Oplus_131072

ಸಿಹಿ ಮಾವು. ( ಮಕ್ಕಳ ನೀತಿ ಕಥೆ)

ಸಿಹಿ ಮಾವು‘ ಎಂಬ ಒಂದು ಹಳ್ಳಿ, ಆ ಹಳ್ಳಿಯಲ್ಲಿ ರಾಮಣ್ಣ ಎಂಬುವನು ಕಾಲಕಾಲಕ್ಕೆ ಸಿಗುವ ಹಣ್ಣುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದನು, ಒಮ್ಮೆ ಹೀಗೇ……ಮಾವಿನ ಹಣ್ಣಿನ ಕಾಲವಾದ್ದರಿಂದ ಅವನು ಮಾವಿನ‌ ತೋಟಗಳಿಗೇ ಹೋಗಿ ತೋಟದ ಮಾಲೀಕರಿಗೆ ಮುಂಗಡವಾಗಿ ಹಣ ಕೊಟ್ಟು ಫಸಲನ್ನು ಕಾಯ್ದಿರಿಸಿ, ಅದಕ್ಕೆ ಒಬ್ಬ ವ್ಯಕ್ತಿಯನ್ನು ಕಾವಲು ಇರಿಸಿ, ಮಾವಿನ ರಸಭರಿತ ತಾಜಾ ಹಣ್ಣುಗಳನ್ನು ಕೊಯ್ಲು ಮಾಡಿ “ಸಿಹಿ ಮಾವು” ಹಳ್ಳಿಯ ಪಕ್ಕದಲ್ಲಿದ್ದ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದನು. ಅವನು ಯಾವಾಗಲೂ ತೂಕದಲ್ಲಿ ಯಾವುದೂ ಮೋಸ ಬಾರದಂತೆ ನಿಷ್ಕಲ್ಮಶ ಮನಸ್ಸಿನಿಂದ ಯಾವುದೇ ಮೋಸವಿಲ್ಲದ, ಕಪಟವಿಲ್ಲದ ವ್ಯಾಪಾರ ಮಾಡುತ್ತಿರುತ್ತಾನೆ. ಅವನ ಈ ನಡವಳಿಕೆಗೆ ಗಿರಾಕಿಗಳು ಅವನನ್ನು ತುಂಬಾ ಸಲುಗೆಯಿಂದ ಗೆಳೆತನ ಮಾಡಿ ಕೊಂಡು, ಅವನೊಂದಿಗೆ ಹೆಚ್ಚು ಹೆಚ್ಚು ಜನ ವ್ಯಾಪಾರ ಮಾಡುತ್ತಿರುತ್ತಾರೆ. ಹೀಗೇ ಇರುವಾಗ ಒಮ್ಮೆ ಅವನು ಮಾವಿನ ಹಣ್ಣಿನ ಫಸಲಿನ ತೋಟಕ್ಕೆ ಹೋಗಿ ತನ್ನ ತಾಜಾ ಮಾವಿನ ಹಣ್ಣುಗಳನ್ನು ಕೊಯ್ದು ತರಲು ತನ್ನ ಸಹಾಯಕರು ಹಾಗೂ ಗಾಡಿ ಸಮೇತ ಆ ತೋಟಕ್ಕೆ ಹೋಗುತ್ತಾನೆ. ಅಲ್ಲಿ ಹೋಗಿ ನೋಡಿದರೆ ಆ ತೋಟದ ಅಷ್ಟೂ ಮಾವಿನ ಮರಗಳಲ್ಲಿ ಪಕ್ಕದ ಕಾಡಿನಿಂದ ಬಂದ ನೂರಾರು ಕೋತಿಗಳ ಹಿಂಡು, ಆ ಕಾವಲಿಗೆ ಇದ್ದ ಕಾವಲುಗಾರರನ್ನು ಕಚ್ಚಿ ಅವನನ್ನು ಬೆದರಿಸಿ ಓಡಿಸಿ ಎಲ್ಲಾ ಫಲಭರಿತ ಮಾವಿನ ಹಣ್ಣುಗಳನ್ನು ತಮಗೆ ಬೇಕಾದಷ್ಟು ತಿಂದು ಉಳಿದ ಹಣ್ಣುಗಳನ್ನು ಕಚ್ಚಿ ಕಚ್ಚಿ ನೆಲಕ್ಕೆ ಎಸೆದು, ತೋಟವನ್ನು ಸಂಪೂರ್ಣ ಹಾಳು ಮಾಡುತ್ತಿರುತ್ತವೆ.

