Oplus_131072

ಸಿರಿ ಮಲ್ಲಿಗೆ ; ಕಾವ್ಯ ಒಂದು ಅವಲೋಕನ.

ಕನ್ನಡ ಕಾವ್ಯ ಪರಂಪರೆಯನ್ನು ಅವಲೋಕಿಸಿದಾಗ ಕಾಲದಿಂದ ಕಾಲಕ್ಕೆ ಕಾವ್ಯದ ವಸ್ತು, ಶೈಲಿ,ಛಂದಸ್ಸು ಹಾಗೂ ಕಾವ್ಯದ ಧೋರಣೆ ಬದಲಾಗಿರುವುದು ಕಂಡುಬರುತ್ತದೆ. ಆಯಾ ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಂಶಗಳು ಬದಲಾದಂತೆ ಕಾವ್ಯ ಕಟ್ಟುವ ಕವಿಯ ಮನೋಧೋರಣೆಯಲ್ಲೂ ಬದಲಾಗಿರುವುದು ಸಹಜ ಅಥವಾ ಉತ್ತಮ ಬೆಳವಣಿಗೆಯಂದೇ ಹೇಳಬೇಕು. ಒಂದು ಕಾಲಘಟ್ಟದಲ್ಲಿರುವ ಸಮಾಜಿಕ ಸ್ತಿತ್ಯಾಂತರಗಳು ಇನ್ನೊಂದು ಕಾಲಕ್ಕೆ ಅಷ್ಟೇ ಪ್ರಭಾವ ಬೀರುತ್ತವೆ ಎಂಬುದು ಕಷ್ಟ ಸಾಧ್ಯ. ಈ ಸಮಾಜಿಕ ಪ್ರಜ್ಞೆಯುಳ್ಳ ಕವಿ ತನ್ನ ಕಾವ್ಯಕ್ಕೆ ವರ್ತಮಾನದ ವಿದ್ಯಮಾನಗಳನ್ನು ಅರಿತು ಭವಿಷ್ಯತ್ತನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಇದು ಕವಿಯಲ್ಲಿನ ಕಾವ್ಯ ಧೋರಣೆ ಹಾಗೂ ಪ್ರೇರಣೆ ಹೊಸತನ ಕಾವ್ಯ ಕಟ್ಟಿಕೊಡಲು ಸಾಧ್ಯವಾಗುತ್ತದೆ. ಈ ಎಲ್ಲಾ ಹಿನ್ನೆಲೆಯನ್ನು ಅವಲೋಕಿಸಿದಾಗ ಕನ್ನಡ ಅಷ್ಟೇ ಅಲ್ಲ ವಿಶ್ವ ಸಾಹಿತ್ಯದಲ್ಲಿ ಕೂಡಾ ಕಾಲದಿಂದ ಕಾಲಕ್ಕೆ ಕಾವ್ಯದ ಧೋರಣೆ ಪ್ರೇರಣೆ ಬದಲಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಪಂಪನ ಕಾಲಕ್ಕೆ ಇದ್ದ ಕಾವ್ಯ ಪ್ರೇರಣೆ ಆಧುನಿಕ ಸಂದರ್ಭದಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ಕವಿಯು ಒಂದು ಸಂಪ್ರದಾಯಕ್ಕೆ ಕಟ್ಟಿ ಬೀಳದೆ ಸೂಕ್ಷ್ಮ ಕಣ್ಣಿನಿಂದ ಸಮಾಜವನ್ನು ವೀಕ್ಷಿಸಿ ಅನ್ಯಾಯ, ಅನೀತಿ, ಅಧರ್ಮ, ಅಶಾಂತಿ ವಿರುದ್ಧ ಕಾವ್ಯ ಕಟ್ಟುವ ಕೆಲಸ ಆಗಬೇಕು. ಸಾಮಾನ್ಯ ಜನ ಜೀವನದ ಸ್ಥಿತಿಗತಿಗಳು ಕಾವ್ಯಕ್ಕೆ ತಂದು ಅದರ ಪ್ರಭುತ್ವ ಪರಿಣಾಮ ಹಾಗೂ ಪರಿಹಾರೋಪಾಯಗಳು ಕಂಡುಕೊಳ್ಳುವಂತೆ ರೂಪಿಸಬೇಕು. ತಳ ಸಮುದಾಯದ ಜೀವನ ಹೋರಾಟದ ಸಂಘರ್ಷವನ್ನು ಕಾವ್ಯಕ್ಕೆ ತರುವುದರ ಮೂಲಕ ಸಮುದಾಯದ ಪ್ರಗತಿಗೆ ಶ್ರಮಿಸಬೇಕು. ಈ ಹಿನ್ನೆಲೆಯಲ್ಲಿ ಕವಿ ಕಾವ್ಯ ರಚನೆಯಲ್ಲಿ ತೊಡಗಬೇಕು.
ಆಧುನಿಕ ಈ ಸಂದರ್ಭದಲ್ಲಿ ಅನೇಕ ಕವಿ ಮನಸುಗಳು ಸಮಾಜದತ್ತ ಮುಖ ಮಾಡಿ ಸಮಾಜೀಕ ಹೋರಾಟ, ಸಂಘರ್ಷ ಹಾಗೂ ವಿದ್ಯಾಮಾನಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಪರಂಪರೆಯ ಕಾವ್ಯ ರಚನೆಯಲ್ಲಿ ತೊಡಗಿರುವ ಶ್ರೀಮತಿ ಪ್ರಮೀಳಾ ಅವರು ನನ್ನ ಸಾಹಿತ್ಯ ಸಂಗಾತಿ. ಸರಳ ಸಾತ್ವಿಕ ಜೀವನವನ್ನು ಮೈಗೂಡಿಸಿಕೊಂಡ ಇವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು,ಆದರ್ಶ ಜೀವನವನ್ನು ನಡೆಸುತ್ತಿದ್ದಾರೆ. ವೃತ್ತಿಯೊಂದಿಗೆ ಪ್ರವರ್ತಿಯಾಗಿ ಸಾಹಿತ್ಯ ರಚನೆಯ ಮೈಗೂಡಿಸಿಕೊಂಡವರು. ತಮ್ಮ ಜೀವನದ ಸುಧೀರ್ಘ ಅನುಭವಗಳನ್ನು ಕಾವ್ಯಕ್ಕೆ ತಂದು ಸಂಭ್ರಮ ಪಡುವರು. ಇವರ ಅನೇಕ ಬಿಡಿ ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು, ಇವರ ಕಾವ್ಯ
ಇಂದಿಗೂ ಜನ ಮನದಲ್ಲಿ ಹಸಿರಾಗಿವೆ ಎಂದು ಹೇಳಬಯಸುವೆ.

ಚೂಚ್ಚಲ ಕವನ ಸಂಕಲನ ಮೂಲಕ ಹೊಚ್ಚ ಹೊಸ ಅನುಭವಗಳನ್ನು ಹೊತ್ತು ತಂದಿರುವ ಈ ಸಿರಿ ಮಲ್ಲಿಗೆ ಕವನ ಸಂಕಲವು ಸುಮಾರು70 ಕವನಗಳು ಒಳಗೊಂಡಿದೆ. ಮಲ್ಲಿಗೆ ಹೂವು ತನ್ನ ಸುಗಂಧಯುತ ಪರಿಮಳದಿಂದ ಹೇಗೆ ಎಲ್ಲರನ್ನು ಆಕರ್ಷಿಸುತ್ತದೆಯೋ ಹಾಗೆ ಇಲ್ಲಿನ ಕಾವ್ಯಗಳು ಸಹಜವಾಗಿ ತಮ್ಮತ್ತ ಸೆಳೆಯುತ್ತವೆ.

