Oplus_131072

ವಚನ ಸಾಹಿತ್ಯ – ವೈಚಾರಿಕ ಆಚರಣೆಗಳು.

‘ವಚನ ಸಾಹಿತ್ಯ-ವೈಚಾರಿಕ ಆಚರಣೆಗಳು’ ವಿಷಯವನ್ನು ಕುರಿತು ರಾಷ್ಟ್ರೀಯ
ವಿಚಾರ ಸಂಕಿರಣದಲ್ಲಿ ಮಾತನಾಡಲು ಹೇಳಿದಾಗ ಸಂತಸದಿಮದಲೇ ಒಪ್ಪಿಕೊಂಡೆ.
ಹನ್ನೆರಡನೇ ಶತಮಾನದಲ್ಲಿ ಅಂದರೆ ಸರಿಸುಮಾರು ಸಾವಿರ ವರ್ಷಗಳ ಪೂರ್ವದಲ್ಲೇ
ಶರಣರೆಲ್ಲ ಜಾತಿ-ವರ್ಗ-ಲಿಂಗ ತಾರತಮ್ಯವಿಲ್ಲದೆ, ಅನುಭವ ಮಂಟಪದಲ್ಲಿ ಪ್ರತಿನಿತ್ಯ
ಹಲವು ವಿಷಯಗಳ ಕುರಿತು ಅನುಸಂಧಾನ ನಡೆಸುತ್ತ ಸರ್ವ ಸಮಾನತೆಯ ಸಮಾಜ
ನಿರ್ಮಾಣಕ್ಕೆ ಶ್ರಮಿಸಿದ್ದು ಇಂದು ಇತಿಹಾಸ. ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸುತ್ತಮುತ್ತನ್ನು
ಒಂದು ಸಲ ಅವಲೋಕಿಸಿದರೆ ಶರಣರ ನಂತರದ ಸಾವಿರ ವರ್ಷಗಳ ಕಾಲಾವಧಿಯ
ಬಳಿಕವೂ ಸಾಮಾಜಿಕ ಸ್ಥಿತಿ-ಗತಿಗಳು ಹೆಚ್ಚು ಬದಲಾದಂತೆನಿಸುವುದಿಲ್ಲ. ಬದಲಾಗಿ
ಬದಲಾದ ಸ್ವರೂಪದಲ್ಲಿ ವಿಜೃಂಭಿಸುತ್ತಿವೆ.
ವಚನ ಸಾಹಿತ್ಯ ರಚನೆಯಾದದ್ದೆ ವೈಚಾರಿಕ ನೆಲೆಗಟ್ಟಿನ ಮೇಲೆ ಬಸವಾದಿ ಶರಣರು ಎಸಗಿದ ಕ್ರಾಂತಿಯಲ್ಲಿ ವಿಚಾರ ಕ್ರಾಂತಿಯೇ ಪ್ರಮುಖವಾದುದು. ಈ ವಿಚಾರವೆಂಬುದು ಚಿಂತನ-ಮಂಥನದ ನಿಕಷದಲ್ಲಿ ಹೊರ ಹೊಮ್ಮಿದ ಆಲೋಚನೆ ಈ ಆಲೋಚನೆಯ ಹಿಂದಿನ ತುಡಿತ ಮನುಷ್ಯ ಬದುಕನ್ನು ಹಸನಾಗಿಸುವುದು. ಇವು ಬರೀ ಆಲೋಚನೆಗಳಾಗದೆ ಆಚರಣೆಗಳಾಗಿ ಬದುಕಿನ ಭಾಗಗಳಾದವು.

