Oplus_131072

ಶರಣರ ಶಕ್ತಿ’ ಚಲನಚಿತ್ರ ವಿಮರ್ಶೆ

 

– ಡಾ ಶಶಿಕಾಂತ ಪಟ್ಟಣ ರಾಮದುರ್ಗ.

ಈ ಚಲನ ಚಿತ್ರದಲ್ಲಿ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಡೆದ ವೈದಿಕರ ಕರಾಮತ್ತುಗಳನ್ನು ತೋರಿಸುವ ದೃಶ್ಯಗಳು ಇಲ್ಲವೇ ಇಲ್ಲ. ವಚನ ದರ್ಶನ ತಂಡ ಕಲ್ಯಾಣದಲ್ಲಿ ನಡೆದ್ದದ್ದು ಕ್ರಾಂತಿಯಲ್ಲ, ಚಳುವಳಿಯಲ್ಲ, ಬರೀ ‘ಭಕ್ತಿಯ ಪ್ರಕಟಣೆ’ ಎಂದು ಹೇಳುತ್ತಾ ಊರೂರು ತಿರುಗುತ್ತಿದೆ. ಶರಣರ ಶಕ್ತಿಯ ಸಂದೇಶವೂ ಇಷ್ಟೇ.

ಶರಣರ ಶಕ್ತಿ ಚಲನ ಚಿತ್ರ ವಾದವಿವಾದಗಳ ನಡುವೆ ‘ಕೆಲವು ದಿವಸಗಳ’ ಹಿಂದೆ ಉತ್ತರ ಕರ್ನಾಟಕದ ಹಲವಾರು ನಗರಗಳ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ.

ಕಾಶ್ಮೀರದ ಅರಸು ಮಹದೇವ ಭೂಪಾಲ ಬಸವಣ್ಣನವರನ್ನು ಕೊಲೆ ಮಾಡಲು ಚೂರಿ ಚಿಕ್ಕಣ್ಣನನ್ನು ಕಳಿಸುತ್ತಾನೆ. ಇಲ್ಲಿಂದ ಆರಂಭವಾಗುವ ಚಿತ್ರ ಮುಂದುವರೆದು ಆತ ಕಲ್ಯಾಣಕ್ಕೆ ಬಂದು ಅನುಭವ ಮಂಟಪ ಸೇರಿಕೊಳ್ಳುವುದನ್ನು ತೋರಿಸುತ್ತದೆ. ಅಲ್ಲಿ ಕೆಲವು ಶರಣರ ಪರಿಚಯವನ್ನು ಬೇರೆ ಬೇರೆ ಶರಣರು ಮಾಡುತ್ತಾರೆ. ಇವೇ ಚಿತ್ರದ ಪ್ರಮುಖ ದೃಶ್ಯಗಳು.

ಬಸವಣ್ಣನವರ ಪಾತ್ರಧಾರಿ ಮಂಜುನಾಥಗೌಡ ಪಾತ್ರಕ್ಕೆ ಗೌರವ ಸಲ್ಲಿಸಿದ್ದಾರೆ, ಆದರೆ ಬಸವಣ್ಣನವರ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿಲ್ಲ. ಸೂಳೆ ಸಂಕವ್ವೆ ಶರಣೆಯಾಗುವ ದೃಶ್ಯ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಇದು ಇಡೀ ಚಿತ್ರದ ಹೈಲೈಟ್.

ಈ ಚಿತ್ರದಲ್ಲಿರುವ ಸಮಸ್ಯೆಗಳು ಪಟ್ಟಿ ಮಾಡಿದಷ್ಟೂ ಬೆಳೆಯುತ್ತವೆ. ಇದು ಅತಿ ಕಡಿಮೆ ಬಜೆಟಿನ ಚಿತ್ರ ಎನ್ನುವುದು ತಟ್ಟನೆಯೇ ಎದ್ದು ಕಾಣುವ ಅಂಶ.