ಸೌಗಂಧಿಕ ಸಾಂಗತ್ಯ ಕವಿತೆಯಲ್ಲಿ ನಿಸರ್ಗ ಮತ್ತು ದಾಂಪತ್ಯವನ್ನು ಸಮೀಕರಿಸಿ ಕಾವ್ಯ ಕಟ್ಟಿಕೊಟ್ಟಿದ್ದಾರೆ. ಸಹಜವಾಗಿ ಕವಯತ್ರಿಯ ಭಾವ ಸುಂದರವಾಗಿ ರೂಪ ತಾಳಿದೆ. ಈ ಸಾಂಗತ್ಯವೆನ್ನುವುದು ನಾವು ನಿಸರ್ಗದಲ್ಲಿ ಕಾಣಬಹುದು ರವಿ ಪಶ್ಚಿಮ ದಿಕ್ಕಿನಲ್ಲಿ ಮುಳುಗಿದ ತಕ್ಷಣ ಚಂದ್ರ ಬಂದು ಸೇರುತ್ತಾನೆ. ಇದು ಹೊಸದೇನಲ್ಲ ನಿಸರ್ಗ ಸಹಜ ಗುಣ ಆದರೆ ಕತ್ತಲು ಆವರಿಸಿದಂತೆ ರಾತ್ರಿ ಕತ್ತಲಲ್ಲಿ ಆ ಚಂದ್ರನ ತಂಪು ಎಂಬ ಪ್ರೀತಿಗೆ ಸಂಪಿಗೆ ಜೊತೆಯಾದವಳು,ಒಂದು ಕಡೆ ತಾರೆಗಳು ಸುಂದರವಾಗಿ ಕಂಗೂಳಿಸುತ್ತಿದ್ದರೆ ಇನ್ನೊಂದು ಕಡೆ ಜಗದ ಜಂಜಡಗಳನ್ನು ಮರೆತು ಸೇರಿದ ಪ್ರೀತಿಯ ಮನಸ್ಸುಗಳು ಸುಖದ ಸಾಗರದಲ್ಲಿ ತೇಲಿಕೊಂಡಿವೆ.
ಮನ ಮನಸ್ಸುಗಳು ಸುಖದ ಆಲಾಪವನ್ನೇ ಹಾಡುತಿವೆ.
ಅಷ್ಟೇ ಅಲ್ಲದೆ ಎಲ್ಲರ ಚಿತ್ತವನ್ನು ಸೆಳೆಯುವ ಚಂದ್ರಮನ ಕುಡಿ ನೋಟ ವಿಹಂಗಮನ ನೋಟವಾಗಿದೆ. ಇತ್ತ ಗೆಳೆಯ ನಿನ್ನ ಕೈ ಸೇರೆ ನಾನಾಗಿದ್ದೇನು……

ಚುಕ್ಕಿ ತಾರೆಗಳು ಇರುಳನ್ನು ಅರಸಿದರೆ ನಾನು ನಿನ್ನ ಒಲವಿನ ಶರೀರದಲ್ಲಿ ನಲಿಯುತ್ತಿರುವೆ ಎಂಬುದು ನಲ್ಲೆಯ ನಿಸರ್ಗ ಪ್ರೀತಿ ಹಾಗೂ ನಲ್ಲನ ಪ್ರೀತಿ ಸಮೀಕರಿಸಿ ಸುಂದರ ಹೊಲಿಕೆಯ ಕಟ್ಟಿಕೊಟ್ಟಿದ್ದಾರೆ.

ಕೋಟೆಯೊಳಗಿನ ಕುವರ ಎಂಬ ಕವಿತೆಯಲ್ಲಿ ಹುಡುಗ ತನ್ನ ಪ್ರಿಯಸಿಗೆ ಪ್ರೇಮ ನಿವೇದನೆಯನ್ನು ಹೇಳುವ ಪರಿ ಸೊಗಸಾಗಿದೆ. ಪ್ರೀತಿ ಇಲ್ಲದೆ ಬದುಕು ಅಸಾಧ್ಯ ಹದಿಹರೆಯ ಯುವಕರಲ್ಲಿ ಪ್ರೀತಿ ಪ್ರೇಮವು ಮೂಡುವುದು ಸಹಜ ಈ ಪ್ರೀತಿ ನಿವೇದನೆ ಅಷ್ಟೇ ಪವಿತ್ರವಾಗಿ ಎಲ್ಲಿವೂ ಅತಿರೇಖ ಹಾಗೂ ಅಶ್ಲೀಲವಾಗಿ ಕಂಡುಬರದೆ ಸಾತ್ವಿಕ ಸಂಪ್ರೀತಿಯಾಗಿ ಮೂಡಿಬಂದಿದೆ.

ಪವಿತ್ರ ಪ್ರೀತಿಯನ್ನು ನಲ್ಲ ತನ್ನ ನಲ್ಲೆಯನ್ನು ಕುರಿತು ಇರುವ ಗಾಢವಾದ ಪ್ರೇಮವನ್ನು ನೇರವಾಗಿ ಕಾವ್ಯದ ಮೂಲಕ ಹೇಳ ಹೊರಡುತ್ತಾನೆ. ನನ್ನ ಮನದ ಭಾವನೆಯನ್ನು ಅರಿತು ನನ್ನ ಪ್ರೀತಿಯನ್ನು ನನಸಾಗಿಸು ಕನ್ನಡಿ ಒಳಗಿನ ಬಂಗಾರ ಎಷ್ಟೇ ಕಾಣಿಸಿದರು ಅದು ತನ್ನದಾಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತನ್ನ ಪ್ರೀತಿಯನ್ನು ದೊರೆಯುವಂತೆ ಮನ್ನಿಸು ಎಂದು ಬೇಡಿಕೊಳ್ಳುವ ರೀತಿ ಅದ್ಭುತವಾಗಿ ಮೂಡಿ ಬಂದಿದೆ.
ಪ್ರೀತಿಯ ಆಸರೆಗಾಗಿ ಕಾತರಿಸುವ ಮಧುರ ಪ್ರೇಮದ ಮನಸ್ಸಿನ ತಲ್ಲಣವನ್ನು ಸರಳವಾಗಿ ಅರ್ಥವಾಗುವಂತೆ ಹೇಳುವ ಕಾವ್ಯ ಶೈಲಿ ಓದುಗರಿಗೆ ಸಹಜವಾಗಿ ಅರ್ಥವಾಗುತ್ತದೆ. ಎಷ್ಟೇ ಪ್ರೀತಿಯ ಮನಸ್ಸುಗಳು ತಮ್ಮ ಪ್ರೇಮ ನಿವೇದನೆ ಹೇಳದೆ ಚಡಪಡಿಸುವುದು ಅಷ್ಟೇ ಅಲ್ಲದೆ ಹತಾಶೆ,ನಿರಾಸೆ ತಾಳಿ ಸಾವಿಗೂ ಶರಣಾಗುವುದು ಕಾಣುತ್ತೆ. ಪ್ರೀತಿಸುವುದು ಎಷ್ಟು ಮುಖ್ಯವೋ ಅಷ್ಟೇ ನಿವೇದನೆವು ಅಷ್ಟೇ ಮುಖ್ಯವಾಗಿರುತ್ತದೆ. ಕೊನೆಗೆ ಅಪ್ಪುಗೆಯಲ್ಲಿ ಎರಡು ಜೀವಗಳು ಸ್ವರ್ಗ ಸುಖವನ್ನು ಕಾಣೋದು ನಾವು ಕಾಣಬಹುದಾಗಿದೆ. ಸಹಜವಾಗಿ ಪ್ರೀತಿ ಅರ್ಥಮಾಡಿಕೊಳ್ಳುವ ಅದೆಷ್ಟೋ ಜನರು ಪ್ರೀತಿ ಎಂದರೆ ಕಾಮವೆಂದು ತಿಳಿದುಕೊಂಡಿತ್ತಾರೆ ಇಂಥ ವಿವೇಕಿಗಳಿಗೆ ಪ್ರೀತಿ ಪ್ರೇಮದ ಮಹತ್ವ ಅದರ ಶ್ರೇಷ್ಠತೆಯನ್ನು ಪ್ರೀತಿ-ಸಂಪ್ರೀತಿ ಕವಿತೆಯಲ್ಲಿ ಬಿಚ್ಚಿಟ್ಟಿದಾರೆ. ಅದು ಕಾಮದ ಕಲ್ಪನೆ ಅಲ್ಲ ಅಷ್ಟೇ ಯಾಕೆ ಭೋಗದ ಬಯಕೆ ಅಲ್ಲ ಅದು ದೈವಾನುಗ್ರಹದ ದೈನಿಕವಾಗಿದೆ ಎಲ್ಲರನ್ನೂ ರಕ್ಷಣೆ ಮಾಡುವ ಸೈನಿಕವಾಗಿದೆ. ಈ ಪ್ರೀತಿ ಪ್ರೇಮಕ್ಕೆ ಬಡತನ ಸಿರಿತನ ಮೇಲು ಕೇಳು ಎಂಬ ಭೇದವಿಲ್ಲ ಎಲ್ಲರಿಗೂ ಪ್ರೇಮನ್ನು ಚಿಲುಮೆಗಾಗಿ ನೀಡುತ್ತದೆ. ನೊಂದು ಬೆಂದ ಜನರಿಗೆ ಹಾಗೂ ಹತಾಶೆ ನಿರಾಶೆಗೊಂಡ ಮನಸ್ಸುಗಳಿಗೆ ಭರವಸೆಯ ಬೆಳಕಾಗುತ್ತದೆ. ಕಲ್ಲಿನ ಹೃದಯವುಳ್ಳ ಜನರ ಮನಸ್ಸು ಕರಗಿಸುವ ಶಕ್ತಿ ಈ ಪ್ರೇಮಕೆ ಇದೆ. ನಂಬಿದವರಿಗೆ ಪರಮಜ್ಯೋತಿ ಸದಾ ಆನಂದ ಸಂತೋಷ ಕೊಡುವಂತದ್ದು ಹೀಗಾಗಿ ಪ್ರೀತಿ ಕೇವಲ ಭೋಗಕಾಮದ ವಸ್ತುವಲ್ಲ ಅದು ಸರ್ವರನ್ನು ಕಾಪಾಡುವ ಸೈನಿಕನಂತೆ ಕೆಲಸ ಮಾಡುತ್ತದೆ ಎಂದು ಕವಯತ್ರಿ ಪ್ರೀತಿ ಬಗೆಗಿನ ಚಿಂತನೆ ಅದರ ಶ್ರೇಷ್ಠತೆ ಕವಿತೆಯಲ್ಲಿ ತಿಳಿಸಿ ಕೊಡುತ್ತಾರೆ.

