Oplus_131072

ಶತಮಾನದ ಸಂತನಿಗೆ ಶತಕೋಟಿ ನಮನ

ನಡೆದಾಡುವ ದೇವರು ಇವರು
ವಿಜಯಪುರದ ಸಿದ್ದೇಶ್ವರರು
ಶತಮಾನದ ಸಂತರು ಇವರು
ಶತಕೋಟಿ ಭಕ್ತರನು ಗಳಿಸಿಹರು.

ಅನೇಕ ಸಾಧು ಸಂತರಿಗೆ, ಪುಣ್ಯ ಪುರುಷರಿಗೆ ಜನ್ಮ ನೀಡುವ ಮೂಲಕ ಭಾರತ ಮಾತೆ ಹಾಗೂ ಕನ್ನಡಾಂಬೆ ನಮ್ಮ ದೇಶವನ್ನು, ನಮ್ಮ ನಾಡನ್ನು ಪುಣ್ಯ ಭೂಮಿಯನ್ನಾಗಿಸಿದ್ದಾರೆ. ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಇಂಥ ಪುಣ್ಯ ಪುರುಷರ ಸಾಲಿಗೆ ಸೇರಿದ್ದಾರೆ ಎಂದರೆ ತಪ್ಪಾಗಲಾರದು. ಅಕ್ಟೋಬರ್ 24 ಮಹಾನ್ ಸಂತರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜನ್ಮದಿನ. ಇಂದು ಅವರು ನಮ್ಮೊಂದಿಗಿಲ್ಲದಿರುವುದು ದುಃಖಕರವಾದ ಸಂಗತಿ.
ಎರಡನೇ ‘ವಿವೇಕಾನಂದ’ರೆಂದೇ ಹೆಸರುವಾಸಿಯಾಗಿ , ತಮ್ಮ ಪ್ರವಚನಗಳ ಮೂಲಕ ಜ್ಞಾನ ಜ್ಯೋತಿಯನ್ನು ಬೆಳಗಿದ ಜ್ಞಾನ ಯೋಗಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರರ ಜೀವನವೇ ಅತ್ಯದ್ಭುತ. ೧೯೪೧ ನೇ ಅಕ್ಟೋಬರ್ ೨೪ ರಂದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಓಗಪ್ಪ ಹಾಗೂ ಸಂಗಮ್ಮ ದಂಪತಿಗಳ ಮೊದಲನೆಯ ಪುತ್ರನಾಗಿ ಜನಿಸಿದ ಇವರ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ. ಇವರು ಬಿಜ್ಜರಗಿ ಗ್ರಾಮದಲ್ಲಿ ನಾಲ್ಕನೇ ತರಗತಿಯವರೆಗೂ, ಚಡಚಣದಲ್ಲಿ ೮ ರಿಂದ ೧೦ ನೇ ತರಗತಿಯವರೆಗೂ ತಮ್ಮ ವ್ಯಾಸಂಗವನ್ನು ಮುಗಿಸಿದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲ್ಯದಲ್ಲೇ ಅವರ ಚುರುಕುತನವನ್ನು ಕಂಡ ‘ವೇದಾಂತ ಕೇಸರಿ’ ಬಿರುದಾಂಕಿತರಾದ ಮಲ್ಲಿಕಾರ್ಜುನ ಸ್ವಾಮಿಗಳು ಸಿದ್ದಗೊಂಡಪ್ಪನನ್ನು ತಮ್ಮ ಶಿಷ್ಯರಾಗಿ ಸ್ವೀಕರಿಸಿ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಅವರನ್ನು ಇರಿಸಿಕೊಂಡು ‘ಸಿದ್ದೇಶ್ವರ’ ಎಂದು ಮರು ನಾಮಕರಣ ಮಾಡಿದರು. ಆಶ್ರಮ ಎಂದಾಕ್ಷಣ ಕಾವಿ ವಸ್ತ್ರ ತೊಟ್ಟ ಋಷಿ ಮುನಿಗಳ, ಸನ್ಯಾಸಿಗಳ ಚಿತ್ರ ಕಣ್ಮುಂದೆ ಸುಳಿಯುತ್ತದೆ. ಆದರೆ ಸಿದ್ದೇಶ್ವರ ಶ್ರೀಗಳು ‘ನಮ್ಮ ಮನಸ್ಸು ಯಾವಾಗಲೂ ಪರಿಶುದ್ಧವಾಗಿರಬೇಕು’ ಎಂದು ಭಾವಿಸಿ ಸದಾ ಶುಭ್ರವಾದ ಶ್ವೇತ ವಸ್ತ್ರವನ್ನೇ ಧರಿಸುತ್ತಿದ್ದರು. ಅವರ‌ ಬಳಿ ಇದ್ದುದು ಕೇವಲ ಎರಡು ಪಂಚೆ, ಎರಡು ಜುಬ್ಬವಷ್ಟೆ. ಸ್ಫೂರ್ತಿದಾಯಕ ಜೀವನ ಶೈಲಿ ಹಾಗೂ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾದ ಇವರ ವ್ಯಕ್ತಿತ್ವ ಎಲ್ಲರಿಗೂ ಅನುಕರಣೀಯ.

