯಾಗ
ಶೆಟ್ಟರಾಡೋದು ಪಟ್ಟಣಸಾಲ್ಯಾಗ
ನಾವಾಡೋದು ಗೌರಿ ಹುಣ್ಮ್ಯಾಗ
ಏಕದಾರುತೇ ಗೌರಿ ಬೆಳಗದಾರತೆ
ಗಂಡನ ಮನೆ ಕೈಲಾಸದಲ್ಲಿ ತುಂಬಾ ಬಡತನವನ್ನು ಹೊಂದಿದ್ದಾಳೆ ಗೌರಿ ಎಂಬ ಅರ್ಥದಲ್ಲಿ ಆಕೆ ಕೇವಲ ಒಂದು ಸೇರು ಎಣ್ಣೆಯನ್ನು ಬಳಸುತ್ತಾಳೆ ಎಂಬುದು ಈ ಹಾಡಿನ ತಾತ್ಪರ್ಯವಾಗಿದೆ.
ಮಂತ್ರಿ ಮಾಗಧ ಜನರು ಆಟ ಆಡುವುದು, ಓಡಾಡುವುದು ರಾಜಬೀದಿಯಲ್ಲಿ, ಶೆಟ್ಟರು ವ್ಯಾಪಾರಸ್ಥರು ಆಡುವುದು ಪಟ್ಟಣದ ಅಂದರೆ ಊರಿನ ಅಂಗಡಿ ಸಾಲುಗಳಲ್ಲಿ, ಗಂಡು ಮಕ್ಕಳು ಕೂಡ ಕಳ್ಳ ಪೋಲಿಸ್ ಆಟ, ಕಣ್ಣು ಮುಚ್ಚಾಲೆ, ಕಬ್ಬಡ್ಡಿ ಆಟಗಳನ್ನು ಆಡುತ್ತಾರೆ.ಆದರೆ ನಾವು ಹೆಣ್ಣು ಮಕ್ಕಳು ಗೌರಿ ಹುಣ್ಣಿಮೆಯಲ್ಲಿ ಆಟವಾಡುತ್ತೇವೆ. ಗೌರಿ ಹುಣ್ಣಿಮೆಯ ದಿನ ಜಾಗರಣೆ ಮಾಡುತ್ತಾ ಅನೇಕ ಆಟಗಳನ್ನು ಆಡುತ್ತಾರೆ. ಹಾಡು ಕಟ್ಟುತ್ತಾರೆ, ಒಗಟು, ಒಡಪು, ಹರಟೆ ನಗು ತಮಾಷೆ ಎಲ್ಲವುಗಳ ಒಟ್ಟು ಮೇಳವಿಕೆ ಆಗುವುದು ಈ ಗೌರಿ ಹುಣ್ಣಿಮೆಯಲ್ಲಿ. ಗೌರಿ ಹುಣ್ಣಿಮೆಯ ಎರಡನೆಯ ದಿನ ರಾತ್ರಿ ಗೌರಿಯನ್ನು ಗಂಡನ ಮನೆಗೆ ಕಳುಹಿಸುವ ಸಂಭ್ರಮ. ಗೌರಿಯನ್ನು ಇಟ್ಟಿರುವವರ ಮನೆಯ ಜನರೊಂದಿಗೆ ಓಣಿಯ ಎಲ್ಲರೂ ಸೇರಿ ಹತ್ತಿರದ ಬಾವಿಗೆ ಸಡಗರ ಸಂಭ್ರಮದೊಂದಿಗೆ ಹೋಗಿ ಗೌರಿಯನ್ನು ಪೂಜಿಸಿ ಬಾವಿಯಲ್ಲಿ ವಿಸರ್ಜಿಸುವರು.
ಇನ್ನು ಹಳೆಯ ಮದರಾಸು ಕರ್ನಾಟಕ ಭಾಗದಲ್ಲಿ ಗೌರಿ ದೇವಿಯ ಸಹೋದರಿಯಾದ ಕೊಂತೆಮ್ಮನನ್ನು ಮನೆಯ ಹೊರಭಾಗದಲ್ಲಿ ಇಲ್ಲವೇ ಮಹಡಿಯ ಮೇಲಿನ ಭಾಗದಲ್ಲಿ ಸಗಣಿ ಸಾರಿಸಿ ಮೊಟ್ಟಗೊಳಿಸಿದ ಭಾಗದಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಇದಕ್ಕೂ ಮುಂಚೆಯೇ ಹಲವಾರು ದಿನಗಳಿಂದ ವಿವಿಧ ಆಹಾರ ಭಕ್ಷ್ಯಗಳಾದ ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಕಡಬು ಮುಂತಾದ ಸಿಹಿ ಪದಾರ್ಥಗಳನ್ನು ಚಿತ್ರಾನ್ನ ಮೊಸರನ್ನ ಬಾನ ರೊಟ್ಟಿ, ಚಪಾತಿ ಮತ್ತು ವಿವಿಧ ಬಗೆಯ ತರಕಾರಿ ಕಾಳುಗಳನ್ನು ತಯಾರಿಸಿ ಸಂಜೆ ಆರೂವರೆಯ ಸುಮಾರಿಗೇ ಮನೆಯ ಮಹಡಿ ಏರಿ ರಾತ್ರಿ ಕಂತೆಮ್ಮನನ್ನು ಪೂಜಿಸಿ ನೈವೇದ್ಯ ಮಾಡಿ ತಮ್ಮ ನೆಂಟರಿಷ್ಟರನ್ನು ಕೂಡಿಕೊಂಡು ಬೆಳದಿಂಗಳು ಊಟವನ್ನು ಸವಿಯುತ್ತಾರೆ. ಸಾಕಷ್ಟು ಜನ ಹೆಣ್ಣು ಮಕ್ಕಳು ಗೌರಿ ಹುಣ್ಣಿಮೆಗೆ ತಮ್ಮ ತವರು ಊರಿಗೆ ಧಾವಿಸಿ ಬರುತ್ತಾರೆ ಈ ಕೊಂತಿ ರೊಟ್ಟಿಯನ್ನು ಸವಿಯಲು. ಇದಲ್ಲವೇ ನಮ್ಮ ಜಾನಪದದ ಸೊಗಡಿನ ವೈಭವ. ಇಂದು ಅನೇಕ ಜನರಿಗೆ ಗೌರಿ ಹುಣ್ಣಿಮೆಯಂದು ಹಾಡುತ್ತಿದ್ದ ಹಾಡುಗಳು ನೆನಪಿಲ್ಲ, ಆದರೆ ಆ ಸಂಭ್ರಮದ ಮೆಲುಕು ಮರೆತಿಲ್ಲದ ಹೆಣ್ಣು ಮಕ್ಕಳು ಇಂದಿಗೂ ಕೂಡ ಆ ಸಿಹಿ ಸುಂದರ ನೆನಪುಗಳನ್ನು ನೆನಪಿಸುತ್ತ ಗೌರಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಆ ಎಲ್ಲಾ ಹಿಂದಿನ ಹಾಡುಗಳನ್ನು ಮತ್ತೆ ಮತ್ತೆ ನೆನಪಿಸುತ್ತ ನಮ್ಮ ಗ್ರಾಮೀಣ ಸಂಸ್ಕೃತಿಯನ್ನು ಉಳಿಸೋಣ ಬೆಳೆಸೋಣ ನಮ್ಮ ಮುಂದಿನ ಪೀಳಿಗೆಗೆ ದಾಟಿಸೋಣ ಎಂಬ ಆಶಯದೊಂದಿಗೆ
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್.