ದುಡ್ಡು ಉಳಿಸಲು ಅನುಭವ ಮಂಟಪ ಹಾಗೂ ಬಿಜ್ಜಳನ ಆಸ್ಥಾನ ಚಿತ್ರಿಸಲು ಒಂದೇ ಸೆಟ್ ಬಳಸಿದ್ದಾರೆ. ಅಂದರೆ ಅನುಭವ ಮಂಟಪದಲ್ಲಿ ಅಲ್ಲಮ ಪ್ರಭುಗಳು ಕೂರುವ ಶೂನ್ಯ ಸಿಂಹಾಸನ ಮತ್ತು ಬಿಜ್ಜಳ ತನ್ನ ಆಸ್ಥಾನದಲ್ಲಿ ಕೂರುವ ಸಿಂಹಾಸನ ಒಂದೇ! ಬಿಜ್ಜಳನ ಸಿಂಹಾಸನದ ಮೆಟ್ಟಲುಗಳಲ್ಲಿ ಷಟ್ಸ್ಥಲದ ಹಂತಗಳನ್ನು ಬರೆದಿರುವ ವಿಚಿತ್ರ ಕಾಣುವುದು ಇದೇ ಕಾರಣಕ್ಕಾಗಿ. ಶರಣರ ವಾಸದ ಗುಡಿಸಲುಗಳು ತೀರಾ ಕಳಪೆಯಾಗಿವೆ. ಅನುಭವ ಮಂಟಪದ ಸೆಟ್ಟಿನಲ್ಲಿಯೇ ಅರ್ಧ ಚಿತ್ರ ಮುಗಿದುಹೋಗುತ್ತದೆ.

ಚಿತ್ರ ಕಥೆ, ನಿರ್ದೇಶನ, ಸಂಕಲನ, ಸಂಭಾಷಣೆ ಎಲ್ಲದರಲ್ಲಿಯೂ ಚಿತ್ರ ಅರ್ಧ ಬೆಂದ ಅನುಭವ ನೀಡುತ್ತದೆ. ಚಿತ್ರ ಕಥೆ ಎಲ್ಲೊ ಹೋಗಿ ಎಲ್ಲೋ ಸೇರುತ್ತದೆ. ನೀಲಗಂಗಮ್ಮ ತಾಯಿಯ ಪಾತ್ರದ ಪರಿಚಯವೆ ಇಲ್ಲ. ಹುಬ್ಬಳ್ಳಿ ಮೂರುಸಾವಿರ ಮಠದ ದೃಷ್ಯದ ಸಂದರ್ಭ ಸರಿಯಾಗಿ ತೋರಿಸಿಲ್ಲ. ‌

ಕುಂಕುಮಧಾರಿ ಬಸವಣ್ಣ ಪಾತ್ರಧಾರಿಯ ಜೊತೆ
ಕಲ್ಯಾಣ ಕ್ರಾಂತಿಯನ್ನು ಹೋಗಲಿ ಶರಣರ ಯಾವುದೇ ಕ್ರಾಂತಿಕಾರಕ ಹೆಜ್ಜೆಗಳನ್ನು ತೋರಿಸುವ ಯಾವುದೇ ಆಸಕ್ತಿ ಚಿತ್ರಕ್ಕಿಲ್ಲ. ವೈದಿಕರು ವಚನಗಳನ್ನು ಸುಡುವುದು, ಎಳೆ ಹೂಟೆ ಶಿಕ್ಷೆ, ಬಸವಣ್ಣನವರು ಲಿಂಗೈಕ್ಯರಾಗುವ ದೃಶಗಳು ಇಲ್ಲ.

ಹರಳಯ್ಯನವರ ಶರಣು ಶರಣಾರ್ಥಿ ಪ್ರಸಂಗವನ್ನೂ ಕೈಬಿಟ್ಟಿದ್ದಾರೆ. ಮಧುವರಸರ ಮಗಳಾದ ಲಾವಣ್ಯಳ ಕೊರಳಲ್ಲಿ ಇಷ್ಟಲಿಂಗ ಇದೆ. ಶೀಲವಂತ ಲಾವಣ್ಯ ಮೊದಲೆ ಪ್ರೇಮಿಸಿರುವಂತೆ ತೋರಿಸಿದ್ದಾರೆ. ಮದುವೆಯಾದ ನಂತರ ಅವರಿಬ್ಬರ ಹತ್ಯೆಯಾಗುತ್ತದೆ.