ಸಮಾಜವನ್ನು ಆವರಿಸಿದ್ದ ಜಾತಿ ಶ್ರೇಣೀಕರಣ, ಲಿಂಗತಾರತಮ್ಯ, ಅಸಮಾನತೆ,
ಅಮಾನವೀಯತೆ, ಅಂಧಾನುಕರಣೆ ಹಾಗೂ ಮೂಢನಂಬಿಕೆಗಳನ್ನು ಪ್ರಶ್ನಿಸಿ, ವಿಡಂಬಿಸಿ,
ಪರಿಷ್ಕರಿಸಿ, ಸಂಸ್ಕರಿಸಿದ ಸಾರವೇ ವಚನ ಸಾಹಿತ್ಯ. ಸಾಮಾನ್ಯರ ಭಾಷೆಯಲ್ಲಿ ಸಾಮಾನ್ಯರನ್ನೊಳಗೊಂಡು, ಸಾಮಾನ್ವಿಕರಿಸಲ್ಪಟ್ಟ ತತ್ವ ವಿಚಾರ. ಮಾನವ ಜೀವನವನ್ನು ರೂಪಿಸುವಲ್ಲಿ, ಸಂಸ್ಕೃತಿಯನ್ನು ಪೋಷಿಸುವಲ್ಲಿ,
ನಾಗರೀಕತೆಯನ್ನು ಬೆಳೆಸುವಲ್ಲಿ ಸಂಪ್ರದಾಯಾಚರಣೆಗಳಿಗೆ ವಿಶೇಷ ಮಹತ್ವವಿ ಅವು ಅವನ ಬಾಳಿನ ಅವಿಭಾಜ್ಯ ಸಂಗತಿಗಳಾಗಿವೆ. ಸಮಾಜವನ್ನು ಒಂದುಗೂಡಿಸುವ
ಮತ್ತು ಮುಂದಕ್ಕೊಯ್ಯುವ ಶಕ್ತಿ ಪುಂಜಗಳಾಗಿವೆ. ಅವನ ನಡೆವಳಿ ಹಾಗೂ ವ್ಯವಹಾರಗಳು ಸಂಪ್ರದಾಯಬದ್ಧವಾಗಿಯೇ ಜರಗುತ್ತವೆ”  ಎಂದು ದೇ.ಜವರೇಗೌಡರು ಆಚರಣೆಗಳನ್ನು ಕುರಿತು ವಿವರಿಸುತ್ತಾರೆ. ಶರಣರು ಅಂತರಂಗ-ಬಹಿರಂಗ ಶುದ್ಧಿಯನ್ನು ಸಾಧಿಸಲು ಷಟ್‌ಸ್ಥಲ, ಅಷ್ಟಾವರ,
ಪಂಚಾಚಾರಗಳ ಧಾರ್ಮಿಕ ಆಚರಣೆ ಮಾರ್ಗವನ್ನು ರೂಪಿಸಿ ಅನುಸರಿಸಿದರು.

ಸಾಧಕನಿಗೆ ಅಷ್ಟಾವರಣವೆ ಅಂಗ ಷಟ್‌ಸ್ಥಲವೆ ಆತ್ಮ ಹಾಗೂ ಪಂಚಾಚಾರವೆ ಪ್ರಾಣ, ಇವು ಆಧ್ಯಾತ್ಮ ಬದುಕಿನ ತಳಹದಿ ಎನಿಸಿ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ
ಸಹಾಯಕವಾಗಿವೆ. ತತ್ವಜಿಜ್ಞಾಸೆಯ ಜ್ಞಾನ ಮಾರ್ಗ, ಕ್ರಿಯಾಚರಣೆಯ ಕರ್ಮಮಾರ್ಗ, ಉಪಾಸನೆಯ ಭಕ್ತಿ ಮಾರ್ಗವನ್ನು ಅನುಸರಿಸುವ ಮೂಲಕ ವ್ಯಕ್ತಿ ಆಧ್ಯಾತ್ಮ ಜೀವಿಯೂ ಉತ್ತಮ ನಾಗರಿಕನೂ ಆಗಿ ರೂಪು ಗೊಳ್ಳಬಹುದಾಗಿದೆ. ಶರಣರು ವೈಚಾರಿಕತೆಗೆ ಪ್ರಾಮುಖ್ಯತೆಯನ್ನಿತ್ತರು. ಹಿಂದಿನಿಂದ ನಡೆದುಕೊಂಡು
ಬಂದಿದ್ದ ಅಂಧಾನುಕರುಣೆಯನ್ನು ನಿರಾಕರಿಸಿದರು. ಮನುಷ್ಯ ಬದುಕನ್ನು ಹದುಳಗೊಳಿಸುವ ಆಚರಣೆಗಳನ್ನು ಜಾರಿಗೆ ತಂದರು. ಜನಸಾಮಾನ್ಯರ ವೈಯಕ್ತಿಕ
ನಡವಳಿಕೆಗಳ ಸುಧಾರಣೆಗೆ ಹೆಚ್ಚಿನ ಮಹತ್ವಕೊಟ್ಟರು. ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳಿದರು. ಮನುಷ್ಯ ಪಶುವಿನಂತೆ
ಬದುಕಿದರಾಗದು. ಬದುಕಿನ ಉನ್ನತಿಗೆ ಅವನು ಆಚಾರ ಸಂಪನ್ನನಾಗಬೇಕು ಎಂದು ಬಯಸಿದರು.