ಈ ದೃಶ್ಯ ನೋಡಿದ ರಾಮಣ್ಣನಿಗೆ ಆ ಕೂಡಲೇ ಅಳು ಬಂದು, ತಲೆ ತಿರುಗಿ ನೆಲಕ್ಕೆ ಕುಸಿದು ಬೀಳುತ್ತಾನೆ. ಅವನ ಜೊತೆಗಿದ್ದವರು ಎಷ್ಟು ಬೆದರಿಸಿದರೂ ಬೆದರಿದ ಕೋತಿಗಳು ಅವರನ್ನೇ ಬೆದರಿಸಿ, ಅವರ ಮೇಲೆ ದಾಳಿ ಮಾಡಿ, ಓಡಿಸಿ ತಮ್ಮ ಕುಕೃತ್ಯ ಮುಂದುವರೆಸುತ್ತವೆ. ಈಗ ತಮ್ಮ ಚೇಷ್ಟೆ ಮತ್ತಷ್ಟು ಹೆಚ್ಚು ಮಾಡುತ್ತಾ ಇಡೀ ಮಾವಿನ ತೋಟವನ್ನು ಸಂಪೂರ್ಣ ತಮ್ಮ ಸುಪರ್ದಿಗೆ ತೆಗೆದುಕೊಂಡು ಕೇಕೆ ಹಾಕತೊಡಗುತ್ತಿರುತ್ತವೆ.

ಸ್ವಲ್ಪ ಸಮಯದಲ್ಲಿ ಚೇತರಿಕೆ ಕಂಡ ಆ ತೋಟದ ಫಸಲಿನ ಮಾಲೀಕ ರಾಮಣ್ಣ ಎದ್ದು ಕುಳಿತು ತನ್ನ ಅಸಹಾಯಕತೆಯನ್ನು ಯಾರ ಮುಂದೆ ಹೇಳಿಕೊಳ್ಳಬೇಕೆಂದು ತಿಳಿಯದೇ ರೋಧಿಸತೊಡಗಿ, ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ಈ ಕೋತಿಗಳ ಮುಖಂಡ, ಸೌಮ್ಯ ಸ್ವಭಾವದ ಮಂಗಣ್ಣ, ತಲೆಮೇಲೆ ಕೈ ಹೊತ್ತು ಕುಳಿತಿದ್ದ ರಾಮಣ್ಣನ ಕಷ್ಟವೇನೆಂದು ಕೇಳಿತು, ಆಗ ಈ ಕೋತಿಗಳ ಕುಕೃತ್ಯಗಳನ್ನು ತೋರಿಸಿ, ನನ್ನ ಹಣವೆಲ್ಲಾ ಹೋಯಿತು, ಎಂದು ಮತ್ತೆ ಮತ್ತೆ ರೋಧಿಸತೊಡಗಿದನು ರಾಮಣ್ಣ. ಆಗ ಆ ಮಂಗಣ್ಣ ರಾಮಣ್ಣನನ್ನು ಸಮಾಧಾನಪಡಿಸಿ ತನ್ನ ಕಪಿ ಸೈನ್ಯ ಮಾಡಿದ ತಪ್ಪಿಗಾಗಿ ತಾನು ಕ್ಷಮಾಪಣೆ ಕೇಳಿದ್ದು ಅಲ್ಲದೆ, ಅವನಿಗೆ ಪರಿಹಾರವಾಗಿ ಇದೇರೀತಿ ಹಣ್ಣುಗಳ ತೋಟಕ್ಕೆ ಕರೆದುಕೊಂಡು ಹೋಗುವುದಾಗಿ ಅವನಿಗೆ ಆಶ್ವಾಸನೆ ನೀಡಿ, ಆ ಕಮಂಗಗಳ ಕುಚೇಷ್ಟೆಗೆ ಕೋಪಗೊಂಡು ಅವುಗಳಿಗೆ ಚೆನ್ನಾಗಿ ಬೈದು, ಅವುಗಳು ಈ ಮಂಗಣ್ಣನಿಗೆ ಹೆದರಿ, ಆ ತೋಟದಿಂದ ಕಾಲ್ಕೀಳುವಂತೆ ಮಾಡಿತು.

