ಒನಕೆ ಓಬವ್ವಳ ಮನೆತನಕ್ಕೆ ದ್ರೋಹ ವೆಸಗಿದವರಾರು ?
ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವನ ಕುರಿತು ಇನ್ನಷ್ಟು ಅಧ್ಯಯನ ಅವಶ್ಯಕತೆ ಇದೆ. ಸದ್ಯಕ್ಕೆ ಈ ವಿಷಯವೇ ಬಹಳಷ್ಟು ನಿಗೂಢ ವಿಚಾರಗಳ ಗೂಡೆಂದರೆ ತಪ್ಪಾಗಲಾರದು. ನಾಗರಹಾವು ಚಿತ್ರದಲ್ಲಿ ಬಂದ ಹಾಡಷ್ಟೇ ಓಬವ್ವಳ ಇತಿಹಾಸವಲ್ಲ, ಅದಕ್ಕೂ ಮಿಗಿಲಾದ ಐತಿಹಾಸಿಕ ಸಂಗತಿಗಳು ಆಕೆಯ ಕುರಿತಾಗಿ, ಆಕೆಯ ಮನೆತನದ ಕುರಿತಾಗಿ ದುರ್ಗದ ನೆಲದಲ್ಲಿ ನಡೆದು ಹೋಗಿದೆ.
ನಾಗರಹಾವು ಸಿನಿಮಾದ ಹಾಡಿನಲ್ಲಿ ಪ್ರೇಕ್ಷಕರಲ್ಲಿ ಯುದ್ಧದಲ್ಲಿ ಓಬವ್ವಳ ಪ್ರಾಣತ್ಯಾಗದ ಕುರಿತು ಒಂದು ಹುತಾತ್ಮತೆಯ ಭಾವವನ್ನು ತೋರಿಸಿ ಅದರ ಮೂಲಕ ಭಾವಪರವಶತೆಯಲ್ಲಿ ಪ್ರೇಕ್ಷಕರನ್ನು ತೇಲಾಡಿಸುವ ಪ್ರಯತ್ನ ಸೊಗಸಾಗಿತ್ತಾದರೂ ಅದು ನಿಜ ಇತಿಹಾಸಕ್ಕೆ ದೂರವಾಗಿದ್ದ ಸಂಗತಿ. ಏಕೆಂದರೆ ಚಿತ್ರದುರ್ಗ ಇತಿಹಾಸ ಹೇಳುವಂತೆ ಆ ಯುದ್ಧದಲ್ಲಿ ಹೈದರಾಲಿಯ ಸೈನ್ಯವನ್ನು ಹಿಮ್ಮೆಟ್ಟಿಸುವಲ್ಲಿ ಚಿತ್ರದುರ್ಗ ಸಂಸ್ಥಾನವು ಯಶಸ್ವಿಯಾಗುತ್ತದೆ. ಓಬವ್ವಳ ಸಾಹಸಗಾಥೆ ಸಂಸ್ಥಾನದೆಲ್ಲೆಡೆ ಹೆಸರುವಾಸಿಯಾಗುತ್ತದೆ. ಯುದ್ಧ ಕಲೆಗಳ ಪರಿಚಯವಿಲ್ಲದ ಓರ್ವ ಸಾಮಾನ್ಯ ಹೆಂಗಸು, ಕೋಟೆ ಕಾವಲುಗಾರನಾಗಿದ್ದ ಚಲವಾದೇರ (ಹೊಲೆಯರ) ಕಹಳೆ ಮುದ್ದಹನುಮಪ್ಪನ ಮಡದಿ ಓಬವ್ವಳು ಒನಕೆಯನ್ನು ಹಿಡಿದು ಅಂದು ಅಕ್ಷರಶಃ ಕಾಳಗದ ರಣಚಂಡಿಯಾಗಿದ್ದಳು.