ಅರಸಿ – ಸರಸಿ ಕವಿತೆಯಲ್ಲಿ

ಬರಸೆಳೆದು ಚುಂಬಿಸುವೆಯಾ…?
ಹಂಬಲಿಸುತ್ತಿದೆ ನನ್ನೀ..ಮನ
ಕೊಡುಕೊಳುವಿಕೆಯಾಗಲಿ ಮುಖಾಮುಖಿ
ಪ್ರೇಮ ಸಹಕಾರದೊಳಗಾಗುವೆ ನಾ ಪರಮ ಸುಖಿ..

ನಾಚಿಕೆ ಹಾಗೂ ಬಿಗುಮಾನವು ಪ್ರೀತಿ ಸಹಜವಯವಮಾನದ ಬೆಡಗಿಯು ತನ್ನೆದುರಿಗೆ ಬರುವ ಹುಡುಗನು ಕಂಡು ಬಿಗುಮಾನ ತಾಳವಳು ಆದರೆ ನಿಜವಾಗಿಯೂ ಹೃದಯದಲ್ಲಿ ಹರುಷವನ್ನು ಹಾಗೂ ಅಭಿಮಾನವನ್ನು ತುಂಬಿಕೊಳ್ಳುವಳು. ಸ್ತ್ರೀಯು ಸಹಜವಾಗಿ ತನ್ನ ಭಾವನೆಗೆ ತೋರಿಸಿಕೊಳ್ಳದೆ ಚಡಪಡಿಸುವ ಹಾಗೂ ಸಂತೋಷಗೊಳ್ಳುವ ಭಾವನೆ ಇಲ್ಲಿಯ ಕವಿತೆ ಒಡಂಬಡಿದೆ. ಮುಂದುವರೆದು ಪುರುಷರ ಬಗೆಗಿನ ಹೆಣ್ಣಿನ ಒಳ ಬಯಕೆಗಳನ್ನು ಕವಿತೆಯಲ್ಲಿ ಬಿಚ್ಚುಡುತ್ತಾರೆ. ಹುಡುಗಿ ಒಬ್ಬಳು ಪುರುಷನ ಪ್ರೇಮಕ್ಕೆ ಸಂಪೂರ್ಣ ಮನಸೊತು ಅವನ ಪ್ರೀತಿ ಉಂಟಾದಾಗ ಅವಳ ತನು ಮನದಲ್ಲಿ ಬದಲಾವಣೆ ಕುರಿತು ಇಲ್ಲಿನ ಕವಿತೆ ಕಟ್ಟಿಕೊಡುತ್ತಾರೆ.

ಕಮಲದ ಕಾಂತಿಯ
ಕಣ್ಣಲಿ ತಂದವನು
ಹೃದಯ ಹೊಸ್ತಿಲಲ್ಲಿ
ಸ್ಥಿರವಾಗಿ ನಿಂತವನು.

ಅಷ್ಟೇ ಅಲ್ಲದೆ ಅವನ ಅಂತಕಣದ ಅರಸನಾಗಿದ್ದಾನೆ, ಭಾವನೆಗಳ ನೇಯ್ಗೆಕಾರ ಆಗಿದ್ದಾನೆ. ಅವನ ಗುಣಗಾಣ ಮಾಡುವ ಹೆಣ್ಣುಮನಸು, ಹೃದಯ ಅವನ ಆಲಿಂಗನಕ್ಕೆ ಪರಿತಪಿಸುವ ನೋವು ತಳಮಳ ಕವಿತೆಯಲ್ಲಿ ಕಟ್ಟಿಕೊಂಡಿದ್ದಾರೆ. ಅವಳಿಗೆ ಅವನು ನೀಡುವ ಹೊಸತನದ ಪ್ರೀತಿಗೆ ಸೋತು ಹೃದಯಾಳದ ನಮಸ್ಕಾರ ಅಥವಾ ಕೃತಜ್ಞತೆ ಹೇಳುತ್ತಾಳೆ. ಉಸಿರಿರುವರೆಗೂ ಜೊತೆಯಾಗಿರುವಂತೆ ಕೇಳಿಕೊಳ್ಳುತ್ತಾಳೆ. ಹೆಣ್ಣಿನ ಮನಸ್ಥಿತಿ ಅವಳ ಹೃದಯ ವೈಶಾಲತೆ ಬಿಚ್ಚಿಡುತ್ತಾರೆ.

ನೀನು ನಾನು ಕವಿತೆಯಲ್ಲಿ. ಸಾವಿರ ಕನಸುಗಳು ಹೊಂದಿರುವ ಎರಡು ಮನಸುಗಳು
ನಡುವೆ ನಡೆದ ಮಾತುಕತೆ ತಮ್ಮ ಮುಂದಿನ ಜೀವನ ಹೇಗಿರಬೇಕು,ಕೇವಲ ಬ್ರಾಂತಿಯ ಬದುಕು ಬೇಡ ಇಬ್ಬರು ಒಂದಾದ ಆ ಸುಖ ಶಾಂತಿ ಬದುಕಿಗೆ ಹಾತೊರೆಯುತ್ತಿರುವೆ. ನಾನು ನಾಚಿಕೆಯಿಂದ ಕೂಡಿರುವ ಮೂಗ್ಗಿನ ಹೂ ನಾ, ನಿನ್ನ ಪ್ರೀತಿಗೆ ನನ್ನ ಅರಳಿಸು ಸದಾ ಆನಂದ ನಮ್ಮ ಬಾಳಲ್ಲಿ ಇರಲಿ ಎಂಬ ಆದರ್ಶ ಪ್ರೇಮದ ಬಗೆಯಿರುವ ತವಕ ತಳಮಳವನ್ನು ಇಲ್ಲಿ ಅಭಿವ್ಯಕ್ತಿಗೊಂಡಿದೆ. ಹೆಣ್ತನದ ಬಯಕೆಯಲ್ಲಿ ಮದುವೆಯಾಗಿ ಹೊಸ ಬದುಕು ಕಟ್ಟಿಕೊಳ್ಳುವುದು, ಈ ಬದುಕಿಗಾಗಿ ತನ್ನ ಗೆಳೆಯನನ್ನು ಕೇಳಿಕೊಳ್ಳುವ ಆ ಹೆಣ್ಣಿನ ಅಪಾರ ಬದುಕಿನ ಬಗ್ಗೆ ಇರುವ ಕನಸು ಸುಂದರವಾಗಿ ಮೂಡಿಬಂದಿದೆ.

ವಸುಂಧರೆಯ ಫಸಲಿಗೂ,                        ಮುಂಭಾಗಲಿನ ಹೊಸಿಲಿಗೂ
ಅರಿಶಿಣ ಕುಂಕುಮದ
ಮಾಂದಳಿರಿನ ತೋರಣ
ಸಿಹಿ ಭಕ್ಷ್ಯದ ಹೂರಣ
ಸಿಂಗರಿಸುವ ಸ್ವೀಕರಿಸು
ನವಿರೇಳಲಿ ಹೆಣ್ತನ.

