ಶಿಕ್ಷಣೆಂಬೊ ಬಿ.ಎಡ್ಡು, ಮಾಸ್ತಾರೆಂಬೋ ಮಾಂತ್ಯಾ. (ಲಲತ ಪ್ರಬಂಧ)
ಮಾಂತ್ಯ ನನ್ನೀ ಕಥೆಯ ನಾಯಕ .ನೀವೂ ನಮ್ಮೂರಿಗೆ ಬಂದ್ರೆ ಇವನನ್ನು ನೋಡಿರಬೇಕು. ಮಾತು ಆಡಿರಬೇಕು. ಯಾಕೆಂದ್ರೆ ಇವಾ ನಮ್ಮೂರಲ್ಲೆ ಅಷ್ಟೊಂದು ಜನಪ್ರಿಯ ವ್ಯಕ್ತಿ. ಏಳೆಂಟು ವರ್ಷಗಳ ಹಿಂದೆ ನಮ್ಮೂರಲ್ಲಿ ಯಾರಾದ್ರೂ ಬಿ.ಎ. ಓದಿದವರು ಇದ್ದಾರೆ ಅಂದ್ರೆ ಮೊದ್ಲ ಇವ್ನ ಹೆಸ್ರೆ ಬರ‍್ತಿತ್ತು. ಆದ್ರ ಆ ಹೊತ್ತಿನ್ಯಾಗ ಮಾಂತ್ಯ ಬಿ.ಎ. ಮುಗಿಸಿ ನಾಕಾರು ವರ್ಷವಾದರೂ ಬೀದಿ ಬೀದಿ ಅಲೆಯೊದು ,ಮರ ಮರ ಸುತ್ತೊದು ಬಿಡಲಿಲ್ಲ. ವಯಸ್ಸು ಮೂವ್ವತ್ತು ದಾಟಿದ್ರೂ ಯಾವುದೆ ಸ್ವಯಂ ವರ. ಅಲ್ಲಲ್ಲ ! ಸ್ವಯಂ ವೃತ್ತಿಯೂ ಕೈಗೊಳ್ಳದೆ ಮುಂದಿನ ಅಭ್ಯಾಸದ ಬಯಕೆಗಾಗಿ ಕನ್ನಡದ ಎಮ್ಮೆ ಮಾಡ್ಬೇಕಂತ ಮರ‍್ನಾಕ್ ಸಲ ಪ್ರಯತ್ನಿಸಿದ್ರೂ ಸೀಟು ಸಿಗಲಿಲ್ಲ. ಮುಂದೆ ಬಿ.ಎಡ್ ಆದ್ರೂ ಮಾಡಬೇಕಂತ ಪ್ರತಿ ವರ್ಷ ಇಂಟ್ರೆಸ್ಟ್ ತಗೊಂಡು ಎಂಟ್ರೇನ್ಸ ಬರಿತಾನೆ ಬಂದ.ಇವ್ನ ಅದೃಷ್ಟ ಮುಂದೆ ಮುಂದೆ ಓಡ್ತಾನೆ ಇತ್ತು. ಇವಾ ಮಾತ್ರ ಹಿಂದೆ ಹಿಂದೆ… .ಪ್ರಯತ್ನಕ್ಕೆ ಫಲ ಇದೆ ಅಂತಾರಲ್ಲ ! ಹಾಗೆ ಸರ್ಕಾರ ನೂರಾರು ಬಿ.ಎಡ್ ಕಾಲೇಜುಗಳಿಗೆ ಪ್ರೊಮಿಷನ್ ಕೊಟ್ಟಿದ್ದರಿಂದ ಮಾಂತ್ಯನಿಗೆ ಖುಷಿಯೊ ಖುಷಿ. ಯಾಕೆಂದ್ರೆ ಆ ವರ್ಷ ಕೊನೆಯ ಸಲ ಕೌನ್ಸಲಿಂಗ್ ಕರೆದಾಗ ಮಾಂತ್ಯಾನ ಕಾಸ್ಟಿನಲ್ಲಿ ಪ್ರತಿಶತ 50 ರಷ್ಟು ಅಂಕಗಳು ಇದ್ದವರಿಗೆ ಮಾತ್ರ ಹಾಜರಾಗಲು ಕೊರಲಾಗಿತ್ತು. ಮಾಂತ್ಯಾಂದು ಬರೋಬರಿ ಅಷ್ಟೇ ಅಂಕಗಳು ಇರೋದರಿಂದ ಕನ್ನಡ ಪೇಪರದಾಗ ಪ್ರಕಟವಾದ ಜಾಹಿರಾತು ನೋಡಿದ ಕೂಡಲೆ ಬಸವಕಲ್ಯಾಣದ ಬೇಕರಿಗೆ ಹೋಗಿ ಒಂದ್ ಕಿಲೋ ಪೇಡಾ ತಗೊಂಡು ತನಗ್ ಬೇಕಾದವರಿಗಿ ಹಂಚಿ ಖುಷಿ ಪಟ್ಟ. ಈ ಮಾತು ಕೇಳಿದ ಅವನ ತಂದೆ ತಾಯಿಯವರ ಸಂತಸಕ್ಕೆ ಪಾರವೆ ಇರಲಿಲ್ಲ. ಹಾಗಾಗಿ ಅವರಪ್ಪ ಗಂಗಪ್ಪ “ಇನ್ನೇನು, ನನ್ ಮಗಾ ಮಾಸ್ತಾರ ಆದ” ಅಂತ ಎದಿಲೇ ನಡಿಲಾಕ್ ಸುರು ಮಾಡಿದ. ಮತ್ ಮಾಂತ್ಯಾ ಮಾತ್ರ ನಮ್ಮೂರನ್ಯಾಗ ನಾನೊಬ್ನೆ ಜಾಣ. ಅನ್ನೋ ಹಾಂಗ್ ಕಲರ್ ಕಲರ್ ಬಟ್ಟೆ ಉಟ್ಕೊಂಡು ದೊಡಸ್ತಿಕೆ ಹೇಳ್ಕೋತಾ ಖುಷಿ ಪಡ್ತಿದ್ದ.