Oplus_131072

ವಚನ ಸಾಹಿತ್ಯದಲ್ಲಿ ಕಾಯಕ ಸಿದ್ಧಾಂತ.

– ಡಾ.ಸಂಜೀವಕುಮಾರ ಅತಿವಾಳೆ.ಬೀದರ

12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಆಗಿರುವುದು ತೀವ್ರ ತರಹದ ವೈಚಾರಿಕತೆಯ ಹಿನ್ನೆಲೆಯಲ್ಲಿ ಎಂಬುದು ಸತ್ಯವಾದ ವಿಚಾರವಾಗಿದೆ. ಈ ಕ್ರಾಂತಿಯ ಮೂಲ ಪುರುಷನಾದ ಬಸವಣ್ಣನವರು ತಮ್ಮ ಸಮಕಾಲೀನ ಎಲ್ಲಾ ವಿಚಾರವಂತರನ್ನೂ‌ ಒಂದೆಡೆ ಸೇರಿಸಿ ಸಾಧಿಸಿ ತೋರಿಸಿದರು. ಸರ್ವರಿಗೂ ಸಮಾನವಾದ ಅಭಿವ್ಯಕ್ತಿ
ಸ್ವಾತಂತ್ರ್ಯವನ್ನೂ ಕಲ್ಪಿಸಿ ಅವರುಗಳು ತಮ್ಮ ವಿಚಾರಗಳನ್ನೂ ಎಲ್ಲರ ಸಮ್ಮುಖದಲ್ಲಿ ವ್ಯಕ್ತಪಡಿಸುವಂತಾಗಲು ಅಂದೇ “ಅನುಭವ ಮಂಟಪ” ವೆಂಬ ಸಂಸತ್ತನ್ನು ಸ್ಥಾಪಿಸಿದರು. ದೇಶ ವಿದೇಶಗಳ ಅನೇಕ ಜನರು ಬಸವಣ್ಣನವರ ವ್ಯಕ್ತಿತ್ವವನ್ನೂ ಕಂಡು ಮಾರು ಹೋಗಿ ಕಲ್ಯಾಣದಲ್ಲಿ ಬಂದರು. ತಾವುಗಳು ಮಾಡುತ್ತಿದ್ದ ಕಾಯಕವನ್ನೂ ಮುಂದುವರಿಸುವ ಮೂಲಕ ಹೊಸ ರೀತಿಯ ಕಲ್ಪನೆಯನ್ನೂ ಶರಣರು ನೀಡಿದರು.

ಕಾಯಕ ಮತ್ತು ದಾಸೋಹ ಈ ಎರಡು ಕಲ್ಪನೆಗಳಡಿಯಲ್ಲಿ ಶರಣರು ಮಹತ್ವದ ವಿಚಾರಗಳನ್ನೂ ತಿಳಿಸಿಕೊಟ್ಟಿದ್ದಾರೆ, ಕಾಯಕವನ್ನೇ ನಂಬಿದ ಶರಣರು ಅದರಿಂದಲೇ
ಮುಕ್ತಿಯನ್ನೂ ಕಂಡುಕೊಂಡರು, ‘ಕಾಯಕವೇ ಕೈಲಾಸ’ ಎಂಬ ಮಾತನ್ನು ಶರಣರು ದಿಟ್ಟತನದಿಂದ ಒಪ್ಪಿಕೊಂಡರು, ಹಾಗೆಯೇ ಬದುಕಿನುದ್ದಕ್ಕೂ ಅನುಸರಿಸಿಕೊಂಡು‌ಬಂದರು. ಆಯ್ದಕ್ಕಿ ಮಾರಯ್ಯ ಶರಣರು ಕಾಯಕದ ಮಹತ್ವವನ್ನು ತಮ್ಮ ವಚನವೊಂದರಲ್ಲಿ ಹೀಗೆ ಹೇಳಿದ್ದಾರೆ.

ಆಯ್ದಕ್ಕಿ ಮಾರಯ್ಯ.

ಕಾಯಕದಲ್ಲಿ ನಿರತನಾದರೆ
ಗುರು ದರುಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು
ಜಂಗಮ ಮುಂದಿದ್ದರೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ
ಲಿಂಗವಾಯಿತ್ತಾದರೂ ಕಾಯಕದೊಳಗು

                     – ಆಯ್ಕಕ್ಕಿ ಮಾರಯ್ಯ

ಗುರು ಲಿಂಗ ಜಂಗಮ ಇವು ಶರಣರ ಶ್ರೇಷ್ಠ ಪರಿಕಲ್ಪನೆಗಳು, ಈ ಪರಿಕಲ್ಪನೆಗೂ ಮಿಗಿಲಾದುದು ಕಾಯಕತತ್ವ, ಕಾಯಕದ ಮಹತ್ವವನ್ನೂ ಕುರಿತು ಇನ್ನು
ಶರಣರು ಹೇಳಿದ್ದಾರೆ. ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ನೂಲಿಯ ಚಂದಯ್ಯ, ಕಾಳವ್ವ, ಮಸಣಮ್ಮ, ಬೊಕ್ಕಸದ ಚಿಕ್ಕಣ್ಣ, ಅಮ್ಮಿದೇವ, ಮಾರಿತಂದೆ, ಧೋಳಯ್ಯ ಮುಂತಾದವರು.

