ವಚನ ಸಾಹಿತ್ಯ
ಜಾಗತಿಕ ಸಾಹಿತ್ಯಕ್ಕೆ ನಮ್ಮ ಕನ್ನಡ ಸಾಹಿತ್ಯವು ನೀಡಿದ ಅತಿ ದೊಡ್ಡ ಕೊಡುಗೆ ವಚನ ಸಾಹಿತ್ಯವಾಗಿದೆ . ಸರಳವಾಗಿ ಹೇಳುವುದಾದರೆ ವಚನ ಎಂದರೆ :ಮಾತು ಕೊಡುವುದು’ ಎಂದರ್ಥ.
ಶಿ.ಶಿ. ಬಸವನಾಳರು ಹೇಳುವಂತೆ ವಚನ ಸಾಹಿತ್ಯ ಜನವಾಣಿಯಾಗಿದೆ.ದೇವವಾಣಿಯನ್ನು ಜನವಾಣಿಯನ್ನಾಗಿಸಲು ಸಾಧ್ಯವಿಲ್ಲ ಆದರೆ ಜನರ ಭಾವ ಬದುಕಿನ ರೀತಿ ನೀತಿಗಳನ್ನು ವಿವರಿಸುವ ಜಲವಾಣಿಯನ್ನು ದೇವವಾಣಿಯನ್ನಾಗಿಸಿದ ಕೀರ್ತಿ ವಚನ ಸಾಹಿತ್ಯಕ್ಕಿದೆ. ವಚನಗಳು ಅಂದಿನ ಕಾಲದ ಸಮಾಜೋದ್ಧಾರದ, ಕ್ರಾಂತಿಯ, ವೈಯಕ್ತಿಕ ಜೀವನವನ್ನು ಸರಿಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ವಚನ ಸಾಹಿತ್ಯ ರಚನೆಯಾಗಿವೆ.
ವಚನಗಳು ನಿಜವಾಗಿಯೂ ಪಂಡಿತ ರಚನೆಗಳಲ್ಲ …. ಪಾಮರರ ಸಾಹಿತ್ಯವೇ ಇಷ್ಟು ಅದ್ಭುತವಾಗಿದೆ ಎಂದರೆ ಅವರ ಬದುಕಿನ ರೀತಿ, ನೀತಿ,ಅನುಭಾವದ ಕುರಿತು ಬೆರಗು ಪಡಲೇಬೇಕಾಗಿದೆ.
ವಚನಗಳು ಸರಳ,ನೇರ, ನಿಷ್ಠುರ ರಚನೆಗಳು ಮಾತ್ರವಲ್ಲದೇ ಜೀವ ಕಾರುಣ್ಯದ ಸಿದ್ಧಾಂತಗಳನ್ನು ಹೊಂದಿದ್ದು ಸಕಲರಿಗೆ ಲೇಸನ್ನು ಬಯಸುವ ಧೋರಣೆ ಅವುಗಳಲ್ಲಿದೆ. ಅತ್ಯಂತ ಸರಳವಾದ ವಚನಗಳಲ್ಲಿ ಗಹನ ತತ್ವವೇ ಅಡಗಿದೆ.
ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ, ಬಾರದು ಬಪ್ಪದು ಬಪ್ಪದು ತಪ್ಪದು, ಆಚಾರವೇ ಲಿಂಗ ಮುಂತಾದ ಒಂದು ಸಾಲಿನ ವಚನಗಳು ಹಿರಿದಾದ ಘನ ತತ್ವಗಳನ್ನು ಒಳಗೊಂಡಿವೆ.
ತಾವು ಕಂಡುಂಡ ಬದುಕಿನ ಹಿನ್ನೆಲೆಯಲ್ಲಿ ಈ ವಚನಗಳನ್ನು ರಚಿಸಲಾಗಿದ್ದು ಎಲ್ಲ ವಚನಕಾರರ ಮೂಲ ಆಶಯ ‘ನುಡಿದಂತೆ ನಡೆ’ ಎಂಬುದಾಗಿತ್ತು.