ಸರಳ ಸಜ್ಜನಿಕೆಯ ಸಾಕಾರ ಮೂರ್ತಿ
ವಿಶ್ವದೆಲ್ಲೆಡೆ ಹರಡಿದೆ ಕೀರ್ತಿ
ಭಕ್ತರ ಕಂಡರೆ ಇವರಿಗೆ ಪ್ರೀತಿ
ಭಕ್ತರಿಗೆಲ್ಲಾ ಇವರೇ ಸ್ಫೂರ್ತಿ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಕೊಲ್ಲಾಪುರ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಶ್ರೀಗಳು ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್, ಮರಾಠಿ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದು, ತಮ್ಮ ೧೯ ನೇ ವಯಸ್ಸಿನಲ್ಲೇ ಹಲವಾರು ಪುಸ್ತಕಗಳನ್ನು ಬರೆದಿದ್ದರಲ್ಲದೆ ‘ಸಿದ್ಧಾಂತ ಶಿಖಾಮಣಿ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಪ್ರಖ್ಯಾತ ವಾಗ್ಮಿಗಳೂ, ಆಧ್ಯಾತ್ಮ ಚಿಂತಕರೂ, ಲೇಖಕರೂ ಆಗಿದ್ದ ಅವರು ತಮ್ಮ ಪ್ರವಚನಗಳ ಮೂಲಕ ಹಲವರ ಜೀವನವನ್ನೇ ಬದಲಿಸಿದ ಮಹಾನ್ ಸಂತರು.ಅವರ ಪ್ರವಚನವೆಂದರೆ ಭಕ್ತಾದಿಗಳಲ್ಲದೆ ಜನ ಸಾಮಾನ್ಯರೂ ಕೂಡ ಒಂದು ಸೂಜಿ ಬಿದ್ದರೂ ಕೇಳಿಸುವಷ್ಟು ಶಾಂತ ರೀತಿಯಿಂದ ಆಲಿಸುತ್ತಿದ್ದರು. ಮಾತನಾಡುವ ಶೈಲಿ, ಸರಳವಾದ ಪದ ಬಳಕೆ, ನೀತಿ ಕಥೆಗಳ ಮೂಲಕ ಆಚಾರ.. ವಿಚಾರ, ನಾಡು.. ನುಡಿ, ರಾಷ್ಟ್ರಪ್ರೇಮವನ್ನು ಕುರಿತ ಇವರ ಪ್ರವಚನ ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆಯುತ್ತಿತ್ತು.

ಜ್ಞಾನ ಜ್ಯೋತಿಯ ಬೆಳಗಿದರು
ಜ್ಞಾನ ಯೋಗಿಯೆಂದೆನಿಸಿದರು
ಅನ್ನದಾನವ ಮಾಡಿದರು
ಕನ್ನಡ ನಾಡಿನ ವಿವೇಕಾನಂದರು.

