Oplus_131072

ತೊಡದ ಬಾಣ

ಹೆತ್ತವಳಿಗೋ ಮರ್ಯಾದೆಯೇ
ಮುಖ್ಯವಾಗಿತ್ತು
ನೀರ ಮೇಲೆ ತೇಲಿ ಬಿಟ್ಟಳು
ಚೊಚ್ಚಲ ಮಗುವನ್ನೇ…!

ಮಗದೊಬ್ಬಳೊ
ಕಾದು ಕಾದು ಸೋತಿದ್ದಳು
ಕಾರ್ಗತ್ತಲ ದಾರಿಯಲ್ಲಿ
ಬೆಳಕು ಸಿಕ್ಕಷ್ಟೇ ಖುಷಿಯಿಂದ
ಲಾಲಿಸಿದಳು ಪಾಲಿಸಿದಳು
ಜೀವಕ್ಕಿಂತಲೂ ಹೆಚ್ಚಾಗಿ ನನ್ನನ್ನೆ…!

ತೊಡೆಯನ್ನೇ ಕೊರೆಯುತ್ತಿದ್ದರೂ
ನೆಮ್ಮದಿಯ ನಿದಿರೆಗಾಗಿ ಸಹಿಸಿ
ಗುರುವಿನಿಂದಲೇ ಶಾಪ ಪಡೆದವನು ನಾನು
ಏನೆಂದು ತಿಳಿಯದೆ ಒಡಲ ಬಗೆದೆನೆಂದು
ಭುವಿಯಿಂದಲೂ ಶಫಿಸಲ್ಪಟ್ಟವನು ನಾನು
ಒಳ್ಳೆಯತನಕ್ಕೂ ಅದೆಷ್ಟು ಅವಮಾನ ಜಗದಲ್ಲಿ…!

ಎಲ್ಲಿಯೇ ಹೋಗಲಿ ,ಏನನ್ನೇ ಮಾಡಲಿ
ನನ್ನಂತ ಅದೆಷ್ಟೋ ಮಂದಿಗೆ
ದಿನವು ಇದ್ದಿದ್ದೇ ;ಹೀನ ಕುಲದವರೆಂಬ ಹೀಯಾಳಿಕೆ
ಅವಸಾನವೇ ಇಲ್ಲದ್ದೆನಿಸುತ್ತದೆ ಈ ದರಿದ್ರ ವ್ಯವಸ್ಥೆ…!

ಕೌರವೇಂದ್ರ ಸಿಕ್ಕ ನಂತರ
ಸ್ವಾಭಿಮಾನದ ಖುಷಿಯಿತ್ತು
ದುರದೃಷ್ಟಕ್ಕೆ ಯುದ್ಧ ಶುರುವಾಯಿತು
ಜನ್ಮವೃತ್ತಾಂತದ ವ್ಯೂಹದೊಳಗೆ
ಕರೆದು;ಕೇಳಿದಳು ತೊಟ್ಟಬಾಣವ ತೊಡದಿರೆಂದು..!
ಎಂಥಹ ಪಾಪದವನಲ್ಲವೇ ನಾನು
ತಾಯಿಯಿಂದಲೇ ಎರಡೆರಡು ಬಾರಿ ಎಸೆಯಲ್ಪಟ್ಟಿದ್ದೇನೆ..!

ತಿಳಿದೂ ತಿಳಿದೂ; ಇಲ್ಲವೆನದೆ
ಇರುವುದೆಲ್ಲವ ದಾನವಾಗಿ ಕೊಟ್ಟೆ ;
ಹೊಗಳಿಕೆಯ ಹುಚ್ಚು ಎನ್ನುವಿರ
ಸಾಧ್ಯವಾದರೆ ಉಗುರನ್ನೆ ಒಮ್ಮೆ ಕಿತ್ತು ನೋಡಿ
ಕುಂಡಲಿ ಕವಚಗಳನ್ನೇ ಕೊಟ್ಟವನು ನಾನು…!