ಹೈದರಾಲಿಯ ಸೈನಿಕರ ಹೆಣಗಳ ರಾಶಿಯನ್ನೇ ಹಾಕಿದ್ದ ಓಬವ್ವ ಅಂದಿನ ಗೆಲುವಿಗೆ ಅಧಿದೇವತೆಯಾಗಿದ್ದಂತು ನಿಜ. ಆದರೆ ಚಿತ್ರದ ಹಾಡಿನಲ್ಲಿ ತೋರಿಸಿದಂತೆ ಆಕೆ ಅಂದು ಸಾಯಲಿಲ್ಲ. ಯುದ್ಧದ ನಂತರವು ಬಹುಕಾಲ ಬದುಕಿದ್ದಳು. ಓಬವ್ವ ಅಂದಾಜು 1721 ನವಂಬರ್ 11, ಇಂದಿಮ ಬಳ್ಳಾರಿ ಜಿಲ್ಲೆಯ ಕುಡ್ಲಗಿಯ ಗುಡೇಕೋಟೆಲ್ಲಿ ಜನಿಸಿದಳು ಎನ್ನಲಾಗುತ್ತದೆ. ತಂದೆ ಚಿನ್ನಪ್ಪ, ತಾಯಿ ಚಿನ್ನಮ್ಮ ಹಾಗೂ ಇಬ್ಬರು ಸಹೋದರರು. ಅವಳಿಗೆ ಚಿತ್ರದುರ್ಗದ ವೀರ ಮದಕರಿ ನಾಯಕರ ಸೈನ್ಯದ ಕಹಳೆ ಕಾವಲುಗರಾನಾಗಿದ್ದ ಮುದ್ದ ಹನುಮಪ್ಪನಿಗೆ ಮದುವೆ ಮಾಡಿ ಕೊಡಲಗತ್ತದೆ. ಹೈದರಾಲಿ ದುರ್ಗದ ಮೇಲೆ ಆಕ್ರಮಣ ಮಾಡಿದಾಗ ಅವಳು ಹೋರಾಡಿ ನಾಡ ರಕ್ಷಣೆ ಮಾಡುತ್ತಾಳೆ. ಇದರ ಮುಂದಿನ ಕಥೆ ಬಹಳಷ್ಟು ಜನರಿಗೆ ತಿಳಿದಂತಿಲ್ಲ.
ಅವಳ ಸಾಹಸ ಮೆಚ್ಚಿ ಮದಕರಿ ನಾಯಕರು ಅವಳಿಗೆ ಬೇಕಾದ್ದನ್ನು ಕೇಳಲು ಹೇಳುತ್ತಾರೆ. ಒಬ್ಬ ಹಿಂದುಳಿದ ಜನಾಂಗದ ಹೆಣ್ಣು ಮಗಳಾಗಿ ಅವಳಿಗೆ ತನ್ನ ಚಲವಾದಿ ಸಮುದಾಯದ ಬಗೆಗಿನ ಕಾಳಜಿ, ಅದರ ಗೌರವನ್ನು ಹೆಚ್ವಿಸಲು ಆಕೆ ತೆಗೆದುಕೊಂಡ ನಿರ್ಧಾರವನ್ನು ಇಲ್ಲಿ ನೆನೆಯಲೇ ಬೇಕು. ಏನನ್ನು ಬೇಕಾದರೂ ಕೇಳು ತಾಯಿ ಎಂದು ಚಿತ್ರದುರ್ಗದ ಪಾಳೆಗಾರರು ವೀರಮದಕರಿ ನಾಯ್ಕರು ಕೇಳಿದಾಗ, ರಾಜ್ಯ ಸಂಪತ್ತುಗಳನ್ನೇನೂ ಕೇಳದ ಓಬವ್ವ ತನ್ನ ಚಲವಾದಿ ಜನರು ಸಮಾಜದ ಮುಖ್ಯವಾಹಿನಿಗೆ ಬರಬೇಕು,
ಅವರಿಗೆ ರಾಜಪರಂಪರೆಯ ಆಚರಣೆಗಳಲ್ಲಿ ಸಾಂಸ್ಕೃತಿಕ ಪಾಲುಗಾರಿಕೆ ಸಿಗಬೇಕೆಂಬ ಮಹದುದ್ದೇಶದಿಂದ ದುರ್ಗದ ಜಾತ್ರೆ ಹಬ್ಬ ಹರಿದಿನಗಳಲ್ಲಿ ತನ್ನ ಜಾತಿಯವರಿಗೆ ಪ್ರಭುಗಳು ವೀಳ್ಯ ನೀಡಿ ಬರಮಾಡಿಕೊಳ್ಳಬೇಕೆಂಬುದಾಗಿ ಬೇಡಿಕೆ ಇಡುತ್ತಾಳೆ. ಈ ಮೂಲಕ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾಳೆ.