ನುಲಿಯ ಚಂದಯ್ಯ.

ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಲಿಂಗಕ್ಕರ್ಪಿತವಲ್ಲದೆ
ದುರಾಸೆಯಿಂದ ಬಂದುದು ಅನರ್ಪಿತ ಇದು ಕಾರಣ
ಸತ್ಯಶುದ್ಧ ಕಾಯಕದ ನಿತ್ಯದ್ರವ್ಯವಾದರೆ ಚಂದೇಶ್ವರ
ಲಿಂಗಕ್ಕೆ ನೈವೇದ್ಯ ಸಂದಿತ್ತು ಕೇಳಯ್ಯ 

                 – ನುಲಿಯ ಚಂದಯ್ಯ.

ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುರುಹು ಹರಿವುದು
ಜಂಗಮವಾದರೂ ಕಾಯಕದಿಂದಲೇ ತನ್ನ ವೇಷದ ಪಾಶಹರಿವುದು
ಇದು ಚಂದೇಶ್ವರ ಲಿಂಗದರಿವು ಕೇಳು ಪ್ರಭುವೆ

                     -ನುಲಿಯ ಚಂದಯ್ಯ

ಈ ಮೇಲಿನ ನುಲಿಯ ಚಂದಯ್ಯನವರ ವಚನಗಳಲ್ಲಿ ಕಾಯಕದ ಮಹತ್ವವನ್ನೂ ಕಾಣುತ್ತೇವೆ. ವಾಸ್ತವವಾಗಿ ನ್ಯಾಯವಾದ ರೀತಿಯಲ್ಲಿ ಗಳಿಸಬೇಕು ಸರಿಯಾದ ರೀತಿಯಲ್ಲಿ ಬಳಸಬೇಕು. ಅಲ್ಲದೆ ದುಡಿದು ಗಳಿಸಬೇಕು. ಹಂಚಿ ತಿನ್ನಬೇಕು. ಇದು ಕಾಯಕದ ಮರ್ಮ ಹೀಗೆ ಗಳಿಸಿದುದು ಗುರು-ಲಿಂಗ-ಜಂಗಮಕ್ಕೆ ಅರ್ಪಿತವಾದಾಗ ಕೂಡಿಡುವುದು ತಪ್ಪಿ ಸಮಾನತೆ ಮೂಡುತ್ತದೆ.

ತಾವು ಕಾಯಕದಿಂದ ಗಳಿಸಿದುದು ತಮ್ಮಲ್ಲಿ ಉಳಿಸಿಕೊಳ್ಳದೇ ದಾಸೋಹದ ಮೂಲಕ ಸಮಾಜಕ್ಕೆ ಅರ್ಪಿಸಬೇಕು ಎಂಬ ಭಾವ ಶರಣರಲ್ಲಿತ್ತು. ಕಾಯಕದಲ್ಲಿ
ನಿರತನಾದವನು ತಾನು ಮಾಡಿದ ಶ್ರಮಕ್ಕೆ ತಕ್ಕ ಫಲವನ್ನು ಪಡೆಯಬೇಕೆ ಹೊರತು ಹೆಚ್ಚಿನದಲ್ಲ ಇದರಿಂದಾಗಿ ಕಾಯಕ ಒಂದು ಸೇವೆ ಎಂದಾಗುತ್ತದೆಯೇ ಹೊರತು ಲಾಭ ಕೋರತನದ ದಂಧೆಯಾಗುವುದಿಲ್ಲ. ಕಾಯಕವೆಂದರೆ ಸ್ವಾಭಿಮಾನವನ್ನು ಹೆಚ್ಚಿಸುವ ಮಾರ್ಗವೇ ಹೊರತು ಪರರ ಮುಂದೆ ನಿಂತು ಅಂಗಲಾಚುವ ಗುಲಾಮತನದ ದಾರಿಯಲ್ಲ. ನಾವು ಮಾಡುವ ಕಾಯಕ ಸ್ವಾರ್ಥದಿಂದ ಕೂಡಿರದೇ ಸತ್ಯಶುದ್ಧ ಕಾಯಕವಾಗಿರಬೇಕು.

ಡಾ.ಸಂಜೀವಕುಮಾರ ಅತಿವಾಳೆ.ಬೀದರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