ಮನು ಕುಲದ ಉದ್ಧಾರಕ್ಕೆ ಶ್ರಮಿಸಿದ ಸ್ವಾಮೀಜಿಯವರು ‘ನಡೆದಾಡುವ ವಿಶ್ವಕೋಶ’ ವಿದ್ದಂತೆ. ನುಡಿದಂತೆ ನಡೆದ, ನಡೆದಂತೆ ನುಡಿದ ಪ್ರಾಮಾಣಿಕ ವ್ಯಕ್ತಿ. ವ್ಯಕ್ತಿ ಅನ್ನುವುದಕ್ಕಿಂತ ಅವರೊಬ್ಬ ಅದ್ಭುತ ಶಕ್ತಿ ಎಂದು ಹೇಳಬಹುದು. ‘ಎಲ್ಲರಲ್ಲೂ ದೇವರಿದ್ದಾನೆ’ ಎಂದು ಎಲ್ಲರಿಗೂ ಕೈ ಮುಗಿದು ನಮಿಸುತ್ತಿದ್ದ ಶ್ರೀಗಳು ಕೇವಲ ಒಂದು ಜಾತಿ, ಸಮಾಜ, ಸಮುದಾಯ ಅಥವಾ ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಸರ್ವಧರ್ಮ ಸಮನ್ವಯತೆಯನ್ನು ಎತ್ತಿ ಹಿಡಿದವರು. ಎಲ್ಲಾ ಧರ್ಮದವರಿಗೂ ಬೋಧನೆ ಮಾಡುತ್ತಿದ್ದರು. ಅವರ ಅಂತಿಮ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದ ಜನ ಸಾಗರವೇ ಇದಕ್ಕೆ ಸಾಕ್ಷಿ. ತಮ್ಮ ಆಶ್ರಮದಲ್ಲಿ ಬಡ ಮಕ್ಕಳಿಗೆ, ವಿದ್ಯಾ ದಾನ, ಅನ್ನ ದಾನ ಮಾಡಿದ ಮಹಾ ದಾನಿಯಾಗಿ , ‘ನನ್ನದೇನಿದೆ? ಎಲ್ಲವೂ ಭಗವಂತನಿಗೆ ಸೇರಿದ್ದು’ ಎಂಬ ಭಾವನೆಯನ್ನು ಬೆಳೆಸಿಕೊಂಡ ಭಾವ ಜೀವಿ. ವಿವಾದವಿಲ್ಲದೆ ಬದುಕು ಸವೆಸಿದ ಕರ್ಮಯೋಗಿ. ಮಹಾ ಜ್ಞಾನಿಯಾಗಿದ್ದರೂ ನಿರಹಂಕಾರಿ. ನಿಸ್ವಾರ್ಥ ಸೇವೆಗೆ ನಿಜವಾದ ಅರ್ಥವೇ ಈ ಸಂತ. ನನ್ನದು, ತನ್ನದು ಎಂಬ ಮಮಕಾರ ತೊರೆದ ಮಹಾ ತ್ಯಾಗಿ ವಿಜಯಪುರದ ಈ ಯುಗ ಪುರುಷ. ಬದುಕುವುದು ಹೇಗೆ ಎಂಬುದನ್ನು ಭಕ್ತರಿಗೆ ತೋರಿಸಿದ ಮಹಾನುಭಾವ. ಜ್ಞಾನ ಮಾರ್ಗದ ಮೂಲಕ ಜಗತ್ತಿಗೇ ಬೆಳಕು ಕೊಟ್ಟ ಜ್ಞಾನ ಸಿರಿ. ಪ್ರಕೃತಿಯನ್ನು ಸವಿಯುವ ನಿಸರ್ಗ ಪ್ರೇಮಿ. ಭಕ್ತರು ಪಾದ ಮುಟ್ಟಿ ನಮಸ್ಕರಿಸಲು ಬಂದರೆ ಅದಕ್ಕೆ ಅವಕಾಶ ಕೊಡದೆ ಭಕ್ತರಲ್ಲೂ ದೇವರಿದ್ದಾನೆ ಎನ್ನುತ್ತಾ ಅವರಿಗೇ ಕೈ ಮುಗಿದು ನಮಸ್ಕರಿಸುತ್ತಿದ್ದರು. ಎಂಥಾ ವಿನೀತ ಭಾವ ಶ್ರೀಗಳದು!