ಯುವತಿ ತನ್ನ ಸ್ವಿಕರಿಸಿದ ಮಾತ್ರ ಹೆಣ್ತನಕ್ಕೆ ಒಂದು ಬೆಲೆ ಇತ್ಯಾದಿ ಕನಸು ತುಂಬಿದ ಹೆಣ್ಣಿನ ತನ್ನೊಳಗಿದ್ದ ಕನಸು ಹೇಗೆ ಇನಿಯನಿಗೆ ಹೇಳುತ್ತಾಳೆ ಎಂಬುದು ಚಿತ್ರಿಸಿದ್ದಾರೆ.

ಸಿರಿ ಮಲ್ಲಿಗೆ ಕವನ ಸಂಕಲನವು ವೈವಿಧ್ಯತೆಯಿಂದ ಕೂಡಿರುವುದು, ಪ್ರೀತಿ-ಪ್ರೇಮ, ದಾಂಪತ್ಯ, ಗುರು ಭಾವೈಕ್ಯತೆ,ಸಮನ್ವಯತೆ ರೈತ, ಗಣಪತಿ,ಮಾನವೀಯತೆ, ಮಾತು, ನಾಡು-ನುಡಿ,ಮಳೆ ಇತ್ಯಾದಿ ಕುರಿತು ಕಾವ್ಯದ ವಸ್ತು ಆಯ್ದುಕೊಂಡು ಕಟ್ಟಿರುವುದು ಇಲ್ಲಿ ನೋಡಬಹುದು.

ಗುರುಪೂರ್ಣಿಮೆ ಕವಿತೆಯಲ್ಲಿ.
ಭಾರತೀಯ ಸಂಸ್ಕೃತಿಯು ಸನಾತನ ಪರಂಪರೆ ಆಚರಣೆಗಳಲ್ಲಿ ಗುರು ಪೂರ್ಣಿಮೆ ಕೂಡ ಒಂದು. ಹಿಂದಿನ ಶಿಕ್ಷಣವು ಗುರುಕುಲಗಳಲ್ಲಿ ನಡೆದುಕೊಂಡು ಬರುತ್ತಿತ್ತು ಆದರೆ ಈಗ ಅದು ಕಾಣೆಯಾಗಿದೆ. ಈ ಗುರುಕುಲ ಶಿಕ್ಷಣದಿಂದ ಮಕ್ಕಳು ಪಂಡಿತರಾಗುತ್ತಿದ್ದರು ಸ್ವತಃ ಶಿಕ್ಷಕಿ ಆಗಿರುವ ಶ್ರೀಮತಿ ಪ್ರಮೀಳಾ ಅವರು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಶಿಶು ಗೀತೆ ರಚಿಸುತ್ತಾರೆ. ಶಿಕ್ಷಣ, ಸಂಸ್ಕೃತಿ, ಗುರುಪೂರ್ಣಿಮೆ ಮಹತ್ವವನ್ನು ಈ ಕವಿತೆಯಲ್ಲಿ ತಿಳಿಸಲು ಪ್ರಯತ್ನಿಸಿದ್ದಾರೆ.

ಭಾರತ ದೇಶವು ಭಾಷೆ,ಧರ್ಮ,ಜಾತಿ,ಮತ ಇತ್ಯಾದಿಗಳಿಂದ ವೈವಿಧ್ಯತೆಯಿದ್ದರೂ ಏಕತೆಯಿಂದ ಕೂಡಿದೆ. ನಮ್ಮ ಸಂಸ್ಕೃತಿಯಲ್ಲಿ ವೈವಿಧ್ಯತೆಯಿದ್ದರೂ ನಮ್ಮೆಲ್ಲ ಜೀವನ ಧನ್ಯತೆಗೆ ಒಂದು ಗೂಡಿಬಾಳುವುದು ಪ್ರಗತಿಯಿದೆ ಇಲ್ಲದಿದ್ದರೆ ನಮ್ಮ ಅದೂತಿಗೆ ನಾವೇ ಕಾರಣರಾಗುತ್ತೇವೆ ಎಂದು ಎಚ್ಚರಿಸುತ್ತಾ ಸಮಷ್ಠಿ ಪ್ರಜ್ಞೆಯಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯ.ಉತ್ತಮ ಬದುಕು ನಡೆಸುವ ಸಾಧ್ಯವಾಗುತ್ತದೆ. ವಿವಿಧ ಧರ್ಮ ಜಾತಿ, ಅತಿ ಧಾರ್ಮಿಕತೆಯಿಂದ ದೇಶದೆಲ್ಲಡೆ ಅಶಾಂತಿ ಮನೆ ಮಾಡಿರುವುದು ಕಂಡು ಕವಯತ್ರಿ ತಮ್ಮ ಕವಿತೆಯ ಸಾಲುಗಳಲ್ಲಿ..

ಮನಸ್ಸು ಮತಿಯವಾಗದಿರಲಿ
ಮಮತೆಯ ಬಂದ
ಅದ್ಭೀತೀಯವಾಗಿರಲಿ
ಹಾಡೋಣ ಕೂಡಿ ಭಾವೈಕ್ಯತೆಯ ಗಾನ
ಸಾಗಲಿ ಹೀಗೆ ನಮ್ಮ ಸಹಿಷ್ಣುತೆಯ ಯಾನ.

ಧರ್ಮ ಜಾತಿ ಹೆಸರಲ್ಲಿ ಆಗುತ್ತಿರುವ ಕೊಲೆ ಸುಲಿಗೆ ಕಂಡು ಕವಯತ್ರಿ ಧಾರ್ಮಿಕ ಸಹಿಷ್ಣುತೆಯಾನ ಹಾಡೋಣ ಕೂಡಿ ಗಾನ ಎಂದು ದೇಶದ ಜನರಿಗೆ ಕರೆ ಕೊಡುತ್ತಾರೆ. ಪ್ರಗತಿಪರ ವಿಚಾರವನ್ನು ಈ ಕವಿತೆಯಲ್ಲಿ ಕಾಣಬಹುದಾಗಿದೆ.

ಪುರುಷರು ತನ್ನ ಸ್ವಾರ್ಥಕ್ಕಾಗಿ ಹೆಣ್ಣನ್ನು ಹೇಗೆ ಬಲಿಪಶು ಮಾಡಿಕೊಂಡು ಅಹಂಕಾರದಿಂದ ಇಂದು ಮೆರುತ್ತಿರುವುದು ಕಂಡು ಕವಯತ್ರಿ ವಿಷಾದ ವ್ಯಕ್ತಪಡಿಸುತ್ತಾರೆ. ನಿಜಕ್ಕೂ ಈ ಪುರುಷ
ಮುಟ್ಟಾದ ಮೂರು ದಿನಕ್ಕೆ ಹುಟ್ಟಿ ಬಂದಿರುವನು,ತಾನು ಯಾರ ಹೊಟ್ಟೆಯಿಂದ ಬಂದಿರುವುದೆಂಬ ಪ್ರಜ್ಞೆ ಇಲ್ಲದೆ ಅಹಂಕಾರದಿಂದ ವರ್ತಿಸುತ್ತಿರುವ ಪುರುಷರ ಈ ನಡೆ ಸಾಕು ಎಂಬ ದಿಟ್ಟ ಪ್ರತಿಭಟನೆ ಮಾಡುತ್ತಾರೆ. ಪುರುಷ ಸಮಾಜದ ವಿಕೃತಿಯನ್ನು ಕವಿ ಪ್ರತಿಭಟಿಸುತ್ತಾ ಸ್ತ್ರೀ ತನ್ನ ಮೇಲೆ ಆಗುವ ಅನ್ಯಾಯ ,ಅನೀತಿ, ಅತ್ಯಾಚಾರ ಪ್ರತಿಭಟಿಸಿದ್ದಾಗ ಮಾತ್ರ ಈ ಸೃಷ್ಟಿಯಲ್ಲಿ ಸಮಾನತೆಯಿಂದ ಬದುಕಲು ಸಾಧ್ಯ. ಹೀಗೆ ಗಂಡಿನ ತಾರತಮ್ಯ ನೀತಿಯನ್ನು ಪುರುಷ – ಅಹಂ ಎಂಬ ಕವಿತೆಯಲ್ಲಿ ಕವಯತ್ರಿ ಬಿಚ್ಚಿಡುತ್ತಾರೆ.

