Oplus_131072

ವಸುಂಧರೆ

ಮನೆಯಲ್ಲಿ ದಿನವು ಅಮ್ಮನು ರವಿಗೆ                      “ಬೇಗ ಮದುವೆಯಾಗು” ಎಂದು ತಾಕೀತ್ತು ಮಾಡುತ್ತಿದ್ದಳು. ರವಿಯ ತಂದೆ ರಾಮ ನಾರಾಯಣರು ತೀರಿಕೊಂಡು ಎಷ್ಟೋ ವರ್ಷಗಳು ಕಳೆದು ಹೋಗಿದ್ದವು. ಒಬ್ಬನೇ ಪುತ್ರನಾದ ರವಿಯನ್ನು ತಾಯಿ ಸುಶೀಲಮ್ಮ ಬಹು ಜೋಪಾನದಿಂದ ಸಲುಹಿ ದೊಡ್ಡವನಾಗಿ ಮಾಡಿದ್ದರು.
ಈಗಾಗಲೇ ರವಿಗೆ ಮದುವೆ ವಯಸ್ಸು ದಾಟಿದ 28 ವರ್ಷದ ತರುಣನಾಗಿದ್ದನು. ಐಬಿಎಮ್ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರಿಂಗ್ ಕಾರ್ಯ ನಿರ್ವಹಿಸುತ್ತಿದ್ದನು. ಕರೋನ ಕಾಲ ಬಂದು ಹೋದ ನಂತರದಿಂದ ಈಗ ಮನೆಯಲ್ಲಿಯೇ ಕರ್ತವ್ಯವನ್ನು ನಿರ್ವಹಿಸುತ್ತಿದ್ದನು.ಕೈ ತುಂಬ ಸಂಬಳ ಬರುತ್ತಿತ್ತು. ಆಗಲೇ ಉದ್ಯೋಗ ಮಾಡುತ್ತ ನಾಲ್ಕು ವರ್ಷಗಳು ಕಳೆದಿದ್ದವು. ಹಿರಿಯ ವಯಸ್ಸಾದ ತಾಯಿಗೆ ಮನೆಯಲ್ಲಿ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಾಗಿರುತ್ತಿದ್ದಿಲ್ಲ. ಹೀಗಾಗಿ ಆಗಾಗ ರವಿಯು ಅಮ್ಮನಿಗೆ ಮನೆ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದನು. ಅಮ್ಮ ಹೇಳಿದ ಹಾಗೆ ವಿವಾಹಕ್ಕಾಗಿ ಈಗಾಗಲೇ ಐದಾರು ಕನ್ಯೆಯರನ್ನು ನೋಡಿದರೂ ಸಹ ಒಪ್ಪಿಗೆ ಆಗದ ಕಾರಣವಾಗಿ ಇವನ ಲಗ್ನ ಮುಂದೂಡಲಾಗುತ್ತಿತ್ತು.

ಈಗೀಗ ಅಮ್ಮನಿಗೆ ಮನೆ ಕೆಲಸಗಳನ್ನು ಮಾಡಲು ಸಾಧ್ಯವೇ ಆಗಿರುತ್ತಿದ್ದಿಲ್ಲ. ಕಾರಣ ಹಿರಿತನದ ವಯಸ್ಸು ಮತ್ತು ಕಾಯದಲ್ಲಿ ಶಕ್ತಿಹೀನತೆ ಕಾಡುತ್ತಿತ್ತು. ಇಷ್ಟಾದರೂ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತೇನೆಂದು ತಾಯಿ ಹಠ ಮಾಡುತ್ತಿದ್ದರು. ಆದರೆ ರವಿಗೆ ತನ್ನ ಡ್ಯೂಟಿಯಿಂದಾಗಿ ತಾಯಿಯ ಕೆಲಸದಲ್ಲಿ ಸಹ ಭಾಗಿಯಾಗಿ ಕೆಲಸ ಮಾಡಲು ಸಾಧ್ಯವಾಗದೆ ಆತನಿಗೂ ತಲೆ ಭಾರವೆನಿಸುತ್ತಿತ್ತು. ಈ ಕಾರಣಕ್ಕಾಗಿ ಅದೊಂದು ದಿನ ತಾಯಿ ಮುಂದೆ ತನ್ನ ಅಳಲನ್ನು ತೋಡಿಕೊಂಡನು.
“ಅಮ್ಮ ಇನ್ನೆಷ್ಟು ದಿನ ನೀನು ಈ ಮನೆ ಕೆಲಸವನ್ನು ಮಾಡಿಕೊಂಡು ಇರುತ್ತೀಯಾ? ನಿನಗಂತೂ ವಯಸ್ಸಿನಿಂದಾಗಿ ಶಕ್ತಿಹೀನತೆ ಬಂದಿದೆ. ನಿನ್ನೆಲ್ಲ ಕೆಲಸಗಳಲ್ಲಿ ಸಹಕರಿಸಲು ನನ್ನ ಡ್ಯೂಟಿಯಿಂದಾಗಿ ನನಗೂ ಅಸಾಧ್ಯವಾಗಿದೆ. ಅದಕ್ಕೆ…”