ಆಚಾರವರಿಯದ ಅರೆ ಮರಳುಗಳು ಸುಖವನೆತ್ತ ಬಲ್ಲರು? ಎಂದು ಪ್ರಶ್ನಿಸುವ ಮೂಲಕ ಆಚಾರದ ಮಹತ್ವ ಸಾರಿದರು. ಆಚಾರವೆಂಬುದು ಅವರ ದೃಷ್ಟಿಯಲ್ಲಿ ಉತ್ತಮ ನಡಳಿಕೆಯೆ ಆಗಿತ್ತು. ಯಾರ ಬದುಕನ್ನು ಬಾಧಿಸದ ವೈಯಕ್ತಿಕ ಬದುಕನ್ನು ಸುಧಾರಿಸುವ ಉತ್ತಮಗೊಳಿಸುವ ಸುಖ ಸಂಪೂರ್ಣವಾಗಿಸುವ ನಡವಳಿಕೆ ಅದು.
ಆಚಾರವೇ ಸ್ವರ್ಗ, ಅನಾಚಾರವೆ ನರಕ ಎನ್ನುವ ಮಾತು ಪಾಪ-ಪುಣ್ಯಗಳನ್ನಾಧರಿಸುತ್ತ ಮೇಲೆ ಸೇರುವ ಲೋಕಗಳೆಂದು ಭಾವಿಸಿದ್ದವರಿಗೆ ಅವರದೇ ನಂಬಿಕೆಗಳನ್ನಾಧರಿಸಿ ಉತ್ತಮ ನಡವಳಿಕೆ ಸ್ವರ್ಗವೆಂದೂ, ಕೆಟ್ಟ ನಡವಳಿಕೆ ನರಕವೆಂದೂ ತಿಳಿಸುತ್ತಾರೆ.

ಮನಃ ಪೂರ್ವಕ ಇಲ್ಲವೆ ಕಾಟಾಚಾರಕ್ಕೆ ಪಿಟಿ ಪಿಟಿ ಎನ್ನುವುದು ಮಾತ್ರ ಜಪವಲ್ಲ.
“ಮೃದು ವಚನವೇ ಜಪ”ವೆಂದರು. ಮುಂದುವರಿದು ‘ಅಯ್ಯಾ ಎಂದರೆ ಸ್ವರ್ಗ ಎಲವೊ ಎಂದರೆ ನರಕ’ವೆನ್ನುತ್ತಾರೆ. ಶರಣರಿಗೆ ಮಾತು ಮತ್ತು ವಚನಗಳಲ್ಲಿ
ವ್ಯತ್ಯಾಸವಿರಲಿಲ್ಲ. ಅವರ ಪ್ರತಿ ಮಾತೂ ವಚನವೇ ಆಗಿತ್ತು. ಮನ ನೋಯಿಸುವ ಮಾತು ನರಕ ಪ್ರಾಪ್ತಿಗೆ ಕಾರಣವಾಗುತ್ತದೆನ್ನುವ ಲಿಂಗ ಮೆಚ್ಚುವಂತೆ ಮಾತನಾಡಬೇಕೆಂದು ಸೂಚಿಸುವ ಅವರು ಕನ್ನಡದ ಆಡುನುಡಿಯಲ್ಲಿ ತತ್ವ ವಿಚಾರಗಳನ್ನು ಹುಸಿ ಹೊದ್ದದಂತೆ
ಹೊಸೆದು ವಚನವಾಗಿಸುವ ಮೂಲಕ ಉನ್ನತೀಕರಿಸಿದ್ದು ಭಾಷಾ ಸಂರಕ್ಷಣೆಯ ವಿಚಾರವಂತಿಕೆಯಿಂದಲೇ ಎಂದೆನಿಸದಿರದು. ಹೀಗೆ ಶರಣೆ ಅಕ್ಕಮ್ಮ ವ್ರತಾಚಾರಗಳನ್ನು ಕುರಿತು ತನ್ನೊಂದು ವಚನದಲ್ಲಿ ವಿವರಿಸಿದ್ದು ವ್ರತಾಚಾರವೆಂದು ಹೆಸರಿಟ್ಟು ಕೊಂಡಿಪ್ಪರಯ್ಯ
ವ್ರತವೆಂದರೇನು? ಆಚಾರವೆಂದರೇನು?
ಅನ್ಯರು ಮಾಡಿದ ದ್ರವ್ಯವನೊಲ್ಲದಿಪ್ಪುದು ವ್ರತವೆ
ಆರನು ಕರೆಯದಿಪ್ಪುದು ಆಚಾರವೇ?

