Oplus_131072

ಯಾವುದು “ಧರ್ಮ” ಮಾರ್ಗ..? ಭಾರತದಲ್ಲಿ ಇರುವುದೆಲ್ಲವೂ “ಜಾತಿ” ಮಾರ್ಗವೇ..!

ಎನ್ ಚಿನ್ನಸ್ವಾಮಿ ಸೋಸಲೆ ✍️

ಭಾರತದ ನೆಲದಲ್ಲಿ ಸ್ಥಾಪಿತವಾದ ಬೌದ್ಧ ಹಾಗೂ ಜೈನ ಧರ್ಮಗಳು ಪ್ರವರ್ದ್ಧ ಮಾರ್ಗದಲ್ಲಿ ಇದ್ದ ಸಂದರ್ಭದಲ್ಲಿ ಭಾರತದ ನೆಲದಲ್ಲಿ ಧರ್ಮ ಪ್ರಭುತ್ವದೊಂದಿಗೆ ಸಮೀಕರಿಸಿಕೊಂಡು ಜನತೆಯೊಂದಿಗೆ ಮಾತನಾಡಿದವು.

ಆದರೆ ಕಾಲಕಾಲಕ್ಕೆ ಭಾರತಕ್ಕೆ ಆಗಮಿಸಿದವರು – ದಾಳಿ ಮಾಡಿದವರು – ಪ್ರವೇಶ ಮಾಡಿದವರು ತಮ್ಮ ಧರ್ಮಗಳನ್ನು ಇಲ್ಲಿ ಪ್ರತಿಷ್ಠಾಪಿಸಲು ಮುಂದಾಗಿ ಭಾರತದ ನೆಲಮೂಲ ಸಂಸ್ಕೃತಿಯ ನಿಜ ಧರ್ಮಗಳನ್ನೇ ತಮ್ಮ ತೋಳ್ತೆಕ್ಕೆಗೆ ತೆಗೆದುಕೊಂಡ ಮೇಲೆ ಭಾರತದಲ್ಲಿ ಧರ್ಮ ಎಂಬ ಸತ್ಯ ಮರೆಮಾಚಿತು. ಪ್ರಸ್ತುತ ಸಂದರ್ಭದಲ್ಲಂತೂ ಭಾರತದಲ್ಲಿ ಧರ್ಮ ಎಂಬುದೇ ಇಲ್ಲ – ಇರುವುದೆಲ್ಲವೂ ಸಹ ಜಾತಿಗಳೇ.

ಜಾತಿಗಳು ಎಂದಿಗೂ ಸಹ ಧರ್ಮವಾಗಲು ಸಾಧ್ಯವಿಲ್ಲ. ಹಾಗೆಯೇ ಧರ್ಮವು ಸಹ ಜಾತಿಯಾಗಲು ಸಾಧ್ಯವಿಲ್ಲ.

“ಧರ್ಮ” ತಂದೆ ತಾಯಿಯ ಸ್ಥಾನದ ಅತಿ ಎತ್ತರದಲ್ಲಿ ನಿಂತು ತನ್ನ ಮಕ್ಕಳು ಅಂದರೆ ಧರ್ಮದ ಅಧೀನದಲ್ಲಿ ಬರುವ “ಜಾತಿಗಳ” ನ್ನು ಸತ್ಮಾರ್ಗದಲ್ಲಿ ನಡೆಯಲು ಮುಂದಾಗಬೇಕು. ಕನ್ನಡ ನೆಲದ ಆದಿ ಕವಿ ಪಂಪ ಹೇಳಿರುವ ಹಾಗೆ “ಮನುಷ್ಯ ಜಾತಿ ತಾನೊಂದೇ ವಲಂ” ಎನ್ನುವ ಹಾಗೆ ನೆಲದ ವಾರಸುದಾರ ಬಸವಣ್ಣ ಹೇಳಿದ ಹಾಗೆ “ದಯವೇ ಧರ್ಮದ ಮೂಲವಯ್ಯ” ಎನ್ನುವ ಹಾಗೆ ಸರ್ವರಿಗೂ ಲೆಸನ್ನೇ ಬಯಸುವ ಮಾದರಿಯ ಮಾರ್ಗದರ್ಶನ ಮಾಡುತ್ತದೆ.