“ಅದಕ್ಕೇನಂತೆ..! ತಾಯಿಯ ಪ್ರಶ್ನೆಗೆ ” ನೋಡಮ್ಮ ನನಗೆ ಕೈ ತುಂಬಾ ಸಂಬಳ ಬರುತ್ತಿದೆ, ಈ ಮನೆ ಕೆಲಸ ಹಾಗೂ ಅಡುಗೆಯನ್ನು ಮಾಡಲು ಯಾರಾದರೂ ಕೆಲಸದವರಿಗೆ ಇಟ್ಟುಕೊಂಡರೆ ಸಾಕು ಇಬ್ಬರಿಗೂ ಒಂದಿಷ್ಟು ನೆಮ್ಮದಿ ದೊರೆಯುವುದು” ಎಂದು ರವಿ ಪುನಃ ನೋಡಿದನು.
” ಅದೆಲ್ಲ ಬೇಡಪ್ಪ…” ಅಮ್ಮನ ನುಡಿಗಳಿಗೆ “ನನಗಂತೂ ಸಾಕಾಗಿ ಹೋಗಿದೆ, ನೀನು ನನ್ನ ಮಾತುಗಳು ಕೇಳಲಾರೆ ನಾನೆಲ್ಲಾದರೂ ಈ ಮನೆಯನ್ನು ಬಿಟ್ಟು ದೂರ ಹೋಗಿಬಿಡುವೆ” ಎಂದು ರವಿ ಬೇಸರದಿಂದ ನುಡಿದನು.

“ಅದಕ್ಕೆ ಹೇಳುವುದು ನೀನು ಬೇಗ ಮದುವೆಯಾಗು, ಎಂದರೆ ಇಷ್ಟಾದರೂ ನನ್ನ ಮಾತುಗಳನ್ನು ಕೇಳದೇ ನೀನು ಒಂಟಿಯಾಗಿ ಉಳಿಯುವೆ. ನನಗೆ ಸೊಸೆ ಬಂದರೆ ನನಗೂ ಸುಖ ಸಿಗುವುದು ಆ ಬಗ್ಗೆ ನೀನು‌ ಒಂದು ಸಲ ಯೋಚಿಸು. ನಾನೇ ನಿನಗೆ ಯಾವುದಾದರೂ ಒಂದು ಹುಡುಗಿಯನ್ನು ನೋಡಿ ಗಂಟು ಹಾಕುವೆ..” ಎಂದು ಮುಗುಳ್ನಕ್ಕು ಒತ್ತಾಯ ಮಾಡಿದರು.
ತಾಯಿಯ ಮಾತಿಗೆ “ಆಗಲಿ ಅಮ್ಮ ನಾನು ಬೇಗ ಮದುವೆ ಆಗುತ್ತೇನೆ. ಅಲ್ಲಿಯವರೆಗೂ ನಮ್ಮ ಮನೆಯಲ್ಲಿ ಯಾರಿಗಾದರೂ ಕೆಲಸಕ್ಕಾಗಿ ಇಟ್ಟುಕೊಂಡರೆ ಒಂದಿಷ್ಟು ನಿನಗೂ ಮತ್ತು ನನಗೂ ನೆಮ್ಮದಿ ಸಿಗುವುದಿಲ್ಲವೇ?” ಎಂದು ತಾಯಿಯನ್ನು ಒಪ್ಪಿಸಿದನು. ಕೆಲವು ದಿನಗಳ ಪ್ರಯತ್ನದಿಂದ ಅಡುಗೆ ಮತ್ತು ಮನೆ ಕೆಲಸಗಳಿಗಾಗಿ ಓರ್ವ ಹೆಣ್ಣು ಮಗಳಾದ ಕಮಲಾವತಿಗೆ ನೇಮಿಸಿಕೊಂಡರು.