ಇದನ್ನೆಲ್ಲ ನೋಡಿದ ಮಾಂತ್ಯಾನ ಕಾಕನ ಮಗ ಸುಬ್ಯಾ ಸುಮ್ ಸುಮ್ನೆ ಹ್ವಾಟ್ಟಿ ಉರಿಸ್ಕೊಂಡ್ ಬಿಟ್ಟ. ಮಾಂತ್ಯಾಗೂ ಇದು ತಿಳಿದದ್ದೆ ಸುಬ್ಯಾನ ಹ್ವಾಟ್ಟಿ ಹಿನ್ನಾ ಉರಿಸಬೇಕಂತ್ಹೇಳಿ ಬೇಕಂತಲೆ ಊರ ತುಂಬಾ ಮನಿ ಮನಿ ತಿರ‍್ಗಿ ಪೇಡಾ ಹಂಚ ತೊಡಗಿದ. ಅವ್ನ ಹಿಂದ್ ನಾಕಾರು ಪಾರಗೊಳು ಪೇಡಾದಾಸಿಗಿ ಜೋತು ಬಿದ್ದಂತ್ತಿತ್ತು. ಮಾಂತ್ಯಾನ ಬಗ್ಗೆ ಹ್ವಾಟ್ಟಿ ಉರಿಸ್ಕೊಂಡವ್ರು ಸುಬ್ಯಾ ಒಬ್ನೆ ಅಲ್ಲ ಅವ್ನ ದಾಯಾದಿಗಳೆಲ್ರೂ ಅನ್ನೋ ಮಾತು ತಡವಾಗಿ ಬೆಳಕಿಗಿ ಬಂದಿದ ಮ್ಯಾಗ ಸಣ್-ಪುಟ್ಟ ವೈಮನಸ್ಸಿನ ಭಾವನೆಗಳು ಮಾಂತ್ಯಾನ ಕುಟುಂಬದವರಿಗೆ ಅರ್ಥವಾಗತೊಡಗಿದವು.”ಏನ್ ಗಂಗಪಣ್ಣಾ, ನಿನ್ ಮಗ್ನಿಗಿ ಮಾಸ್ತಾರ ನೌಕರಿ ಆಯಿತಂತ್ತಾ ?” ಅಂತ ಕೆಳದೊಡ್ಡಿ ನಾಗಪ್ಪ ಹೊಲದಾಗ ಹುಲ್ಲು ಕೊಯ್ಯುವಾಗ ಕೇಳಿದ.” ಹೊಯಿಂದು ! ನಿಂಗ್ಯಾರು ಹೇಳಿದ್ರು ? ” ಅಂತ ಗಂಗಪ್ಪ ನುಡಿದ.” ಏ ! ನಿಮ್ಮಗನೆ ಊರ ತುಂಬೆಲ್ಲ ಪೇಡಾ ಹಂಚಿದ್ನಲ್ಲ ? ಪರ‍್ವಾಗಿಲ್ಲ. ಒಳ್ಳೆಯದೆ ಆಯ್ತು ” ಅಂತ ಆತ ಕೊಯ್ದ ಹುಲ್ಲು ಹೊರೆ ಕಟ್ಟ ತೊಡಗಿದ.” ನಾಗಪ್ಪ , ನಮ್ ಪಾರಗ ಭಾಳ ದಿನಾ ಅದ್ವು ನೋಡು . ನೌಕರಿ ಆದಮ್ಯಾಲೆ ಮದಿ ಮಾಡ್ಕೋತಿನಿ ಅಂತಿದ್ದ. ಅಂತೂ ಆ ದೇವ್ರು ಕಣ್ ಬಿಟ್ಟಾನಪ್ಪೋ ! ” ಅಂತ ದೇವ್ರು ಇದ್ದಾನೆಂಬೊ ಬರವಸೆ ಮ್ಯಾಲೆ ಆಕಾಶದ ಕಡೆಗೆ ಮಾರಿಮಾಡಿ ಮುಖ ಕೆಳಗಿಳಿಸುತ್ತಾ ಮುಂದುವರೆದು “ರಾಮಣ್ಣಾ ! ಎಲ್ಲಾದ್ರೂ ಚೋಲೊ ಮನಿತನದ ಪೋರಿ ಇದ್ದುರ್ ನೋಡು. ಮಾಡಿ ತಿನ್ನೋ ಹಾಂಗಿದ್ರ ಈ ಸಿಜನ್ದಾಗ ವಾಲಗಾ ಊದಿಸಿ ಬಿಡೋಣ .ಏನಂತಿಯಾ ? ಅಂತ ಹೇಳ್ದಾಗ ” ಆಯ್ತು ಬಿಡಣ್ಣ. ಈಗ ನಿನ್ ಮಗಂಗೆ ಹೆಣ್ ಕೊಡ್ದೆ ಇರೋರು ಯಾರು ? ಹಳ್ಳಿ ಹುಡ್ಗಿ ಏನ್ಮಾಡ್ತಿಯಾ ಬಿಡು. ಚೋಲೋ ಓದಿರೊ ಪ್ಯಾಟಿ ಹುಡಗಿ ಸಿಕ್ತಾಳೆ ತಗೋ ! ” ಅಂತ ಒಂದ್ ನಮೂನಿ ನಕ್ಕಿ ಹುಲ್ಲಿನ ಹೊರೆ ಎತ್ಕೊಂಡು ” ಬರ‍್ತಿನಣ್ಣೊ !’ ಅಂತ ಹೆಜ್ಜೆ ಹಾಕಿದ.ಮಾಂತ್ಯಾಗೆ ಬಿ.ಎಡ್ ಸಿಟು ಸಿಕ್ರೆ ಹಳ್ಳಿಯಲ್ಲೆಲ್ಲ ಮಾಸ್ತರ ನೌಕರಿ ಆಯ್ತಂತ ಗುಲ್ಲೆದ್ದಿತ್ತು. ಆ ಕಾಲವೊಂದಿತ್ತು.ಬಿ.ಎಡ್.ಟಿ.ಸಿ.ಎಚ್. ಕೊರ್ಸ ಮುಗಿಸಿದ್ರೆ ನೌಕರಿ ಗ್ಯಾರಂಟಿ ಅನ್ನೊದು .ಆದ್ರ ಈ ಕಾಲದಾಗ ನೌಕರಿ ಬಲು ಕಷ್ಟ ಅನ್ನೊದು ನನ್ನಂಥವರಿಗೆ ತಿಳಿದಿದ್ದರೂ ಕೂಡ ಯಾರೂ ಅದರ ಬಗ್ಗೆ ತಲೆ ಕೆಡಿಸಿ ಕೊಳ್ಳಲಿಲ್ಲ. ಮಾಂತ್ಯಾ ಮಾತ್ರ ನೌಕರಿ ಗ್ಯಾರಂಟಿ ಅನ್ನುವಷ್ಟು ಖುಷಿಲಿ ಇದ್ದ. ಮತೆ ಅವಾ ತನ್ ಸಂಬಂಧಿಕರಿಗೆಲ್ಲ ಪೋನ್ ಮಾಡಿ ತನಗ ಬಿ.ಎಡ್,ಸಿಟ್ ಸಿಕ್ಕಿದ್ದರ ಬಗ್ಗೆ ತಿಳಿಸಿದ್ದ.ಮಾಂತ್ಯಾಗ ಬಿ.ಎಡ್ ಸಿಟ್ ಸಿಕ್ಕಿದೆ ಅಂದ್ರೆ ನೌಕರಿಯೆ ಆಯ್ತು ಅಂತ ಏನೇಲ್ಲ ಸುದ್ದಿ ತಿಳದು ಬೀಗರು, ನೆಂಟರು ಫೋನ್ ಮಾಡಿ ವಿಚಾರಿಸೊದು .