ಆದರೆ.., ಜಾತಿಗಳೇ ಧರ್ಮವನ್ನು ( ತಂದೆ ತಾಯಿಯರನ್ನು ) ಮೀರಿಸುವ ಹಾಗೆ ನಾನು, ನನ್ನದೆಂಬ “ನಾನತ್ವದ” ಹಿನ್ನೆಲೆಯಿಂದ ಬೆಳೆದು ನಿಂತರೆ ಅಥವಾ ಇಂದು ನಿಂತಿರುವ ಮಾದರಿಯಲ್ಲಿ ಜಾತಿಗಳು ಗಟ್ಟಿಯಾಗಿ ನಿಂತು ಧರ್ಮ ಎಂಬುದು ಒಡೆದು ಚೂರು ಚೂರಾಗಿ – ಚೂರು ಚೂರಾದ ಧರ್ಮದ ತುಂಡುಗಳು ಅದರದೇ ಆದ ಹೆಬ್ಬಾಗಿಲುಗಳನ್ನು ನಿರ್ಮಿಸಿಕೊಂಡು ಒಳಗೆ ಬರುವವರು ಗೊತ್ತಿಲ್ಲದೇ- ಹೊರಗೆ ಹೋಗುವವರು ತಿಳಿಯದೆ ಅಜ್ಞಾನದ ಕೊಂಪೆಯಲ್ಲಿ ತನಗೆ ತಾನೆ ಮೂಲೆಗುಂಪಾಗುತ್ತಿದೆ.

ಪ್ರಸ್ತುತ ಸಂದರ್ಭದಲ್ಲಿ ಭಾರತ ಇಂತಹ ಎಡಬಿಡಂಗಿ ತತ್ವ ಸಿದ್ಧಾಂತದ ಅಡಿಯ ಧರ್ಮದ ಭಾರತದಲ್ಲಿ ಸಿಲುಕಿದೆ. ಭಾರತದ ಜನರಿಗೆ ತಮ್ಮ ಜಾತಿ ಗೊತ್ತೇ ಹೊರತು – ತಮ್ಮ ಧರ್ಮ ಯಾವುದೆಂದು ಗೊತ್ತೇ ಇಲ್ಲ. ಜಾತಿಯಲ್ಲೇ ಹುಟ್ಟಿ ಜಾತಿಯಲ್ಲೇ ಬೆಳೆದು ಜಾತಿಯಲ್ಲೇ ಸಾಯುವುದು ಭಾರತದ ಬಹುದೊಡ್ಡ ಜನ ಸಂಸ್ಕೃತಿಯ ನಿದರ್ಶನವಾಗಿದೆ. ನಾವು ಭಾರತದ ಧರ್ಮ ಸಂಸ್ಥಾಪಕರು, ಈ ಧರ್ಮ ಭಾರತ ನೆಲದಲ್ಲಿ ಉಳಿಯಬೇಕು ಎಂದು ಇಂದು ಹೋರಾಡುತ್ತಿರುವವರು ಸಹ ಜಾತಿಯ ಬಲೆಯಲ್ಲಿಯೇ ಸಿಲುಕಿರುವುದು ದುರಂತ. ಈ ಜಾತಿಯೆಂಬ ಬಿಡಿಸಲಾಗದ ಸಂಕೋಲೆಯಿಂದ ಹೊರಬರಲಾಗದೆ ಐಡೆಂಟಿಟಿಗಾಗಿ ಮಾತ್ರ ಧರ್ಮವನ್ನು ಮತ್ತೆ ಮತ್ತೆ ಒತ್ತಿ ಒತ್ತಿ ಹೇಳುವ ಅವಶ್ಯಕತೆ ಬಂದೊದಗಿದೆ. ಈ ಐಡೆಂಟಿಟಿ ತಂದುಕೊಳ್ಳುವುದು ಸಹ ಜಾತಿಗಳನ್ನು ಧಿಕ್ಕರಿಸಿ , ಜಾತಿ ಆದರದಿಂದ ಆಗುತ್ತಿರುವ ಮಾನವ ಕುಲದ ಅಪಮಾನಗಳನ್ನು ಸಂಹರಿಸಿ ಒಟ್ಟುಗೂಡಿಸುವ ಆಧಾರದಲ್ಲಲ್ಲ, ಬದಲಿಗೆ ಅನ್ಯ ಧರ್ಮೀಯರ ಜೊತೆ ಬಹುದೊಡ್ಡ ಸಂಘರ್ಷವನ್ನು ಕೋಮು ಭಾವನೆಯಿಂದ ಉಂಟು ಮಾಡಿ ಸಮಾಜದಲ್ಲಿ ಅಶಾಂತಿಯನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ತಮ್ಮ ಧರ್ಮವನ್ನು ಸ್ವಾರ್ಥಕ್ಕಾಗಿ ತೋರ್ಪಡಿಸಿಕೊಳ್ಳುತ್ತಾರೆ. ಇದಕ್ಕೆ ಭಾರತದಲ್ಲಿ ಆಗುತ್ತಿರುವ ಸಮಕಾಲಿನ ಸಂದರ್ಭದ ಘಟನೆಗಳೇ ಸಾಕ್ಷಿಕರಿಸುತ್ತವೆ.