ಕಮಲಾವತಿಯು ಪ್ರತಿನಿತ್ಯ ಸರಿಯಾದ ಸಮಯಕ್ಕೆ ರವಿಯ ಮನೆಗೆ ಬಂದು ಮನೆಯ ಎಲ್ಲ ಕೆಲಸಗಳನ್ನು ಮಾಡುವುದರ ಜೊತೆಗೆ ಅಡುಗೆ ಕಾರ್ಯಗಳನ್ನೆಲ್ಲ ಮಾಡಿ ಹೋಗುತ್ತಿದ್ದರು. ಇದರಿಂದಾಗಿ ರವಿಗೆ ಮತ್ತು ರವಿಯ ಅಮ್ಮನಿಗೂ ಒಂದಿಷ್ಟು ಸಮಾಧಾನ ತುಂಬಿ ಬಂತು.
ಕಮಲಾವತಿಯು ಮನೆ ಕೆಲಸಕ್ಕೆ ಬಂದರೂ ಕೆಲವು ಕಾರಣಗಳಿಂದಾಗಿ ಆಗೊಮ್ಮೆ ಈಗೊಮ್ಮೆ ತಾನು ಮನೆ ಕೆಲಸಕ್ಕೆ ಬಾರದೆ ಇದ್ದಾಗ ಅವಳು ತನ್ನ ಪುತ್ರಿಯಾದ ವಸುಂಧರೆಗೆ ಕೆಲಸಕ್ಕಾಗಿ ರವಿಯ ಮನೆಗೆ ಕಳಿಸಿ ಕೊಡುತ್ತಿದ್ದಳು. ವಸುಂಧರೆ ತಾಯಿಗಿಂತಲೂ ರವಿಯ ಮನೆಗೆಲಸಗಳನ್ನೆಲ್ಲ ಸೊಗಸಾಗಿ,ಅತ್ಯುತ್ತಮವಾಗಿ ಮಾಡುತ್ತಿದ್ದಳು. ಜೊತೆಗೆ ಜವಾಬ್ದಾರಿಯಿಂದ ಅಚ್ಚುಕಟ್ಟಾಗಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಳು.