ಮತ್ತೆ ಕೆಲವರು ಮಾಂತ್ಯನ ಮನೆಗೆ ಬಂದು ಹೋಗಾದು ಸುರು ಮಾಡಿದ್ರೂ .ಅಂತದ್ರಲ್ಲಿ ಮಾಂತ್ಯಾನ ಹಿರಿ ಅಕ್ಕಾ ಯಶೋಧಮ್ಮ ತನ್ ಹರೆಯದ ಪೋರಿ ಜಗ್ಗಿಗೆ ಜೋತೆಲಿ ಕರ‍್ಕೊಂಡ ಬಂದು ಬಿಟ್ಟಿದ್ಳು.ಬಂದವ್ಳೆ ತನ್ ತಂದಿ ತಾಯಿ ಮಧ್ಯೆ ಕುಳಿತು ” ಯಪ್ಪಾ, ಹ್ಯಾಂಗೂ ಮಾಂತೂಗ್ ನೌಕರಿ ಆಯ್ತು .ಅವ್ನ ಮದ್ವಿ ಮಾಡಬೇಕಾದ್ರೆ ನನ್ ಮಗಳಿಗಿ ಕೊಡ್ತಿನಿ.ಕಳ್ಳಾ-ಬೆಳ್ಳಿಲ್ಲಿ ನನ್ ಮಗಳಿದ್ರೆ ವಯಸ್ಸಾದ ಕಾಲಕ್ ಅವ್ಳು ಅಜ್ಜಾ – ಅಜ್ಜಿಯರೆಂಬ ಕಳಕಳಿಯಲ್ಲಿ ನಿಮ್ ಸೇವಾ ಮಾಡ್ಲಿಕ್ ಇರ‍್ತಾಳ.ಮತ್ ಎಲಾದ್ರೂ ದುಡುಕಿ ಮಾಂತೂಗ್ ಹುಡ್ಗಿ ನೋಡಿರಿ ನೋಡಪ್ಪೋ ! ” ಅಂತ ಹೇಳ್ತಾ ಮಗಳ ಮುಖಾ ನೋಡಿದ್ಳು . ಆಗ ಆ ಕರಿಮಾರಿ ಪೊರಿ ‘ಜಗ್ಗಿ’ ನಾಚಿ ಮುಖ ಕೆಳಗೆ ಮಾಡಿ ನೆಲ ನೋಡತೊಡಗಿದ್ದಳು. ಗಂಗಪ್ಪ ಮಗಳಿಗೆ ನಿರಾಸೆ ಮಾಡಬಾರದೆನ್ನುವಂತೆ “ಆಯ್ತು ತಗಮ್ಮಾ” ಅಂತ ಭರವಸೆ ನೀಡಿ ಕಳಿಸಿದ್ರು. . ಜನೆವರಿ ತಿಂಗ್ಳು ಇಪ್ಪತ್ತೆರಡನೆ ತಾರೀಖಿಗೆ ಮಾಂತ್ಯಾ ಬೆಂಗಳೂರಲ್ಲಿ ಕೌನ್ಸಲಿಂಗೆ ಹಾಜರಾಗಬೇಕು. ಅದಕ್ಕೂ ಮೊದ್ಲೂ ಮೈಸೂರ ಬ್ಯಾಂಕಲ್ಲಿ 9 ಸಾವಿರ 9 ನೂರಾ ಎಪ್ಪತೈದು ರೂಪಾಯಿ ಮತ್ತು ಕಮಿಷನ್ ಒಟ್ಟು ಸೇರಿ 10 ಸಾವಿರ ರೂಪಾಯಿ ಡಿ.ಡಿ. ತೆಗೆಯಬೇಕಿತ್ತು. ಆದ್ರ ಅಂತದ್ರಲ್ಲಿ ಅನಕ್ಷರಸ್ಥನಾದ ಗಂಗಪ್ಪ ತನ್ ಮಗನಿಗಿ ನೌಕರಿಯಾಗಿದೆ ಅಂತ ತಿಳಕೊಂಡಿದ್ದ. ಅವಾ ಹತ್ತು ಚಿಂತೆಲ್ಲ ಒತ್ತಿಟ್ಟಿ ಕಾಲ್ ಮ್ಯಾಲ್ ಕಾಲ ಹಾಕಿ ಅಂಗಳದ ಬೇವಿನ ಮರದ ಕೆಳಗೆ ಯಾವಾಗ್ಲೂ ಗಣೇಶ ಬೀಡಿ ಸೇದೋ ಮನುಷ್ಯ ಇವತ್ತು ‘ಗೊಲ್ಡಫ್ಲಾಕ್’ ಸಿಗರೆಟ್ ಸೆದ್ತಾ “ಉಫ್” ಅಂತ ಹೊಗೆ ಬಿಡ್ತಾ ” ಇನ್ನೇನು ಇದ್ದ ಒಬ್ಬ ಮಗ್ನಿಗಿ ನೌಕರಿ ಸಿಕ್ತು .ಅಂತೂ ಅವಾ ಈ ಕೌಂಟ್ ಮಂದ್ಯಾಗ ಮಾಸ್ತಾರ ಆದ .ಅವ್ನಿಗಿ ಈ ವರ್ಷ ಮದಿ ಮಾಡ್ಬೇಕು. ಸೊಸಿ ಮನಿಗಿ ಬಂದ ಮ್ಯಾಲ್ ಎಲ್ಲಾ ಜವಾಬ್ದಾರಿ ಇವ್ರ ಮ್ಯಾಲ ಹಾಕಿ ನಾನು ನನ್ ಹೆಣ್ತಿ ಹಾಯಾಗಿ ಕುಂತಕೇಸಿ ಮಗನ್ ಪಗಾರ ತಿಂಗ್ಳಾ ತಿಂಗ್ಳಾ ಹ್ಯಾಂಗೂ ಬರ‍್ತಾದೆ ಅದೆ ಖರ್ಚು ಮಾಡ್ತಾ ವಯಸ್ಸಾದ ಕಾಲದಲ್ಲಿ ವಿಶ್ರಾಂತಿ ತಗೋಬೇಕು .ನಂಗೂ ಆ ಗೌಡ್ರ ಹೊಲ್ದಾಗ್ ದುಡ್ದು ದುಡ್ದು ಸಾಕಾಗ್ಯಾದ ಇನ್ಮೂಂದ್ ಯಾರ್ ಹತ್ರಾನೂ ಕೆಲ್ಸಕ್ ಹೋಗ್ಬಾರದು .