ಶ್ರೇಷ್ಠ ಕನಿಷ್ಠ ,ಮೇಲು ಕೀಳು ಯಾವುದು ಮುಖ್ಯವಲ್ಲ ಪರಸ್ಪರ ನೈಸರ್ಗಿಕ ಸಮನ್ವಯತೆಯನ್ನು ನಾವು ನೋಡಿದಾಗ ಮಾತ್ರ ಈ ಜೀವ ಸಂಕುಲದಲ್ಲಿ ಮಾನವ ಪ್ರಗತಿ ಕಾಣಲು ಸಾಧ್ಯ. ಹೀಗಾಗಿ ಸಮನ್ವತೆ ಮೇಲೆ ನಮ್ಮ ಪ್ರಗತಿ ,ಅದೂತಿ ಅಡಗಿದೆ. ಒಂದು ಮರದಲ್ಲಿ ಅರಳುವ ಹಣ್ಣಿಗೆ ಬೇರು ಅಥವಾ ನೀರಿಗೂ ಸಮನ್ವಯದಿಂದ ಮಾತ್ರ ಸಾಧ್ಯ. ಹಾಗೆ ನಭೋಮಂಡಲದಲ್ಲಿ ಸದಾ ಬೆಳಗುವ ಚಂದ್ರ ಸೂರ್ಯನಿಗೂ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಹಾಗೆ ಈ ಸಮಾಜದಲ್ಲಿ ಮೇಲು-ಕೀಳು ಭೇದ ಭಾವ ತರವಲ್ಲ ಪ್ರತಿ ಮಾನವರು ಸಮನ್ವಯತೆಯ ಜೀವನ ನಡೆದಾಗ ಅದಕ್ಕೊಂದು ಅರ್ಥ ಬರುತ್ತದೆ. ಇಲ್ಲವಾದರೆ ಹೋರಾಟ, ಕ್ರಾಂತಿ,ಕಗ್ಗೊಲೆಗೆ ಎಡೆ ಮಾಡಿ ವಿನಾಶಕ್ಕೆ ಹಾದಿ ಮಾಡಿಕೊಡುತ್ತದೆ.ನಿಸರ್ಗದಂತೆ ಮನುಷ್ಯರು ಬದುಕುವಂತೆ ಸಾಮಾಜಿಕ ಕಳಕಳಿ, ಜೀವ ಹಾಗೂ ಜೀವನ ಪ್ರೀತಿ ಇಲ್ಲಿನ ಸಮನ್ವಯತೆ ಕವಿತೆಯಲ್ಲಿ ಮೂಡಿಬಂದಿದೆ.

ಮಾನವ ಕುಲ ಕೋಟಿಗೆ ಹಸಿವಿನ ಹೊಟ್ಟೆಯನ್ನು ತುಂಬಿಸುವ ರೈತ ಭೂತಾಯಿ ನಿಜವಾದ ಸೇವಕನಾಗಿದ್ದಾನೆ. ನಿಜವಾಗಿಯೂ ಎಲ್ಲಾ ಧಾರ್ಮಿಕ ರಾಜಕೀಯ ನಾಯಕನಿಗೆ ಇವನೆ ನಾಯಕ. ಸದಾ ಭೂತಾಯಿ ಸೇವಕನಾದ ಕೃಷಿಕ ನಮ್ಮೆಲ್ಲರ ಬಾಳು ಬೆಳಗುವನು. ಯಾವುದೇ ಜಾತಿ ಭೇದಭಾವವಿಲ್ಲದೆ ಎಲ್ಲರನ್ನೂ ಸಾಕಿ ಸಲಹುವನ್ನು ರೈತನಾಗಿದ್ದಾನೆ ಇವನು ಮಾನವ ಪ್ರೀತಿ ಹಾಗೂ ಜೀವ ಪ್ರೀತಿಗೆ ನಾವೆಲ್ಲರೂ ನಮಿಸೋಣ ಎಂಬ ಕೃತಜ್ಞತೆಯ ಭಾವ ಕವಯಿತ್ರಿಯದು.

ಪ್ರತಿ ಅಗಳು ಬೆವರಿನೊಡೆಯನ
ಫಸಲು
ನಮಿಸೋಣ
ಅವನಿಗೆ ಅಡಿಮುಟ್ಟಿಸಿ
ನಮ್ಮ ನೊಸಲು.

ರೈತನ ಕಾಯಕನಿಷ್ಠೆಗೆ ನಾವು ನಮ್ಮ ಹಣೆಮಣಿದು, ಜೀವನದಲ್ಲಿ ಧನತ್ಯೆ ಕಾಣಲು ಕವಯತ್ರಿ ಮನತುಂಬಿ ರೈತನ ಗುಣಗಾನ ಮಾಡುತ್ತಾರೆ.

ಶತಶತಮಾನಗಳಿಂದ ಮೇಲ ವರ್ಗದವರಿಂದ ತಳ ಸಮುದಾಯವು ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಂಸ್ಕೃತಿಕವಾಗಿ ಶೋಷಣೆಗೆ ಒಳಪಟ್ಟಿತು. ಈ ಶೋಷಣೆ ಅನ್ಯಾಯದ ಬಿಡುಗಡೆ ಮಾಡಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ದಮನಿತರ ಪರವಾಗಿ ಧನಿಯುತ್ತಿದ್ದರು. ತಮ್ಮ ಜೀವನ ಹೋರಾಟವನ್ನು ಸಂಪೂರ್ಣವಾಗಿ ತ್ಯಾಗ ಇವರಿಗಾಗಿ ಮಾಡಿರುವವರು. ಶತಮಾನಗಳಿಂದ ಮುಟ್ಟು ಮೈಲಿಗೆ ಎಂಬ ವಿಚಾರಕ್ಕೆ ಬಂದವರೆ ವಿನಃ ಅದರ ದಾಸ್ಯದ ಬಿಡುಗಡೆಗೆ ಅಂಬೇಡ್ಕರ್ ಹೊರತು ಯಾರು ಗಮನಹರಿಸಲಿಲ್ಲ. ಅಂಬೇಡ್ಕರ್ ಈ ತಳ ಸಮುದಾಯದ ನಡುವೆ ಬೆಳೆದು ಅವರ ಬಿಡುಗಡೆಗಾಗಿ ಅಕ್ಷರ ಕಲಿತು ಉಜ್ವಲವಾಗಿ ಹಣತೆಯಂತೆ ಬೆಳಕಾದವರು.
ಕಷ್ಟ ಸಂಕಷ್ಟಗಳ ಮಧ್ಯೆ ಬೆಳೆದವರು ಯಾವುದಕ್ಕೂ ಎದೆಗೊಂದದೆ ಮುನ್ನಡೆದು ಸಂವಿಧಾನ ರೂಪಿಸಿದರು. ತನ್ನ ಕುಲಬಾಂಧವರಿಗೆ ಶಿಕ್ಷಣ ಪಡೆಯಿರಿ, ಜೀವನದಲ್ಲಿ ಸದ್ಗತಿ ಕಾಣಿ ಎಂದು ಶಿಕ್ಷಣದ ಮಹತ್ವವನ್ನು ಅಂಬೇಡ್ಕರ್ ತಿಳಿಸಿರುವ ಪರಿ ವಿಶಿಷ್ಟ ಕವಿತೆಯಲ್ಲಿ ಸಮಾಜಿಕ ಸಮಾನತೆಗೆ ದುಡಿದ ಅಂಬೇಡ್ಕರರ ಆದರ್ಶಕ್ಕೆ ಕವಯತ್ರಿ ಪ್ರಣಾಮ ಸಲ್ಲಿಸುತ್ತಾರೆ. ಇಂದು ಮಾನವ ಆಶೆ ಆಕಾಂಕ್ಷಳಿಗೆ ಮಿತಿ ಇಲ್ಲದೆ ಬದುಕುತ್ತಿದ್ದಾನೆ. ತನ್ನ ಸ್ವಾರ್ಥದ ಜೀವನಕ್ಕೆ ಮಾತ್ರ ಸೀಮಿತನಾಗಿದ್ದಾನೆ. ಬಡವ ಬಲ್ಲಿದರಿಗಾಗಿ ಒಂದಿಷ್ಟು ಸಹಾಯ ಹಸ್ತಚಾಚದೆ ಸಾಗುತ್ತಿದ್ದಾನೆ. ಇದೆಲ್ಲವೂ ಮನಗಂಡ ಕವಯತ್ರಿ ಇನ್ನೊಬ್ಬರಿಗೆ ನಾವು ನೀಡುವ ಸಹಾಯ ನಮ್ಮ ಬದುಕಿಗೆ ಒಂದು ಅರ್ಥ ಬರುತ್ತದೆ. ಮಾನವೀಯತೆಯಿಂದ ನಾವು ಬದುಕಬೇಕು ಎಂಬ ಸಮಾಜಿಕ ಹಾಗೂ ಮನುಷ್ಯತ್ವದ ಪ್ರೀತಿ ಬಗ್ಗೆ ಮಾನವೀಯತೆ ಮರೆಯಬೇಡ ಮನುಜ ಎಂಬ ಕವಿತೆಯಲ್ಲಿ ಹೇಳುತ್ತಾರೆ.