ಕಾಯಕ, ದಾಸೋಹ, ಲಿಂಗನಿಷ್ಠೆಗಳು ವಚನಕಾರರ ಬದುಕಿನ ಪ್ರಮುಖ ಧ್ಯೇಯವಾಗಿದ್ದು ಅನುಭವ ಮಂಟಪವೆಂಬ ಜ್ಞಾನಾಗ್ನಿಯಲ್ಲಿ ಬೆಂದು ಅರಳಿದ ಶರಣರ ವಚನಗಳು ಪುಟಕ್ಕಿಟ್ಟ ಚಿನ್ನದಂತೆ ಕಂಗೊಳಿಸಿದವು ಎಂದರೆ ತಪ್ಪಿಲ್ಲ.
ಮಾನವ ಜೀವನದ ಮೂಲ ಸೆಲೆಗಳಾದ ದಯೆ,ಅಂತಃ ಕರಣ,ಮನುಷ್ಯ ಮನುಷ್ರ ನಡುವಿನ ಕನಿಷ್ಠ ಗೌರವ, ನಂಬಿಕೆ,ವಿಶ್ವಾಸಗಳನ್ನು ತೋರುವ ನಮ್ಮೊಳಗಿನ ಮಾನವೀಯ ಪ್ರೀತಿಯ ಜ್ಯೋತಿಯನ್ನು ಪ್ರದೀಪ್ತಗೊಳಿಸುತ್ತವೆ ಈ ವಚನಗಳು. ಇದುವರೆಗೆ ನಮ್ಮ ಸಮಾಜದಲ್ಲಿ ಬೀಡು ಬಿಟ್ಟ ಅಸಮಾನತೆ ಅಂಧಶ್ರದ್ದೆ, ತಾರತಮ್ಯ ಭಾವ, ಅನ್ಯಾಯ ಅತ್ಯಾಚಾರಗಳನ್ನು ವಚನಗಳೆಂಬ ಆಯುಧಗಳ ಮೂಲಕ ಖಂಡ ತುಂಡವಾಗಿಸುವ ಮತ್ತು ಆ ಮೂಲಕ ದಯೆಯೇ ಧರ್ಮದ ಮೂಲ ಎಂದು ಸಾರಿದ ವಚನಗಳು ಮನುಕುಲದ ಸಾರ್ವಕಾಲಿಕ ಸತ್ಯವಾದ ಸಮಾನತಾವಾದವನ್ನು ಮುನ್ನೆಲೆಗೆ ತಂದವು.
ಆಸ್ತೇಯ, ಬ್ರಹ್ಮಚರ್ಯ, ಏಕದೇವ ಉಪಾಸನೆ( ಲಿಂಗೋಪಾಸನೆ ) ಅಪರಿಗ್ರಹಗಳೆಂಬ ಆದಿ ಕಲ್ಪನೆಗಳನ್ನು ನಮ್ಮ ವಚನಕಾರರು ಸಾಕಾರಗೊಳಿಸಿದರು.
ಕಾಯಕ ತತ್ವವನ್ನು ಅರುಹಿದ ವಚನಗಳು
ವ್ಯಕ್ತಿಯು ತಾನು ದುಡಿದ ಸಂಪತ್ತಿನಲ್ಲಿ ಒಂದು ಭಾಗವನ್ನು ತನ್ನ ವೈಯುಕ್ತಿಕ ಬಳಕೆಗೆ, ಮತ್ತೊಂದು ಭಾಗವನ್ನು ದಾಸೋಹಕ್ಕೆ ಮೂರನೇ ಒಂದು ಭಾಗವನ್ನು ದೀನ ದಲಿತರ, ಅಶಕ್ತರ,ಹಿರಿಯರ ಸೇವೆಗೆ ಬಳಸಿದರು.
ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರವಾದ ವಚನ ಸಾಹಿತ್ಯವು ಆಡು ಭಾಷೆಯಲ್ಲಿದ್ದು ಅತ್ಯಂತ ಸರಳವಾಗಿ ಅರ್ಥವಾಗುತ್ತದೆ. ವಚನವನ್ನು ರಚಿಸಲೇಬೇಕೆಂಬ ಹಿನ್ನೆಲೆಯಲ್ಲಿ ಅವು ಹುಟ್ಟಿಲ್ಲ.