ಪರಸ್ತ್ರೀ ಪರಧನಂಗಳಲ್ಲಿ ನಿಂದೆಗೆ ಒಡಲಾಗದಿದ್ದುದೆ ವ್ರತ
ಸರ್ವಭೂತಹಿತನಾಗಿ ದಯವಿದ್ದರೆ ಆಚಾರ
ವಚನಗಳಲ್ಲಿ ಬಳಕೆಗೊಂಡ ಆಚಾರ ಪದದ ಅರ್ಥ ಸನ್ನಡತೆಯೇ ಆಗಿದೆ. ಆಡುವ ಮಾತು ನಡೆಯುವ ನಡೆಯಲ್ಲಿ ಸರ್ವಭೂತಹಿತವಿರಬೇಕೆಂದರು ಶರಣರು.
ಪರಧನ ಪರಸ್ತ್ರೀಯನ್ನು ಮುಟ್ಟಬಾರದೆಂದು ಮತ್ತೆ ಮತ್ತೆ ಒತ್ತಿ ಹೇಳಿದರು. ಸಮಾಜದ ನೆಮ್ಮದಿಯನ್ನು ಹಾಳು ಮಾಡುವ ಪ್ರಮುಖ ಅಂಶಗಳಾಗಿ ಇವನ್ನು ಪರಿಗಣಿಸಿದ
ಎಲ್ಲ ವಚನಕಾರರು ಆ ಕುರಿತು ತಮ್ಮ ವಚನಗಳಲ್ಲಿ ಎಚ್ಚರಿಸಿದ್ದಾರೆ.

ಧಾರ್ಮಿಕ ಬದುಕಿನ ಅವಿಭಾಜ್ಯ ಅಂಗವಾಗಿ ವ್ರತ ನಿಯಮಗಳು ಹಾಸು ಹೊಕ್ಕಾಗಿವೆ. ಇವನ್ನು ಕಟ್ಟುನಿಟ್ಟಾಗಿ ಆಚರಿಸುವಂಥವರನ್ನು ಆಚಾರವಂತರೆಂದು
ಕರೆಯಲಾಗುತ್ತಿತ್ತು. ಈ ಆಚರಣೆಗಳು ಅರಿತು ಆಚರಿಸುವಂಥವಾಗಬೇಕೇ ವಿನಃ ರೂಢಿಯಿಂದ ಬಂದದ್ದೆಂಬ ಕಾರಣಕ್ಕಾಗಿ ಆಚರಿಸುವಂಥ ವಾಗಬಾರದು. ಶರಣರು ತೋರಿಕೆಯ, ಆಡಂಬರದ ಇಲ್ಲವೆ ಡಾಂಭಿಕ ಆಚರಣೆಗಳನ್ನು ಖಂಡಿಸುತ್ತಾರೆ.

ಶಿವಶರಣೆ ಸತ್ಯಕ್ಕೆ ಅದನ್ನು ವ್ಯಾಖ್ಯಾನಿಸಿದ್ದು ಈ ಕೆಳಗಿನಂತೆ.
ಅರ್ಚನೆ ಪೂಜನೆ ನೇಮವಲ್ಲ ಮಂತ್ರ ತಂತ್ರ ನೇಮವಲ್ಲ
ಧೂಪ ದೀಪಾರತಿ ನೇಮವಲ್ಲ ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ ಶಂಭು ಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ ಮನಸ್ಸಿನ ನಿಯಂತ್ರಣಕ್ಕೆ ಸಾಮಾನ್ಯವಾಗಿ ಸಾಧಕರು ತಮಗೆ ತಾವೇ ನಿರ್ಬಂಧ
ವಿಧಿಸಿಕೊಳ್ಳುವ ಪರಿಪಾಠ ಹಾಕಿಕೊಳ್ಳುತ್ತಾರೆ. ಅಂಥ ನಿರ್ಬಂಧಗಳಲ್ಲಿ ಸ್ನಾನವಿಲ್ಲದೆ ಏನನ್ನೂ ಸೇವಿಸದಿರುವುದು, ದೇವರಿಗೆ ಇಂತಿಷ್ಟು ಹೂವು ಏರಿಸುವುದು, ತಪ್ಪದೆ
ದೇವರ ಪೂಜೆ ಮಾಡುವುದು ಮುಂತಾದವನ್ನು ನೇಮಗಳಾಗಿ ಭಾವಿಸಿ ಆಚರಿಸುತ್ತಾರೆ,