*ದುಡ್ಡು ದುಡ್ಡೆಂಬ ಹಾದಿ ಹಿಡಿದು ದಡ್ಡನಾಗಬೇಡ
ಖಾಲಿ ಕೈಯಲ್ಲೇ ಮಸಣ ಸೇರುವೆ ತಿಳಿದುಕೋ ಮೂಡ
ಜನ್ಮವಿತ್ತು ಜಗದ ತೋರಿದವರನ್ನು ನೀ ದೂರ ಮಾಡಬೇಡ
ಮನದಿ ಕರುಣ ತುಂಬಿಕೊಂಡು ಮಲ್ಲಿಕಾರ್ಜುನನ ಕಾಣ.*

ಜಗತ್ತಿನ ಬಹುತೇಕ ಜನರು ದುಡ್ಡು ದುಡ್ಡು ಎಂದು ಹಪಾಹಪಿತನದ ಬದುಕನ್ನು ನಡೆಸುತ್ತಿದ್ದಾರೆ. ಸ್ನೇಹ ಸಂಬಂಧಗಳ ಬೆಲೆ ಕೊಡದೆ ಅನಾಗರಿತನದ ಬದುಕು ನಡೆಸುತ್ತಿರುವುದು ಕಂಡು ಕವಯತ್ರಿ ಬೇಸರಗೊಂಡು ಕಾವ್ಯ ಬರೆದಂತಿದೆ. ಎಷ್ಟೆಲ್ಲಾ ಸಂಪಾದನೆ ಮಾಡಿದರು ಸತ್ತ ಮೇಲೆ ಏನು ತೆಗೆದುಕೊಂಡು ಹೋಗೋದಿಲ್ಲ ಹುಟ್ಟು ಸಾವಿನ ಮಧ್ಯೆ ಇರುವ ಈ ಬದುಕಿನಲ್ಲಿ ಎಲ್ಲರೊಂದಿಗೆ ಪ್ರೀತಿ, ಸ್ನೇಹ ,ಬಂಧು-ಬಳಗ,ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಂಡು ಹೋಗಬೇಕು. ಎಂಬ ಸಾಮಾಜಿಕ ಸಂಬಂಧಗಳು ನಶಿಸುತ್ತಿರುವುದು ಕಂಡು ಈ ಕವಿತೆ ಎಚ್ಚರಿಸುತ್ತದೆ. ಇದು ಉತ್ತಮ ಬೆಳವಣಿಗೆ ಅಲ್ಲಾ ಎಂದು ತಿಳಿ ಹೇಳುತ್ತದೆ. ಸದಾ ಮನಸಲ್ಲಿ ಕರುಣೆ, ಪ್ರೀತಿ, ವಾತ್ಸಲ್ಯದ ಬದುಕು ನಮ್ಮ ನಾಗರಿಕ ಸಮಾಜಕ್ಕೆ ತರುವಂತೆ ಬೋಧನೆ ಮಾಡುತ್ತ ಸಾಮಾಜಿಕ ಮೌಲ್ಯಗಳ ಬಗ್ಗೆ ಚರ್ಚಿಸುತ್ತಾರೆ. ಮಾತು ಕವಿತೆಯಲ್ಲಿ ಮಾತೆಂದರೇನು, ಮಾತಾಡುವ ರೀತಿ ಮಾತಿನ ಮಹತ್ವವನ್ನು ಕಟ್ಟಿಕೊಡುತ್ತಾರೆ. ಅನೇಕ ಕವಿ,ಸಾಹಿತಿ, ಶರಣರು, ಸಂತರು ಈ ಮಾತಿನ ಬಗ್ಗೆ ಹೇಳುತ್ತಾರೆ. ಜಗತ್ತಿನ ಎಲ್ಲಾ ಪ್ರಗತಿಗೆ ಮೂಲ ಮನುಷ್ಯನ ಮಾತು ಕಾರಣವಾಗಿದೆ. ಮಾತು ಕೆಲವು ಸಲ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಗೊಂಡರೆ; ಕೆಲವು ಸಲ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ ಹೀಗಾಗಿ ನಾವು ಆಡುವ ಮಾತು ಅರ್ಥಬದ್ಧ ಹಾಗೂ ವಿವೇಚನಾ ಪೂರಕವಾಗಿರಬೇಕು.
ಮಾತಿನ ಕುರಿತು…..

ಒರಟು ನುಡಿಯೊ ಬಿರುಬಿಸಿಲಿನಂತೆ
ಮೆಲುನುಡಿಯು ಕೋಗಿಲೆಯ ಒಲಿದಂತೆ
ಸೊಲ್ಲು ಸಂಗೀತದ ಸುಧೆಯಾಗಲಿ,
ಮಲೆಯ ಮಾರುತದ ಮಂದ ನೀಲವಾಗಲಿ.

ಮನುಷ್ಯ ತನ್ನವರ ಎದುರು, ಕಂಡವರ ಜೊತೆಗೆನ ಆಡುವ ಮಾತಿನ ರೀತಿ ಬಗ್ಗೆ ಹೇಳುತ್ತಾರೆ. ಅದು ಅಂತಃಕರಣದಿಂದ ಕೂಡಿದ್ದು; ಅಂತ ಕಲಹ ಅಡಗಿಸುವಂತಾಗಬೇಕು. ಸತ್ಯ ಮಾತನಾಡುತ್ತಾ ಮನ ಮನಸ್ಸುಗಳು ಒಂದು ಗುಡುವ ಹಾಗೆ ಮಾತನಾಡಬೇಕು ಎಂದು ಹೇಳುತ್ತಾರೆ. ಬೇರೆಯವರಿಗೆ ನೋವಾಗದಂತೆ ಒರಟಾಗಿ ಮಾತನಾಡಿದರೆ ಅದ ಬಿರು ಬಿಸಿಲಿನಿಂದ ಆಗುವ ಚಡಪಡಿಕೆ ನೋವು ಹೇಗೆ ಹಾಗೆ ಆಗುವುದು. ಒರಟು ಮಾತಿನ ಕೆಟ್ಟ ಪರಿಣಾಮ ಹೇಳುತ್ತಾ ಮೃದು ಮಾತು ಕೋಗಿಲೆ ಹಾಗೆ ಆಡಬೇಕು ಅದರಿಂದ ನಮ್ಮ ಮಾತು ಸಂಗೀತದಂತೆ ಆನಂದ ಕೊಡುತ್ತದೆ. ಮಾತು ಮಾತಿನ ಬಗೆಗಿನ ಮಹತ್ವ ಅದರ ಪರಿಣಾಮ ಕುರಿತು ಇಲ್ಲಿನ ಕವಿತೆ ಅರ್ಥವತ್ತಾಗಿ ಮೂಡಿಬಂದಿದೆ. ಕರಿಮೊಗದೊಡೆಯ ಈ ಕವಿತೆಯನ್ನು ಧಾರ್ಮಿಕವಾಗಿ ತೆಗೆದುಕೊಳ್ಳದೆ ಶೈಕ್ಷಣಿಕವಾಗಿ ನೋಡಬಹುದಾಗಿದೆ. ಮಕ್ಕಳ ಗೀತೆ ರೂಪದಲ್ಲಿ ಮೂಡಿ ಬಂದ ಈ ಕರಿಮೊಗದೊಡೆಯ ಕವಿತೆ ಗಣಪತಿಯ ಕುರಿತು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಭಾವ ಭಾಷೆಯನ್ನು ಇಲ್ಲಿ ಕವಯತ್ರಿ ಬಳಸುತ್ತಾರೆ. ಸಂಪ್ರದಾಯ ಬದ್ಧ ಆಚರಣೆಗೆ ಮುನ್ನ ಶ್ರೀ ಗಣಪತಿಯನ್ನು ಪೂಜಿಸುವ ಪರಿಪಾಠವಿದೆ. ಶಂಕರನ ಸುತನಾದ ಭವ ಭಯವನ್ನು ದೂರ ಮಾಡುವ ಮೋದಕ ಪ್ರಿಯನು, ಆತ್ಮಲಿಂಗವನ್ನು ಪಡೆದವನು ನಮ್ಮ ಇಹ ಮತ್ತು ಪರದ ಪಾಪವನ್ನು ಕಳೆಯುವನು. ಅವನನ್ನು ಪೂಜಿಸುವುದರಿಂದ ಬದುಕು ಪುನೀತವಾಗುತ್ತದೆ ಎಂದು ಹೇಳುವುದು ನಮ್ಮ ಪುರಾಣ ಇತಿಹಾಸ. ಮಕ್ಕಳಲ್ಲಿ ವಿದ್ಯಾ ಬುದ್ಧಿ ಬರುವಂತೆ ಕೇಳಿಕೊಳ್ಳುವ ದೇವರು ಗಣಪತಿ ಆಗಿದ್ದಾನೆ ಎಂಬ ಭಾವ ಬಿತ್ತುವ ಜೊತೆಗೆ ವಿದ್ಯಾ ಆರಂಭಕ್ಕೆ ಗಣೇಶ ಪೂಜೆ ಮಾಡಬೇಕು ಇದು ಒಂದು ರೀತಿಯ ಆತ್ಮ ನಂಬಿಕೆ ಮೂಡಿಸುವ ರೀತಿಯಲ್ಲಿ ಈ ಕವಿತೆ ಮೂಡಿ ಬಂದಿದೆ.