ಸಮಾಜೋ ಧಾರ್ಮಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಹುಟ್ಟಿರುವ, ಸುಸಂಬದ್ಧ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹುಟ್ಟಿಕೊಂಡ ವಚನ ಸಾಹಿತ್ಯ ತನ್ನ ಸರಳತೆಯ ಕಾರಣದಿಂದಲೇ ಅತ್ಯಂತ ವೈಶಿಷ್ಟ ಪೂರ್ಣ ಸಾಹಿತ್ಯವಾಗಿದೆ. ವಚನಕಾರರ ಬದುಕು ಮತ್ತು ಭಾವಗಳು ಒಂದೇ ಆಗಿದ್ದು, ಬದುಕು ಒಡ್ಡುವ ಹಲವಾರು ಸವಾಲುಗಳಿಗೆ ಉತ್ತರ ಕಂಡುಕೊಳ್ಳುವ ರೀತಿಯಲ್ಲಿ ವಚನಗಳು ಹುಟ್ಟಿಕೊಂಡಿವೆ.
ಸ್ವಸ್ಥ ಬದುಕು ಮತ್ತು ಸ್ವಸ್ಥ ಸಮಾಜವನ್ನು ಹೊಂದುವ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ವಚನಗಳು ಜನರ ಬದುಕಿನಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾದವು. ವ್ಯಕ್ತಿ, ಸಮಾಜ ಮತ್ತು ಬದುಕು ಒಂದನ್ನೊಂದು ಒಳಗೊಂಡಿದ್ದು ಇವುಗಳ ಪರಸ್ಪರ ಸಂಬಂಧವನ್ನು ಗೌರವಿಸುವ, ಹೊಸ ಸಮಾನತೆಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ವಚನಗಳು ರಚನೆಯಾಗಿದ್ದು ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ಜನಸಾಮಾನ್ಯರು ರಚಿಸಿದ ರಚನೆಗಳನ್ನು ವಚನಗಳು ಎಂದು ಕರೆದರು.
ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಈ ಎಲ್ಲ ವಚನಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಶರಣರು ಅಳಿವಿನ ಬಸವಕಲ್ಯಾಣದಿಂದ ಜೀವನ್ಮುಖಿ ಉಳವಿಯತ್ತ ಅಕ್ಕ ನಾಗಮ್ಮ ಮತ್ತು ಅವಿರಳ ಜ್ಞಾನಿ ಚನ್ನಬಸವಣ್ಣನವರ ನೇತೃತ್ವದಲ್ಲಿ ಹೊರಟರು. ವಚನಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಡಿವಾಳ ಮಾಚಿದೇವರ ಸಹಿತವಾಗಿ ಹಲವಾರು ಶರಣರು ಪ್ರಾಣಾರ್ಪಣೆಗೈದರು.ಅಲ್ಲಿ ಈ ವಚನಗಳ ಹಲವಾರು ಪ್ರತಿಗಳನ್ನು ಬರೆದು ಬಸವ ನಾಡಿನ ನಾಲ್ದೆಸೆಗಳಿಗೂ ಗುಂಪುಗಳ ಮೂಲಕ ಶರಣರ ಮೂಲಕ ಕಳುಹಿಸಿ ಕೊಟ್ಟರು. 19 ನೇ ಶತಮಾನದ ಆದಿಯವರೆಗೂ ಮನೆ ಮನೆಗಳಲ್ಲಿ ವಚನಗಳ ಪ್ರತಿಗಳು ಗುಪ್ತವಾಗಿ ಇರಿಸಲ್ಪಟ್ಟಿದ್ದು ಫ.ಗು. ಹಳಕಟ್ಟಿಯವರು ತಮ್ಮ ಸಂಪತ್ತೆಲ್ಲವನ್ನು ಸುರಿದು ಕರ್ನಾಟಕ, ಆಂಧ್ರ, ತಮಿಳ್ನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸುತ್ತಾಡಿ ಅವುಗಳನ್ನು ಸಂಗ್ರಹಿಸಿ ಸುಮಾರು 22 ಸಾವಿರ ವಚನಗಳನ್ನು ತಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒಪ್ಪಿಸಿ ವಚನ ಪಿತಾಮಹ ಎಂದೆನಿಸಿಕೊಂಡರು. ಇದೀಗ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಈ ಎಲ್ಲ ವಚನಗಳನ್ನು ಹೊಂದಿದ ಬಸವ ಅಧ್ಯಯನ ಪೀಠವು ರಚನೆಯಾಗಿದ್ದು ವಚನಗಳ ಕುರಿತ ಓದು ಬರಹ
ಮತ್ತು ಅಧ್ಯಯನವನ್ನು ಇಲ್ಲಿ ಮಾಡಬಹುದು.