ಸದಾ ಅರ್ಪಣಾ ಮನೋಭಾವದ ,ಶಾಂತ ಮೂರ್ತಿಯಾದ ಶ್ರೀಗಳು ಅನುಭವವನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಜೀವನ ಎಂದು ಜೀವನದ ಮೌಲ್ಯಗಳನ್ನು ಎತ್ತಿ ತೋರಿಸಿದವರು. ತಮ್ಮ ನಡೆ ನುಡಿಗಳಿಂದ ಹಾಗೂ‌ ಪ್ರವಚನಗಳಿಂದ ರಾಜ್ಯ, ದೇಶ, ವಿದೇಶಗಳಲ್ಲೂ ಮನೆ ಮಾತಾಗಿದ್ದರು. ಇಷ್ಟೆಲ್ಲಾ ಆಕರ್ಷಕ ವ್ಯಕ್ತಿತ್ವವುಳ್ಳ ಶ್ರೀಗಳು ಯಾವುದೇ ಪ್ರಚಾರ ಬಯಸಿದವರಲ್ಲ.ಪ್ರಶಸ್ತಿ, ಪುರಸ್ಕಾರಗಳಿಗೆ ಆಸೆ ಪಟ್ಟವರಲ್ಲ. ‘ನಾನೊಬ್ಬ ಸರಳ, ಸಾಮಾನ್ಯ ವ್ಯಕ್ತಿ. ಪ್ರಶಸ್ತಿಗಳ ಅವಶ್ಯಕತೆ ನನಗಿಲ್ಲ’ ಎನ್ನುತ್ತಿದ್ದರು.೨೦೧೮ ರಲ್ಲಿ ತಮಗೆ ಕೊಡಲ್ಪಟ್ಟ ಅತ್ಯುನ್ನತ ‘ಪದ್ಮಶ್ರೀ’ ಪ್ರಶಸ್ತಿಯನ್ನು , ಕರ್ನಾಟಕ ವಿಶ್ವವಿದ್ಯಾಲಯದ ಗೌರವ ‘ಡಾಕ್ಟರೇಟ್ ‘ ಪದವಿಯನ್ನು ನಿರಾಕರಿಸಿದ ತ್ಯಾಗಮಯಿ. ಏನೂ ಸಾಧನೆ ಮಾಡದೆ ಕೇವಲ ಪ್ರಶಸ್ತಿಗಳಿಗೆ ಹಾತೊರೆಯುವ ಜನರಿರುವ ಈ ಸಮಾಜದಲ್ಲಿ ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಸೇವೆ ಮಾಡುವ ಶ್ರೀಗಳಂಥವರು ಕೋಟಿಗೊಬ್ಬರು. ಯಾವುದೇ ಬ್ಯಾಂಕ್ ಖಾತೆ ಹೊಂದಿರದ ಇವರು ಆಶ್ರಮಕ್ಕಾಗಿ ಸರ್ಕಾರ ಕೊಟ್ಟ ಐವತ್ತು ಲಕ್ಷ ರೂಪಾಯಿಗಳನ್ನು ವಾಪಸ್ ಕೊಟ್ಟ ಧೀಮಂತ ವ್ಯಕ್ತಿ. ಯಾರಾದರೂ ದಾನ, ದಕ್ಷಿಣೆಯ ರೂಪದಲ್ಲಿ ಕೊಟ್ಟ ಹಣವನ್ನು ತೆಗೆದುಕೊಳ್ಳಬಾರದೆಂಬ ಕಾರಣದಿಂದ ತಮ್ಮ ಅಂಗಿಗೆ ಕಿಸೆಯನ್ನೂ ಇರಿಸಿಕೊಂಡಿರಲಿಲ್ಲ.