ಇದ್ದ ಹೊಲ ಮನಿ ಮೊಮ್ಮಕ್ಕಳು ಅಂತ ನೋಡಿಕೊಂಡಿದ್ರೆ ಸಾಕು ” ಅಂತ ಕನ್ಸ ಕಾಣ್ತಾ ಇದ್ದ. ಎದಿರು ಮಾಂತ್ಯಾ ಬಂದು ನಿಂತಿದ್ದ. ” ಯಾಕೋ ಮಗಾ ನೀ ನೌಕರಿಗಿ ಯಾವಾಗ್ಲಿಂದ ಹೋಗ್ಬೇಕು ? ಹಿನ್ನಾ ಆರ್ಡರ್ ಬಂದಿಲ್ಲೇನು ? ” ಅಂತ ಸಿಗರೆಟ್ ತುದಿ ಕುಳಿತ ಕಟ್ಟೆಗೆ ಚುಚ್ಚಿ ಕೇಳಿದ.” ಅಪ್ಪಾ !,ಬಿ.ಎಡ್ ಅಂದ್ರೆ ಇನ್ನೂ ಒಂಬತ್ತು ತಿಂಗ್ಳು ಟ್ರೇನಿಂಗ ಕೊರ್ಸು ಮಾಡಿ ಪಾಸಾಗ್ಬೇಕು.ಆಗ ನೌಕರಿ ಬರ‍್ತಾದೆ.””ಅಂದ್ರೆ ? ಈಗ ನಿಂಗೆ ನೌಕರಿ ಆಗಿಲ್ವಾ ? ” ನಿರಾಸೆ ಭಾವದಿಂದ ಪ್ರಶ್ನಿಸಿದ.”ಆಗ್ತದೆ, ಒಂದಲ್ಲ ಒಂದ್ಸಲ ಆಗೆ ಆಗ್ತದೆ. ಮೊದ್ಲು ನಾ ಒಂಬತ್ತು ತಿಂಗ್ಳು ಟ್ರೇನಿಂಗ್ ಮುಗಿಸ್ಬೇಕು.” “ಹೌದಾ ! ಹಾಂಗಾದ್ರೆ ಎಲ್ಲಿ ನಿನ್ ಟರ್‌ನಿಂಗು ? “” ಅಪ್ಪಾ !,ಅವ್ರು ಎಲ್ಲಿ ಕೊಡ್ತಾರೆ ಅಲ್ಲಿ ಮಾಡ್ಬೇಕು .ಮೊದ್ಲು ದುಡ್ಡಿನ ವ್ಯವಸ್ಥಾ ಮಾಡು .ಸದ್ಯ ಇಪ್ಪತ್ತು ಸಾವ್ರಾ ಬೇಕು. ಯಾಕೆಂದ್ರೆ ಬ್ಯಾಂಕಿನ್ ಡಿ.ಡಿ. ತೆಗೆಯೋದಿದೆ. ಅದ್ಕೆ 10 ಸಾವಿರ. ಕಾಲೇಜ್ ಡೊನೇಷನ್ 5 ಸಾವಿರ. ಇನ್ನೂ ನಮ್ಮೂರಿಂದ ಬೆಂಗಳೂರಿಗೆ ಕೌನ್ಸಲಿಂಗ್ ಗಾಗಿ ಹೋಗಿ ಬರಬೇಕಾದ್ರೆ ಸಾವ್ರಾ ,ಎಡ್ಡ ಸಾವ್ರಾದ್ರೂ ಬೇಕು. ಉಳಿದಿದ್ದು ಬೆಂಗಳೂರು ಕೋಲಾರಲ್ಲಿ ಸಿಟ್ ಸಿಕ್ರೆ ಒಂದ್ ತಿಂಗ್ಳು ಖರ್ಚಿಗೆ . ಇನ್ನೂ ಒಂಬತ್ತು ತಿಂಗ್ಳು ಓದ್ಬೇಕಾದ್ರೆ ಇಪ್ಪತ್ತೇಳು ಸಾವ್ರಾ ಬೇಕಾಗುತ್ತೆ. ಸದ್ಯಕ್ಕೆ ಇಪ್ಪತ್ತು ಸಾವ್ರಾ ಬೇಕು.” ಅಂತ ಮಾಂತ್ಯಾ ತನ್ ಖರ್ಚಿನ ಬಗ್ಗೆ ಲೆಕ್ಕ ಹಾಕ್ತಾ ಹೇಳ್ತಿದ್ದಾಗ ಗಂಗಪ್ಪನ ಗಂಗಳಂತ ಮುಖ ಮುದುಡಿ ಬಟ್ಟಲ್ಲಂತಾಗಿ ಖಳೆ ಗುಂದಿತ್ತು. ಆದ್ರೂ ಹ್ಯಾಂಗಾದ್ರೂ ಮಾಡಿ ಮಗನಿಗಿ ಮಾಸ್ತರ ಆಗೋ ಹಾಂಗ್ ಮಾಡ್ಬೇಕು” ಅನ್ನೋ ಹುಳ ಅವನ ತಲೆಯಲ್ಲಿ ಕೊರಿತಾನೆ ಇತ್ತು. ಅದು ಇವತ್ತು ಕೊರ‍್ದೆ ಬಿಟ್ಟಿತ್ತು.ಆದ್ರೆ ಅಷ್ಟೋಂದು ದುಡ್ಡು ಅಂದ್ರೆ ಹ್ಯಾಂಗೆ ? ಬದುಕೊದ್ಕೆ ಕಷ್ಟವಾಗಿರೋ ಈ ಕಾಲದಲ್ಲಿ ಇದು ಸಾಧ್ಯನಾ ? ಇತ್ತಿಚೆಗೆ ಮಳೆ ಬೆಳೆ ಸರಿಯಾಗಿ ಆಗ್ದೆ ಬರ ಬಿದ್ದದೆ. ತಿನ್ನೊ ಅನ್ನಕ್ಕೆ ಗತಿಯಿಲ್ಲದ ಬಡತನ್ದಾಗೆ ಇಷ್ಟೊಂದು ದುಡ್ಡು ಹ್ಯಾಂಗ್ ಮಾಡೋದು ?” ಅಂತ ಯೋಚಿಸುತ್ತ ಹಣೆ ಬರಹಕ್ಕೆ ಕೈ ಹಚ್ಚಿಕೊಂಡು ಅಂಗಳದಲ್ಲಿ ಕುಂತು ಆಕಾಶ ನೋಡ ತೊಡಗಿದ .