ಹೂವು, ಹಣ್ಣು, ದೀಪ, ಧೂಪ, ಮಂತ್ರ, ತಂತ್ರ, ಅರ್ಚನೆ-ಪೂಜನೆ ಇವಾವುವೂ ದೊರೆತೊಡನೆ ಇಂಥ ನೇಮಗಳು ಕೂಡ ನಿಂತು ಹೋಗುತ್ತವೆ. ದೇವರಿಗೆ ಹಣ್ಣು
ನೇಮವಲ್ಲವೆಂದು ಖಡಾ ಖಂಡಿತವಾಗಿ ಹೇಳುತ್ತಾಳೆ ಸತ್ಯಕ್ಕ. ವಾಂಛಿತ ಘ ಬಿಡುವ, ಅಕ್ಕಿ ಬಿಡುವ ತಿಂಗಳುಗಟ್ಟಲೆ ಕರಿ, ಬಿಳಿ, ಅಥವಾ ಕಾವಿ ಬಟ್ಟೆ ತೊಟ್ಟು
ಮಾಂಸ-ಮಧ್ಯಗಳನ್ನು ಒಂದು ನಿಶ್ಚಿತ ಅವಧಿಗಾಗಿ ತ್ಯಜಿಸಿ ವ್ರತಧಾರಿಗಳಾಗುತ್ತಾರೆ. ಬರಿಗಾಲಿನಿಂದ ನಡೆಯುವ ನೆಲದ ಮೇಲೆ ಮಲಗುವ, ನೂರಾರು ಕಿಲೋಮೀಟರ್
ನಡೆದು ಹೋಗಿ ದೇವರ ದರ್ಶನ ಪಡೆಯುವ ಹೀಗೆ ನಾನಾ ರೀತಿಯ ವ್ರತ ಕೈಗೊಳ್ಳುತ್ತಾರೆ. ಇವುಗಳ ಹಿಂದೆ ಯಾವ ವೈಚಾರಿಕ ತಾತ್ವಿಕತೆಯೂ ಇರುವುದಿಲ್ಲ. ಅನುಕರಿಸುವವರೆ ಹೆಚ್ಚು. ಇಂಥ ಅನುಕರಣಶೀಲ ಕ್ಷಣಿಕ ವ್ರತ ನಿಯಮಗಳು ಸ್ವಾರ್ಥ ಪರವಾಗಿದ್ದು, ಸಾಮಾಜಿಕ ಸ್ವಾಸ್ಥ್ಯದ ಕಾಳಜಿ ಹೊಂದಿರುವುದಿಲ್ಲ. ಶರಣರು ವೈಯಕ್ತಿಕ
ಬದುಕನ್ನು ಹಸನಾಗಿಸಿಕೊಳ್ಳುತ್ತಲೇ ಸಾಮಾಜಿಕ ಬದುಕನ್ನು ಹದುಳಗೊಳಿಸುವ ವಿಶಾಲ ದೃಷ್ಟಿಯುಳ್ಳವರಾಗಿದ್ದರು. ಹಾಗಾಗಿ ಇಚ್ಛಿತ ಫಲ ದೊರೆತೊಡನೆ ಕಡೆಗಣಿಸಲ್ಪಡುವ
ಇಲ್ಲವೆ ನಿಂತು ಹೋಗುವ ವ್ರತ ಆಚರಣೆಗೆ ಬದಲಾಗಿ ಜೀವನ ಪರ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕಾದ, ಆಚರಿಸಬೇಕಾದ ನಿಯಮಗಳನ್ನು ಸೂಚಿಸಿದರು.
ಸರ್ವ ಸಮಾನತೆಯ ಕನಸು ಕಂಡ ಶರಣರು ಅಸ್ಪೃಶ್ಯತೆಯ ಆಚರಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶರಣ ತಾತ್ವಿಕತೆಯನ್ನು ಒಪ್ಪಿ ಬಂದ ಪ್ರತಿಯೊಬ್ಬರಿಗೆ ಸ್ತ್ರೀ-
ಪುರುಷ ಭೇದವಿಲ್ಲದಂತೆ ಅರುಹಿನ ಕುರುಹಾಗಿ ಅಂಗೈಗೆ ಲಿಂಗವಿತ್ತರು. ಸರ್ವರಿಗೂ ಪ್ರವೇಶವಿಲ್ಲದ ಗುಡಿ ಸಂಸ್ಕೃತಿಯನ್ನು ಧಿಕ್ಕರಿಸಿ ದೇಹವನ್ನೇ ದೇವಾಲಯವಾಗಿ
ಪರಿಭಾವಿಸಿದರು.

ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನು
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಳಸ
ಮೂಲಕ
ಎಂದು ದೇಹಕ್ಕೆ ದೇಗುಲದ ಸ್ಥಾನಮಾನ ಕಲ್ಪಿಸಿದರು. ಕೂಡಲ ಸಂಗನ ಒಲಿಸಲು
ಬಂದ ಪ್ರಸಾದ ಕಾಯವಿದು ಕೆಡಿಸಲು ಬಾರದು ಎಂದು ವ್ಯಾಖ್ಯಾನಿಸುವ
ಶರೀರವನ್ನು ಪವಿತ್ರವಾಗಿ ಕಂಡರು.
ಅಂತರಂಗ ಬಹಿರಂಗ ಶುದ್ಧಿಗೆ ಆದ್ಯತೆ ಇತ್ತು ಅದನ್ನು ಸೂತ್ರೀಕರಿಸಿದ್ದು

“ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೆ ಅಂತರಂಗ ಶುದ್ಧಿ ಇದೆ ಬಹಿರಂಗ ಶುದ್ಧಿ
ಇದೆ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ.

ಶುದ್ಧಿ ಎಂಬುದು ಶರೀರ ಶುದ್ಧಿ ಮಾತ್ರವಲ್ಲ ಮನ ಶುದ್ಧಿ ಚಿತ್ ಶುದ್ಧಿಯೂ
ಅಷ್ಟೇ ಮಹತ್ವದ್ದು. ಯಾವುದೇ ವಿಚಾರ ಮೊದಲು ಚಿತ್ರದಲ್ಲಿ ಮೂಡುತ್ತದೆ. ಅನಂತರ
ಕ್ರಿಯೆಯಾಗಿ ರೂಪ ಪಡೆಯುತ್ತದೆ. ಕೆಟ್ಟ ಆಲೋಚನೆಗಳು ಮನಸ್ಸಿನಲ್ಲೂ ಮೂಡಬಾರ
ದೆಂಬುದು ಶರಣರ ಸೂಕ್ಷ್ಮ ಚಿಂತನೆಯಾಗಿತ್ತು.
ಬಾಳಿಗೊಂದು ನಂಬಿಕೆ ಬೇಕು. ದೈವ ಅಂಥದೊಂದು ನಂಬಿಕೆ, ಕಾಣದ ಈ
ದೈವವನ್ನು ಕುರಿತು ನಾನಾ ನಾಮ ರೂಪಗಳು ಸೃಷ್ಟಿಗೊಂಡಿವೆ. “ಮಡಕೆ ದೈವ,
ಮೊರ ದೈವ, ಬೀದಿಯ ಕಲ್ಲು ದೈವ, ಹಣಿಗೆ ದೈವ, ಬಿಗಿನಾರಿ ದೈವ ಕಾಣಿರೋ,
ದೈವ ದೈವವೆಂದು ಕಾಲಿಡಲಿಂಬಿಲ್ಲ” ಹೀಗೆ ಇಡಿಕಿರಿದ ದೈವಗಳೂ ಸಾಲದೆ, ನೀರ
ಕಂಡಲ್ಲಿ ಮುಳುಗುವ, ಮರವ ಕಂಡಲ್ಲಿ ಸುತ್ತುವ, ಬತ್ತುವ ಜಲವ, ಒಣಗುವ ಮರನ
ಮೆಚ್ಚಿದವರು ನಿಮ್ಮ ನೆತ್ತ ಬಲ್ಲರು ಎಂದು ಪ್ರಶ್ನಿಸುವ ಮಟ್ಟಕ್ಕೆ ದೈವಗಳ ಕುರಿತ
ಅಂಧಶ್ರದ್ಧೆ ಮನೆ ಮಾಡಿತ್ತು. ನಿಜದ ನೆಲೆಯನ್ನರಿಯದೆ, ಡಾಂಭಿಕ ಭಕ್ತಿ ವಿಜೃಂಭಿಸುತ್ತಿತ್ತು.
ದೇವರ ಹೆಸರಲ್ಲಿ ಬಡ ಭಕ್ತರ ಶೋಷಣೆ ನಡೆಯುತ್ತಿತ್ತು. ಇದಕ್ಕೊಂದು ಪರಾಯವೆಂಬಂತೆ
ಇಷ್ಟಲಿಂಗವನ್ನು ಸೃಷ್ಟಿಸಿ ಪ್ರತಿಯೊಬ್ಬರಿಗೂ ನೀಡಿದರು. ತಮ್ಮಿಷ್ಟದ ದೇವರನ್ನು ತಮ್ಮಂಗದ
ಮೇಲೆ ಧರಿಸಿಕೊಂಡು ತಾವೇ ತಮ್ಮ ಕೈಯಾರೆ ಪೂಜಿಸುತ್ತ ಪುರೋಹಿತರ ಮಧ್ಯಸ್ತಿಕೆಯನ್ನು
ತಡೆದರು. ಈ ಲಿಂಗ ಕೂಡ “ಅರುಹಿಗಾಗಿರುವ ಕುರುಹು” ಹೊರತು ಅದೇ
ದೇವರಲ್ಲವೆಂದು ಸ್ಪಷ್ಟಪಡಿಸಿದರು. ತನ್ನ ತಾನರಿವುದಕ್ಕೆ ಲಿಂಗವೊಂದು ಮಾಧ್ಯಮವಾಯ್ತು.