ಈಗ ಭಾರತೀಯರು ತುಂಬಾ ಬಲವಂತದಿಂದ, ಯಾರನ್ನೂ ಮೆಚ್ಚಿಸಲು ಅಥವಾ ಇನ್ನೊಬ್ಬರಿಂದ ಮೆಚ್ಚಿಸಿಕೊಳ್ಳಲು ಹೇಳಿಕೊಳ್ಳುವ ಧರ್ಮ ತಮಗೆ ತಾವೇ ಏರಿಕೊಂಡ ಧರ್ಮವೇ ಹೊರತು, ನಿಜ ಧರ್ಮದ ತತ್ವ ಸಿದ್ಧಾಂತದ ಅಡಿಯಲ್ಲಿ ಮನಸೋ ಇಚ್ಛೆಯಿಂದ ನಿರ್ಮಲವಾಗಿ ಅಪ್ಪಿಕೊಂಡದ್ದಲ್ಲ.
ಧರ್ಮ ಎಂಬುವುದು ಸರ್ವಜನಾಂಗವು ಒಟ್ಟಾಗಿ ಬದುಕುವ ಪರಿಸರದ ಶಾಂತಿಯ ತೋಟ ಎಂಬ ಅರ್ಥದಲ್ಲಿ ಇರುವುದಾಗಿದೆ . ಮುಂದುವರೆದು ಈ ವಸುವಿನಲ್ಲಿ (ಭೂಮಿಯಲ್ಲಿ) ವಾಸಿಸುವ ಪ್ರತಿಯೊಬ್ಬ ಮನುಷ್ಯ ಜೀವಿಯು ಸಹ “ವಸುದೇವ ಕುಟುಂಬಕಂ” (ಭೂಮಿ ಮೇಲೆ ವಾಸಿಸುವ ಸಕಲ ಮನುಷ್ಯ ಜೀವಿಯು ಒಂದೇ ಕುಟುಂಬ) ಎನ್ನುವ ಹಾಗೆ ರೂಪಿತಗೊಂಡಿದ್ದಾಗಿರುತ್ತದೆ. ಆದರೆ ಇಂದು ಈ ವಸುವಿನಲ್ಲಿ ಜೀವಿಸುತ್ತಿರುವ ಜನ ತಾನೊಂದೇ ವಲಂ ಎಂಬುವುದನ್ನು ಹೊರತುಪಡಿಸಿ “ಬಿಳಿಯ- ಕರಿಯ” “ಸ್ಪೃಶ್ಯ – ಅಸ್ಪೃಶ್ಯ ” ಎಂಬ ಬಹುದೊಡ್ಡ ವರ್ಣಭೇದ – ಜಾತಿ ಭೇದಗಳ ನೀತಿಯ ವಿಷದ ವರ್ತುಲದಲ್ಲಿ ಸಿಲುಕಿ ಇತ್ತ ನುಂಗಲು ಆಗದೆ – ಅತ್ತ ಉಗಳಲ್ಲೂ ಆಗದೆ ಗಂಟಲಲ್ಲಿ ಜಾತಿ ಎಂಬ ಅಂಧಕಾರದ ಬಹುದೊಡ್ಡ ವಿಷಯವನ್ನು ಇಟ್ಟುಕೊಂಡು ನರಳುತ್ತಿದೆ.