ವೀಳ್ಯ ಶಾಸ್ತ್ರವು ಹೊಲೆಮನೆ ಕೃಷಿಕರ ಪೈಕಿ ಎಲ್ಲಾ ಶುಭ ಸಮಾರಂಭಗಳಲ್ಲಿ ಕುಲಸ್ಥರನ್ನು, ಇಷ್ಟರನ್ನು, ಬರಮಾಡಿಕೊಳ್ಳಲು ಕೊಡವ ಆಹ್ವಾನ. ನಮ್ಮ ಮದುವೆಗಳಲ್ಲಿ ಈ ಶಾಸ್ತ್ರವು ಪ್ರಮುಖವಾದುದು. ಸಹೋದರ ಸಂಬಂಧಿಗಳಿಗೆ, ಅತ್ತೆ ಮಾವಂದಿರಿಗೆ, ವೀಳ್ಯವನಿಟ್ಟು ಕರೆಯುವುದು ರೂಢಿ. ಇದೇ ಸಂಪ್ರದಾಯ ಮುಂದೆ ಹೊಲೆಮನೆ ಮೂಲದ ರಾಜಮನೆತನಗಳ ಮೂಲಕ ಆಚರಣೆಗೊಳಪಟ್ಟು ಯುದ್ದಗಳಲ್ಲಿ ತಮ್ಮೊಡನೆ ಹೋರಾಡಲು ಕೈ ಜೋಡಿಸಿ ಎಂದು ಕರೆಯ ನೀಡಲು ಕೊಡುವ “ರಣವೀಳ್ಯ” ಸಂಪ್ರದಾಯವಾಗಿಯೂ ರೂಪುಗೊಂಡಿತು. ನಂತರ ಇತರೆ ಎಲ್ಲಾ ಸಂಸ್ಕೃತಿಯ ರಾಜಮನೆತನಗಳೂ ಇದನ್ನು ಆಚರಿಸಲಾರಂಭಿಸಿದವರು. ಈಗಲೂ ಹಳೇ ಮೈಸೂರು ಭಾಗದ ಹೊಲಯರ ಮದುವೆಗಳಲ್ಲಿ ಹಾಗೂ ಹೊಲೆಮನೆಗೆ ಸಂಬಂಧಿಸಿದ ಎಂದರೆ ಇತರೆ ಕೃಷಿಕ ಜಾತಿಗಳಲ್ಲಿಯೂ ವೀಳ್ಯಶಾಸ್ತ್ರ ಎಂದು ಬಹಳ ಮುಖ್ಯವಾದ ಶಾಸ್ತ್ರ.
ಇಷ್ಟು ವೃತ್ತಾಂತಗಳ ನಂತರದಲ್ಲಿ
ಒಬ್ಬವಳಿಗೆ ಗುಡಿಯನ್ನೂ ಕಟ್ಟಿಸಿದ ಮದಕರಿನಾಯ್ಕರು ಆಕೆಯ ವಂಶಸ್ಥರಿಗೆ ಅಗಸನಕಲ್ಲು ಎಂಬ ಗ್ರಾಮವನ್ನು ಉಂಬಳಿಯಾಗಿ ನೀಡುತ್ತಾರೆ. ಮೂರು ಮೊರಾ ಹೊನ್ನು ಓಬವ್ವನ ಉಡಿಯಲ್ಲಿ ತುಂಬಿ ಅವಳನ್ನು ಮೆರವಣಿಗೆ ಮಾಡುತ್ತಾರೆ.
ಇಷ್ಟೆಲ್ಲಾ ಆದ ಒಂದಷ್ಟು ವರ್ಷಗಳ ನಂತರ ಚಿತ್ರದುರ್ಗ ಸಂಸ್ಥಾನದ ಪತನವಾಗುತ್ತದೆ. ನಂತರ ಆಳಿದ ಹೈದರಾಲಿ ಟಿಪ್ಪು ಅಧಿಕಾರದಲ್ಲಿ ಕಹಳೆ ಕಾವಲುಗಾರರಿಗೆ ಮಾನ್ಯತೆ ಸಿಗುವುದಿಲ್ಲ. ಓಬವ್ವನ ವಂಶಸ್ಥರಿಗೆ ನೀಡಿದ ಉಂಬಳಿಯನ್ನೂ ಸಹ ಕಸಿಯಲಾಯ್ತು. ಕೆಲಸಗಳನ್ನು ಹರಸುತ್ತಾ ಓಬವ್ವನ ಮನೆತನದವರು ದುರ್ಗಾದಿಂದ 5 ಮೈಲಿ ದೂರದ ಸಿದ್ದವನಹಳ್ಳಿಗೆ ಗುಳೆ ಹೋದರು.