ಕರ್ಣ ಎಂಬ ಕವಿತೆಯಲ್ಲಿ, ಮಹಾಭಾರತದ ಕರ್ಣ ಬದುಕಿನಲ್ಲಿ ವಿಧಿ ಆಟವಾಡಿರುವ ಬಗ್ಗೆ ಅವನಿಗೆ ಉಂಟಾದ ನೋವು ಅವಮಾನ ಇತ್ಯಾದಿಗಳನ್ನು ವಿವರಣೆ ಕೊಡುತ್ತ ಅವುಗಳಿಂದ ಕರ್ಣನ ಅಸಾಮಾನ್ಯವಾದ ಬದುಕನ್ನು ಹೇಗೆ ಕಟ್ಟಿಕೊಂಡಿದ ಎಂಬುದು ಹೇಳುತ್ತಾರೆ. ಅವನ ಧೈರ್ಯ ಸಾಹಸ ತಾಳ್ಮೆ ಕವಿತ್ರಿ ಮೆಚ್ಚುತ್ತಾರೆ. ಅಧುನಿಕ ಈ ಕಾಲಘಟ್ಟದಲ್ಲಿ ಕರ್ಣನ ಗುಣಗಳು ಅನ್ವಯಿಸುವುದಾದರೆ ಇಂದು ಅದೆಷ್ಟೂ ಜನರು ನೋವು, ಅವಮಾನ ,ಸಂಕಟ ಪಡುತ್ತಿರುವ ತಾಳದೆ ಆತ್ಮಹತ್ಯೆ ಇತ್ಯಾದಿಗೆ ಶರಣಾಗುತ್ತಿದ್ದಾರೆ.ಇಂಥವರಿಗೆ ಈ ಕರ್ಣ ಆದರ್ಶಪ್ರಿಯ ಆಗಬೇಕು ಬದುಕಲ್ಲಿ ಸುಖ ಶಾಂತಿಗೆ ಅಂತಿಮ ಹೋರಾಟ ಅನಿವಾರ್ಯ ಹೀಗಾಗಿ ಹೋರಾಟದ ಬದುಕು ಕಟ್ಟಿಕೊಳ್ಳಬೇಕು ಎಂದು ಕವಯತ್ರಿಯ ಅಭಿಲಾಷೆಯಾಗಿದೆ.

ಸಾಹಿತ್ಯ ಒಡನಾಟದಲ್ಲಿ ಇರುವ ಕವಯತ್ರಿ ಸದಾ ಸ್ನೇಹವನ್ನು ಬಯಸುವರು. ಆಕಸ್ಮಿಕವಾಗಿ ಸಿಕ್ಕರು ಕೂಡ ಪರಿಚಯ ಅಳಿಯದ ಹಾಗೆ ಮುಂದುವರೆಯಲಿ ಯಾಕೆಂದರೆ ಸಾಹಿತ್ಯ ಸದಾ ಮಳೆಯ ರೀತಿಯಲ್ಲಿ ಸುರಿಯಲಿ; ಜೀವ ಮತ್ತು ಜೀವನ ಉಸಿರಾಡುವುದು ಅದು ನಂಬಿಕೆ ಹಾಗೂ ಒಳ್ಳೆಯ ಭಾವನೆಗಳ ಬೆಸುಗೆಯಿಂದ. ಜೀವನ ಆರಂಭದಿಂದ ಇಲ್ಲಿಯವರೆಗೆ ಅನೇಕ ಜನರು ಪರಿಚಯ ಆದರೂ ಆದರೆ ಕೆಲವರು ಮಾತ್ರ ನಮ್ಮ ಹೃದಯದ ಒಳಗೆ ಧ್ವನಿಸುವರು. ಪರಸ್ಪರ ವಿಚಾರ ಅಭಿಪ್ರಾಯ ಸಮಾನತೆ ಇದ್ದಾಗ ಮಾತ್ರ ಈ ರೀತಿ ಸಂಬಂಧಗಳು ಬೆಸೆಯುವವು. ಅನೇಕ ನಾಗರಿಕತೆ ಉಗಮ ನಾಶಕ್ಕೆ ಈ ಭಾವನೆಯು ಮುಖ್ಯ ಹಾಗೆ ಸಾಮಾಜಿಕ ಜೀವನ ರೂಪಗೊಳ್ಳುಲು ಸಾಧ್ಯವಾಗಿದೆ. ಎಂಬ ವಿಚಾರವನ್ನು ತಮ್ಮ ನಿವೇದನೆ ಕವಿತೆಯಲ್ಲಿ ಸುಂದರವಾಗಿ ಸ್ನೇಹದ ಕುರಿತು ಹೇಳುತ್ತಾರೆ.

ಈ ಕಾಲದ ಭಯಾನಕ ರೋಗ ಕೇವಲ ಒಂದು ಪ್ರದೇಶ ದೇಶಕ್ಕೆ ಸೀಮಿತವಾಗದೆ ವಿದೇಶಗಳಲ್ಲಿಯೂ ತನ್ನ ವಿಸ್ತಾರವನ್ನು ಪಡೆದುಕೊಂಡಿರುವುದು, ಕೋರೋನಾ ರೋಗದಿಂದ ಆದ ಸಾಮಾಜಿಕ ನೈತಿಕ ಹಾಗೂ ಆರ್ಥಿಕ ಸ್ಥಿತಿಗತಿಗಳು ಕೌರೋನಾ ಕವಿತೆಯಲ್ಲಿ ಕವಯತ್ರಿ ಹೇಳುತ್ತಾರೆ.ಭಯಾನಕ ಪರಿಣಾಮ ಹಾಗೂ ಜನ ಸ್ಥಿತಿಯನ್ನು ಕಂಡು ಪ್ರಧಾನಿ ನರೇಂದ್ರ ಮೋದಿಯವರು ಸುಮ್ಮನಾಗದೆ ಔಷಧಿ ತಯಾರಿಕೆ ವಿಜ್ಞಾನಿಗಳಿಗೆ ಎಲ್ಲಾರೀತಿಯ ಪ್ರೋತ್ಸಾಹ ನೀಡಿದರು ಪರಿಣಾಮ ರೋಗಕ್ಕೆ ಔಷಧಿ ಕಂಡು ಹಿಡಿಯಲಾಯಿತು. ಜನಜೀವನ ಮತ್ತೆ ಉಸಿರಾಡುವಂತೆ ಆಯಿತು ಎಂಬುದು ಮೋದಿ ಅವರ ಕಾರ್ಯ ಮರೆಯದಿರಿ ಎಂಬ ಮೋದಿ ಅವರ ಕಾರ್ಯವನ್ನು ಕಂಡು ಹೊಗಳುತ್ತಾರೆ.