ಜೇಬನು ಇಡದೆ ಕಾವಿಯ ತೊಡದೆ
ಶ್ವೇತ ವಸ್ತ್ರವನೆ ಧರಿಸಿದರು
ಸರಳ ಜೀವನವ ನಡೆಸುತಲಿ
ಬದುಕಿನ ಪಾಠವ ಕಲಿಸಿದರು.

‘ನನ್ನ ಮರಣದ ನಂತರ ನನ್ನ ದೇಹವನ್ನು ಅಗ್ನಿಯಲ್ಲಿ ದಹಿಸಬೇಕು. ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ, ಸಮಾಧಿ ಕಟ್ಟಬಾರದು, ಶ್ರಾದ್ಧ ವಿಧಿ ಕರ್ಮಗಳನ್ನು ಮಾಡಬಾರದು, ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಬೇಕು’ ಎಂಬುದಾಗಿ ೨೦೧೪ ರಲ್ಲೇ ತಮ್ಮ ಕೊನೆಯ ಆಸೆಯನ್ನು ಪತ್ರದಲ್ಲಿ ಬರೆದಿದ್ದರು. ಎಂಥಾ ಮೌಲ್ಯಯುತ ವ್ಯಕ್ತಿತ್ವ ಅವರದು! ಒಂದು ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಪ್ಪಾಜಿಯವರು ಬೇಗ ಗುಣಮುಖರಾಗಲಿ ಎಂಬ ಭಕ್ತರ ಬೇಡಿಕೆ ಕೊನೆಗೂ ಫಲಿಸಲಿಲ್ಲ. ‘ಶರಣರ ಜೀವನವನ್ನು ಮರಣದಲ್ಲಿ ನೋಡು’ ಎನ್ನುವಂತೆ ಶ್ರೀಗಳು ಭೀಷ್ಮರಂತೆ ಇಚ್ಛಾ ಮರಣಿಯಾಗಿ ಚಿಕಿತ್ಸೆಯನ್ನು ನಿರಾಕರಿಸಿ ‘ದೇವರು ನನ್ನನ್ನು ಕರೆಯುತ್ತಿದ್ದಾನೆ’ ಎನ್ನುತ್ತಾ ವೈಕುಂಠ ಏಕಾದಶಿಯಂದೇ ಲಿಂಗೈಕ್ಯರಾಗಿರುವುದು ಒಂದು ಪವಾಡವೇ ಸರಿ. ಮಹಾತ್ಮರು ಸ್ವರ್ಗಕ್ಕೆ ಹೋಗಲು ವೈಕುಂಠ ಏಕಾದಶಿಯೇ ಆಗಬೇಕೆಂದಿಲ್ಲ. ಅವರಿಗೆ ಸ್ವರ್ಗದ ಬಾಗಿಲು ಸದಾ ತೆರೆದಿರುತ್ತದೆ. ತಮ್ಮ ಹೆಸರಿನಲ್ಲಿ ಯಾವ ಆಶ್ರಮವನ್ನೂ ಕಟ್ಟಿಸದ ನಿರಾಡಂಬರ ಮೂರ್ತಿಗಳಾದ ಶ್ರೀಗಳ ಅಂತಿಮ ದರ್ಶನಕ್ಕೆ ಬಂದ ಭಕ್ತರು ತಮ್ಮ ಕವನಗಳ ಮೂಲಕ, ಹಾಡುಗಳ ಮೂಲಕ ಅವರ ಗುಣಗಾನ ಮಾಡುತ್ತಾ ದುಃಖಿಸುತ್ತಿದ್ದುದನ್ನು ನೋಡಿದರೆ ಶ್ರೀಗಳೇ ಅವರ ನಾಲಿಗೆಯ ಮೇಲೆ ಕುಳಿತು ಹೇಳಿಸುತ್ತಿದ್ದಾರೇನೋ ಎನ್ನಿಸಿತ್ತು. ‘ನುಡಿದದ್ದೆ ಕವನ, ನಡೆದದ್ದೆ ಲೇಖನ, ಜೀವನವೇ ಪ್ರವಚನ ‘ ಎಂದು ಭಕ್ತರೊಬ್ಬರು ಶ್ರೀಗಳನ್ನು