ನಂತರ ರಾಮಣ್ಣನನ್ನು ತನ್ನ ಜೊತೆಗೆ ಕರೆದುಕೊಂಡು ಅವುಗಳ ವಾಸಸ್ಥಾನವಾದ ಪಕ್ಕದ ಕಾಡಿನೊಳಕ್ಕೆ ಕರೆದುಕೊಂಡು ಹೋಯಿತು. ಅಲ್ಲಿಗೆ ಹೋದ ರಾಮಣ್ಣನಿಗೆ ತುಂಬಾ ಆಶ್ಚರ್ಯ ಕಾದಿತ್ತು. ಅದೇನೆಂದರೆ ಅಲ್ಲಿ ಕಾಡಿನ ನಡುವೆ ಇತರ ಗಗನಚುಂಬಿ ‌ಮರಗಳ ನಡುವೆ ವಿಶೇಷವಾದ ಮಾವಿನ ತೋಟ ಒಂದು ಕಂಡಿತು. ಅಂತಹ ತೋಟವನ್ನು ರಾಮಣ್ಣ ತನ್ನ ಜೀವನದಲ್ಲಿ ಎಂದೂ ನೋಡಿರಲಿಲ್ಲ, ಇವನ ತೋಟಕ್ಕಿಂತ ಎರಡುಪಟ್ಟು ವಿಸ್ತಾರವಾದ ಮಾವಿನ ಮರಗಳು, ಅವುಗಳಲ್ಲಿ ವಿವಿಧ ತಳಿಯ, ತುಂಬಾ ರುಚಿ ರುಚಿಯಾದ, ಸಿಹಿ, ಸಿಹಿಯಾದ ವಿಶೇಷವಾದ ಫಲಭರಿತ ಮಾವಿನ ಫಲ ತುಂಬಿ ತುಳುಕುವುದನ್ನು ಕಂಡು ತುಂಬಾ ಕುತೂಹಲದಿಂದ ಅಯ್ಯಾ….. ಮಂಗಣ್ಣ ಇದೇನಿದು…… ಇಂಥಾ ಕಾಡಿನಲ್ಲಿ ಇಷ್ಟೊಂದು ಸಮೃದ್ಧಿಯಾಗಿ ಬೆಳೆದ ಮಾವಿನ ಫಲಭರಿತ ಮರಗಳು ಇವೆಯಲ್ಲಾ……ಇಂತಹ ತೋಟವನ್ನು ನಾನು ಇದುವರೆಗೂ ನೋಡಿಯೂ ಇಲ್ಲ,ಕೇಳಿಯೂ ಇಲ್ಲ, ಇದೆಲ್ಲಾ ಹೇಗೆ…..ಎಂದು ಆಶ್ಚರ್ಯದಿಂದ ಕೇಳಿದ.