ಇನ್ನು ನಮ್ಮ ದೇಶದಲ್ಲಂತೂ ಧರ್ಮವನ್ನು ಮೀರಿ ಜಾತಿಗಳು ಮಾತಾಡುತ್ತವೆ. ಈ ಜಾತಿಗಳು ರೆಕ್ಕೆ ಪುಕ್ಕಗಳನ್ನು ಕಟ್ಟಿಕೊಂಡ ಹಾರಾಟ ಹಾಗೂ ಮೆರೆದಾಟಗಳ ಮುಂದೆ ಧರ್ಮ ನಿಜಾರ್ಥದಲ್ಲಿ ಬದುಕಲು ಧರ್ಮಸಂಕಟಕ್ಕೆ ಸಿಲುಕಿದೆ.

ಪ್ರಸ್ತುತ ಸಂದರ್ಭದಲ್ಲಿ ಭಾರತದಲ್ಲಿ ಧರ್ಮದ ಸಂಕಟ ಹೇಗಿದೆ ಎಂದರೆ
” ಧರ್ಮವೆಂಬ ನೀರಿನ ಪಾತ್ರೆಯಲ್ಲಿ ಕೇವಲ ಬೆಳೆಯನ್ನು ಮಾತ್ರ ಹಾಕಿ ಕೆಲವು ಮೂಲಭೂತ ಧರ್ಮ ಪ್ರತಿಪಾದಕರು ಎಂದು ಹೇಳಿಕೊಳ್ಳುವವರು ಒಲೆಯನ್ನು ಹಚ್ಚದೆ ಇಟ್ಟು ಇದನ್ನು ಧರ್ಮಕ್ಕೆ ಸಮೀಕರಿಸಿಕೊಂಡಿರುವ “ದೇವರು” ಬಯಸುತ್ತದೆ ಎಂದು ಪ್ರತಿಪಾದನೆ ಮಾಡುತ್ತಾರೆ. ಇವರ ಈ ಅಜ್ಞಾನದ ದೇವರು ಲೇಪಿಸ ಧರ್ಮದ ಪ್ರತಿಪಾದನೆಗೆ “ಜಾತಿಯ” ಜನ, ಅವರೇ ಹೇಳಿದ ಹಾಗೆ ಶತಶತಮಾನಗಳಿಂದ ಅವರ ವೈಭವದ ಜೀವನಕ್ಕೆ ದಾರಿಯಾದವರು ಧರ್ಮದ ಅಂಧಕಾರದಲ್ಲಿಯೇ ಧರ್ಮ ನಮ್ಮದು ಎಂದು ಹೇಳಿಕೊಳ್ಳುವವರು ಒಲೆಯನ್ನು ಅಚ್ಚದೆ ಇಟ್ಟಿದ್ದ ಒಲೆಗೆ ಕಾಡು ಮೆಡುಗಳಿಂದ ಕಟ್ಟಿಗೆಯನ್ನು ತಂದು , ಬೆಂಕಿ ಹಚ್ಚಿ ಪಾತ್ರೆಯಲ್ಲಿ ಇಟ್ಟಿದ್ದ ಬೆಳೆಯನ್ನು ಹದವಾಗಿ ( ಅನೇಕ ದೇವರ ಹೆಸರಿನ ಮಾಲೆಗಳನ್ನು ಕೊರಳಿಗೆ ಹಾಕಿಕೊಂಡು ) ಬೇಯಿಸುತ್ತಾರೆ. ಆದರೆ ಅತ್ಯಂತ ಶ್ರಮಪಟ್ಟು, ಹೋರಾಟ ಮಾಡಿ ಬೇಯಿಸಿದ ಈ ಬೆಳೆಯನ್ನು ಮುಟ್ಟಲು ಆಗದೆ ಹೊರ ನಿಲ್ಲುತ್ತಾರೆ. ಹೀಗೆ ಹದವಾಗಿ ನಯವಾಗಿ ಬೆಂದ ಬೆಳೆಯನ್ನು ಮುಟ್ಟುವವರು ಮಾತ್ರ ಇಂದು ಸ್ವಾರ್ಥ ಸಾಧನೆಗೆ ಧರ್ಮವನ್ನು ಬಳಸಿಕೊಳ್ಳುತ್ತಿರುವವರು” . ಇದನ್ನು ಶತಶತಮಾನಗಳಿಂದಲೂ ಧರ್ಮದ ಚೌಕಟ್ಟಿಗೆ ಒಳಪಡದೆ ಕೇವಲ ಜಾತಿಯ ಜನರಾಗಿಯೇ ಇರುವ ಬಹುದೊಡ್ಡ ಈ ನೆಲ ಮೂಲ ಸಂಸ್ಕೃತಿಯ ದುಡಿಯುವ ಜನ ವರ್ಗ ಬೇಳೆ ಹಚ್ಚಿದ ಒಲೆಯಲ್ಲಿ ಬೇಯುವಾಗ ಹೊರಬರುವ ಗಮಲನ್ನೆ ಕುಡಿಯುತ್ತಾ ತಿಂದಂತೆ ಹೋರಾಟ ಮಾಡುತ್ತಿದ್ದಾರೆ. ಈ ನೆಲದ ಸಂಸ್ಕೃತಿಯ ಸೃಷ್ಟಿಕರ್ತರಾದ ಜನ ವರ್ಗ ಇಂತಹ ಮರ್ಮವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಈ ಹಂತದಲ್ಲಿ ದೇವರನ್ನೇ ಆಧಾರವಾಗಿಟ್ಟುಕೊಂಡಿರುವ ಏಕಮುಖ ಚಿಂತನೆಯ ದೇವರು ಲೇಪಿತ ಧರ್ಮದ ‘ತೀರ್ಥ’ ಮೆರೆಯುತ್ತಿದೆಯೇ ಹೊರತು – ಕಾಯಕವನ್ನೇ ಆಧಾರವಾಗಿಟ್ಟುಕೊಂಡಿರುವ ಬಹುದೊಡ್ಡ ಶ್ರಮಜೀವಿಗಳ ‘ಬೆವರಿನಿಂದ’ ಸ್ಥಾಪಿತವಾದ ನಿಜ ಧರ್ಮ ಸೋಲುತಿದೆ.’ತೀರ್ಥ’ ಪುರಾಣವನ್ನು ವೈಭವಿಕರಿಸುತ್ತದೆ – ‘ಬೆವರು’ ವಾಸ್ತುವನ್ನು ಮನವರಿಕೆ ಮಾಡುತ್ತದೆ.