ಹೊತ್ತು ಮುಳುಗಿ ಕತ್ತಲಾಗಿದ್ದರಿಂದ ಲಕ್ಷಾನುಲಕ್ಷ ನಕ್ಷತ್ರಗಳು ಮಿರ ಮಿರನೆ ಮಿಂಚತೊಡಗಿದವು. ಅದರಲೊಂದು ನಕ್ಷತ್ರ ‘ಸುಯ್’ ಅಂತ ಮಿಂಚುಳ್ಳಿಯಂತೆ ಜಾರಿ ಮಾರುದ್ದ ಮುಂದೆ ಹೋಗಿ ಸಹಸ್ರ ನಕ್ಷತ್ರಗಳ ಗುಂಪು ಸೇರಿತ್ತು. ಆ ನಕ್ಷತ್ರವನ್ನು ಕಂಡ ಕೂಡಲೆ ಗಂಗಪ್ಪ ಹಣೆ ಮೇಲಿನ ಕೈ ತೆಗ್ದು ” ಹ್ಞಾಂ ! ನನ್ ಮಗಾ ಮೊದ್ಲಾ ನಕ್ಷತ್ರದಂತೆ ಯಾವುದೆ ಕಾರಣಕ್ಕೂ ಹಿಂದೆ ಬಿಳಬಾರ‍್ದು. ಎರಡನೇ ನಕ್ಷತ್ರದಂತೆ ಸಹಸ್ರಾರು ಜನಗಳ ಮಧ್ಯೆ ಮಾಸ್ತರಾಗಿ ಮಿಂಚಬೇಕು” ಅಂತ ಯೋಚಿಸುತ್ತಿಂದ್ದಂತೆ ಹೆಣ್ತಿ ಮಲ್ಲಮ್ಮ ಬಂದು,” ಏನ್ರಿ ! ಒಬ್ರೆ ಕುಂತು ಮಗನಿಗಿ ದುಡ್ಡು ಹ್ಯಾಂಗ ಮಾಡೋದು ಅಂತ ಯೊಚ್ನೇ ಮಾಡ್ತಿದ್ದಿರೇನು ? ಇರ‍್ಲಾಕ್ ಒಬ್ಬ ಮಗಾ ಹನಾ ಅವ್ನ ಛಂದಾಃ ಬಣ್ಣಾ ಮಾಡೋದೆ ನಮ್ ಕೆಲ್ಸ ಅಲ್ಲೇನು ? ಹ್ಯಾಂಗಾದ್ರೂ ಮಾಡಿ ಅವ್ನಿಗಿ ಮಾಸ್ತರ ಆಗೋ ಹಾಂಗ್ ಮಾಡ್ರಿ .ದುಡ್ಡಿಲ್ಲಂದ್ರ ಸಾಲ ಸೋಲಾದ್ರೂ ಮಾಡಿ ಬೆಂಗಳೂರಿಗಿ ಕಳಸ್ರಿ.” ಅಂತ ಅನ್ನುತ್ತಿದ್ದಾಂಗ ಗಂಗಪ್ಪ ಹೆಣ್ತಿ ಮಾತು ಖರೆ ಅದಾ ಅಂತ ಗಂಗಿ ಎತ್ತಿನಂಗ ತಲೆ ಅಲ್ಲಾಡಿಸಿದ.ಬೆಳಗಾಯಿತು. ಮರುದಿನ ಗಂಗಪ್ಪ ಊರ ಸಾಹುಕಾರ ಹತ್ರ ಬಂದು ” ಸಾವುಕರ‍್ರೆ, ನನ್ ಮಗಂಗೆ ಮಾಸ್ತರ ನೌಕರಿ ಬಂದಿದೆ. 20 ಸಾವ್ರಾ ಸಾಲ ಬೇಕಿತ್ತು. ಇಲ್ಲ ಅನ್ಬೇಡಿ. ನಿಮ್ಗೆ ಶ್ಯಾಣ್ ಮಾಡ್ತಿನಿ .ದಯಮಾಡಿ ತ್ವಾಡೆ ಮದ್ದತ್ ಮಾಡ್ರಿ .” ಅಂತ ಗಂಗಪ್ಪ ಸಾಹುಕಾರ ಸಿದ್ರಾಮ ಕುಳಿತ ಕುರ್ಚಿಯ ಎದುರು ಅವರ ಪಾದಗಳ ಹತ್ತಿರ ಕೈ ಜೋಡಿಸಿ ಕೇಳಿದ. ಆಗ ಸಾಹುಕಾರ ಸಿದ್ರಾಮ ತನ್ನ ಹುರಿ ಮೀಸೆ ಮೇಲೆ ಕೈಯಾಡಿಸಿ ಅವುಗಳಿಗೆ ಎರಡು ಕಡೆ ಟಗರಿನ ಕೊಂಬಿನಾಕಾರ ಹುರಿಗೊಳಿಸಿ ” ನೋಡು ಗಂಗಪ್ಪ ,ನಿಂಗೆ 20 ಸಾವ್ರಾ ಯಾಕೆ 50 ಸಾವಿರ ಬೇಕಿದ್ರೆ ಕೇಳು ಕೊಡ್ತಿನಿ. ನಿನ್ ಮಗಾ ಮಾಸ್ತರ್ ಆಗ್ತಿದ್ದಾನೆ ಅಂದಮ್ಯಾಗ ನಿಂಗೇಷ್ಟು ಸಂತೋಸಾನೊ ನಂಗೂ ಅಷ್ಟೇ ಸಂತೋಸಾ. ಯಾಕೆಂದ್ರೆ ನಮ್ ಹಳ್ಳಿಗಿ ಮರ್ಯಾದೆ ಬರೋ ವಿಷ್ಯ ನೋಡು ಅದ್ಕೆ. ನಮ್ ಈ ಪಾಚಿ ಬೆಳೆಯೊ ಊರಲ್ಲಿ ನಿನ್ನಂತ ಬಡವನ ಮಗ ಒಬ್ನಾದ್ರೂ ಮಾಸ್ತರ ಆದ್ನಲ್ಲ” ಅಂತ ಹೆಮ್ಮೆಯಿಂದ ಖುಷಿ ಪಡ್ತಾಯಿದ್ದಿನಿ .ನಿಂಗೆ ದುಡ್ಡು ಬೇಕಿದ್ರೆ ಎಷ್ಟು ಬೇಕು ನಿನ್ ಮಗನಿಗಿ ಕೇಳಿ ನಾಳೆನೆ ಬಂದು ಒಯ್ಯಿ .ಆದ್ರೆ ನನ್ದೊಂದು ಕಂಡಿಷನ್ನು ಅದೇನಂದ್ರ ನಿಂಗೆ ಐವತ್ತು ಸಾವ್ರಾ ಬೇಕಿದ್ರೆ ಮೂರು ವರ್ಷ ಮುದ್ದತ್ತು ಮಾಡಿ ಕೊಡ್ತಿನಿ.ಅದ್ಕೆ ಬಡ್ಡಿ ಹೆಚ್ಚಿಗೇನು ಇಲ್ಲ . ನೂರಕ್ಕೆ 3 ರಂತೆ ಇರುತ್ತೆ . ಐವತ್ತು ಸಾವಿರಕ್ಕೆ ಮೂರು ವರ್ಷಾ ವಾಯಿದಾ ಮಾಡಿ ತಗೊಂಡ್ರೆ ಅದ್ಕೆ ಬಡ್ಡಿನೆ 54 ಸಾವ್ರಾ ಆಗುತ್ತೆ. ಏನೋ ನೀ ನಮ್ಮವ ಅಂತ ಮ್ಯಾಲಿನ ನಾಕ್ ಸಾವ್ರಾ ಬಿಡಬೊದು.