ನನ್ನ ನತದೃಷ್ಟ ಕಥೆಗೆ
ದೇವರೆನಿಸಿಕೊಂಡವನೇ ಖಳನಾಯಕ
ಕೊನೆಗಾಲದಲ್ಲೇ ಕೈಕೊಟ್ಟವು
ರಥ,ಮಂತ್ರ,ಕೊನೆಗೆ ಸಾರಥಿಯು
ನಿಶ್ಯಸ್ತ್ರನಾದವನ ಎದೆಗೆ ;ನೇರ ಬಾಣ ಪ್ರಯೋಗ
ಧರ್ಮ ರಕ್ಷಣೆಯ ಹೆಸರಲ್ಲಿ
ಇಂತಹ ಅದೆಷ್ಟೋ ಅನ್ಯಾಯಗಳಿವೆ…!

ಸೂತನಲ್ಲದಿದ್ದರೆ ;ನನ್ನ ಪಾತ್ರಕ್ಕೆ
ಬೇರೆಯೇ ಅಂತ್ಯವಿರುತ್ತಿತ್ತೇನೋ
ಸತ್ತರೂ ಚಿಂತೆಯಿಲ್ಲ
ಮತ್ತೊಮ್ಮೆ ;ಹೀಗೆಯೇ ಹುಟ್ಟುವಾಸೆ …!
ಕುಂತಿಗಾಗಿಯಂತೂ ಅಲ್ಲ
ಕಡೇ ಪಕ್ಷ -ಕಲಿಯುಗದಲ್ಲಾದರೂ
ನನ್ನತನಕ್ಕೆ ನ್ಯಾಯ ಸಿಗಬಹುದು ಎಂದು…!

ಯುಗಗಳು ಬದಲಾದವಷ್ಟೇ
ಮೃಗಗಳೋ ಇನ್ನು ಹಾಗೆ ಇವೆ…!
ಸಮತೆಯ ಸಾಸಿವೆಗಾಗಿ
ಅದೆಷ್ಟು ಅವಸಾನಗಳು ಬೇಕೋ ಕಾಣೆ…!
ನಮಗೆ ನಾವೇ; ಪರಸ್ಪರ
ಸಾಂತ್ವನ ಹೇಳಿಕೊಳ್ಳುತ್ತಾ
ಕಲಿತ ವಿದ್ಯೆಯನ್ನ ಮರುಗಲು ಬಿಡದೇ
ಮುನ್ನುಗ್ಗುತ್ತಲೇ ಇರೋಣ…!
ಮನುಷ್ಯತ್ವದ ಮಹಾಭಾರತದಲ್ಲಿ
ಕರ್ಣನ ವಿಜಯಕ್ಕುೂ
ಒಂದೊಳ್ಳೆ ಸಮಯ ಬಂದೆ ಬರುತ್ತದೆ …!

ಮನು ಪುರ.

‘ಕವಿ ಪರಿಚಯ:

ಮನು ಪುರ.

ಮನು ಪುರ ‘ ಎಂಬ ಕಾವ್ಯ ನಾಮದಿಂದ ಕವಿತೆಗಳನ್ನು ಬರೆಯುತ್ತಿರುವ ಮನೋಜ್ ಕುಮಾರ ರವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ‘ಪುರ’ ಎಂಬ ಊರಿನವರು. ಸದ್ಯ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೊಗ್ರಿಮಕ್ಕಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿ ದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ 300ಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ ಶ್ರೀಮಂತ ಸಂತ, ಶೋಷಿತಳ ಸ್ವಗತ, ಪಾಪದ ಮೂಟೆ, ಹಾಸಿಗೆ ಖಾಲಿ ಇದೆ, ಕಂಬನಿಯ ಹೆರಿಗೆ ಪ್ರಮುಖವಾಗಿವೆ.

2 thoughts on “ತೊಡದ ಬಾಣ”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