ಜನಮಾನಸದಲ್ಲಿ ಯಾಂತ್ರಿಕವಾಗಿ ಮುಂದುವರಿದುಕೊಂಡು ಬರುತ್ತಿದ್ದ ಅದೆಷ್ಟೋ
ರೂಢಿಗತ ಆಚರಣೆಗಳಿಗೆ ಬಸವಣ್ಣನವರು ಹೊಸ ಭಾಷ್ಯ ಬರೆದರು. ಸದುವಿನಯವೇ
ಸದಾ ಶಿವನ ಒಲುಮೆ, ಸತ್ಯ ನುಡಿವುದೇ ದೇವಲೋಕ, ಮಿಥ್ಯ ನುಡಿವುದೇ
ಮರ್ತ್ಯಲೋಕವೆಂದು ವಿಶ್ಲೇಷಿಸಿ ಪ್ರತಿಕ್ಷಣದ ನಡೆನುಡಿಗಳನ್ನು ತಿದ್ದುತ್ತ ವಿಚಾರ ವಂತಿಕೆಯ
ವೈಚಾರಿಕ ಆಚರಣೆಗಳನ್ನು ಪ್ರಚುರಪಡಿಸಿದರು.
ಶೂದ್ರಳೆಂದು ಪರಿಗಣಿಸಲ್ಪಟ್ಟು ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಲ್ಪಟ್ಟಿದ್ದ
ಮಹಿಳೆ ಶರಣರ ಸಮಾನತಾ ಚಿಂತನೆಯ ಫಲವಾಗಿ ಕೌಟುಂಬಿಕ ಸಾಮಾಜಿಕ ಧಾರ್ಮಿಕ
ಹಾಗೂ ಸಾಹಿತ್ಯಕ ವಲಯಗಳಲ್ಲಿ ಸಮಾನ ಸ್ಥಾನಮಾನ ಪಡೆದು ತನ್ನದೇ ಆದ ಹೆಜ್ಜೆ
ಗುರುತುಗಳನ್ನು ಮೂಡಿಸಿದಳು.
ಅಸ್ಪೃಶ್ಯರೆಂದು ಹೀಗಳೆಸಿಕೊಂಡು ಅಸ್ತಿತ್ವರಹಿತರಾಗಿ ಬದುಕುತ್ತಿದ್ದವರನ್ನು ಇವ
ನಮ್ಮವನೆಂದಪ್ಪಿದ ಮಾನವೀಯ ಅಂಥಃಕರಣ, ಅಪ್ಪನು ನಮ್ಮ ಮಾದಾರ ಚನ್ನಯ್ಯ,
ಬೊಪ್ಪನು ನಮ್ಮ ಡೋಹರ ಕಕ್ಕಯ್ಯನೆಂದು ಸಂಬಂಧ ಕಲ್ಪಿಸಿ ಹಿರಿತನವಿತ್ತು ಗೌರವಿಸಿದ,
ಗೋತ್ರ ಪುರುಷರಾಗಿ ಮನ್ನಿಸಿದ ವೈಚಾರಿಕತೆ ಶರಣರದು, “ಕೊಲುವವನೆ ಮಾಡಿ
ಹೊಲಸು ತಿಂಬುವವನ ಹೊಲೆಯ ಎನ್ನುವಲ್ಲಿ ಕುಲದ ಪಾರಂಪರಿಕ ವ್ಯಾಖ್ಯಾನವನ್ನು
ಮುರಿದು ಕಟ್ಟಿದರು.
ಕುಲವೇನೋ ಆವಂದಿರ ಕುಲವೇನೋ
ಜಾತಿವಿಡಿದು ಸೂತಕವನರಸುವೆ
ಜ್ಯೋತಿವಿಡಿದು ಕತ್ತಲೆಯ ನರಸುವೆ
ಇದೇಕೋ ಮರುಳು ಮಾನವ
ಎಂದು ಪ್ರಶ್ನಿಸಿ ಜಾತಿಯನ್ನೇ ಪ್ರಧಾನವಾಗಿ ಪರಿಗಣಿಸುವವರ ಅಜ್ಞಾನವನ್ನು ಹಳಿಯುತ್ತಾರೆ.
ಬದುಕಿಗಾಗಿ ಅವಲಂಬಿಸುವ ವೃತ್ತಿಯನ್ನು ಶರಣರು ‘ಕಾಯಕ’ವೆಂದು ಕರೆದು ಅದಕ್ಕೆ
ಸತ್ಯ-ಶುದ್ಧತೆಯ ಸೂತ್ರವನ್ನಳವಡಿಸಿದರು. ಕಾಯಕ ನೈತಿಕ ಆಚರಣೆಯಾಗಿ ಗುರುದರ್ಶನ,
ಲಿಂಗಪೂಜೆ, ಜಂಗಮ ಸೇವೆಗೂ ಮಿಗಿಲೆನಿಸಿತು. ಪ್ರತಿಯೊಬ್ಬರೂ ಕಾಯಕ
ಮಾಡಲೇಬೇಕಿತ್ತು. ಗುರು-ಲಿಂಗ-ಜಂಗಮರೂ ಈ ಪರಿಧಿಯಿಂದ ಹೊರಗುಳಿಯಲಿಲ್ಲ.
ಹೀಗೆ ಸತ್ಯಶುದ್ಧ ಕಾಯಕದಿಂದ ಗಳಿಸಿದ ದ್ರವ್ಯವನ್ನು ತಾವೊಬ್ಬರೇ ಅನುಭವಿಸದೆ
ಜಂಗಮ ದಾಸೋಹಕ್ಕೆ ಬಳಸಬೇಕಾದ ಖಡ್ಡಾಯವನ್ನೂ ಶರಣರು ವಿಧಿಸಿಕೊಂಡರು.
ಇಂದಿಗೆ ನಾಳೆಗೆ ಎಂದು ಸಂಗ್ರಹಿಸದೆ ದಾಸೋಹಕ್ಕೆ ಸೂರೆಗೈದರು. ಈ ದಾಸೋಹ
ಪರಿಕಲ್ಪನೆ ಬದುಕಿ ಬದುಕಿಸುವ ಜೀವಪರ ಸಮಾಜಮುಖಿ ವೈಚಾರಿಕ ಆಚರಣೆಯಾಗಿ
ಮನ್ನಣೆ ಪಡೆಯಿತು.