ವಸುಂಧರೆ ಹದಿನೆಂಟು ವರ್ಷದ ತರುಣಿ. ನೋಡಲು ತುಂಬಾ ಚೆಲುವೆಯಾಗಿದ್ದಳು, ಅಷ್ಟೇ ದುಂಡು ಮೊಗ, ದೊಡ್ಡ ಕಂಗಳು, ನೇರನಾಸಿಕ ಎಂತಹ ಗಂಡಸರನ್ನು ಆಕರ್ಷಿಸುವಂತಹ ಅವಳು ರೂಪವಂತೆ. ಪ್ರಾರಂಭದಲ್ಲಿ ರವಿಯು ಅವಳ ಬಗ್ಗೆ ದೃಷ್ಟಿ ಹರಿಸದಿದ್ದರೂ ಸಹ ಮುಂದಿನ ದಿನಗಳಲ್ಲಿ ಆಗಾಗ ಮೇಲಿಂದ ಮೇಲೆ ತಾಯಿಯ ಗೈರು ಹಾಜರಿನಲ್ಲಿ ವಸುಂಧರೆ ಕೆಲಸಕ್ಕೆ ಮನೆಗೆ ಬಂದಾಗ ಅವಳೊಂದಿಗೆ ಮಾತು ಬೆಳೆಸಿ ಹರಟೆ ಹೊಡೆಯುತ್ತಿದ್ದನು. ಅವಳನ್ನು ನಕ್ಕು ನಗಿಸಲು ಏನಾದರೂ ನಗೆ ಚಟಾಕಿಗಳನ್ನು ಹೇಳುವ ಮೂಲಕ ಅವಳಿಗೆ ಆನಂದಗೊಳಿಸುತ್ತಿದ್ದನು. ಅವಳು ಸಹ ಅಷ್ಟೇ ಕಿಲಕಲನೆ ನಗುತಿದ್ದಳು. ಬರು ಬರುತ್ತ ಅವಳ ಸೌಂದರ್ಯ ಬಗ್ಗೆ ರವಿಯು ಮಾರು ಹೋಗಿದ್ದನು. ಕಮಲಾವತಿ ಮನೆ ಕೆಲಸಕ್ಕೆ ಬಂದಾಗಲೆಲ್ಲ ತಮ್ಮ ಮನೆಗೆ ವಸುಂಧರೆ ಯಾವಾಗ ಕೆಲಸಕ್ಕೆ ಬರುವಳೋ ಎಂದು ಮನದಲ್ಲೇ ಅವಳಿಗಾಗಿ ದಾರಿ ಕಾಯುತ್ತಿದ್ದನು.
ಹೀಗೆ ಆಲೋಚಿಸುತ್ತ ಆಲೋಚಿಸುತ್ತ ಅದೊಂದು ದಿನ ರವಿಯು ತಾನು ಮನದಲ್ಲಿ ಒಂದು ವಿಚಾರ ಮಾಡಿದನು. ವಸುಂಧರೆಯನ್ನೇ ತಾನು ಮದುವೆ ಆದರೆ ಹೇಗೆ ?” ಎಂದುಕೊಂಡನು. ಅದನ್ನೇ ತನ್ನ ಭಾವದಲ್ಲಿ ತುಂಬಿಕೊಂಡು ವಸುಂಧರೆಯ ಬರುವಿಗಾಗಿ ನಿತ್ಯ ಕಾಯತೊಡಗಿದನು. ಅದೊಂದು ದಿನ ಬಂದೇ ಬಿಟ್ಟಿತ್ತು. ಕಮಲಾವತಿಯು ಏನೋ ಕಾರಣಕ್ಕೆ ತಾನು ಬರುವುದಿಲ್ಲವೆಂದು ಹೇಳಿ ತನ್ನ ಕರ್ತವ್ಯವನ್ನು ನಿಭಾಯಿಸಲು ತನ್ನ ಮಗಳಾದ ವಸುಂಧರೆಗೆ ಕೆಲಸಕ್ಕಾಗಿ ರವಿಯ ಮನೆಗೆ ಕಳಿಸಿಕೊಟ್ಟಳು. ಈಗ ಇದೇ ಸದಾವಕಾಶವೆಂದು ರವಿಯು ಆಲೋಚನೆ ಮಾಡಿ ಇವತ್ತು ಒಂದು ಪ್ರಶ್ನೆ ಕೇಳಿಯೇ ಬಿಡಬೇಕೆಂದು ಮನದಲ್ಲಿ ಆಲೋಚಿಸಿದನು. ವಸುಂಧರೆ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ , ಈಗ ಮೆಲ್ಲನೆ ರವಿಯು ಅಡುಗೆ ಮನೆಗೆ ಹೋದನು. ಅಮ್ಮ ಇನ್ನೊಂದು ಕೋಣೆಯಲ್ಲಿ ಕುಳಿತಿದ್ದರು.

” ವಸುಂಧರೆ ನಿನಗೊಂದು ಮಾತು ಕೇಳಲೇ ? ನೀನು ತಪ್ಪು ತಿಳಿದು ಕೊಳ್ಳಲಾರೆಯಾ ?..ಎಂದನು.
“ಏನದು ?” ಎಂದು ಗಂಭಿರಳಾಗಿ ಕೇಳಿದಳು. ಈಗ ಅವಳಿಗೆ ಉತ್ತರ ಕೊಡುವ ರೂಪದಲ್ಲಿ “ನೀನು ನನ್ನನ್ನು ಮದುವೆಯಾಗುವೆಯಾ?ಎಂದು ಮೆಲ್ಲನೆ ಪ್ರಶ್ನಿಸಿದನು. ರವಿಯ ಮಾತು ಕೇಳುತ್ತಿರುವಂತೆ ವಸುಂಧರೆ ಒಂದು ಕ್ಷಣ ಅವಕ್ಕಾದಳು.
ಮತ್ತೆ ಮರು ಮಾತನಾಡದೆ ಮುಗುಳ್ನಕ್ಕೂ ಸುಮ್ಮನಾದಳು. ಈಗ ರವಿಗೆ ತುಂಬ ಖುಷಿಯಾಗಿ ಅಲ್ಲಿಂದ ತನ್ನ ಕರ್ತವ್ಯದತ್ತ ಮುಖ ಮಾಡಿ ಹೋಗಿಬಿಟ್ಟನು. ವಸುಂಧರೆ ಮಧ್ಯಾಹ್ನ ಮನೆಯ ಎಲ್ಲ ಕೆಲಸಗಳನ್ನು ಮಾಡಿ ಮುಗಿಸಿ ಅಡುಗೆ ಎಲ್ಲ ಮಾಡಿ ಎಂದಿನಂತೆ ಅವಳು ಗಂಭೀರವಾಗಿ ತನ್ನ ಮನೆಯತ್ತ ಹೆಜ್ಜೆ ಹಾಕಿದಳು.