ಅಂದ್ರೆ ಆಗ ಅಸಲು ಬಡ್ಡಿ ಸೇರಿ ಒಂದು ಲಕ್ಷ ರುಪೈ ಕೊಡಬೇಕಾಗುತ್ತೆ.ಇಷ್ಟಾದ್ರೂ ಇನ್ನೂ ಒಂದ್ ಕಂಡಿಷನ್ ನಿಂಗೆ 50 ಸಾವಿರ ರುಪೈ ಅನಾಮತ್ತಾಗಿ ಕೊಡ್ಲಿಕ್ ಆಗೊಲ್ಲ .ಅದ್ಕೆ ಏನಾದರೂ ಅಡವಿಡಬೇಕಾಗುತ್ತೆ.” ಅಂತ ಸಾಹುಕಾರ ಕುರ್ಚಿ ಮೇಲೆ ಕುಂತಲೆ ಎಡಗಾಲ ಮ್ಯಾಲೆ ಬಲಗಾಲ ಹುರಿ ಹಾಕಿ ಠೀವಿಲೆ ಹೇಳಿದ.ಗಂಗಪ್ಪ ಧೈರ್ಯ ತಂದ್ಕೊಂಡು ತನಗಿರೊ ನಾಕ್ ಎಕರೆ ಹೊಲದಾಲ್ಲಿ ಎಡ್ ಎಕರೆ ಹೋದ್ರು ಚಿಂತಿಲ್ಲ .ಮಗಾ ಮಾಸ್ತರ ಆದ ಮ್ಯಾಲ ತಗೊಂಡ್ರಾಯ್ತು” ಅಂತ ಮನದಾಗೆ ಅಂದ್ಕೊಂಡು ” ಆಯ್ತು ಗೌಡ್ರೆ, ನೀವೂ ಅಂದ್ಹಾಂಗೆ ಆಗ್ಲಿ ,ನಿಮ್ ಮ್ಯಾಲಿನ ತ್ವಾಟಕ್ ಹತ್ತಿರೋ ಎಡ್ ಎಕರೆ ನಿಮ್ ಹೆಸ್ರಿಗೆ ಬರೆದು ಕೊಡ್ತಿನಿ. ಮೂರು ವರ್ಷದಾಗ ನಿಮ್ ದುಡ್ಡು ಮುಟ್ಟಿಸ್ಲಿಲ್ಲಂದ್ರೆ ಆ ಹೊಲ ನಿಮ್ದು.” ಅಂತ ಗಂಗಪ್ಪ ತನ್ ಹೆಣ್ತಿ ಮತ್ ಮಗನ ಅಪ್ಪಣೆ ಪಡೆದು ಬೌಂಡು ಪೇಪರ ಮ್ಯಾಗ ಸಹಿ ಮಾಡಿ ಸಾಲ ತಗೊಂಡು ಅದರಲ್ಲಿನ 20 ಸಾವಿರ ಮಗನಿಗಿ ಕೊಟ್ಟು ಬೆಂಗಳೂರಿಗಿ ಕಳಿಸಿದ. ಮಾಂತ್ಯಾ ಬೆಂಗಳೂರಿನಲ್ಲಿ ಕೌನ್ಸಲಿಂಗ್ ಮುಗಿಸಿಕೊಂಡು ಮನೆಗೆ ಬಂದ. ಅವನಂದುಕೊಂಡಂತೆ ಬಸವಕಲ್ಯಾಣದಲ್ಲೆ ಸೀಟು ಸಿಕ್ಕಿತ್ತು. ಬಂದವನೆ ಆ ದಿನವೆ ಕಾಲೇಜಿಗೆ ಬಂದು ಇನ್ನೂರ್ ರುಪೈ ಕೊಟ್ಟು ಅಡ್ಮಿಷನ್ ಫಾರ‍್ಮ ತಗೊಂಡು ಅದು ತುಂಬಿ ಪ್ರಿನ್ಸಿಪಾಲ ಹೇಳಿದಂತೆ ಡೊನೇಷನ್ 5 ಸಾವ್ರಾ ಕೊಟ್ಟು ಸೀಟು ಭದ್ರ ಪಡಿಸಿಕೊಂಡ.ಒಂದ್ ಕಾಲದಲ್ಲಿ ಮಾಂತ್ಯ ಬಿ.ಎ. ಥರ್ಡ ಕ್ಲಾಸಲ್ಲಿ ಪಾಸಾಗಿ ಎಂ.ಎ. ಸೀಟ್ ಸಿಗ್ದೆ ಮನೆಲಿರೊ ನಾಕ್ ಎಮ್ಮೆ ಕಾಯ್ತಾ ಇದ್ದ ಮನುಷ್ಯಂಗೆ ಬಿ.ಎಡ್ ಸೀಟ್ ಸಿಕ್ಕ ಮ್ಯಾಲೆ ಅವಾ ‘ಬಿಳಿ ಬಿಳಿ’ ಡ್ರೆಸ್ ಹೊಲ್ಸಿ ತೊಟ್ಗೊಂಡು ಕಾಲಲ್ಲಿ ಕರಿ ಎಮ್ಮೆ ಬಣ್ಣದ ಶೂ ಹಾಕೊಂಡು ಕೊರಳಲ್ಲಿ ಟೈ, ಸೊಂಟದಲ್ಲಿ ಇನ್ ಹಾಕಿದ ಬೆಲ್ಟು ನೋಡಿದ್ರೆ ಹೊಸ ಅಪಾರ್ಟಮೆಂಟಾದ “ಟೀಚರ್” ಅಂತ ಜನ ಮೂಗ್ ಮುರಿದು ಕೊಳ್ಳುತ್ತಿದ್ದರು.ಮಾಂತ್ಯಾ ಮಾತ್ರ ಬಿ.