ಮನುಷ್ಯ ಬದುಕನ್ನು ಮಾತ್ರ ಚಿಂತನೆಗೆ ಈಡು ಮಾಡದೆ ಸಕಲ ಜೀವರಾಶಿ
ಬದುಕಿ ಬಾಳ ಬೇಕೆಂಬ ದಯಾಪರ ಪರಿಸರವಾದಿ ದೃಷ್ಟಿ ಶರಣರದಾಗಿದ್ದರಿಂದ
‘ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ದಯವಿಲ್ಲದವರನೊಲ್ಲ’ ಕೂಡಲ ಸಂಗಮದೇವ
ಎಂದು ಘೋಷಿಸಿದರು.
ಹೀಗೆ ವಚನ ಸಾಹಿತ್ಯ ತತ್ತ್ವರ್ವದ ಸಾಮಾಜಿಕ ವ್ಯವಸ್ಥೆಯಲ್ಲಿ ಹತ್ತು-ಹಲವು
ಜೀವ ವಿರೋಧಿ ಆಚರಣೆ ಹಾಗೂ ಅಂಧಾನುಕರಣೆಗಳನ್ನು ಮರುಚಿಂತನೆಗೆ ಒಳಪಡಿಸಿ
ಪ್ರಖರ ವೈಚಾರಿಕತೆಯೊಂದಿಗೆ ಸಾದರ ಪಡಿಸಿತು.

ಡಾ.ಬಿದರಿ ಚಂದ್ರಕಲಾ.ಕಲಬುರಗಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