ಬಿದೂವಣೆ ಕವಿತೆಯಲ್ಲಿ ಪ್ರಾಚೀನ ಪರಂಪರೆಯ ಹಾಗೂ ಇಂದಿನ ಆಧುನಿಕತೆಗೆ ಮುಖ ಮಾಡಿ ಕವಯತ್ರಿ ಚರ್ಚಿಸುತ್ತಾರೆ. ತಂದೆ ತಾಯಿ ಮೇಲೆ ಮಕ್ಕಳ ಅಂದು ತುಂಬಾ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು ಇಂದು ಆ ಭಕ್ತಿ ಇಲ್ಲವಾಗಿದೆ. ಇಂದಿನ ಬದುಕಿನ ರೀತಿ ಕಂಡು ಬೇಸರ ವ್ಯಕ್ತಪಡಿಸುತ್ತಾರೆ. ಗುರುಕುಲದ ಶಿಕ್ಷಣದಿಂದ ಒಳ್ಳೆ ಸಂಸ್ಕಾರ ವಿದ್ಯೆವಿನಯ ಮಕ್ಕಳಿಗೆ ದೊರಕುತ್ತಿತ್ತು. ಇಂದು ಮಕ್ಕಳಲ್ಲಿ ಬದ್ಧತೆ ಇಲ್ಲದೆ ಬುದ್ಧಿ ವಿನಯ ಇಲ್ಲದೆ ನಡೆದುಕೊಳ್ಳುತ್ತಿರುವರು. ಸಂಸ್ಕಾರವಿಲ್ಲದ ಇವರಿಗೆ ಸಂಸ್ಕಾರ ಶಿಕ್ಷಣ ಹಾಗೂ ಪ್ರಾಚೀನ ಪರಂಪರೆ ಮಹತ್ವ ತಿಳಿಸಿಕೊಡಬೇಕು ಎಂಬ ಅಭಿಲಾಷೆ ಸ್ವತಃ ಶಿಕ್ಷಕಿಯಾದ ಪ್ರಮಿಳಾ ಅವರು ತನ್ನ ಎದುರಿಗೆ ಆಗುತ್ತಿರುವ ದುರನಡತೆ ಅವಿವೇಕಿತನ ಬಗ್ಗೆ ನಿರಾಶೆ ವ್ಯಕ್ತಪಡಿಸುತ್ತಾರೆ.

ಏಕತೆಯೆಡೆಗೆ,ಏಳಿಗೆಯೆಡೆಗೆ
ಚಲನ-ವಲನಗಳು ಬದಲಾಗಲಿ,
ಒಳ್ಳೆಯ ಬದಲಾವಣೆಯಿಂದ
ಜನರ ಬದುಕು ಹಸನಾಗಲಿ.

ಧರ್ಮ ಹಾಗೂ ಸಮಾಜದಲ್ಲಿ ಏನೆಲ್ಲ ಬದಲಾವಣೆಯಾದರೂ ಅದು ಏಕತೆಡೆಗೆ ಕೂಡಿದಾಗಿರಲಿ ಎಲ್ಲರ ಬದುಕಲ್ಲಿ ಹೊಸತನ ಗಾಳಿ ಬೀಸಿ ಹಸನಾಗಲಿ ಎಂಬುದು ಸಾಮಾಜಿಕ ಕಳಕಳಿ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಕವಯತ್ರಿ ಈ ಕವಿತೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಜೀವನದಲ್ಲಿ ಧನ್ಯತಾ ಕಾಣಲು ಕವಯತ್ರಿ ಶ್ರದ್ಧಾಂಜಲಿ ಕವಿತೆಯಲ್ಲಿ ತಮ್ಮ ಭಾವವನ್ನು ಅನುಭವಕ್ಕೆ ತಂದು ಬಾಳು ಕೇವಲ ಬಡಿದಾಟವಲ್ಲ ಹೃದಯ ಹೃದಯ ಸ್ಪಂದನವಾಗಿದೆ. ದೇವರ ವರದಿಂದ ರೂಪಿತವಾದ ಮನುಷ್ಯನ ಜೀವನವು ಸದಾ ಸನ್ಮಾರ್ಗದಿಂದ ನಡೆದು ಹೊಸತನವನ್ನು ಕಾಣುವಂತಾಗಲಿ. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳು ಜೀವನದಲ್ಲಿ ಅನುಸರಿಸಿಕೊಂಡು ಹೋಗುವ ದಾರಿಯಲ್ಲಿ ಸತ್ಯ, ಧರ್ಮ, ನ್ಯಾಯ, ನಿಷ್ಠೆ, ಕರುಣೆ, ಪ್ರೀತಿ, ಅಂತಃ ಕರಣ ಮೂಲ ಮಂತ್ರವಾಗಲಿ ಎಂಬ ಆದರ್ಶ ಬದುಕನ್ನು ಕಟ್ಟಿಕೊಳ್ಳುವ ಸಾರ್ವತ್ರಿಕ ಮೌಲ್ಯಗಳ ಮಹತ್ವವನ್ನು ಎತ್ತಿ ಹಿಡಿಯುತ್ತಾರೆ.ಇದು ಕವಯತ್ರಿಗಿರುವ ಸಾಮಾಜಿಕ ಬದ್ಧತೆ ಅರ್ಥವಾಗುತ್ತದೆ.

ಒಟ್ಟಾರೆ ಇವರ ಕಾವ್ಯವನ್ನು ಸಾಮಾಜಿಕ ಪ್ರಜ್ಞೆ ಮಾನವೀಯ ಮೌಲ್ಯ ಹಾಗೂ ಸಂಸ್ಕೃತಿಕ ತಳಹದಿಯ ಮೇಲೆ ರೂಪಿತಗೊಂಡಿರುವುದು. ಮತ್ತು ಆದರ್ಶ ಪ್ರೇಮದ ಅಭಿವ್ಯಕ್ತಿಯನ್ನು ಇವರ ಕಾವ್ಯಗಳಲ್ಲಿ ಮೂಡಿ ಬಂದಿದೆ. ಕಾವ್ಯ ಭಾಷೆಯನ್ನು ಶ್ರೀ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸುಂದರವಾಗಿ ಬಳಕೆ ಮಾಡಿಕೊಂಡಿದ್ದಾರೆ. ಶಿಕ್ಷಕಿಯಾಗಿ ಸಾಮಾಜಿಕ ಪ್ರಜ್ಞೆಯಿಂದ ಹಾಗೂ ಸಂಸ್ಕೃತಿಕ ಮಹತ್ವವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಇಲ್ಲಿಯ ಕಾವ್ಯ ತುಂಬಾ ಬೆಳೆದುಕೊಂಡು ಬಂದಿದೆ. ಪ್ರಗತಿಪರ ವಿಚಾರ ಹಿನ್ನೆಲೆ ಉಳ್ಳ ಕವಯಿತ್ರಿ ಇವರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಮೌಲಿಕ ಕೃತಿಗಳನ್ನು ಹೊರಬರಲಿ ಎಂಬ ಆಸೆಯಿಂದ ಶುಭ ಹಾರೈಸುವೆ.

ನಾಸಾ ಕವಿ
  ಬೀದರ.

ಲೇಖಕರ ಪರಿಚಯ:

ನಾಗೇಶ ಸ್ವಾಮಿ.ಮಸ್ಕಲ್.

ನಾಸಾ ಕವಿ‘ ಎಂಬ ಕಾವ್ಯನಾಮ ಹೊಂದಿರುವ ನಾಗೇಶ ಸ್ವಾಮಿ ಯವರು. ಕನ್ನಡ ಉಪನ್ಯಾಸಕರು. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಮಸ್ಕಲ್  ಗ್ರಾಮದವರು. ಎಂ.ಎ ಬಿ.ಇಡಿ. ಪದವೀಧರರು ಮತ್ತು ಪಿ.ಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ.  “ಸಂಜೀವಿನಿ’ ಮತ್ತು `ಮನ ಮೆಚ್ಚಿದ ಹುಡುಗಿ’ ಎಂಬ (ಕವನ ಸಂಕಲನಗಳು), ಹಾಗು ‘ ಕೃತಿ ಬಿಂಬ’ ಎಂಬ ವಿಮರ್ಶಾ ಕೃತಿಗಳು ಪ್ರಕಟಿಸಿದ್ದಾರೆ. ಇವರು ‘ವಿವೇಕ ಗ್ಲೋಬಲ್ ಟ್ರಸ್ಟ್’ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.
ಇವರ ಕಾರ್ಯ ಸಾಧನೆಗೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.