ವೈದಿಕರ ಕರಾಮತ್ತುಗಳನ್ನು ತೋರಿಸುವ ದೃಶ್ಯಗಳು ಇಲ್ಲವೇ ಇಲ್ಲ. ನಾರಾಯಣ ಕ್ರಮಿತ, ಗೋವಿಂದ ಭಟ್ಟ, ಮುಕುಂದ ಭಟ್ಟ, ವಿಷ್ಣು ಭಟ್ಟ, ಕೃಷ್ಣ ಪೆದ್ದಿ, ಮುರಾರಿ ಕ್ರಮಿತ, ಕೇಶವ ಭಟ್ಟ ಪಾತ್ರಗಳೂ ಇಲ್ಲ. ವಚನ ದರ್ಶನ ತಂಡ ಕಲ್ಯಾಣದಲ್ಲಿ ನಡೆದ್ದದ್ದು ಕ್ರಾಂತಿಯಲ್ಲ, ಚಳುವಳಿಯಲ್ಲ, ಬರೀ ಭಕ್ತಿಯ ಪ್ರಕಟಣೆ ಎಂದು ಹೇಳುತ್ತಾ ಊರೂರು ತಿರುಗುತ್ತಿದೆ. ಶರಣರ ಶಕ್ತಿಯ ಸಂದೇಶವೂ ಇಷ್ಟೇ.

ಎರಡು ಹಾಡು ಚನ್ನಾಗಿವೆ. ಒಟ್ಟಾರೆ ಸಂಗೀತ ಸಾಮಾನ್ಯವಾಗಿದೆ. ಅಭಿನಯದಲ್ಲಿ ಶೀಲವಂತ, ಸಂಕವ್ವೆ, ಚನ್ನಬಸವಣ್ಣನ ಪಾತ್ರಗಳು ಉತ್ತಮವಾಗಿವೆ.

ಶರಣೆ ಸೂಳೆ ಸಂಕವ್ವ ಪಾತ್ರಧಾರಿ
ನಿರ್ದೇಶಕ ದಿಲೀಪ್ ಶರ್ಮಾ ಅವರು ಈ ಚಿತ್ರ ಮಾಡುವ ಮೊದಲು ಒಮ್ಮೆ ಶರಣರ ಇತಿಹಾಸವನ್ನು ಓದಬೇಕಾಗಿತ್ತು.
ಇಷ್ಟು ಕಡಿಮೆ ಬಜೆಟಿನ, ಸಮಸ್ಯೆಗಳ ಆಗರವಾಗಿರುವ ಚಿತ್ರವನ್ನು ಮಾಡುವ ಅವಶ್ಯಕತೆಯಾದರೂ ಏನಿತ್ತು ? ಒಂದು ಒಳ್ಳೆ ಚಿತ್ರ ಮಾಡುವುದಕ್ಕಿಂತಲೂ ಬೇರೆ ಏನೋ ಉದ್ದೇಶ ಇಟ್ಟುಕೊಂಡು ಈ ಚಿತ್ರ ತೆಗೆದಿರುವ ಹಾಗೆ ಕಾಣಿಸುತ್ತದೆ.

ಇದರ ಗುಣಮಟ್ಟವನ್ನು ಮತ್ತು ಉದ್ದೇಶ ನೋಡಿದರೆ ಬಸವ ಸಂಘಟನೆಗಳು ಮರು ಸೆನ್ಸಾರ್ ಮಾಡಿಸಿಯೇ ಚಿತ್ರದ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕಿತ್ತು ಅನಿಸುತ್ತದೆ. ಈಗಲಾದರೂ ಟ್ರೇಲರ್ ನಲ್ಲಿ ಮತ್ತು ಮೊದಲ ಆವೃತ್ತಿಯಲ್ಲಿ ಇದ್ದ ಶರಣರನ್ನು ಅವಹೇಳನ ಮಾಡುವ ದೃಶ್ಯ ಮತ್ತು ಸಂಭಾಷಣೆಗಳು ಎಲ್ಲೂ ಆಚೆ ಬರದಿರುವ ಹಾಗೆ ಎಚ್ಚರದಿಂದ ಇರಬೇಕು.

ನಾವು ಹೋಗಿದ್ದ ಚಿಕ್ಕ ಚಿತ್ರಮಂದಿರ ಪಾತ್ರ ಮಾಡಿದ್ದವರ ಕುಟುಂಬದವರಿಂದಲೇ ತುಂಬಿತ್ತು. ಇವತ್ತಿನಿಂದ ಸಾಮಾನ್ಯ ಪ್ರೇಕ್ಷಕರು ಚಿತ್ರದ ಭವಿಷ್ಯ ಬರೆಯುತ್ತಾರೆ. ಆದರೆ ಇದು ಜನ ಹೋಗಿ ನೋಡುವ ಚಿತ್ರಕ್ಕಿಂತಲೂ ಜನರನ್ನು ಕರೆದುಕೊಂಡು ಹೋಗಿ ತೋರಿಸುವ ಚಿತ್ರದ ಹಾಗೆ ಕಾಣಿಸುತ್ತದೆ.