ಏಕೆಂದರೆ, ಇಂದು ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಕೇವಲ ವ್ಯವಹಾರಿಕವಾಗಿ ದೇವರ ಹೆಸರಿನಲ್ಲಿ ಮಾರಾಟಕ್ಕೆ ಇಟ್ಟಿರುವ ಲಡ್ಡು ಮಾಲಿನ್ಯಗೊಂಡಿತು ಎಂಬ ಕಾರಣಕ್ಕಾಗಿ ಅಲ್ಲಿನ ಮೂಲಭೂತವಾದಿಗಳು ಮಾಡುತ್ತಿರುವ ಬಹುದೊಡ್ಡ ಶುದ್ದಿಕರಣವನ್ನು – ಇದೇ ತಿಮ್ಮಪ್ಪನ ಸನ್ನಿಧಾನದಲ್ಲಿ ಪೂಜೆ ಪುರಸ್ಕಾರವನ್ನು ಮಾಡಿ ಶುದ್ಧಿ ಮಾಡುತ್ತಿರುವ ಜನ ವರ್ಗ ಸತಶತಮಾನಗಳಿಂದ ತಾವೇ ಮಾಡುತ್ತಿರುವ, ತಮ್ಮಂತೆ ಇರುವ ಬಹುದೊಡ್ಡ ಶ್ರಮಿಕ ಜನವರ್ಗವನ್ನು ಅಸ್ಪೃಶ್ಯರನ್ನಾಗಿಸಿ ತಾವು ಆಚರಿಸುತ್ತಿರುವ, ಮುಂದುವರೆದು ಅವರದೇ ದೇವರ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ‘ಅಸ್ಪೃಶ್ಯತೆ’ ಯ ವಿರುದ್ಧ ತಮ್ಮ ಮನೆ ಹಾಗೂ ಮನವನ್ನು ಕಿಂಚಿತ್ತಾದರೂ ಶುದ್ಧಗೊಳಿಸಿಕೊಳ್ಳಲು ಮುಂದಾಗುತ್ತಿಲ್ಲ. ಏಕೆಂದರೆ, ಈ ವಿಷಯದಲ್ಲಿ ಮಾತ್ರ ಅವರು ಪಿತ್ರಾಜಿತವಾಗಿ ಶಾಶ್ವತ ದೃಷ್ಟಿಕೋನದಿಂದ ಮಲಿನಗೊಂಡವರೇ. ಈ ಹಂತದಲ್ಲಿ ಮಾತ್ರ ಈ ಜನ ವರ್ಗ ಹಂದಿ ಹಾಗೂ ದನದ ಕೊಬ್ಬನ್ನು ದಿನನಿತ್ಯ- ಪ್ರತಿಕ್ಷಣ ತಿನ್ನುತ್ತಿರುವವರೇ ಆಗಿದ್ದಾರೆ.