ರವಿಗೆ ವಸುಂಧರೆಯು ಮದುವೆಗೆ ಒಪ್ಪಿದ್ದಾಳೆ ಎಂದುಕೊಂಡು ಅವಳ ಬಗ್ಗೆ ಕಲ್ಪನಾ ಲೋಕದಲ್ಲಿ ತೇಲಾಡುತ್ತಾ ತುಂಬ ಖುಷಿಯಲ್ಲಿ ತಾಯಿಯೊಂದಿಗೆ ಕುಳಿತು ಊಟ ಮಾಡಿದನು. ಆದರೆ ಇತರ ಕೆಲಸಗಳು ಮಾಡಿದರೂ ಸಹ ತನ್ನ ಕಣ್ಣಮುಂದೆ ವಸುಂಧರೆಯ ರೂಪ ಬರತೊಡಗಿತು. ಅವಳನ್ನು ಮರೆಯಲ್ಲೆ ಇಲ್ಲ.

ಒಂದು ರೀತಿ ಅವಳ ಬಗ್ಗೆ ಏನೇನೋ ಯೋಚಿಸಿ ಎದೆ ಭಾರವಾಗಿತ್ತು. ಬೆಳಗಾಯಿತು ಇವತ್ತು ವಸುಂಧರೆ ಬರುತ್ತಾಳೆ ಎಂದು ಲವಲವಿಕೆಯಲ್ಲಿಯೇ ರವಿಯು ಕಾಲ ಕಳೆದನು.
ಮುಂಜಾನೆ ಕಳೆಯಿತು. ಮಧ್ಯಾಹ್ನವಾಯಿತು ಆದರೂ ಕಮಲಾವತಿ ಬರಲಿಲ್ಲ ವಸುಂಧರೆಯೂ ಬರಲಿಲ್ಲ. ಇನ್ನೂ ಬರಬಹುದೇನೋ ! ಇನ್ನು ಬರಬಹುದೇನೋ ! ಎಂಬ ಕೌತುಕದಲ್ಲಿ ರವಿಯ ಕಣ್ಣುಗಳೆಲ್ಲ ಹೊರಗೆಯೇ ಚಾಚಿಕೊಂಡಿದ್ದವು. ಆದರೂ ಸಹ ಸಂಜೆ ಆಯಿತು ಬರಲೇ ಇಲ್ಲ. ” ವಸುಂದರೇ ತನ್ನ ತಾಯಿಗೆ ನನ್ನ ಬಗ್ಗೆ ಏನಾದರೂ ಹೇಳಿರಬಹುದೆ ? ಅಥವಾ ಅವಳ ತಾಯಿ ಉಗ್ರ ರೂಪದಲ್ಲಿ ನಮ್ಮ ಮನೆಗೆ ಬರಬಹುದೆ ? ” ಎಂದುಕೊಂಡನು.

ಮನೆಯಲ್ಲಿ ಕೆಲಸಗಳೆಲ್ಲ ಹಾಗೆ ಉಳಿದವು. ತಾಯಿಯೂ ಸಹ ಕೆಲಸದಾಕೆ ಬರಲಿಲ್ಲ ಎಂಬ ಚಿಂತೆಯಲ್ಲಿ ಕೊರಗಿದರು.ಈಗ ಏನೂ ತೋಚದೇ ರವಿಯು ತಾಯಿಯ ಮುಂದೆ ಹಿಂದೆ ನಡೆದ ತನ್ನ ಎಲ್ಲ ವಿಷಯಗಳನ್ನು ಹೇಳಿಕೊಂಡನು. ಈಗ ರವಿಯ ಮಾತು ಕೇಳಿ
” ಮದುವೆಯೆಂದರೆ ಅಷ್ಟೊಂದು ಸುಲಭದ ಮಾತೇ ? ಅದೂ ಹರೆಯದ ಹುಡುಗಿಗೆ ನೀನು ಹಾಗೆ ಕೇಳುವುದು ಸಮಂಜಸವೇ ? ಅವರು ಬಡವರಿರಬಹುದು ಆದರೆ ಅವರು ತುಂಬಾ ಸ್ವಾಭಿಮಾನಿ ಮತ್ತು ಮರ್ಯಾದೆಯಿಂದ ಇರುತ್ತಾರೆ.
ನೀನು ಹೀಗೆ ಮಾಡಬಾರದಿತ್ತು ತುಂಬ ದೊಡ್ಡ ತಪ್ಪು ಮಾಡಿದೆ ನೀನು” ಎಂದು ರವಿಗೆ ಛೀಮಾರಿ ಹಾಕಿದರು.
ರವಿ ಸಣ್ಣ ಮುಖ ಮಾಡಿಕೊಂಡು ಸುಮ್ಮನಾದನು. ದಿನಗಳು ಉರಳಿದವು ಆದರೂ ಕಮಲಾವತಿಯನ್ನು ತಮ್ಮ ಮನೆಗೆಲಸಕ್ಕೆ ಕರೆಯಲು ಧೈರ್ಯವೇ ಸಾಲದೇ ರವಿ ಮತ್ತು ಸುಶೀಲಮ್ಮ ಅವಳನ್ನು ಬಿಟ್ಟುಬಿಟ್ಟರು.