ಇಂತಹ ಚಲನಚಿತ್ರವನ್ನು ಭಾಲ್ಕಿಶ್ರೀಗಳು ನೋಡಿ ಎನ್ನುತ್ತಾರೆ. ಎಂತಹ ಅಜ್ಞಾನ. ಚಲನಚಿತ್ರ ಸೆನ್ಸಾರ್ ಗಾಗಿ ಅದರೊಳಗಿನ ತಪ್ಪು ಹುಡುಕಿದರೆ ಚಲನಚಿತ್ರವೇ ಬಿಡುಗಡೆಯಾಗುವುದಿಲ್ಲ. ಅಷ್ಟೊಂದು ತಪ್ಪುಗಳಿವೆ.

ಬಸವಣ್ಣನವರನ್ನು ಬೆನ್ನು ಬಿದ್ದ ಅನೇಕ ಸಂಘ ಸಂಸ್ಥೆಗಳು ಸಂಘಟನೆ ಆರ್ ಎಸ ಎಸ ಸಂಘ ಪರಿವಾರ ವಿಶ್ವ ಹಿಂದೂ ಪರಿಷತ್ ಮುಂತಾದ ಅನೇಕ ಸಂಘ ಸಂಸ್ಥೆಗಳು ಇಂದು ಬಸವಣ್ಣನವರ ಚರಿತ್ರೆಯ ಬಗ್ಗೆ ಕೃತಿ ರಚಿಸುತ್ತಿದ್ದಾರೆ.  ಚಲನ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ ಅವರೆಲ್ಲರ ಒಟ್ಟು ಉದ್ದೇಶ ಲಿಂಗಾಯತ ಧರ್ಮವು ಹಿಂದೂ ಧರ್ಮದ ಒಂದು ಅವಿಭಾಜ್ಯ ಅಂಗ ಎಂದು ಸಾಬೀತುಪಡಿಸುವ ಹುನ್ನಾರವಷ್ಟೇ.

ಈ ಪ್ರಯತ್ನವಾಗಿ ವಚನ ದರ್ಶನ ಎಂಬ ಅತ್ಯಂತ ಕಳಪೆ , ತತ್ವರಹಿತ ಪುಸ್ತಕವನ್ನು ಸಂಘ ಪರಿವಾರದವರು ರಚಿಸಿ ಊರೂರು ಅಲೆದು ಬಿಡುಗಡೆಗೊಳಿಸಿ
ಪುಸ್ತಕಗಳನ್ನು ಮಾರಿದರು. ನಮ್ಮ ಅನೇಕ ಲಿಂಗಾಯತ ಮಠಾಧೀಶರು ಇಂತಹ ಕೃತಿಗಳ ಹಿಂದಿನ ಪ್ರೇರಕ ಶಕ್ತಿಗಳು. ಕರ್ನಾಟಕದಲ್ಲಿ ಎರಡು ಮೂರು ಸಂಘ ಸಂಸ್ಥೆಗಳಿಂದ ಪ್ರತಿಭಟನೆ ಬಂದಿತೇ ಹೊರತು ಉಳಿದ ಅನೇಕ ಸ್ವಾಮಿಗಳು ಜನ ಮೌನಕ್ಕೆ ಜಾರಿದರು.