ಅದಕ್ಕೆ ಮಂಗಣ್ಣ ಹೇಳಿತು, ಇದೆಲ್ಲಾ ದೇವರ ದಯೆಯಿಂದ ಈ ಕಾಡಿನಲ್ಲಿ ಇಷ್ಟೊಂದು ಫಲಭರಿತ ಹಣ್ಣಿನ ಮರಗಳು ಇವೆ, ಇದೆಲ್ಲಾ ನಮ್ಮಂತಹ ಮೂಕ ಪ್ರಾಣಿಗಳ ದಿನನಿತ್ಯದ ಆಹಾರಕ್ಕಾಗಿ ದೇವರೇ ಸೃಷ್ಟಿಸಿದ ಕಾಡಿನ ಸಂಪತ್ತು, ಇಲ್ಲಿ ಯಾವುದೇ ಮನುಷ್ಯ ಜೀವಿ ಬರಲು ಸಾಧ್ಯವಿಲ್ಲ, ಒಂದುವೇಳೆ ಬಂದರೂ ಅವನಿಗೆ ಇದೆಲ್ಲಾ ದಕ್ಕುವುದಿಲ್ಲ , ಅವನ ಕಣ್ಣಿಗೆ ಕಾಣುವುದಿಲ್ಲ, ನೀನು, ಈಗ ನಮ್ಮ ಗೆಳೆಯರು ಮಾಡಿದ ತಪ್ಪಿನಿಂದ ತುಂಬಾ ನಷ್ಟಕ್ಕೆ ಒಳಗಾಗಿದ್ದೀಯ, ಆದ್ದರಿಂದ ನಿನ್ನ ಕಷ್ಟ , ನಷ್ಟ ತುಂಬಿಕೊಡಬೇಕಾಗಿರುವುದು ನಮ್ಮ ಕರ್ತವ್ಯ, ಅದೂ ಅಲ್ಲದೆ ನೀನು ಪ್ರತೀದಿನ ಮಾಡುವ ವ್ಯಾಪಾರದಲ್ಲಿ ಯಾವುದೇ ಮೋಸ, ವಂಚನೆ ಇಲ್ಲದಂತೆ ನಡೆದುಕೊಂಡು ಬರುತ್ತಿರುವುದರಿಂದ ದೇವರದಯೆ ನಿನ್ನ ಮೇಲಿದೆ, ಈಗ ನಿನ್ನ ಕಷ್ಟದಲ್ಲಿ ನಾವು ಭಾಗಿಯಾಗುವುದು ನಮ್ಮ ಕರ್ತವ್ಯ , ಎಲ್ಲವೂ ದೈವೇಚ್ಛೆ, ಎಂದು ಹೇಳಿ, ನಿನಗೆ ಈ ತೋಟದಲ್ಲಿ ಅದೆಷ್ಟು ಫಸಲು ಬೇಕೋ ಅಷ್ಟನ್ನೂ ತೆಗೆದುಕೋ ನಿನ್ನನ್ನು ತಡೆಯುವವರು ಯಾರೂ ಇಲ್ಲ, ಎಂದು ವ್ಯಾಪಾರಿ ರಾಮಣ್ಣನಿಗೆ ಮಂಗಣ್ಣ ಹೇಳಿತು, ಆದರೆ ಅಷ್ಟೊಂದು ಆಸೆಬುರುಕ ಅಲ್ಲ ನಮ್ಮ ರಾಮಣ್ಣ, ಈ ಮೊದಲೇ ಹೇಳಿಲ್ಲವೇ‌. ಅವನು ವ್ಯಾಪಾರದಲ್ಲಿ ಕಪಟಿಯಲ್ಲ, ನಿಷ್ಟಾವಂತ ವ್ಯಾಪಾರಿ ಎಂದು, ಅವನು ಹೇಳಿದ….. ನೋಡು ಮಂಗಣ್ಣ ನನ್ನ ಎಷ್ಟು ಮರಗಳು ಇದ್ದವೋ ಅಷ್ಟು ಮರಗಳ ಫಸಲನ್ನು ಮಾತ್ರ ನನಗೆ ಕೊಡು ಸಾಕು, ಅತಿಯಾಸೆ ಗತಿ ಕೇಡು , ನನಗೆ ನನ್ನದು ಮಾತ್ರ ಸಾಕು, ಪರರ ವಸ್ತು ನನಗೆ ಬೇಡ ಎಂದು ಹೇಳಿದನು.

ಆ ಕೂಡಲೇ ಮಂಗಣ್ಣ ಅವನ ಕೋರಿಕೆಗೆ ತಥಾಸ್ತು ಎಂದಿತು. ಅಷ್ಟೊತ್ತಿಗೆ ಅದೇನೋ ಪವಾಡವೆಂಬಂತೆ ಕ್ಷಣಾರ್ಧದಲ್ಲಿ ಅವನ ಗಾಡಿಗೆ ಫಲಭರಿತ, ರಸಭರಿತ‌ ಸಿಹಿ ಸಿಹಿ ಮಾವಿನ ಹಣ್ಣುಗಳು ತನ್ನಷ್ಟಕ್ಕೆ ತಾನೇ ಬಂದು ತುಂಬಿಕೊಂಡವು. ಅದೆಲ್ಲವೂ ರಾಮಣ್ಣನ ಕಣ್ಣುಮುಂದೆ ಪವಾಡ ಸದೃಶ ರೀತಿಯಲ್ಲಿ ನಡೆದುಹೋಯಿತು. ರಾಮಣ್ಣನಿಗೆ ಆಗ ಅನಿಸಿತು, ಹೌದು…..ನಾವುಗಳು ವ್ಯಾಪಾರದಲ್ಲಿ ಶ್ರದ್ಧೆ, ಭಯ, ಭಕ್ತಿಯಿಂದ ಮೋಸವಿಲ್ಲದ ವ್ಯಾಪಾರ ಮಾಡಿದರೆ, ಜನರಿಗೆ ಯಾವುದೇ ರೀತಿಯಲ್ಲಿ ಮೋಸ‌ಮಾಡದೆ ವ್ಯಾಪಾರ ಮಾಡಿದರೆ, ನಮಗೆ ದೇವರು ಕರುಣೆ ತೋರುವನು ಎಂದು. ಆ ನಂತರ ಇಡೀ ಗಾಡಿ ತುಂಬಾ ಹಣ್ಣುಗಳು ತುಂಬಿದ ನಂತರ ರಾಮಣ್ಣ, ಮಂಗಣ್ಣನಿಗೆ ಧನ್ಯವಾದಗಳನ್ನು ಅರ್ಪಿಸಿ ತನ್ನ ಗಾಡಿ ಸಾಗಿಸಿಕೊಂಡು ಅವನ ಮನೆಯಿದ್ದ “ಸಿಹಿಮಾವು” ಹಳ್ಳಿಗೆ ಬಂದನು.

ಮರುದಿನ ಆ ಫಲಗಳನ್ನು ಮಾರಾಟ ಮಾಡಲು ಪಟ್ಟಣಕ್ಕೆ ಕೊಂಡುಹೋಗಿ ತನ್ನ ಗಾಡಿಯನ್ನು ನಿಲ್ಲಿಸಿಕೊಂಡು ನಿಂತನು ಅಂದೂ ಸಹ ಅದೇನು ಪವಾಡವೋ, ಅಥವಾ ಆ ಹಣ್ಣುಗಳಲ್ಲಿ ಅದೇನು ದೈವೀಶಕ್ತಿಯ ರುಚಿ ತುಂಬಿತ್ತೋ…….ಕೇವಲ ಕೆಲವೇ ಗಂಟೆಗಳಲ್ಲಿ ಅವನ ಅಷ್ಟೂ ಮಾವಿನ ಫಲಗಳನ್ನು ಗ್ರಾಹಕರು ಕೊಂಡುಕೊಂಡು, ತಾ ಮುಂದು ನಾ ಮುಂದು ಎಂದು ಆ ಹಣ್ಣುಗಳನ್ನು ಖರೀದಿಸಲು ಮುಗಿಬಿದ್ದರು. ಇದರಿಂದ ಎಂದಿಗಿಂತ ದುಪ್ಪಟ್ಟು ಹಣ ರಾಮಣ್ಣನ ಜೇಬು ಸೇರಿತು. ಅವನು ಮತ್ತಷ್ಟು ಹೆಚ್ಚು, ಹೆಚ್ಚು ಹಣ್ಣಿನ ತೋಟಗಳನ್ನು ಕೊಂಡುಕೊಂಡು ಸರಿಯಾದ ರೀತಿಯಲ್ಲಿ ವ್ಯಾಪಾರ ಮಾಡತೊಡಗಿದ.

(ನೀತಿ: ಮನಸ್ಸು ಸುದ್ದವಾಗಿದ್ದರೆ ಮಹಾದೇವ ಒಲಿಯುತ್ತಾನೆ.)

ಸಂಗ್ರಹ : ಬನ್ನಪ್ಪ ಅಂಗಡಿ. (ಶಿಕ್ಷಕರು).ಯಾದಗಿರಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