ಆ ಒಂದು ತನ್ನ ಸಣ್ಣ ಮಾತಿಗೆ ರವಿಯ ಬದುಕು ತುಂಬಾ ಚಿಂತೆಯಲ್ಲಿ ಕೊರಗಿತು. ವರ್ಷಗಳೇ ಕಳೆದವು. ಕಲಾವತಿಯಾಗಲಿ, ವಸುಂಧರೆಯಾಗಲಿ ತಮ್ಮ ಮನೆಗೆ ಬರಲೇ ಇಲ್ಲ. ಮತ್ಯಾರನ್ನು ಕೆಲಸಕ್ಕೆ ಇಟ್ಟುಕೊಳ್ಳಲಿಲ್ಲ. ಸುಶೀಲಮ್ಮ ರವಿಯ ಚಿಂತೆಯಲ್ಲಿಯೇ ಸಾವನ್ನಪ್ಪಿದರು. ಈಗ ಮನೆಯು ಬರಡು ಬರಡಾಗಿ ಬಿಕೋ ! ಎನ್ನುತ್ತಿತ್ತು. ರವಿಗೆ ತನ್ನ ಜೀವನವೇ ಬೇಸರವೆನಿಸಿತ್ತು.

ಅದೊಂದು ದಿನ ಬೆಳಿಗ್ಗೆ ಎದ್ದು ರವಿಯು ತನ್ನ ಕೋಣೆಯ ಬಾಗಿಲು ತೆರೆದಾಗ ತನ್ನ ಕಣ್ಣುಗಳನ್ನು ತಾನೇ ನಂಬದಾದನು. ಹೊರಗೆ ಬಾಗಿಲಲ್ಲಿ ಒಂದು ಮಗುವನ್ನು ಎತ್ತಿಕೊಂಡು ವಸುಂಧರೆ ನಿಂತಿದ್ದಳು. ಅವಳ ಮುಖ ಬಾಡಿ ಹೋಗಿತ್ತು, ಅವಳ ಕಣ್ಣುಗಳು ಏಕೋ ! ಆಳಕ್ಕೆ ಇಳಿದಿದ್ದವು. ಅವಳ ದೇಹ ಕೃಶವಾಗಿತ್ತು. ಈಗ ಕೂಡಲೇ ರವಿಯು ಅವಳತ್ತ ಹೆಜ್ಜೆ ಹಾಕಿ
“ವಸುಂಧರೆ !” ಎಂದು ಉದ್ಘಾರ ತೆಗೆದನು. “ಹೇಗಿದ್ದೀಯಾ ?” ಎಂದು ಪ್ರಶ್ನಿಸಿದನು.
“ಸಾಹುಕಾರರೇ ! ನಿಮ್ಮ ಮನೆಯನ್ನು ಬಿಟ್ಟು ಹೋದ ಮೇಲೆ ಕೆಲವೇ ದಿವಸಗಳಲ್ಲಿ ನನಗೆ ಮದುವೆ ಮಾಡಿದರು. ನನಗೆ ಒಂದು ಗಂಡು ಮಗು ಜನಿಸಿತ್ತು. ನನ್ನ ಗಂಡ ದಿನಾ ಸಾರಾಯಿ ಕುಡಿದು ಮನೆಗೆ ಬರುತ್ತಿದ್ದನು.
ಒಂದು ದಿನ ಅವನು ತೀರಿ ಹೋದನು. ಅಮ್ಮ ಈಗ ತೀರಿ ಹೋಗಿದ್ದಾಳೆ. ನಾನೀಗ ಒಂಟಿಯಾಗಿದ್ದೇನೆ. ಈ ಮಗುವನ್ನು ನೋಡಿಕೊಳ್ಳುತ್ತ ನನ್ನ ಬಾಳು ಸಾಗಿಸುತ್ತಿರುವೆ. ನಿಮ್ಮ ಮನೆಯಲ್ಲಿ ಏನಾದರೂ ಕೆಲಸವಿದ್ದರೆ ಹೇಳಿ? ನಾನು ಮಾಡುತ್ತೇನೆ ನನಗೆ ಈಗ ತುಂಬ ತುಂಬ ಬಡತನ ಬಂದಿದೆ” ಎಂದು ಕಣ್ಣೀರಿಟ್ಟಳು.

