Oplus_131072

ಏನಿದ್ದರೇನು

ಗುಡಿಯ ಕಟ್ಟಿದರೇನು ಫಲ
ಆ ಗುಡಿಯ ದೇವರಂತೆ ನೀನಾಗದಿರೆ
ಡಾಂಭಿಕ ಭಕ್ತಿ  ಮೆರೆದರೇನು ಫಲ
ನಿಜ ದೈವ ಹೆತ್ತವರ ಸೇವೆ ಮಾಡದಿರೆ.

ಮನೆಯ ಕಟ್ಟಿದರೇನು ಫಲ
ಶಾಂತಿ ನೆಮ್ಮದಿ ನೆಲೆ ನಿಲ್ಲದಿರೆ
ಜಿಗಿ ಜಿಗಿ ಜನ ಓಡಾಡಿದರೇನು ಫಲ
ಅಲ್ಲಿರುವ ಮನಗಳು ಸ್ವಚ್ಛವಾಗಿರದಿರೆ.

ಹೊಲ ಗದ್ದೆ ಕೊಂಡಿಟ್ಟರೇನು ಫಲ
ಭೂತಾಯಿ ಸೇವೆ ಮಾಡದಿರೆ
ಧವಸ ಧಾನ್ಯ ನಿಟ್ಟು ಕಟ್ಟಿದರೇನು ಫಲ
ದಾನದ ಗುಣ ನೀ ಹೊಂದದಿರೆ.

ಹಣತೆಗಳ ಅಚ್ಚು ಇದ್ದರೇನು ಫಲ
ಜಗ ಬೆಳಗುವ ಜ್ಯೋತಿ ನೀನಾಗದಿರೆ
ಜ್ಞಾನ ದೀವಿಗೆ ನೀನಾದರೇನು ಫಲ
ಅಂಧಕಾರವ ತೊಲಗಿಸಲು ಸಾಗದಿರೆ.

ಸುಖೀ ಸಂಸಾರಿ ನೀನಾದರೇನು ಫಲ
ಸಂಸ್ಕಾರದ ಸಾರ ಅರಿಯದಿರೆ
ಬಂಧು ಬಳಗವ ಹೊಂದಿದರೇನು ಫಲ
ಮಮಕಾರದ ಮಹಿಮ ನೀನಾಗದಿರೆ .

ದೊಡ್ಡ ದೇಹ ಬೆಳೆಸಿದರೇನು ಫಲ
ದೊಡ್ಡ ಮನಸು ನಿನಗಿಲ್ಲದಿರೆ
ದುಡ್ಡು ದೌಲತ್ತು ಗಳಿಸಿದರೇನು ಫಲ
ಮಾನವೀಯ ಗುಣ ನಿನ್ನೊಳಿರದಿರೆ.

ಡಾ. ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ ರಾಯಚೂರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