ಶೋಷಿತಳ ಸ್ವಗತ
ಮೊಳ ಮಲ್ಲಿಗೆಯ ಮುಡಿದು
ಕಣ್ಣೀರ ಗುರುತನಳಿಸಿ
ಸಿಂಗಾರಗೊಂಡು
ಎದೆಸೀಳು ಕಾಣುವಂತೆ
ಸೆರಗಸುತ್ತಿ-ಕಾಯುತಿರುವೆ
ದೇಹಕೆ ಬೆಲೆ ಕಟ್ಟುವವನಿಗಾಗಿ…!
ಮನಸು ಇನ್ನು ಶುದ್ಧವೆ
ಒಮ್ಮೆಯೂ ಸುಖಿಸಿಲ್ಲ
ಹೊಟ್ಟೆಪಾಡಿನ ಕಸುಬಿದು
ಎಲ್ಲ ಮುಗಿದ ಮೇಲೂ
ಏನೊಂದು ಅರಿವಾಗದು …!
ಅವಸರಕೆ ಸಿಕ್ಕ ದೇಹ
ಕಬ್ಭಿನಂತೆ ಹಿಂಡಿದಷ್ಟೇ
ಒಳಗಣ ನೋವು
ಒಬ್ಬರಿಗೂ ಕಾಣಲಿಲ್ಲ
ಕಂಡಿದ್ದರೆ …..
ನಾನೆಂದೊ ಗರತಿಯಾಗುತಿದ್ದೆ…!
ಪಾಪ ಪುಣ್ಯದ ಮಾತಿಂದ
ಬದುಕು ತಾ ನಡೆದೀತೆ?
ವಿಧಿಯ ಮುಂದೆ ವಿವಸ್ತ್ರಳಾಗಿ
ಭಾವನೆಗಳ ಕತ್ತು ಹಿಸುಕಿ
ಗೊಂಬೆಯಂತೆ
ಮಾರಾಟದ ಸರಕಾಗಿಬಿಟ್ಟೆ
ಹಾಳು ಗಂಡು ಜನ್ಮಕೆ…!
ತಿಂದುಂಡು ತೇಗಿದವರಿಗಿಲ್ಲದ
ಕಳಂಕ
ಇಲ್ಲಿಯೂ ನೊಂದವಳಿಗಂಟಿತು
ಈ ಸಮಾಜವೇ ಹೀಗೆ
ಬೆಕೇಂದೆ ಕಟ್ಟಿ ಬಿಡುತ್ತದೆ
ತನ್ನೆಲ್ಲ ಕೊಳಕ
ಪಾಪದವರ ತಲೆಗೆ…!
ಬಂದು ಹೋದವರಿಗೆ ಲೆಕ್ಕವಿಲ್ಲ
ಹಾಗಂತ
ಸಾಲು ಸಾಲು ಬಂಗಲೆಗಳು ನನಗಿಲ್ಲ
ಈಗಲೂ ಅದೇ ಚರಂಡಿ ಬಳಿಯ
ಹಳೆಯ ಗುಡಿಸಲು -ಮತ್ತವನ ಫೋಟೊ
ಅತ್ತು ಬರಿಧಾಗಲು ಉಳಿದದ್ದು ….!
– ಮನು ಪುರ
ಕವಿ ಪರಿಚಯ :
ಮನು ಪುರ ‘ ಎಂಬ ಕಾವ್ಯ ನಾಮದಿಂದ ಕವಿತೆಗಳನ್ನು ಬರೆಯುತ್ತಿರುವ ಮನೋಜ್ ಕುಮಾರ ರವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ‘ಪುರ’ ಎಂಬ ಊರಿನವರು. ಸದ್ಯ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೊಗ್ರಿಮಕ್ಕಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿ ದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ 300ಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ ಶ್ರೀಮಂತ ಸಂತ, ಶೋಷಿತಳ ಸ್ವಗತ, ಪಾಪದ ಮೂಟೆ, ಹಾಸಿಗೆ ಖಾಲಿ ಇದೆ, ಕಂಬನಿಯ ಹೆರಿಗೆ ಪ್ರಮುಖವಾಗಿವೆ.
ಅಧ್ಭುತವಾದ ಕವನ,
ಸೆರಗು ಬಿಚ್ಚಿದವಳು ಸೂಳೆಯಾದರೆ
ಸೆರಗು ಬಿಚ್ಚಿಸಲು ಬೆಲೆ ಕಟ್ಟುವವನು,?
ಅವಳ ನೋವಿನ ತಲ್ಲಣವನ್ನು ಕೇಳುವವರಾರು?
ಅವಳ ತಾಪದ ತೊಳಲಾಟವನ್ನು ನೋಡುವವರಾರು?
ಅವಳ ನೋವನ್ನು ನಿಮ್ಮ ಸಾಲುಗಳಲ್ಲಿ ನೋಡಬಹುದು..