ಎಡ್ ,ಕಾಲೇಜ್ ಯುನಿಫರ‍್ಮ ಹಾಕೊಂಡು ಹೋಗ್ತಾ ಬರ‍್ತಾ ಇರೋವಾಗ ಅನಕ್ಷರಸ್ಥ ಹಳ್ಳಿ ಮಂದಿ “ನಮಸ್ಕರ‍್ರೀ ! ಮಾಸ್ತರ್ ಸಾಹೇಬ್ರೆ ” ಅಂತ ದೂರಿಂದ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡ್ತಿದ್ರು. ಮಾಂತ್ಯಾನೂ ಪ್ರೆಸ್ಟಿಜ್ ಉಳಿಸ್ಕೊಂಬೇಕಂತ್ಲೆ ಪ್ರತಿಯಾಗಿ ನಮಸ್ಕರಿಸುತ್ತಾ ಕಾಲೇಜಕ್ ಹೋಗ್ತಿದ್ದ. ಅಂದು ಕಾಲೇಜಿನಲ್ಲಿ ಹೊಸದಾಗಿ ಪ್ರವೇಶ ಪಡೆದ ಎಲ್ಲಾ ಪ್ರಶಿಕ್ಷರ್ಥಿಗಳಿಗಾಗಿ ” ಪ್ರತಿಭಾ ದಿನಾಚರಣೆ ” ಹಮ್ಮಿಕೊಂಡಿದ್ರು. ಪ್ರಶಿಕ್ಷಣಾರ್ಥಿಗಳು ತಮ್ ತಮ್ ಪ್ರತಿಭೆ ಏನೆಂಬುದು ಹಾಡುವುದರ ಮೂಲಕ ಕತೆ,ಕವನ, ಹೇಳುವುದರ ಮೂಲಕ ತಮ್ ತಮ್ ಭಾವನೆ ಹೊರ ಹಾಕತೊಡಗಿದರು. ಆಗ ಮಾಂತ್ಯಾನ ಫಾಳಿ ಬಂದಾಗ ಕಸಿವಿಗೊಂಡ ಮಾಂತ್ಯಾ ಏನ್ ಮಾಡಬೇಕೆಂದು ತೊಚ್ದೆ “ಒಂದ್ ಸಿನಿಮಾ ಹಾಡ ಹಾಡ್ತಿನಿ” ಅಂದ ಬಿಟ್ಟ. ಆಗ ಎಲ್ಲರೂ “ಖೋಳ್ಳ್’ ಅಂತ ನಕ್ಕರು. ಆಗ ಉಪನ್ಯಾಸಕರೊಬ್ಬರು “ಹಾಡು, ಹಾಡು ” ಅಂತ ಹುರಿದುಂಬಿಸಿದ್ದರು.ಆಗ ಧೈರ್ಯ ತಂದ್ಕಂಡ ಮಾಂತ್ಯಾ ” ಚಾಂದಿನಿ….ಆಆಆ…..ಚಾಂದಿನಿ ! ಆಆ ” ಅಂತ “ಎ” ಚಿತ್ರದ ಹಾಡು ತುಂಬಾ ರಾಗಬದ್ದವಾಗಿ ಹಾಡುವ ರೀತಿ ನೋಡಿದ್ರೆ ಸಾಕ್ಷಾತ್ ಉಪ್ಪಿನೆ ಥೇಟರ್ ಹರಿದು ಬಂದನೇನೋ ಅಂತ ಅನಿಸತೊಡಗಿತ್ತು. ಯಾಕೆಂದ್ರೆ ಅವನ ಹೇರ್ ಸ್ಟೈಲು,ಕುರುಚಲು ಗಡ್ಡ,ಮೀಸೆ,ಡ್ರೆಸ್ಸು ಎಲ್ಲವೂ ಅವನಂತೆ ಮೇಕಪ್ ಮಾಂತ್ಯಾ ಮಾಡಿಕೊಂಡಿದ್ದ. ಅವನ ಯೌವನ ,ರೂಪಕ್ಕೆ ಕಾಲೇಜಿನಲ್ಲಿದ್ದ ಬೀದರದ ‘ಚಾಂದಿನಿ’ ಅನ್ನೋ ಹುಡ್ಗಿ ಸೋತು ಹೋಗಿದ್ಳೋ ಏನೋ ,ಯಾಕೆಂದ್ರೆ ಇವಾ ಹಾಡುವಾಗ ” ಚಾಂದಿನಿ! ಆಆಆ !! ಚಾಂದಿನಿ ” ಅನ್ನೋ ರಾಗ ಸಂಯೋಜನೆಯಲ್ಲಿ ಆಕೆ ಒಮ್ಮೆ ‘ಕಿಸ್ಸಕ್ಕನೆ’ ನಕ್ಕಿದ್ದಳು. ಆಗ ಇವರಿಬ್ಬರ ಮೇಲೆ ಎಲ್ರಿಗೂ ಸಂಶಯ ಬಂದಿದೆ ಆಗ . ಆದ್ರೆ ಮಾಂತ್ಯಾಗ ಕಾಲೇಜಿನಲ್ಲಿ ‘ ಚಾಂದಿನಿ” ಅನ್ನೋ ಹುಡ್ಗಿ ಇದ್ದಾಳೆ ಅಂತ ಮಾತ್ರ ಗೊತ್ತಿರಲಿಲ್ಲ. ಮುಂದೆ ಬರು ಬರುತ್ತಾ ಹಾಜರಾತಿ ಸಮಯದಲ್ಲಿ “ಚಾಂದಿನಿ” ಎಂದು ಕರೆದಾಗ ಆಕೆ ಮುಗುಳ್ನಕ್ಕು “ಎಸ್ ಸರ್ ! ” ಅಂದು .ಮಾಂತ್ಯಾನ ಕಡೆಗೆ ನೋಡಿ ಮುಗುಳ್ನಕ್ಕು ಕುಳಿತಿದ್ದಳು. ಆಗ ಸುರುವಾಗಿತ್ತು . ಮಾಂತ್ಯಾನ ಮನದೊಳಗೆ ಬಿರುಗಾಳಿಯ ಮಿಂಚೊಂದು ತೇಲಾಡಿತ್ತು.ಮಾಂತ್ಯಾ ಹಾಡಿದಕ್ಕೂ ಚಾಂದಿನಿ ನಕ್ಕಿದಕ್ಕೂ ಸಂಬಂಧ ಇದೇನೋ ಇಲ್ಲೋ ಗೊತ್ತಿಲ್ಲ. ಆದ್ರೂ ಮಾಂತ್ಯಾ ಅವಳ ಕನಸ್ಸು ಕಾಣತೊಡಗಿದ. ಅವಳ ಸುಂದರ ವದನ, ಸಾಧಾರಣ ಎತ್ತರದ ಮೈಕಟ್ಟು ,ಚಿರತೆಯ ಸೊಂಟ, ಅವಳು ಬಳುಕುತ ಹೆಜ್ಜೆ ಇಟ್ಟು ಬರುತ್ತಿದ್ದರೆ ಆ ಚಾಂದಿನಿಯೆ ಬಳುಕಿದಂತೆ ಕಾಣ್ತಿತ್ತು. ಹಿಂಗೆ ಮಾಂತ್ಯಾ ಅವ್ಳಿಗೆ ಪ್ರತಿಯೊಂದರಲ್ಲಿ ಸಹಾಯ ಮಾಡ್ತಾ ಅವಳ ಕನಸ್ಸು ಹೊತ್ಕೊಂಡು ಹೇಗೋ ಒಂಬತ್ತು ತಿಂಗಳು ಟ್ರೆನಿಂಗ್ ಮುಗಿಸಿ ಪರೀಕ್ಷೆ ಬರೆದು ಫಲ್ಲಿತಾಂಶಕ್ಕಾಗಿ ಕಾದ. ನಂತರ ಫಲ್ಲಿತಾಂಶದಲ್ಲಿ ಹಿನ್ನಡೆ ಕಂಡು ಆ ದಿನ ಕಾಲೇಜ್ ನೋಟಿಸ್ ಬೊರ್ಡಿನಲ್ಲಿ ಹಾಕಿದ ಚಾಂದಿನಿಯ ಫಲ್ಲಿತಾಂಶದ ಕಡೆಗೆ ಕಣ್ಹಾಕಿದ. ಆಕೆ ಕಾಲೇಜಿಗೆ ಫಸ್ಟಕ್ಲಾಸ್ ಡಿಸ್ಟಿಕ್ಷನಲ್ಲಿ ಪ್ರತಿಶತ 95 ಅಂಕಗಳು ತಗೊಂಡು ಪಾಸಾಗಿದ್ದಳು. ಮಾಂತ್ಯಾ ಮಾತ್ರ ಪ್ರತಿಶತ 55 ರಷ್ಟು ಮಾತ್ರ ಅಂಕಗಳು ತಗೊಂಡು ಪಾಸಾಗಿ ಹಳ್ಳಿಗೆ ಬಂದು ಬಿಟ್. ಆ ಚಾಂದಿನಿ ಮುಂದೆ ಎಂ.ಎಡ್ ಮುಗಿಸಿಕೊಂಡು ಮರಳಿ ಅದೆ ಕಾಲೇಜಿನಲ್ಲಿ ಉಪನ್ಯಾಸಕಳಾಗಿ ಬಂದು 35 ರ ಪ್ರಾಯದ ಅದೆ ಕಾಲೇಜಿನ ಪ್ರಾಚಾರ್ಯರನಿಗೆ ಮದುವೆಯಾದದ್ದು ನೋಡಿದ್ರೆ ಇದು ಯಾಕೊ ಪ್ರೀನ್ಸಪಾಲನ ಬಗ್ಗೆ ಮಾಂತ್ಯಾನಿಗೆ ಇಂಟ್ರನಲ್ ಮಾರ್ಕ್ಸ ಕೊಡುವಲ್ಲಿ ತಾರತಮ್ಯ ಮಾಡಿಬಹುದೆಂದು ಅನುಮಾನವಾಗಿ ಕಾಡಿತ್ತು. ಚಾಂದಿನಿಯ ಮದುವೆ ವಿಷಯ ತಿಳಿದ ಮಾಂತ್ಯಾನ ಹ್ವಾಟ್ಟೆಯಲ್ಲಿ ಕಸಿವಿಸಿಯಾಗಿ ಹುಳಿಹಿಂಡಿದಂತಾಗಿತ್ತು. ಆದರೂ ಸಹಿಸಿಕೊಂಡು ಬಂದ ‘ದಾರಿಗೆ ಸುಂಕವಿಲ್ಲ’ ಎನ್ನುವಂತೆ ತಮ್ಮೂರಿಗೆ ಮರಳಿದ .ಎಷ್ಟೇ ಪ್ರಯತ್ನ ಪಟ್ಟರು ಉದ್ಯೊಗ ಕನಸಿನ ಮಾತಾಗಿ ಉಳಿಯಿತ್ತು. ಮರಳಿ ಯತ್ನವ ಮಾಡು ಅನ್ನುವಂತೆ ಅವನ ಬದುಕು ಮುಂದುವರೆದಿದೆ. ಅದೇನೆ ಇದ್ದರೂ ಈಗ ಬಿ.ಎಡ್ ಗಾಗಿ ಸಾಲ ಕೊಟ್ಟಿದ್ದ ಸಾವುಕಾರ ಸಿದ್ರಾಮಪ್ಪ ಮೂರು ವರ್ಷ ವಾಯಿದಾ ಮುಗಿದ ಮೇಲೆ ಗಂಗಪ್ಪನ ಹೆಸರಿನಲ್ಲಿದ್ದ ಎರಡು ಎಕರೆ ಹೊಲ ತನ್ನದಾಗಿಸಿಕೊಂಡ. ಇದಾದ ನಂತರ ಮಾಂತ್ಯಾನಿಗೆ ಮಗಳು ಕೊಡಬೇಕೆಂದಿದ್ದ ಅವರಕ್ಕ ಬಿ.ಎಡ್ ಮುಗಿಸಿದ್ರೆ ಈಗಿನ ಕಾಲದಲ್ಲಿ ಎಲ್ಲರಿಗೂ ನೌಕರಿ ಸಿಗೋದು ಕಷ್ಟ ಅಂತ ತಿಳಿದು ಆಕೆಯೂ ಸರ್ಕಾರಿ ಗುಮಾಸ್ತನಾಗಿದ್ದ ವರನೊಬ್ಬನಿಗೆ ತನ್ನ ಮಗಳಿಗೆ ಕೊಟ್ಟು ಮದುವೆ ಮಾಡಿದ್ಳು. ಮಾಂತ್ಯಾನಿಗೆ ಈಗ ಉಳಿದಿರುವುದು ಅನಾರೋಗ್ಯದಿಂದ ಬಳಲುತಿರುವ ತಾಯಿ ತಂದೆ ಮತ್ತು ಎಡ್ ಎಕ್ರೆ ಹೊಲ, ಮನೆಯಲ್ಲಿಯ ಹಸು ಎಮ್ಮೆಗಳು ಮಾತ್ರ. ಮಾಂತ್ಯಾ ಊರೊಳಗೆ ಬಂದ್ರೆ ಯಾರು ಮಾಸ್ತರ ಬಂದಾನAತ ಗೌರವದಿಂದ ಕಾಣ್ತಿಲ್ಲ. ಯಾಕೆಂದ್ರೆ ಈ ಸಲ ಮಾಂತ್ಯಾನ ಕಾಕನ ಮಗಾ ಸುಬ್ಯಾ ಸೇರಿದಂತೆ ಏಳೆಂಟು ಪಾರಗೋಳಿಗೆ ಬಿ.ಎಡ್ಡು ಮತ್ತು ಹತ್ತಾರು ಪಾರಗೊಳಿಗೆ ಡಿ.ಎಡ್ಡು ಸೀಟು ಸಿಕ್ಕಿದವು.
– ಮಚ್ಚೇಂದ್ರ ಪಿ.ಅಣಕಲ್.