ಈ ಅರ್ಥದಲ್ಲಿಯೇ ಹೇಳುವುದಾದರೆ ಭಾರತದಲ್ಲಿ ‘ಧರ್ಮ’ ಸಮಯ ಸಂದರ್ಭಕ್ಕನುಸಾರವಾಗಿ ಕ್ಷಣಾರ್ಧದಲ್ಲಿ ಬಂದು ಹೋಗುವ ಪೊಳ್ಳು ಸಾಧನ ಮಾದರಿಯ ಕೈಗೊಂಬೆಯಾಗಿದೆ .
ಆದರೆ,
‘ಜಾತಿ’ ಶಾಶ್ವತವಾಗಿ ಪ್ರತಿ ಕ್ಷಣ ಭಾರತೀಯರ ಮನ ಹಾಗೂ ಮನೆಯಲ್ಲಿ ಮನೆ ಮಾಡಿಕೊಂಡಿರುವ ಹಾಗೂ ಯಾವ ಸಂದರ್ಭದಲ್ಲಿಯೂ ಅಲುಗಾಡದ ಮಾದರಿಯ ಗಟ್ಟಿ ಸಾಧನವಾಗಿದೆ. ಈ ಸಾಧನ ಎಂತದ್ದೇ ಭೂಕಂಪ ಸುನಾಮಿಗಳಿಗೂ ಜಿಗ್ಗಿಲ್ಲ- ಬಗ್ಗಿಲ್ಲ.

ನಿಜಾರ್ಥದಲ್ಲಿ ‘ಧರ್ಮ’ ಜಂಗಮದ ರೀತಿ. ಇದನ್ನು ಅರ್ಥ ಮಾಡಿಕೊಳ್ಳುವುದು ಬಹು ಕಠಿಣ. ಏಕೆಂದರೆ ಇದು ಜ್ಞಾನಕ್ಕೆ ( ನಾಲೆಡ್ಜ್ ) ಸಂಬಂಧ ಪಟ್ಟದ್ದು. ಆದರೆ.., ‘ಜಾತಿ’ ಸ್ಥಾವರದ ರೀತಿ. ಇದು ಶತಶತಮಾನಗಳಿಂದ ಅಲುಗಾಡದೆ ನಿಂತಲ್ಲೇ ನಿಂತಿರುವ ( ಅಜ್ಞಾನ )ಸಾಧನ . ಇದು ಸುಮ್ಮನೆ ನಿಂತಿಲ್ಲ.. ಪ್ರತಿದಿನ – ಪ್ರತಿಕ್ಷಣ ತನ್ನವರು ಎಂಬುವವರಿಂದ ಪೂಜೆಯ ಜೊತೆ ಅರ್ಚನವನ್ನು ಅದ್ದೂರಿಯಾಗಿ ಅಜ್ಞಾನದಿಂದ “ನಾನತ್ವದ” ಹಿನ್ನೆಲೆಯಿಂದ ಮಾಡಿಸಿಕೊಂಡು ಮೆರೆಯುತ್ತಿದೆ.