ಅವಳ ಮಾತು ಕೇಳಿದ‌ ರವಿಗೆ ಅಂದಿನ ದಿನಗಳು ತನ್ನ ಕಣ್ಣೆದುರಿಗೆ ಸುಳಿದವು. ಮತ್ತೆ ಮನದಲ್ಲಿ ಹೊಸ ಆಸೆಗಳು ಮೂಡಿದವು. ಈಗಲೂ ರವಿಗೆ ಇನ್ನು ಮದುವೆಯಾಗಿರಲಿಲ್ಲ.
“ವಿಧವೆಯಾದರೇನಾಯಿತು ! ಅವಳು ಒಪ್ಪಿದರೆ ಈಗಲೂ ತಾನು ಅವಳೊಂದಿಗೆ ವಿವಾಹಬಾಗಬಹುದು” ಎಂದು ಮನದಲ್ಲಿಯೇ ಯೋಚಿಸಿ ಕೆಲ ಕ್ಷಣ ಹಾಗೇಯೇ ನಿಂತನು. ಆದರೂ ಆ ವಿಚಾರ ಹೇಳಲು ರವಿಗೆ ಧೈರ್ಯ ಸಾಲದೇ ಹೀಗೆ ನುಡಿದನು.
“ವಸುಂಧರೆ ನೀನು ನಮ್ಮ ಮನೆ ಕೆಲಸಕ್ಕೆ ಬರ್ತೀಯಾ ? ಒಳ್ಳೆದಾಯ್ತು ಹಾಗಾದರೆ ನಾಳೆಯೇ ಬಾ ಎಂದನು. “ಹೂಂ” ಎಂದಳು.
ನೀನು ನಮ್ಮ ಮನೆಗೆಲಸಗಳನ್ನೆಲ್ಲ ಮಾಡು ನಿನಗೆ ತಿಂಗಳಿಗೆ 10,000 ಸಂಬಳ ಕೊಡುತ್ತೇನೆ, ಇವತ್ತೇ ಒಂದು ತಿಂಗಳ ಮುಂಗಡ ಸಂಬಳವನ್ನು ತೆಗೆದುಕೊಂಡು ಹೋಗು.”. ಎಂದು ರವಿ ನುಡಿದನು. ಮತ್ತೆ ಕೂಡಲೇ ಒಳಗೆ ಹೋಗಿ ರವಿ ತನ್ನ ಕೈಯಲ್ಲಿ ಹತ್ತು ಸಾವಿರ ರೂಪಾಯಿ ಹಣವನ್ನು ಇಟ್ಟುಕೊಂಡು ಹೊರಬಂದನು.
ಬೇಡ ಸಾವ್ಕಾರ್ರೆ ! ಒಂದು ತಿಂಗಳಿಗೆ ಅಷ್ಟು ಸಂಬಳ ಬೇಡ ಮತ್ತು ಮುಂಗಡ ಹಣವೂ ಬೇಡ ..” ಎನ್ನುತ್ತ ವಸುಂಧರೆ ಅಲ್ಲಿಂದ ನಡೆದೇ ಬಿಟ್ಟಳು.

ಈಗ ರವಿಯು ಅವಳತ್ತ ಮುನ್ನಡೆದು ಏನೋ ಹೇಳಬೇಕೆಂದನು ಮತ್ತೆ ಹಾಗೆ ನಿಂತು ಬಿಟ್ಟನು. ಈಗ ಅವಳು ಹೋದ ದಾರಿಯತ್ತಲೇ ದೃಷ್ಟಿ ಹರಿಸಿದ್ದ. ವಸುಂಧರೆ ರವಿಯ ಕಡೆಗೆ ತಿರುಗಿಯು ನೋಡದೆ ಹಾಗೆ ಹೊರಟು ಹೋದಳು.