ವರ್ಣಿಸುತ್ತಿದ್ದಾಗ ಇಂಥ ಮಹಾನ್ ಸಂತನನ್ನು ಪಡೆದ ಕರುನಾಡಿನ ಜನರು ಎಷ್ಟು ಪುಣ್ಯವಂತರು ಎನಿಸದೇ ಇರಲಿಲ್ಲ. ಶ್ರೀಗಳ ಅಂತಿಮ ಯಾತ್ರೆಯಲ್ಲಿ ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ರಂಗೋಲಿ, ಭಕ್ತರಿಂದ ಹೂವಿನ ಸುರಿಮಳೆ, ಭಕ್ತರ ಜಯಘೋಷ, ರಾಜ್ಯದ ಮೂಲೆ ಮೂಲೆಗಳಿಂದ ಬಂದ ಲಕ್ಷಾಂತರ ಭಕ್ತರಿಗೆ ಪ್ರಸಾದ, ನೀರಿನ ವ್ಯವಸ್ಥೆ ಮುಂತಾದುವನ್ನು ವೀಕ್ಷಿಸಿದಾಗ ಬದುಕಿದರೆ ಇವರಂತೆ ಬದುಕಬೇಕು ಎನ್ನಿಸಿತ್ತು. ಇವರ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸಬೇಕು ಎಂಬ ಆಶಯ ನನ್ನ ಮನದಲ್ಲಿರುವಾಗಲೇ ಕೆಲವು ಭಕ್ತರು ಅದನ್ನು ಸರ್ಕಾರದ ಮುಂದಿಟ್ಟಿದ್ದು ಔಚಿತ್ಯಪೂರ್ಣವಾಗಿದೆ ಎನಿಸುತು. ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ಶರಣರ ವಚನದಂತೆ ಇಂಥ ಮಹಾನ್ ದಿವ್ಯ ಚೇತನ ದೈಹಿಕವಾಗಿ ನಮ್ಮಿಂದ ಮರೆಯಾದರೂ ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಎಲ್ಲರ ಹೃನ್ಮನಗಳಲ್ಲಿ ನೆಲೆಸಿದ್ದಾರೆ. ಅವರ ಆದರ್ಶಗಳನ್ನು ಸ್ವಲ್ಪ ಮಟ್ಟಿಗಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಆ ಭವ್ಯ, ದಿವ್ಯ ಚೇತನಕ್ಕೆ ಅನಂತಾನಂತ ಪ್ರಣಾಮಗಳನ್ನು ಅರ್ಪಿಸೋಣ.

ನಡೆದಾಡುವ ದೇವರಿಗೆ ನೂರೊಂದು ನಮನ, ಸಾರ್ಥಕ ಬದುಕಿನ ಸಾಧಕನಿಗೆ ಸಾವಿರ ನಮನ, ಲಕ್ಷಾಂತರ ಭಕ್ತರ ದೇವರಿಗೆ ಲಕ್ಷ ಲಕ್ಷ ನಮನ, ಕರುನಾಡಿನ ವಿವೇಕಾನಂದರಿಗೆ ಕೋಟಿ ಕೋಟಿ ನಮನ, ಶತಮಾನದ ಸಂತನಿಗೆ ಶತಕೋಟಿ ನಮನ, ಭಾರತ ಕಂಡ ಭಾವಜೀವಿಗೆ ಭಾವಪೂರ್ಣ ನಮನ.

ಜಿ.ಎಸ್.ಗಾಯತ್ರಿ
ಶಿಕ್ಷಕಿ.ಬಾಪೂಜಿ ಶಾಲೆ
ಹರಿಹರ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