ದಿಲೀಪ ಶರ್ಮ ಎಂಬ ವೈದಿಕ ಮನಸ್ಸಿನವರು ಶರಣರ ಶಕ್ತಿ ಎಂಬ ಬಸವಾದಿ ಶರಣರ ಕುರಿತಾದ ಶರಣರ ಶಕ್ತಿ ಎಂಬ ಅತ್ಯಂತ ಕಳಪೆ ಮಟ್ಟದ ಯಾವುದೇ ಇತಿಹಾಸಿಕ
ಘಟನೆಗಳಿರದ ಕುಲಗೆಟ್ಟ ಚಲನ ಚಿತ್ರವನ್ನು ನೋಡಲು ಭಾಲ್ಕಿ ಹಿರೇಮಠದ ಡಾ ಬಸವಲಿಂಗ ಪಟ್ಟದದೇವರು ,ಗದಗ ತೋಂಟದಾರ್ಯ ಮಠದ ಡಾ ಸಿದ್ಧರಾಮ ಸ್ವಾಮಿಗಳು ಸಿದ್ಧಗಂಗೆಯ ಸ್ವಾಮಿಗಳು , ಮೂರು ಸಾವಿರ ಮಠದ ಸ್ವಾಮಿಗಳು ,ಪಂಚಮಸಾಲಿ ಸ್ವಾಮಿಗಳು ಇನ್ನೂ ಅನೇಕ ಸ್ವಾಮಿಗಳು ಶರಣರ ಶಕ್ತಿ ಚಲನ ಚಿತ್ರ ನೋಡಲು ನಿರ್ಮಾಪಕ ನಿರ್ದೇಶಕರ ಪರವಾಗಿ ಜನತೆಗೆ ಕೋರಿಕೆ ಮಾಡಿಕೊಂಡಿದ್ದಾರೆ.

ಚಲನ ಚಿತ್ರ ಬಿಡುಗಡೆಯಾಗಿ ನಾಲ್ಕು ದಿನಗಳಲ್ಲಿ ಚಲನಚಿತ್ರ ಮಂದಿರದಲ್ಲಿ ನೊಣ ಹೊಡೆಯುವವರು ದಿಕ್ಕಿಲ್ಲ . ಇಂತಹ ಚಲನ ಚಿತ್ರವನ್ನು ನೋಡಿ ಪ್ರಮಾಣ ಪತ್ರ ನೀಡುವ ಲಿಂಗಾಯತ ಮಹಾಸಭೆ ಸಂಘ ಸಂಸ್ಥೆಗಳು ಲಿಂಗಾಯತ ಸಮಾಜವನ್ನು ದಿಕ್ಕುತಪ್ಪಿಸುತ್ತವೆ ಎನ್ನುವದರಲ್ಲಿ ಎರಡು ಮಾತಿಲ್ಲ.

ಶರಣರ ಶಕ್ತಿ ಚಲನ ಚಿತ್ರ ನೋಡು ಎನ್ನುವುದು ಬಸವ ದ್ರೋಹದ ಕಾರ್ಯ ಅದರಂತೆ
ಇಂತಹ ಚಲನ ಚಿತ್ರ ನೋಡುವುದು ಕೂಡ ಲಿಂಗಾಯತ ವಿರೋಧಿ ನೀತಿ.
ಈ ಮಠಾಧೀಶರಿಗೆ ಸ್ವಲ್ಪವಾದರೂ ಬುದ್ಧಿ ಬೇಡವೇ ? ಕೆಲವರ ಪ್ರಕಾರ ಕೆಲ ಪ್ರಮುಖ ಮಠಗಳು ಇಂತಹ ಚಲನ ಚಿತ್ರವನ್ನು ನಿರ್ಮಿಸಲು ಹಣ ಹೂಡಿಕೆ ಮಾಡಿದ್ದಾರೆ ಎಂಬ ಗುಸು ಗುಸು ಮಾತು ಕೇಳಿ ಬರುತ್ತದೆ. ಲಿಂಗಾಯತ ಧರ್ಮ ಸಿದ್ಧಾಂತಕ್ಕೆ ಕಳಂಕ ತರುವ
ವಚನ ದರ್ಶನದಂತಹ ಪುಸ್ತಕವಾಗಲೀ ಶರಣರ ಹೆಸರಿಗೆ ಕಪ್ಪು ಮಸಿ ಹಚ್ಚುವ ಶರಣರ ಶಕ್ತಿ ಎಂದು ನೋಡುವುದು ಪ್ರೋತ್ಸಾಹಿಸುವುದು ಬಸವ ದ್ರೋಹದ ಕಾರ್ಯವಾಗಿದೆ. ಇಂತಹ ಕಪಟ ವ್ಯಕ್ತಿಗಳಿಗೆ ನಮ್ಮ ಧಿಕ್ಕಾರವಿದೆ
———————
ಡಾ ಶಶಿಕಾಂತ ಪಟ್ಟಣ ರಾಮದುರ್ಗ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