ಡಾ. ಎಂ.ಜಿ.ದೇಶಪಾಂಡೆ,
ಖ್ಯಾತ ಸಾಹಿತಿಗಳು ಬೀದರ.
ಮೊ.ಸಂಖ್ಯೆ:8971067233

ಕವಿ ಪರಿಚಯ:

ಎಂ.ಜಿ.ದೇಶಪಾಂಡೆ. ಬೀದರ

ಖ್ಯಾತ ಸಾಹಿತಿಗಳಾದ ಡಾ. ಎಂ. ಜಿ. ದೇಶಪಾಂಡೆ ಯವರು ಮೂಲತಃ ತೆಲಂಗಾಣದವರಾದರು ಬೀದರನಲ್ಲಿಯೆ ಹುಟ್ಟಿ ಬೆಳೆದು ಕನ್ನಡದಲ್ಲಿ ಬಿ.ಎ ಪದವಿವರೆಗೆ ಅಧ್ಯಯನ ಮಾಡಿ ಬೀದರದ ಡಿಸಿಸಿ ಬ್ಯಾಂಕಿನಲ್ಲಿ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಸದ್ಯ ಇಬ್ಬರು ಬೀದರದ ಖಾಯಂ ನಿವಾಸಿಯಾಗಿದ್ದಾರೆ.
ಬಾಲ್ಯದಿಂದಲೂ ಕನ್ನಡ ಸಾಹಿತ್ಯ, ನಾಡು- ನುಡಿಯ ಮೇಲೆ ತುಂಬ ಆಸಕ್ತರಾಗಿ, ಕನ್ನಡ ಭಾಷೆ ಸಾಹಿತ್ಯವೇ ತಮ್ಮ ಜೀವದ ಉಸಿರಾಗಿಸಿಕೊಂಡು ಕತೆ ,ಕವನ ,ಕಾದಂಬರಿ, ಲಲಿತ ಪ್ರಬಂಧ, ಲೇಖನ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿ ನಾಡಿನಾದ್ಯಂತ ಖ್ಯಾತ ಸಾಹಿತಿಯಾಗಿ ಗುರ್ತಿಸಿ ಕೊಂಡಿದ್ದಾರೆ. ಮತ್ತು 1977-79 ರಲ್ಲಿ ‘ ಕನ್ನಡಾಂಬೆ‘ ಎಂಬ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡದ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಇವರ ಬರಹಗಳು ಪ್ರಕಟ , ಪ್ರಸಾರಗೊಂಡಿವೆ. ಇವರು ಬರೆದ ಕೃತಿಗಳು:
ಆಶಾಕಿರಣ, ಮೀರಾಬಾಯಿ, ಗೀತ ಮಾನಸ ,ಪಾರಿಜಾತ’ ಭಕ್ತಿ ಕುಸುಮಾಂಜಲಿ, ಚಿಂತನ ಮಂದಾರ, ವಚನ ಚಂದ್ರಿಕೆ, ದೇವಯಾನಿ, ಶ್ರಾವಣಿ, ಚಂದ್ರಹಾರ, ಸಾಹಿತ್ಯ ರತ್ನಗಳು, ಒಡೆದ ಕನ್ನಡಿ, ಧವಳಗಿರಿ, ತವನಿಧಿ ಸೇರಿದಂತೆ ಕಥೆ, ಕಾದಂಬರಿ, ಕಾವ್ಯ, ಚುಟುಕು, ಅನುವಾದ, ನಾಟಕ, ಇತಿಹಾಸ’ ಲೇಖನ, ವ್ಯಕ್ತಿಚಿತ್ರ ,ಚರಿತ್ರೆ ಸಂಪಾದನೆ ಸೇರಿ ಒಟ್ಟು 70ಕ್ಕೂ ಹೆಚ್ಚು ಕೃತಿಗಳು ಪ್ರಕಟಿಸಿದ್ದಾರೆ.ಇವರ ಸಾಹಿತ್ಯ ಸೇವೆಗೆ ಬೀದರ ಜಿಲ್ಲೆಯಿಂದ ”ಸಾಹಿತ್ಯ ಮಂದಾರ” ಎಂಬ ಅಭಿನಂದನಾ ಗ್ರಂಥ ಪ್ರಕಟಿಸಿ ಗೌರವಿಸಲಾಗಿದೆ. ಇವರಿಗೆ ನಾಡಿನಾದ್ಯಂತ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