ಇಂತಹ ಅಜ್ಞಾನದ ಸಾಧನಗಳಿಂದ ನಾವು ಬಲಿಷ್ಠ ಭಾರತವನ್ನು ಕಟ್ಟಲಾಗದೆ ಪ್ರತಿದಿನ ಸೊರಗುತ್ತಿದ್ದೇವೆ. ಇದರಿಂದ ಭಾರತ ದೇಶವು ಸಹ ಸೊರಗುತಿದೆ.

ಇಷ್ಟಾದರೂ ನಾವ್ಯಾರೂ ಸಹ ನಿರಾಶೆ ಆಗುವುದು ಬೇಡ. ಭಾರತ ಎಂದೆಂದಿಗೂ ಆಶಾವಾದಿಗಳಿಗೆ ಜನ್ಮ ನೀಡಿದ ನೆಲೆ. ಬುದ್ಧ, ಬಸವ, ಕನಕ, ಅಂಬೇಡ್ಕರ್ ಅವರು ಈ ನೆಲದ ನಿಜ ಆಶಾವಾದಿಗಳು. ಇವರ ಆಶಾವಾದದ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬಲಿಷ್ಠ ಭಾರತವನ್ನು ಗಟ್ಟಿಯಾಗಿ ಕಟ್ಟಬೇಕಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಿಜ ಧರ್ಮದ ಸಾರದಲ್ಲಿ ರೂಪಿಸಿರುವ ಭಾರತದ ಬೃಹತ್ ಲಿಖಿತ ಸಂವಿಧಾನ ಆಶಾವಾದಿಗಳ ಭಾರತವನ್ನು ಬಲಿಷ್ಠವಾಗಿ ಕಟ್ಟಲು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿಕೊಟ್ಟಿದೆ. ನಾವು ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುನ್ನಡೆಯದೆ ಕೇವಲ ಅಡ್ಡ ದಾರಿಯಲ್ಲಿ ಹೋಗುತ್ತಿರುವ ಕಾರಣಕ್ಕಾಗಿ ಒಂದು ಕೋಟಿ ನಲವತ್ತು ಲಕ್ಷ ಜನ ಸಂಖ್ಯೆಯನ್ನು ಹೊಂದಿರುವ ಬೃಹತ್ ಭಾರತ ಅಪೌಷ್ಟಿಕತೆಯಿಂದ ಶಕ್ತಿಹೀನವಾಗಿ ನರಳುತ್ತಿದೆ.
(ನಾನು ಸ್ಫೃಶ್ಯ- ನೀನು ಅಸ್ಪೃಶ್ಯ , ನನ್ನದು ಶ್ರೇಷ್ಠ ಕುಲ- ನಿನ್ನದು ಕನಿಷ್ಠ ಕುಲ , ನಾನು ಊರಿನವ – ನೀನು ಕೇರಿನವ, ನಾನು ಮೊದಲಿಗ – ನೀನು ಪಂಚಮ, ನಾನು ಸತ್ತರೆ ಸ್ವರ್ಗಕ್ಕೆ ಹೋಗುತ್ತೇನೆ – ನೀನು ಸತ್ತರೆ ನರಕಕ್ಕೆ ಹೋಗುತ್ತೀಯಾ , ನಾನು ಸಸ್ಯ ಆಹಾರಿ ಅದಕ್ಕಾಗಿ ಶ್ರೇಷ್ಠ – ನೀನು ಮಾಂಸ ಆಹಾರಿ ಅದಕ್ಕಾಗಿ ಕನಿಷ್ಠ… ಇತ್ಯಾದಿ ಇತ್ಯಾದಿ ಇಂದು ಹೇಳಿಕೊಂಡೆ ಸೊರಗುತಿದೆ. ಈ ಅನೀತಿ ಅಧರ್ಮವನ್ನೇ ವೈಭವ ಎಂದು ಹೇಳಿಕೊಂಡ ಪ್ರಪಂಚದ ಏಕೈಕ ರಾಷ್ಟ್ರ ಎಂದರೆ ಅದು ಭಾರತ ಎಂದು ಹೇಳಲು ದುಃಖವಾಗುತ್ತದೆ ).