ವಚನಗಳ ಮೂಲಕ ಬಸವಣ್ಣನವರು ನೀಡಿದ ಸಪ್ತ ಸೂತ್ರಗಳು ಮನುಷ್ಯ ಬದುಕಿನಲ್ಲಿ ಹೇಗೆ ಇರಬೇಕು ಎಂಬುದನ್ನು ನಮಗೆ ತೋರಿಸಿಕೊಡುತ್ತವೆ.
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ನರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ದೇವರನ್ನು ಒಲಿಸಿಕೊಳ್ಳಲು ಆತನನ್ನು ಪೂಜಿಸುವುದು ಬೇಕಾಗಿಲ್ಲ, ಧೂಪ ದೀಪಗಳು ಅರ್ಚನೆ ನೇಮಗಳು ಬೇಕಾಗಿಲ್ಲ.
ಕಳ್ಳತನ ಮಾಡದೆ, ಕೊಲೆ ಸುಲಿಗೆಯಲ್ಲಿ ಭಾಗಿಯಾಗದೆ, ಸುಳ್ಳು ಸಟೆಯನ್ನಾಡದೆ, ಯಾರೊಂದಿಗೂ ಜಗಳವಾಡದೆ, ಮೇಲು ಕೀಳು ಎಂಬ ತಾರತಮ್ಯವೆಸಗದೆ, ಬೇರೊಬ್ಬರನ್ನು ಕೀಳಾಗಿ ನಡೆಸಿಕೊಳ್ಳದೆ ಇರಬೇಕು. ಅತಿರಂಜಿತವಾಗಿ ತನ್ನನ್ನು ತಾನು ಹೊಗಳಿಕೊಳ್ಳುವುದನ್ನು ಬಿಡಬೇಕು.ಮಾತಿಗೆ ಮಾತು, ಬೈಗುಳಕ್ಕೆ ಬೈಗುಳ, ಏಟಿಗೆ ಏಟು ಎಂಬಂತೆ ಬದುಕನ್ನು ನಡೆಸಬಾರದು.
ಸತ್ಯ ಶುದ್ಧ ಕಾಯಕದಿಂದ ಜೀವನ ನಡೆಸಿದರೆ ಸಾಕು ನಮ್ಮ ಅಂತರಂಗ ಶುದ್ಧಿಯಾಗುತ್ತದೆ ತನು ಮನಗಳ ಶುದ್ಧಿಯಿಂದ ನಮ್ಮ ಬಾಹ್ಯ ಶುದ್ಧಿಯಾಗುತ್ತದೆ ಎಂಬ ಅತ್ಯಂತ ಸರಳವಾದ ವಚನದ ಮೂಲಕ ಮನುಷ್ಯನ ಬದುಕು ಹೇಗೆ ಇರಬೇಕು ಎಂಬುದನ್ನು ಸಪ್ತ ಸೂತ್ರಗಳಲ್ಲಿ ತೋರಿದ ಬಸವಾದಿ ಪ್ರಮಥರ ವಚನಗಳು ನಮ್ಮ ಬದುಕಿಗೆ ದಾರಿ ದೀಪವಾಗಿವೆ.
ತಪ್ಪು ಸರಿಗಳ ನಡುವಣ ತೆಳುವಾದ
ಅಂತರವನ್ನು ಸ್ಪಷ್ಟಪಡಿಸಿದ್ದು ಮಾನವ ಜೀವನದ ಪಯಣಕ್ಕೆ ತೋರುಬರಹಗಳಾಗಿವೆ.
ಅಂತಹ ವಚನಗಳು ಚೆಲ್ಲಿದ ಬೆಳಕಿನ ಹಾದಿಯಲ್ಲಿ ನಡೆದು ನಮ್ಮ ಬದುಕನ್ನು ಬಂಗಾರವಾಗಿಸಿಕೊಳ್ಳೋಣ ಎಂಬ ಆಶಯದೊಂದಿಗೆ
– ವೀಣಾ ಹೇಮಂತ್ ಗೌಡ ಪಾಟೀಲ್,ಮುಂಡರಗಿ,ಗದಗ್.