ಇಷ್ಟೆಲ್ಲಾ ನಡೆದುಹೋಯಿತಿ. ಇತ್ತ ಟಿಪ್ಪು ಬ್ರಿಟಿಷ್ರ ನಡುವೆ ಯುದ್ಧವಾಗಿ ಟಿಪ್ಪು ಸೋತು ಮಣ್ಣಾದನು. ಮತ್ತೆ ಮೈಸೂರು ಅರಸರು ಪಟ್ಟಕ್ಕೆ ಬಂದರು. ನ್ಯಾಯನಿಷ್ಠರಾಗಿದ್ದ ಮೈಸೂರು ಅರಸರೇನೋ ಮತ್ತೆ ಅಗಸನಕಲ್ಲು ಉಂಬಳಿಯನ್ನು ಓಬವ್ವನ ವಂಶಸ್ಥರಿಗೆ ಕೊಡಲು ನಿರ್ಧರಿಸಿದರು, ಆದರೆ ಮುಂದೆ ನಡೆದದ್ದೆಲ್ಲಾ ಮುಂದುವರಿದ ಜಾತಿಗಳ ಕುತಂತ್ರ!
ಅಗಸನಕಲ್ಲು ಉಂಬಳಿಯನ್ನು ಓಬವ್ವನ ವಂಶಸ್ಥರಿಗೆ ಮರಳಿಕೊಡಲು ನಿರ್ಧರಿಸಿದ ಮೈಸೂರು ಅರಸರು ಆಕೆಯ ವಂಶಸ್ಥರನ್ನು ಹುಡುಕಲು ಕೆಲವು ಅಧಿಕಾರಿ ನೇಮಿಸಿ ದುರ್ಗಕ್ಕೆ ಕಳುಹಿಸುತ್ತಾರೆ. ಅವರನ್ನು ಹುಡುಕುತ್ತ ಸಿದ್ದವನಹಳ್ಳಿಗೆ ಬಂದಾಗ ಅಲ್ಲಿರುವ ಮುಂದುವರಿದ ಜಾತಿಯ ಜನರು “ಆ ಜಾತಿಯವರಿಗೆ ಏಕೆ ಅಷ್ಟು ದೊಡ್ಡ ಜಹಾಂಗೀರು ಬೇಕು?” ಎಂಬ ಕೆಡುಕು ಹೊಟ್ಟೆಉರಿಯಿಂದಾಗಿ, ಅ ವಂಶದ ಗಂಡು ಮಕ್ಕಳನ್ನೆಲ್ಲ “ನಿಮಗೆ ಸೈನ್ಯದಲ್ಲಿ ಕೆಲಸ ಕೊಡುತ್ತಾರೆ ಬನ್ನಿ…” ಎಂದು ಒಂದೆಡೆ ಕರೆಸಿ ಅವರನ್ನ ಕೂಡಿ ಹಾಕುತ್ತಾರೆ. ಬಂದ ಅಧಿಕಾರಿಗೆ “ಇದು ಗಂಡು ದಿಕ್ಕಿಲ್ಲದ ಮನೆತನ ಇವರಿಗೆ ಉಂಬಳಿ ಕೊಡಲು ಬರುವದಿಲ್ಲ” ಎಂದು ಹೇಳಿ ಬರೆಸಿ ಕಳುಹಿಸುತ್ತಾರೆ.
ಓಬವ್ವನ ವಂಶದವರಿಗೆ ಉಂಬಳಿಯೇ ಇಲ್ಲದಂತೆ ಮಾಡಿದ್ದೂ ಅಲ್ಲದೆ, ಅಲ್ಲಿಂದಾಚೆಗೆ ಅವರು ನಡೆಸಿದ್ದೆಲ್ಲಾ ಇತಿಹಾಸ ತಿರುಚುವ ಕಾರ್ಯವೆ…
ಕಾಲ ಕಾಲಕ್ಕೂ ಹೊಲಯರು ಹಾಗೂ ಮಾದಿಗರು ಈ ರೀತಿಯಾಗಿ ದ್ರೋಹಕ್ಕೊಳಗಾಗುತ್ತಲೇ ಇದ್ದಾರೆ. ಅವರ ಸಾಧನೆಗಳನ್ನು ಮುಚ್ಚಿ ಹಾಕುವ, ಇಲ್ಲವೇ ಮರೆ ಮಾಚುವ, ತಿರುಚುವ ಪ್ರಯತ್ನಗಳು ನಡೆಯುತ್ತಲೇ ಇದೆ. ಓಬವ್ವನ ಇತಿಹಾಸ ಈ ವಿಚಾರಕ್ಕೆ ಒಂದು ಜ್ವಲಂತ ಉದಾಹರಣೆ.
ಸಂಗ್ರಹ – ಪ್ರವೀಣ ಕೆ.ಎಸ್.
ಚಿತ್ರ ಕೃಪೆ – ಶ್ರೀ ಉಮೇಶ್