ಪ್ರಾಕೃತಿಕವಾಗಿ ಬಹು ಶ್ರೀಮಂತಿಕೆಯನ್ನು ಹೊಂದಿರುವ ಭಾರತ ತನ್ನ ಒಡಲಾಳದ ಮನ ಹಾಗೂ ಮನೆ ತುಂಬಾ ದವಸ ಧಾನ್ಯಗಳನ್ನು ತುಂಬಿಸಿಕೊಂಡಿದ್ದರೂ ಸಹ ಅವುಗಳನ್ನು ಸಮನಾಗಿ ಹಂಚಿಕೊಂಡು, ಸಮೃದ್ಧಿಯಾಗಿ ಬಳಸಿಕೊಂಡು ಅಡುಗೆ ಮಾಡಿ ಊಟ ಮಾಡದೆ ಕೆಲವೇ ಕೆಲವು ಜನ ವರ್ಗದಲ್ಲಿ ಶೇಖರಣೆ ಮಾಡಿಕೊಂಡು ಸಂಪತ್ತನ್ನು ವ್ಯರ್ಥ ಮಾಡುತ್ತಿದೆ. ಭಾರತದ ಬಹು ದೊಡ್ಡ ಜನ ವರ್ಗ ಹಸಿವಿನಿಂದ ನರಳಿ ಅಜ್ಞಾನದ ಅಪೌಷ್ಟಿಕತೆಯ ನೆಲೆಯಾಗುತ್ತಿದೆ. ಎಪ್ಪತೆಂಟು ವಸಂತಗಳನ್ನು ಪೂರ್ಣಗೊಳಿಸಿದ ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿಯೂ ಸಹ ಅದೇ ಮಾದರಿಯ ತತ್ವ ಸಿದ್ಧಾಂತವೇ ಮೆರೆಯುತ್ತಿದೆ.

ಇದಾಗಬಾರದು. ಏಕೆಂದರೆ ಈಗ ನಮ್ಮ ದೇಶವನ್ನು ಆಳ್ವಿಕೆ ಮಾಡುವ ಸರ್ಕಾರದ ಮುಖ್ಯಸ್ಥನು ರಾಜನ ಹೊಟ್ಟೆಯಿಂದ ಹುಟ್ಟುವುದಿಲ್ಲ . ಬದಲಿಗೆ ಪ್ರಜೆಗಳ ವೋಟಿನಿಂದ ಆಯ್ಕೆಯಾಗುತ್ತಾನೆ.

ಪ್ರಜೆಗಳ ವೋಟಿನಿಂದ ಆಯ್ಕೆಯಾಗುವ ಪ್ರತಿಯೊಬ್ಬ ಜನನಾಯಕನು ಸಹ ಸರ್ವ ಜನಾಂಗದ ಹಿತಕ್ಕಾಗಿ ಕೆಲಸ ಮಾಡಬೇಕೆ ಹೊರತು – ತನ್ನ ಜಾತಿಗೆ ಅಥವಾ ತನ್ನ ಧರ್ಮಕ್ಕೆ ಮಾತ್ರ ಸೀಮಿತವಾಗಿ ಗರ್ವದಿಂದ ಆಳ್ವಿಕೆ ಮಾಡಿದರೆ ಇದು ದೇಶಕ್ಕೆ ಮಾರಕ – ಅದೇ ಸಂವಿಧಾನದ ತತ್ವ ಸಿದ್ಧಾಂತದ ಅಡಿಯಲ್ಲಿ ತೆರೆದ ಕಣ್ಣಿನಿಂದ ಭಾರತವನ್ನು ನೋಡಿ ಸಮ ಸಮಾಜ ಸ್ಥಾಪಿಸುವ ಹಿನ್ನೆಲೆಯಿಂದ ಆಳ್ವಿಕೆ ಮಾಡಿದರೆ ನಮ್ಮ ದೇಶಕ್ಕೆ ಪೂರಕ.

ಎನ್ ಚಿನ್ನಸ್ವಾಮಿ ಸೋಸಲೆ ✍️

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